Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 3 - ಕನ್ನಡ ಸತ್ಯವೇದವು C.L. Bible (BSI)


ನರಪ್ರಾಣಿಗಳೋ? ನರಮಾನವರೋ?

1 ಪ್ರಿಯ ಸಹೋದರರೇ, ದೇವರ ಆತ್ಮವನ್ನು ಪಡೆದವರೊಡನೆ ಮಾತನಾಡಿದಂತೆ ನಿಮ್ಮೊಡನೆ ನಾವು ಮಾತನಾಡಲಿಲ್ಲ. ಲೌಕಿಕರು ನೀವು; ಕ್ರಿಸ್ತಯೇಸುವಿನಲ್ಲಿ ಹಸುಗೂಸುಗಳು ನೀವು ಎಂದು ಭಾವಿಸಿ ನಿಮ್ಮೊಡನೆ ಮಾತನಾಡಬೇಕಾಯಿತು.

2 ನಾನು ನಿಮಗೆ ಹಾಲೂಡಿಸಿದೆನು; ಗಟ್ಟಿ ಆಹಾರವನ್ನು ಕೊಡಲಿಲ್ಲ. ಏಕೆಂದರೆ, ಅದನ್ನು ಜೀರ್ಣಿಸಿಕೊಳ್ಳಲು ನಿಮಗೆ ಶಕ್ತಿ ಇರಲಿಲ್ಲ. ಇಂದಿಗೂ ನೀವು ಶಕ್ತರಲ್ಲ.

3 ನೀವು ಇನ್ನೂ ಲೌಕಿಕರಂತೆ ಬಾಳುತ್ತಿದ್ದೀರಿ. ನಿಮ್ಮ ನಡುವೆ ದ್ವೇಷ-ಅಸೂಯೆ, ವಾದ-ವಿವಾದಗಳು ಪ್ರಬಲವಾಗಿದ್ದು ನೀವಿನ್ನೂ ಪ್ರಾಣಿಗಳಂತೆ, ಸಾಧಾರಣ ಮನುಷ್ಯರಂತೆ ವರ್ತಿಸುತ್ತಿದ್ದೀರಲ್ಲವೆ?

4 ಒಬ್ಬನು, ನಾನು ಪೌಲನ ಕಡೆಯವನು; ಇನ್ನೊಬ್ಬನು, ನಾನು ಅಪೊಲೋಸನ ಕಡೆಯವನು, ಎಂದು ನಿಮ್ಮೊಳಗೆ ಕಿತ್ತಾಡುವ ನೀವು ಕೇವಲ ನರಪ್ರಾಣಿಗಳಲ್ಲದೆ ಮತ್ತೇನು?


ದೇವರ ಸಹಕಾರ್ಮಿಕರು

5 ಅಪೊಲೋಸನು ಯಾರು? ಪೌಲನು ಯಾರು? ನಿಮ್ಮನ್ನು ವಿಶ್ವಾಸಕ್ಕೆ ಕರೆತಂದ ದಾಸರು ನಾವಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನು ಪ್ರಭು ನಿಯಮಿಸುವ ಕಾರ್ಯವನ್ನು ನಿರ್ವಹಿಸುತ್ತೇವೆ.

6 ನಾನು ಸಸಿಯನ್ನು ನೆಟ್ಟೆನು; ಅಪೊಲೋಸನು ನೀರೆರೆದನು; ಆದರೆ ಅದನ್ನು ಬೆಳೆಸಿದವರು ದೇವರು.

7 ಆದ್ದರಿಂದ ನೆಡುವವನಾಗಲಿ, ನೀರೆರೆಯುವವನಾಗಲಿ ಪ್ರಮುಖನಲ್ಲ; ಬೆಳವಣಿಗೆ ನೀಡುವ ದೇವರೇ ದೊಡ್ಡವರು.

8 ನೆಡುವವನೂ ನೀರೆರೆಯುವವನೂ ಇಬ್ಬರೂ ಅಗತ್ಯವಾಗಿ ಬೇಕಾದವರೇ. ಅವನವನ ದುಡಿಮೆಗೆ ತಕ್ಕ ಹಾಗೆ ಪ್ರತಿಯೊಬ್ಬನೂ ಸಂಭಾವನೆ ಪಡೆಯುತ್ತಾನೆ.

9 ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.

10 ದೇವರು ನನಗಿತ್ತ ವರದಾನಗಳಿಗೆ ಅನುಸಾರವಾಗಿ ನಾನು ಚತುರಶಿಲ್ಪಿಯಂತೆ ಅಸ್ತಿವಾರ ಹಾಕಿದೆ. ಇನ್ನೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಆದರೆ ಕಟ್ಟುವ ಪ್ರತಿಯೊಬ್ಬನು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಲಿ.

11 ಈಗಾಗಲೇ ಅಸ್ತಿವಾರ ಹಾಕಲಾಗಿದೆ. ಯೇಸುಕ್ರಿಸ್ತರೇ ಆ ಅಸ್ತಿವಾರ. ಇದಲ್ಲದೆ, ಬೇರೆ ಅಸ್ತಿವಾರವನ್ನು ಯಾರೂ ಹಾಕಲಾಗದು.

12 ಈ ಅಸ್ತಿವಾರದ ಮೇಲೆ ಕೆಲವರು ಚಿನ್ನ, ಬೆಳ್ಳಿ, ರತ್ನ - ಇವುಗಳನ್ನು ಉಪಯೋಗಿಸ ಕಟ್ಟುತ್ತಾರೆ. ಮತ್ತೆ ಕೆಲವರು ಹುಲ್ಲು, ಕಟ್ಟಿಗೆ, ಜೊಂಡು - ಇವುಗಳನ್ನು ಬಳಸುತ್ತಾರೆ.

13 ಅವನವನ ಕೆಲಸದ ಗುಣವು ಕಡೆಯ ದಿನ ಬಟ್ಟಬಯಲಾಗುವುದು. ಯೇಸುಕ್ರಿಸ್ತರ ಆ ದಿನವು ಬೆಂಕಿಯ ದಿನವಾಗಿ ಪ್ರಜ್ವಲಿಸುವುದು. ಪ್ರತಿಯೊಬ್ಬನ ಕೆಲಸವನ್ನು ಆ ಬೆಂಕಿ ಪರೀಕ್ಷಿಸುವುದು.

14 ಕಟ್ಟಡವು ಸುಟ್ಟುಹೋಗದೆ ಅಸ್ತಿವಾರದ ಮೇಲೆ ನೆಲೆಯಾಗಿ ನಿಂತರೆ ಕಟ್ಟಿದವನಿಗೆ ಸಂಭಾವನೆ ದೊರಕುತ್ತದೆ.

15 ಸುಟ್ಟುಹೋದರೆ ಅವನಿಗೇ ನಷ್ಟವಾಗುತ್ತದೆ. ಅವನಾದರೋ ಬೆಂಕಿಯಿಂದ ತಪ್ಪಿಸಿಕೊಂಡವನ ಹಾಗೆ ರಕ್ಷಣೆಯನ್ನು ಹೊಂದುತ್ತಾನೆ.

16 ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ.

17 ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ.

18 ಯಾರೂ ತನ್ನನ್ನು ತಾನೇ ವಂಚಿಸಿಕೊಳ್ಳದಿರಲಿ. ನಿಮ್ಮಲ್ಲಿ ಯಾರಾದರೂ ಈ ಲೋಕದ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸುವುದಾದರೆ ಅಂಥವನು ಮೊದಲು ಹುಚ್ಚನಂತಿರಲು ಕಲಿಯಲಿ. ಆಗ ಅವನು ನಿಜವಾಗಿಯೂ ಜಾಣನಾಗುತ್ತಾನೆ.

19 ಇಹಲೋಕಪ ಜಾಣತನವು ದೇವರ ದೃಷ್ಟಿಯಲ್ಲಿ ಹುಚ್ಚುತನವೇ ಸರಿ. “ದೇವರು ಜ್ಞಾನಿಗಳನ್ನು ಅವರ ಜಾಲದಲ್ಲಿಯೇ ಸಿಕ್ಕಿಸುವರು” ಎಂದೂ

20 “ಜ್ಞಾನಿಗಳ ಯೋಜನೆಗಳು ನಿಷ್ಫಲವೆಂಬುದು ಪ್ರಭುವಿಗೆ ತಿಳಿದಿದೆ” ಎಂದೂ ಲಿಖಿತವಾಗಿದೆಯಲ್ಲವೆ?

21 ಆದ್ದರಿಂದ ಕೇವಲ ನರಮಾನವರನ್ನೇ ನೆಚ್ಚಿಕೊಂಡು ಯಾರೂ ಹೆಚ್ಚಳಪಡದಿರಲಿ.

22 ವಾಸ್ತವವಾಗಿ ಸಮಸ್ತವೂ ನಿಮ್ಮದೇ. ಪೌಲ, ಅಪೊಲೋಸ್, ಕೇಫ - ಇವರಾಗಲಿ; ಜಗತ್ತು, ಜೀವ, ಮರಣ - ಇವುಗಳಾಗಲಿ, ಅಥವಾ ವರ್ತಮಾನ, ಭವಿಷ್ಯತ್ಕಾಲಗಳಾಗಲಿ, ಇವೆಲ್ಲವೂ ನಿಮ್ಮವೇ.

23 ಆದರೆ ನೀವು ಕ್ರಿಸ್ತಯೇಸುವಿಗೆ ಸೇರಿದವರು; ಕ್ರಿಸ್ತಯೇಸು ದೇವರಿಗೆ ಸೇರಿದವರು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು