Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 12 - ಕನ್ನಡ ಸತ್ಯವೇದವು C.L. Bible (BSI)


ಪವಿತ್ರಾತ್ಮ ಅವರ ವರದಾನಗಳು

1 ಸಹೋದರರೇ, ಪವಿತ್ರಾತ್ಮ ಅವರ ವರದಾನಗಳ ಬಗ್ಗೆ ನೀವು ಸರಿಯಾದ ಅರಿವುಳ್ಳವರಾಗಿರಬೇಕು.

2 ನೀವು ಅನ್ಯಮತಸ್ಥರಾಗಿದ್ದಾಗ, ನಿಮಗೆ ಮನಸ್ಸು ಬಂದಂತೆಲ್ಲಾ ಮೂಕ ವಿಗ್ರಹಗಳ ಬಳಿ ಹೋಗಿ ಬರುತ್ತಿದ್ದಿರಿ; ಇದನ್ನು ನೀವೇ ಬಲ್ಲಿರಿ.

3 ಇಷ್ಟುಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು.

4 ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ.

5 ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ.

6 ಶಕ್ತಿಸಾಮರ್ಥ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ.

7 ಪ್ರತಿಯೊಬ್ಬನಲ್ಲಿ ಕಂಡುಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ.

8 ಪವಿತ್ರಾತ್ಮ ಮುಖಾಂತರ ಒಬ್ಬನಿಗೆ ಜ್ಞಾನೋಕ್ತಿಗಳು, ಇನ್ನೊಬ್ಬನಿಗೆ ಅವರ ಮುಖಾಂತರವೇ ವಿದ್ಯೋಕ್ತಿಗಳು ಲಭಿಸುತ್ತವೆ;

9 ಅದೇ ಪವಿತ್ರಾತ್ಮರಿಂದ ಒಬ್ಬನಿಗೆ ಅಗಾಧ ವಿಶ್ವಾಸವೂ ಇನ್ನೊಬ್ಬನಿಗೆ ಸ್ವಸ್ಥತೆಯನ್ನೀಯುವ ಶಕ್ತಿಯೂ ದೊರಕುತ್ತವೆ.

10 ಒಬ್ಬನಿಗೆ ಪವಾಡಗಳನ್ನು ಎಸಗುವ ಪರಾಕ್ರಮವನ್ನು, ಇನ್ನೊಬ್ಬನಿಗೆ ಪ್ರವಾದನೆಮಾಡುವ ಪ್ರತಿಭೆಯನ್ನು, ಮತ್ತೊಬ್ಬನಿಗೆ ಸತ್ಯಾಸತ್ಯವನ್ನು ವಿವೇಚಿಸುವ ಜಾಣ್ಮೆಯನ್ನು, ಮಗದೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಸಾಮರ್ಥ್ಯವನ್ನು, ಮತ್ತೂ ಒಬ್ಬನಿಗೆ ಅವುಗಳನ್ನು ಅರ್ಥೈಸುವ ಅರಿವನ್ನು ಆ ಪವಿತ್ರಾತ್ಮರಿಂದಲೇ ಕೊಡಲಾಗುತ್ತದೆ.

11 ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಇಷ್ಟಾನುಸಾರ ಪ್ರತಿಯೊಬ್ಬನಿಗೂ ಹಂಚುತ್ತಾರೆ.

12 ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು.

13 ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ-ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ.


ಕ್ರಿಸ್ತೇಸುವಿನ ಅಂಗಾಂಗಗಳು ನಾವು

14 ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ.

15 ಎಂದಾದರೂ ಕಾಲು, “ನಾನು ಕೈ ಅಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ,” ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ?

16 ಅಥವಾ ಕಿವಿ, “ನಾನು ಕಣ್ಣಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ,” ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ?

17 ದೇಹವಿಡೀ ಕಣ್ಣೇ ಆದರೆ ಅದು ಕೇಳುವ ಬಗೆ ಹೇಗೆ? ಅಥವಾ ಅದು ಇಡೀ ಕಿವಿಯೇ ಆದರೆ, ಮೂಸಲು ಮೂಗು ಎಲ್ಲಿ?

18 ಸದ್ಯ, ದೇವರು ತಮ್ಮ ಚಿತ್ತಾನುಸಾರ, ಪ್ರತಿಯೊಂದು ಅಂಗವನ್ನು ಸರಿಯಾಗಿ ಜೋಡಿಸಿದ್ದಾರೆ.

19 ಅವೆಲ್ಲವೂ ಒಂದೇ ಅಂಗವಾಗಿದ್ದರೆ ಆಗ ದೇಹವೆಲ್ಲಿ?

20 ಹೀಗೆ ಅಂಗಗಳು ಅನೇಕವಾಗಿದ್ದರೂ ದೇಹ ಮಾತ್ರ ಏಕ.

21 ಹೀಗಿರಲಾಗಿ, “ನಿನ್ನ ಅವಶ್ಯಕತೆ ನನಗಿಲ್ಲ,” ಎಂದು ಕೈಗೆ, ಕಣ್ಣು ಹೇಳಲಾಗದು. ಅಂತೆಯೇ, “ನಿನ್ನ ಅವಶ್ಯಕತೆ ನನಗಿಲ್ಲ,” ಎಂದು ಕಾಲುಗಳಿಗೆ ತಲೆ ಹೇಳಲಾಗದು.

22 ಅಷ್ಟುಮಾತ್ರವಲ್ಲ, ಬಲಹೀನವಾಗಿ ತೋರುವ ಅಂಗಗಳೂ ನಮಗೆ ಬೇಕೇಬೇಕು.

23 ಅಲ್ಪವೆಂದೆಣಿಸುವ ಅಂಗಗಳನ್ನು ಅಧಿಕವಾಗಿ ಮಾನ್ಯಮಾಡುತ್ತೇವೆ. ಗೋಪ್ಯವಾಗಿಡತಕ್ಕವುಗಳನ್ನು ಶೀಲದಿಂದ ಸಂರಕ್ಷಿಸುತ್ತೇವೆ.

24 ಬಾಹ್ಯ ಅಂಗಗಳಿಗೆ ಇಂಥ ಸಂರಕ್ಷಣೆ ಅಗತ್ಯವಿರುವುದಿಲ್ಲ. ದೇಹವನ್ನು ನಿರ್ಮಿಸಿದ ದೇವರು ಗೌಣವೆಂದೆಣಿಸಲಾಗುವ ಅಂಗಗಳಿಗೂ ವಿಶೇಷ ಘನತೆಯನ್ನು ಇತ್ತಿದ್ದಾರೆ.

25 ದೇಹದಲ್ಲಿ ಭಿನ್ನಭೇದವಿಲ್ಲದೆ ಅಂಗಗಳು ಒಂದಕ್ಕೊಂದರ ಹಿತವನ್ನು ಗಮನಿಸುವಂತೆ ಮಾಡಿದ್ದಾರೆ.

26 ಒಂದು ಅಂಗಕ್ಕೆ ನೋವಾದರೆ, ಎಲ್ಲಾ ಅಂಗಗಳೂ ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ನಲಿವಾದರೆ, ಮಿಕ್ಕೆಲ್ಲಾ ಅಂಗಗಳು ಅದರೊಡನೆ ಸೇರಿ ನಲಿದಾಡುತ್ತವೆ.

27 ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ ಈ ದೇಹದ ಅಂಗವಾಗಿದ್ದಾನೆ.

28 ದೇವರು ತಮ್ಮ ಸಭೆಯಲ್ಲಿ, ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು ಎಸಗುವವರನ್ನು, ರೋಗಗಳನ್ನು ಗುಣಪಡಿಸುವವರನ್ನು, ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾಪಂಡಿತರನ್ನು ನೇಮಿಸಿದ್ದಾರೆ.

29 ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಬೋಧಕರಲ್ಲ, ಎಲ್ಲರೂ ಪವಾಡಪುರುಷರಲ್ಲ,

30 ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ, ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಿಪಾಲಕರಲ್ಲ, ಎಲ್ಲರೂ ಬಹುಭಾಷಾಪಂಡಿತರಲ್ಲ, ಅಥವಾ ಎಲ್ಲರೂ ಆ ಭಾಷೆಗಳನ್ನು ವಿವರಿಸಿ ಹೇಳುವವರಲ್ಲ.

31 ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ:

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು