1 ಕೊರಿಂಥದವರಿಗೆ 4 - ಕನ್ನಡ ಸತ್ಯವೇದವು C.L. Bible (BSI)ಪ್ರೇಷಿತರ ವರ್ತನೆ 1 ನಾವು ಕ್ರಿಸ್ತಯೇಸುವಿನ ದಾಸರೆಂದೂ ದೇವರ ಸತ್ಯಾರ್ಥಗಳ ನಂಬಿಗಸ್ಥ ನಿರ್ವಾಹಕರೆಂದೂ ಜನರು ನಮ್ಮನ್ನು ಪರಿಗಣಿಸಲಿ. 2 ನಿರ್ವಾಹಕರು ಪ್ರಾಮಾಣಿಕರಾಗಿರಬೇಕಾದುದು ಅತ್ಯವಶ್ಯ. 3 ನನ್ನ ವಿಷಯದಲ್ಲಿ ಹೇಳುವುದಾದರೆ, ನಿಮ್ಮಿಂದಾಗಲಿ, ಮಾನವ ನಿಯಮಿತ ನ್ಯಾಯಾಲಯದಿಂದಾಗಲಿ ನನ್ನ ವಿಚಾರಣೆಯಾಗುವುದರ ಬಗ್ಗೆ ನನಗೆ ಕಿಂಚಿತ್ತೂ ಚಿಂತೆಯಿಲ್ಲ. ನನಗೆ ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ. 4 ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಾಕ್ಷಿಗೆ ತೋರುವುದಿಲ್ಲ. ಆದರೂ ನಾನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯನಿರ್ಣಯ ಮಾಡುವವರು ಪ್ರಭುವೇ. 5 ಅದೇ ಮೇರೆಗೆ, ನೀವು ಸೂಕ್ತಕಾಲಕ್ಕೆ ಮುಂಚೆ ತೀರ್ಪುಮಾಡಬೇಡಿ; ಪ್ರಭುವಿನ ಪುನರಾಗಮನದವರೆಗೂ ಕಾದುಕೊಂಡಿರಿ. ಕತ್ತಲಲ್ಲಿ ಗುಪ್ತವಾಗಿರುವುಗಳನ್ನು ಪ್ರಭುವು ಬೆಳಕಿಗೆ ತರುವರು; ಅಂತರಂಗದ ಯೋಜನೆಗಳನ್ನು ಬಹಿರಂಗಪಡಿಸುವರು. ಆಗ ಪ್ರತಿಯೊಬ್ಬನಿಗೂ ತಕ್ಕ ಪ್ರಶಂಸೆ ದೇವರಿಂದಲೇ ದೊರಕುವುದು. 6 ಸಹೋದರರೇ, ನಿಮ್ಮ ಪ್ರಯೋಜನಕ್ಕಾಗಿ ಇದೆಲ್ಲವನ್ನು ನನಗೂ ಅಪೊಲೋಸನಿಗೂ ಅನ್ವಯಿಸಿ ಹೇಳಿದ್ದೇನೆ. ನೀವು ನಮ್ಮ ಆದರ್ಶವನ್ನು ಅನುಸರಿಸಬೇಕು. ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಬಾರದು. ನಿಮ್ಮಲ್ಲಿ ಯಾರೂ ಒಬ್ಬನ ಪಕ್ಷವಹಿಸಿ ಜಂಬ ಕೊಚ್ಚಿಕೊಂಡು ಮತ್ತೊಬ್ಬನನ್ನು ಕಡೆಗಣಿಸಬಾರದು. 7 ಇತರರಿಗಿಂತಲೂ ನಿನ್ನನ್ನು ಶ್ರೇಷ್ಠನನ್ನಾಗಿಸಿದವರು ಯಾರು? ದೇವರಿಂದ ಪಡೆಯದೆ ಇರುವುದು ನಿನ್ನಲ್ಲಿ ಯಾವುದಾದರೂ ಇದೆಯೆ? ಹೀಗೆ ಎಲ್ಲವನ್ನೂ ದೇವರಿಂದ ಪಡೆದ ಮೇಲೆ, ಪಡೆಯದವನಂತೆ ಜಂಬ ಕೊಚ್ಚಿಕೊಳ್ಳುವುದೇಕೆ? 8 ಈಗಾಗಲೇ ನೀವು ಸಂತೃಪ್ತರಾಗಿಬಿಟ್ಟಿರೋ? ಇಷ್ಟಕ್ಕೇ ಶ್ರೀಮಂತರಾಗಿಬಿಟ್ಟಿರೋ? ನಮ್ಮನ್ನು ಬಿಟ್ಟು ನೀವು ಸಿಂಹಾಸನವೇರಿಬಿಟ್ಟಿರೋ? ನೀವು ನಿಜವಾಗಿಯೂ ರಾಜರಾಗಿದ್ದರೆ ಚೆನ್ನಾಗಿರುತ್ತಿತ್ತು! ಆಗ ನಾವೂ ನಿಮ್ಮ ಜೊತೆ ರಾಜ್ಯ ಆಳಬಹುದಿತ್ತು! 9 ಬದಲಿಗೆ, ಪ್ರೇಷಿತರಾದ ನಮ್ಮನ್ನು ದೇವರು ಕಟ್ಟಕಡೆಯವರನ್ನಾಗಿಸಿದ್ದಾರೆಂದು ತೋರುತ್ತದೆ. ಎಲ್ಲರ ಮುಂದೆ ಮರಣದಂಡನೆಗೆ ಎಳೆದೊಯ್ಯಲಾಗುವವರಂತೆ ನಾವು ದೂತರಿಗೂ ಮಾನವರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವಾಗಿದ್ದೇವೆ. 10 ಕ್ರಿಸ್ತಯೇಸುವಿನ ನಿಮಿತ್ತ ನಾವಂತೂ ಹುಚ್ಚರು, ನೀವಾದರೋ ಕ್ರಿಸ್ತಯೇಸುವಿನಲ್ಲಿ ಬುದ್ಧಿವಂತರು; ನಾವು ಬಲಹೀನರು, ನೀವು ಬಲಾಢ್ಯರು; ನಾವು ಅವಮಾನಿತರು, ನೀವು ಸನ್ಮಾನಿತರು! 11 ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರು, ಬಟ್ಟೆಬರೆ ಇಲ್ಲದವರು, ಏಟುಪೆಟ್ಟು ತಿನ್ನುವವರು ಮತ್ತು ಮನೆಮಠವಿಲ್ಲದೆ ಅಲೆಯುವವರು ಆಗಿದ್ದೇವೆ. 12 ಸ್ವಂತ ದುಡಿಮೆಯಿಂದ ಜೀವಿಸುತ್ತೇವೆ; ನಮ್ಮನ್ನು ಶಪಿಸುವವರನ್ನು ಆಶೀರ್ವದಿಸುತ್ತೇವೆ; ಹಿಂಸೆಗೊಳಗಾದಾಗ ಸಹಿಸಿಕೊಳ್ಳುತ್ತೇವೆ. 13 ಅಪವಾದ ಹೊರಿಸಿದವರೊಡನೆ ವಿನಯದಿಂದ ವರ್ತಿಸುತ್ತೇವೆ; ಪ್ರಪಂಚದ ಪಾಲಿಗೆ ನಾವೀಗ ಕಸಕ್ಕಿಂತಲೂ ಕಡೆ; ವಿಶ್ವಕ್ಕೇ ಹೊಲಸು! 14 ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಬರೆಯಲಿಲ್ಲ. ನಮ್ಮ ನೆಚ್ಚಿನ ಮಕ್ಕಳಾದ ನಿಮ್ಮನ್ನು ಎಚ್ಚರಿಸಲೆಂದು ಬರೆದೆನು. 15 ನಿಮಗೆ ಕ್ರಿಸ್ತಯೇಸುವಿನಲ್ಲಿ ಸಾವಿರಾರು ಮಂದಿ ಶಿಕ್ಷಕರು ಇರಬಹುದು. ಆದರೆ ನಿಮಗೆ ನಾನೊಬ್ಬನೇ ತಂದೆ. ಶುಭಸಂದೇಶದ ಮೂಲಕ ನಾನೇ ನಿಮ್ಮನ್ನು ಕ್ರಿಸ್ತಯೇಸುವಿನಲ್ಲಿ ಪಡೆದ ತಂದೆ. 16 ಆದ್ದರಿಂದ ನನ್ನನ್ನು ಅನುಸರಿಸಿ ಬಾಳಬೇಕೆಂದು ನಿಮ್ಮನ್ನು ಒತ್ತಾಯಿಸುತ್ತೇನೆ. 17 ಇದಕ್ಕಾಗಿಯೇ ಪ್ರಭುವಿನಲ್ಲಿ ನನ್ನ ನೆಚ್ಚಿನ ಹಾಗೂ ಪ್ರಾಮಾಣಿಕ ಮಗನಾದ ತಿಮೊಥೇಯನನ್ನು ನಿಮ್ಮ ಬಳಿಗೆ ಕಳಿಸಿದ್ದೇನೆ. ಆತನು ಕ್ರಿಸ್ತಯೇಸುವಿನಲ್ಲಿ ನನ್ನ ಬಾಳುವೆಯನ್ನು ಕುರಿತು ತಿಳಿಸುವನು; ನಾನು ಎಲ್ಲೆಡೆಯಲ್ಲೂ ಎಲ್ಲಾ ಧರ್ಮಸಭೆಗಳಲ್ಲೂ ಬೋಧಿಸುತ್ತಿರುವುದನ್ನು ನಿಮ್ಮ ನೆನಪಿಗೆ ತರುವನು. 18 ಇನ್ನು ನಾನು ನಿಮ್ಮ ಬಳಿಗೆ ಬರುವುದಿಲ್ಲ ಎಂದು ಭಾವಿಸಿ ಕೆಲವರು ಅಹಂಕಾರಿಗಳಾಗಿ ಮೆರೆಯುತ್ತಿದ್ದಾರೆಂದು ತಿಳಿದುಬಂದಿದೆ. 19 ಪ್ರಭುವಿನ ಚಿತ್ತವಾದರೆ ನಾನು ಬೇಗನೆ ಬರುತ್ತೇನೆ. ಬಂದು, ಆ ಅಹಂಕಾರಿಗಳು ಕೇವಲ ಮಾತಿನ ಮಲ್ಲರೋ ಅಥವಾ ಶಕ್ತಿವಂತರೋ ಎಂದು ಕಂಡುಹಿಡಿಯುತ್ತೇನೆ. 20 ದೇವರ ಸಾಮ್ರಾಜ್ಯ ಮರುಳು ಮಾತಲ್ಲ, ಶಕ್ತಿಯ ಸಾಧನ, 21 ಬೆತ್ತವನ್ನು ಹಿಡಿದು ಬಿಗಿಯಲು ಬರಲೋ? ಅಥವಾ ಪ್ರೀತಿ ಸಹಾನುಭೂತಿಯಿಂದ ತುಂಬಿದವನಾಗಿ ಬರಲೋ? ನಿಮಗೆ ಯಾವುದು ಇಷ್ಟ? |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India