1 ಕೊರಿಂಥದವರಿಗೆ 16 - ಕನ್ನಡ ಸತ್ಯವೇದವು C.L. Bible (BSI)ದೇವಜನರಿಗೆ ದಾನ 1 ದೇವಜನರಿಗೋಸ್ಕರ ಹಣ ಸಂಗ್ರಹಿಸುವುದರ ವಿಷಯವಾಗಿ ಹೇಳುವುದಾದರೆ: ಗಲಾತ್ಯದ ಸಭೆಗಳಿಗೆ ನಾನು ಕೊಟ್ಟ ನಿಯಮವನ್ನೇ ನೀವೂ ಅನುಸರಿಸಿರಿ. ನಾನು ಬಂದಾಗ ಹಣ ಸಂಗ್ರಹಿಸುವ ಅವಶ್ಯಕತೆ ಇರಬಾರದು. 2 ಈ ಕಾರಣ, ನಿಮ್ಮಲ್ಲಿ ಪ್ರತಿ ಒಬ್ಬನೂ ತನ್ನ ಸಂಪಾದನೆಗೆ ತಕ್ಕಂತೆ ಸ್ವಲ್ಪ ಹಣವನ್ನು ಪ್ರತಿ ವಾರದ ಮೊದಲನೆಯ ದಿನವೇ ಪ್ರತ್ಯೇಕಿಸಿ ಇಡಲಿ. 3 ನಾನು ಬಂದ ನಂತರ ನಿಮ್ಮ ಕೊಡುಗೆಯನ್ನು ಪರಿಚಯ ಪತ್ರದ ಸಮೇತ ನೀವು ಆರಿಸಿದವರ ಕೈಯಲ್ಲಿ ಜೆರುಸಲೇಮಿಗೆ ಕಳುಹಿಸುತ್ತೇನೆ. 4 ನಾನೇ ಹೋಗುವುದು ಉಚಿತವೆನಿಸಿದರೆ, ಅವರೂ ನನ್ನ ಜೊತೆಗೆ ಬರಲಿ. ಭೇಟಿಮಾಡುವ ಬಯಕೆ 5 ನಾನು ಮೊದಲು ಮಕೆದೋನಿಯದ ಪ್ರವಾಸವನ್ನು ಮುಗಿಸಿಕೊಂಡು ಅನಂತರ ನಿಮ್ಮ ಬಳಿಗೆ ಬರುತ್ತೇನೆ. 6 ಬಹುಶಃ ನಾನು ನಿಮ್ಮೊಡನೆ ತಂಗಬಹುದು. ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮಲ್ಲಿ ಕಳೆಯಬೇಕಾಗಬಹುದು. ಆಮೇಲೆ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಕಳುಹಿಸಿಕೊಡಬೇಕು. 7 ಪ್ರಯಾಣದ ನಡುವೆ ನಿಮ್ಮನ್ನು ನೋಡಿ ಹೋಗಲು ನನಗೆ ಇಷ್ಟವಿಲ್ಲ. ಪ್ರಭುವಿನ ಚಿತ್ತವಾದರೆ, ಕೊಂಚಕಾಲವಾದರೂ ನಿಮ್ಮೊಡನೆ ಕಾಲಕಳೆಯಬೇಕೆಂದಿದ್ದೇನೆ. 8 ಪಂಚಾಶತ್ತಮ ಹಬ್ಬದ ತನಕ ನಾನು ಎಫೆಸದಲ್ಲಿಯೇ ಇರುತ್ತೇನೆ. 9 ಇಲ್ಲಿ ಅನೇಕ ವಿರೋಧಿಗಳಿದ್ದರೂ ಶುಭಸಂದೇಶದ ಕಾರ್ಯವನ್ನು ಕೈಗೊಳ್ಳಲು ಮಹಾದ್ವಾರಗಳು ನನಗೆ ತೆರೆದಿವೆ. 10 ತಿಮೊಥೇಯನು ಬಂದರೆ ಆತನಿಗೆ ಯಾವ ಚಿಂತೆಯೂ ಇರದಂತೆ ನೋಡಿಕೊಳ್ಳಿ. ಆತನು ನನ್ನ ಹಾಗೆ ಪ್ರಭುವಿನ ಸೇವೆಯಲ್ಲಿಯೇ ನಿರತನಾಗಿರುತ್ತಾನೆ. 11 ಯಾರೂ ಆತನನ್ನು ತಾತ್ಸಾರ ಮಾಡದಿರಲಿ. ಸಮಾಧಾನದಿಂದ ಆತನು ನನ್ನ ಬಳಿಗೆ ಬರುವಂತೆ ಕಳುಹಿಸಿಕೊಡಿ. ಆತನ ಆಗಮನವನ್ನು ನಾನು ಇತರ ಸಹೋದರರೊಡನೆ ಎದುರುನೋಡುತ್ತಿದ್ದೇನೆ. 12 ಸಹೋದರರೇ, ಅಪೊಲೋಸನ ವಿಷಯವಾಗಿ ಹೇಳುವುದಾದರೆ, ಆತನು ಇತರ ಸಹೋದರರೊಡನೆ ನಿಮ್ಮ ಬಳಿಗೆ ಬರಬೇಕೆಂದು ನಾನು ಬಹಳವಾಗಿ ಪ್ರೋತ್ಸಾಹಿಸಿದ್ದೇನೆ. ತಕ್ಷಣವೇ ಬರಲು ಆತನಿಗೆ ಮನಸ್ಸಿಲ್ಲ; ಸದವಕಾಶ ದೊರಕಿದಾಗ ಬರುತ್ತಾನೆ. ವಿದಾಯ ವಂದನೆ 13 ಜಾಗರೂಕರಾಗಿರಿ, ವಿಶ್ವಾಸದಲ್ಲಿ ದೃಢರಾಗಿರಿ, ಧೈರ್ಯಶಾಲಿಗಳಾಗಿರಿ, ಸ್ಥೈರ್ಯದಿಂದ ಬಾಳಿರಿ. 14 ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ. 15 ಸ್ತೇಫನನನ್ನು ಮತ್ತು ಆತನ ಕುಟುಂಬದವರನ್ನು ನೀವು ಬಲ್ಲಿರಿ. ಅವರು ಅಖಾಯದ ಪ್ರಥಮ ಕ್ರೈಸ್ತವಿಶ್ವಾಸಿಗಳು. ದೇವಜನರ ಸೇವೆಗೆ ತಮ್ಮನ್ನೇ ಸಮರ್ಪಿಸಿಕೊಂಡವರು. ನಾನು ನಿಮ್ಮಲ್ಲಿ ವಿನಂತಿಸುವುದೇನೆಂದರೆ: 16 ಇಂಥವರನ್ನು ಮತ್ತು ಅವರೊಡನೆ ದುಡಿದು ಸೇವೆಮಾಡುವವರನ್ನು ಮುಂದಾಳುಗಳೆಂದು ಸನ್ಮಾನಿಸಿರಿ. 17 ಸ್ತೇಫನನು, ಪೋರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವುಂಟಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ. 18 ಅವರು ನಿಮ್ಮನ್ನು ಸಂತೈಸಿದಂತೆ ನನ್ನನ್ನೂ ಸಂತೈಸಿದ್ದಾರೆ, ಇಂಥವರನ್ನು ಗೌರವಿಸಬೇಕು. 19 ಏಷ್ಯ ಸೀಮೆಯಲ್ಲಿರುವ ಧರ್ಮಸಭೆಗಳ ಸಹೋದರರು ನಿಮಗೆ ವಂದನೆಗಳನ್ನು ತಿಳಿಸಿರುತ್ತಾರೆ. ಅಕ್ವಿಲನು ಮತ್ತು ಪ್ರಿಸಿಲ್ಲಳು ಹಾಗೂ ಅವರ ಮನೆಯಲ್ಲಿ ಸಭೆ ಸೇರುವ ಎಲ್ಲರೂ ಪ್ರಭುವಿನ ಹೆಸರಿನಲ್ಲಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. 20 ಇಲ್ಲಿಯ ಸಹೋದರರೆಲ್ಲರೂ ನಿಮಗೆ ನಮಸ್ಕಾರ ಹೇಳಿದ್ದಾರೆ. ನೀವು ಸಹ ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. 21 ಪೌಲನಾದ ನಾನು ನನ್ನ ಸ್ವಂತ ಕೈಬರಹದಿಂದ ನಿಮಗೆ ವಂದನೆಯನ್ನು ಬರೆಯುತ್ತಿದ್ದೇನೆ. 22 ಯಾರಾದರೂ ಪ್ರಭುವನ್ನು ಪ್ರೀತಿಸದೆಹೋದರೆ ಅವರಿಗೆ ಧಿಕ್ಕಾರ! “ಮಾರನಥ" - ಪ್ರಭುವೇ ಬನ್ನಿ. 23 ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೆಲ್ಲರಲ್ಲಿರಲಿ. 24 ಕ್ರಿಸ್ತಯೇಸುವಿನಲ್ಲಿ ನಿಮ್ಮೆಲ್ಲರಿಗೂ ನನ್ನ ಪ್ರೀತಿವಾತ್ಸಲ್ಯಗಳು! |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India