1 ಕೊರಿಂಥದವರಿಗೆ 5 - ಕನ್ನಡ ಸತ್ಯವೇದವು C.L. Bible (BSI)ದುರುಳನನ್ನು ದೂರಮಾಡಿ 1 ಅನ್ಯಜನರಲ್ಲಿ ಕೂಡ ಇಲ್ಲದಂಥ ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ. 2 ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೆ? 3 ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮ ಹತ್ತಿರವಿದ್ದೇನೆ. ನಿಮ್ಮ ಸಂಗಡವೇ ಇರುವವನಂತೆ ಅವನಿಗೆ ಏನುಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇನೆ. 4 ಅದೇನೆಂದರೆ: ನೀವು ಸಭೆಸೇರಿ, ಪ್ರಭು ಯೇಸುವಿನ ಶಕ್ತಿಯ ಆಧಾರದ ಮೇಲೆ ಅವನನ್ನು ಸೈತಾನನಿಗೆ ಒಪ್ಪಿಸಿಬಿಡಬೇಕು. ನಾನು ಆತ್ಮಿಕವಾಗಿ ನಿಮ್ಮ ಮಧ್ಯೆಯಿರುತ್ತೇನೆ. 5 ಅವನ ದೇಹವು ದಂಡನೆಗೊಳಗಾದರೂ ಅವನ ಆತ್ಮ ಪ್ರಭು ಯೇಸುವಿನ ದಿನದಂದು ಉದ್ಧಾರವಾಗುವಂತೆ ಹೀಗೆ ಮಾಡಬೇಕು. 6 ನೀವು ಜಂಬ ಕೊಚ್ಚಿಕೊಳ್ಳುವುದು ತರವಲ್ಲ. ಒಂದಿಷ್ಟು ಹುಳಿ, ಹಿಟ್ಟನ್ನೆಲ್ಲಾ ಹುದುಗೆಬ್ಬಿಸುತ್ತದೆಂಬುದನ್ನು ನೀವು ಚೆನ್ನಾಗಿ ಬಲ್ಲಿರಿ. 7 ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ. 8 ಆದಕಾರಣ ನಾವು ದುಷ್ಟತನ, ಕೆಡುಕುತನವೆಂಬ ಹುಳಿಹಿಟ್ಟನ್ನು ವರ್ಜಿಸೋಣ. ಪರಿಶುದ್ಧತೆ ಮತ್ತು ಸತ್ಯತೆ ಎಂಬ ಹುಳಿಯಿಲ್ಲದ ಹೊಸರೊಟ್ಟಿಯನ್ನು ತಿಂದು ಪಾಸ್ಕಹಬ್ಬವನ್ನು ಆಚರಿಸೋಣ. 9 ದುರಾಚಾರಿಗಳ ಸಹವಾಸ ನಿಮಗೆ ಸಲ್ಲದು, ಎಂದು ನಾನು ಬರೆದಿದ್ದೆ. 10 ಅಂದರೆ, ಈ ಲೋಕದಲ್ಲಿರುವ ದುರಾಚಾರಿಗಳು, ಲೋಭಿಗಳು, ಸುಲಿಗೆಗಾರರು, ವಿಗ್ರಹಾರಾಧಕರು - ಇಂಥವರ ಸಹವಾಸವನ್ನು ಬಿಟ್ಟುಬಿಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೆ ಮಾಡಿದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾದೀತು. 11 ಆದರೆ ತಾನು ಕ್ರೈಸ್ತ ಸಹೋದರ ಎನಿಸಿಕೊಂಡು, ದುರಾಚಾರಿಯಾಗಿಯೋ ಲೋಭೀಯಾಗಿಯೋ ವಿಗ್ರಹಾರಾಧಕನಾಗಿಯೋ ಪರನಿಂದಕನಾಗಿಯೋ ಕುಡುಕನಾಗಿಯೋ ಸುಲಿಗೆಗಾರನಾಗಿಯೋ ಯಾರಾದರೂ ಇದ್ದರೆ, ಅಂಥವನ ಸಹವಾಸ ನಿಮಗೆ ಸಲ್ಲದು. ಇದು ನನ್ನ ಪತ್ರದ ಉದ್ದೇಶ. 12-13 ಧರ್ಮಸಭೆಗೆ ಸೇರದೆ ಇರುವವರ ಬಗ್ಗೆ ತೀರ್ಪುಮಾಡುವುದು ನನ್ನ ಕೆಲಸವಲ್ಲ. ಅವರನ್ನು ಕುರಿತು ದೇವರೇ ತೀರ್ಪುನೀಡುವರು. ನೀವು ತೀರ್ಪುಮಾಡಬೇಕಾದುದು ಧರ್ಮಸಭೆಗೆ ಸೇರಿದವರನ್ನು ಕುರಿತು ದುರುಳನನ್ನು ನಿಮ್ಮಿಂದ ದೂರತಳ್ಳಿರಿ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India