1 ಕೊರಿಂಥದವರಿಗೆ 11 - ಕನ್ನಡ ಸತ್ಯವೇದವು C.L. Bible (BSI)ಸಭಾರಾಧನೆಯಲ್ಲಿ ಸಭ್ಯತೆ ಇರಲಿ 1 ನಾನು ಕ್ರಿಸ್ತಯೇಸುವನ್ನು ಅನುಸರಿಸುವಂತೆ, ನೀವೂ ನನ್ನನ್ನೂ ಅನುಸರಿಸಿರಿ. 2 ನೀವು ಸದಾ ನನ್ನನ್ನು ಸ್ಮರಿಸಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಸಾಂಪ್ರದಾಯಿಕ ರೀತಿನೀತಿಗಳನ್ನು ಸರಿಯಾಗಿ ಪಾಲಿಸಿಕೊಂಡು ಬರುತ್ತಿದ್ದೀರಿ; ಇದಕ್ಕಾಗಿ ನಿಮ್ಮನ್ನು ಮೆಚ್ಚುತ್ತೇನೆ. 3 ಒಂದು ವಿಷಯ ನಿಮಗೆ ತಿಳಿದಿರಲಿ. ಪ್ರತಿಯೊಬ್ಬ ವ್ಯಕ್ತಿಗೂ ಕ್ರಿಸ್ತಯೇಸುವೇ ಶಿರಸ್ಸು. ಪ್ರತಿಯೊಬ್ಬ ಸ್ತ್ರೀಗೂ ಪುರುಷನೇ ಶಿರಸ್ಸು. ಕ್ರಿಸ್ತೇಸುವಿಗೆ ದೇವರೇ ಶಿರಸ್ಸು. 4 ಪುರುಷನು ತಲೆಯ ಮೇಲೆ ಮುಸುಕು ಹಾಕಿಕೊಂಡು ಪ್ರಾರ್ಥಿಸುವುದಾದರೆ ಅಥವಾ ದೇವರ ವಾಕ್ಯವನ್ನು ಪ್ರವಚಿಸುವುದಾದರೆ ತನ್ನ ಶಿರಸ್ಸಾದ ಕ್ರಿಸ್ತಯೇಸುವಿಗೆ ಅವಮಾನ ತರುತ್ತಾನೆ. 5 ಸ್ತ್ರೀಯು ತಲೆಯ ಮೇಲೆ ಮುಸುಕು ಹಾಕದೆ ಪ್ರಾರ್ಥಿಸುವುದಾದರೆ ಅಥವಾ ದೇವರ ವಾಕ್ಯವನ್ನು ಪ್ರವಚಿಸುವುದಾದರೆ ತನ್ನ ಶಿರಸ್ಸಾದ ಪತಿಗೆ ಅವಮಾನ ತರುತ್ತಾಳೆ. ಮುಸುಕು ಹಾಕದ ಸ್ತ್ರೀ ತಲೆಯನ್ನು ಮುಂಡನ ಮಾಡಿಸಿಕೊಂಡಂತೆಯೇ. 6 ಹಾಗೆ ಮುಸುಕು ಹಾಕದ ಸ್ತ್ರೀ ತನ್ನ ತಲೆಗೂದಲನ್ನು ತೆಗೆದುಬಿಡಲಿ. ಸ್ತ್ರೀಗೆ ತಲೆಗೂದಲನ್ನು ಕತ್ತರಿಸುವುದಾಗಲಿ, ಬೋಳಿಸುವುದಾಗಲಿ ಲಜ್ಜಾಸ್ಪದವಾಗಿದ್ದರೆ, ಆಕೆ ತಲೆಗೆ ಮುಸುಕು ಹಾಕಿಕೊಳ್ಳಲಿ. 7 ಪುರುಷನು ತಲೆಯ ಮೇಲೆ ಮುಸುಕುಹಾಕಬೇಕಾಗಿಲ್ಲ. ಏಕೆಂದರೆ, ಅವನು ದೇವರ ರೂಪ ಹಾಗೂ ಅವರ ಮಹಿಮೆಯ ಪ್ರತಿಬಿಂಬ. ಸ್ತ್ರೀಯಾದರೋ, ಪುರುಷನ ಮಹಿಮೆಯ ಪ್ರತಿಬಿಂಬ. 8 ಸ್ತ್ರೀಯಿಂದ ಪುರುಷನಲ್ಲ; ಪುರುಷನಿಂದ ಸ್ತ್ರೀ ಉತ್ಪತ್ತಿ ಆದಳು. 9 ಅಂತೆಯೇ ಸ್ತ್ರೀಗಾಗಿ ಪುರುಷನಲ್ಲ; ಪುರುಷನಿಗಾಗಿ ಸ್ತ್ರೀ ಸೃಷ್ಟಿಯಾದಳು. 10 ಹೀಗೆ ದೇವದೂತರ ಸಲುವಾಗಿಯಾದರೂ ಸ್ತ್ರೀಯು ಗೌರವ ಸೂಚಿಸಲು ಮುಸುಕನ್ನು ಹಾಕಬೇಕು. 11 ಆದರೂ ಪ್ರಭುವಿನ ಮಟ್ಟಿಗೆ ಪುರುಷನಿಲ್ಲದೆ ಸ್ತ್ರೀಯು ಇಲ್ಲ; ಸ್ತ್ರೀ ಇಲ್ಲದೆ ಪುರುಷನೂ ಇಲ್ಲ. 12 ಏಕೆಂದರೆ ಸ್ತ್ರೀ ಪುರುಷನಿಂದ ಉತ್ಪತ್ತಿಯಾದಂತೆ ಪುರುಷನು ಸ್ತ್ರೀಯಿಂದ ಜನಿಸುತ್ತಾನೆ. ಸಮಸ್ತವೂ ದೇವರಿಂದ ಹುಟ್ಟುತ್ತದೆ. 13 ಸ್ತ್ರೀ ಮುಸುಕಿಲ್ಲದೆ ದೇವರನ್ನು ಪ್ರಾರ್ಥಿಸುವುದು ಲಕ್ಷಣವೇ? ನೀವೇ ತೀರ್ಮಾನಿಸಿರಿ. 14-15 ಉದ್ದ ಕೂದಲು ಪುರುಷನಿಗೆ ಲಜ್ಜಾಸ್ಪದವೆಂಬುದೂ ನೀಳಕೂದಲು ಸ್ತ್ರೀಗೆ ಭೂಷಣವೆಂಬುದೂ ಸ್ವಭಾವಸಿದ್ಧವಲ್ಲವೇ? ಕೇಶರಾಶಿ ಸ್ತ್ರೀಗೆ ರಕ್ಷಾವರಣವಲ್ಲವೇ? 16 ಇದರ ಬಗ್ಗೆ ಯಾರಾದರೂ ತರ್ಕಿಸಿದರೆ ಅಂಥವನಿಗೆ ಇದು ತಿಳಿದಿರಲಿ: ಇಂಥ ಪದ್ಧತಿ ನಮ್ಮಲ್ಲಿ ಇಲ್ಲ: ಇನ್ನಾವ ಧರ್ಮಸಭೆಗಳಲ್ಲೂ ಇಲ್ಲ. ಪರಮ ಪ್ರಸಾದವೇ ಪ್ರಭುವಿನ ಭೋಜನ 17 ಈಗ ನಾನು ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಮೆಚ್ಚಲಾರೆ. ನೀವು ಸಭೆ ಸೇರುವುದು ಒಳಿತಿಗಿಂತಲೂ ಹೆಚ್ಚಾಗಿ ಕೇಡನ್ನೆ ಉಂಟುಮಾಡುತ್ತಿದೆ. 18 ಮೊದಲನೆಯದಾಗಿ, ನೀವು ಸೇರುವ ಸಭೆಯಲ್ಲಿ ಪಂಗಡಗಳಿವೆಯಂತೆ. ಸ್ವಲ್ಪಮಟ್ಟಿಗಾದರೂ ಈ ಸಮಾಚಾರ ನಿಜವೆಂದು ನನಗನ್ನಿಸುತ್ತದೆ. 19 ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಹಾಗಿರುವಾಗಲೇ ಪ್ರಾಮಾಣಿಕರು ಯಾರೆಂದು ಕಂಡುಕೊಳ್ಳಲು ಸಾಧ್ಯ. 20 ಆದರೂ ನೀವೆಲ್ಲಾ ಒಂದಾಗಿ ಸೇರುವಾಗ ನೀವು ಮಾಡುವ ಭೋಜನ ಪ್ರಭುವಿನ ಭೋಜನವಲ್ಲ. 21 ಏಕೆಂದರೆ, ಭೋಜನ ಸಮಯದಲ್ಲಿ ಒಬ್ಬೊಬ್ಬನೂ ತಾನು ತಂದದ್ದನ್ನು ತಿನ್ನಲು ಇತರರಿಗಿಂತ ಮುಂಚಿತವಾಗಿಯೇ ಕುಳಿತುಕೊಳ್ಳುತ್ತಾನೆ. ಒಬ್ಬನು ಹಸಿದಿರುತ್ತಾನೆ; ಇನ್ನೊಬ್ಬನು ಕುಡಿದು ಮತ್ತನಾಗುತ್ತಾನೆ. 22 ತಿನ್ನಲು, ಕುಡಿಯಲು ನಿಮಗೆ ಸ್ವಂತ ಮನೆಗಳಿಲ್ಲವೇ? ನಿರ್ಗತಿಕರನ್ನು ನಾಚಿಕೆಗೀಡುಮಾಡಿ, ದೇವರ ಸಭೆಯನ್ನು ಉಪೇಕ್ಷಿಸಬೇಕೆಂದಿರುವಿರೋ? ಇದರ ಬಗ್ಗೆ ನಿಮಗೆ ನಾನು ಏನು ಹೇಳಲೀ? ನಿಮ್ಮನ್ನು ಹೊಗಳುವುದೋ, ತೆಗಳುವುದೋ? ಖಂಡಿತವಾಗಿ ನಿಮ್ಮನ್ನು ಹೊಗಳಲಾರೆ. 23 ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ: ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ, ರೊಟ್ಟಿಯನ್ನು ತೆಗೆದುಕೊಂಡು 24 ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ,” ಎಂದರು. 25 ಅಂತೆಯೇ ಭೋಜನದ ಕೊನೆಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ,” ಎಂದರು. 26 ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ. 27 ಯಾರಾದರೂ ಅಯೋಗ್ಯವಾಗಿ ಈ ರೊಟ್ಟಿಯನ್ನು ಭುಜಿಸಿದರೆ, ಅಥವಾ ಪ್ರಭುವಿನ ಪಾತ್ರೆಯಿಂದ ಪಾನಮಾಡಿದರೆ ಅವನು ಪ್ರಭುವಿನ ಶರೀರಕ್ಕೂ ರಕ್ತಕ್ಕೂ ದ್ರೋಹವೆಸಗುತ್ತಾನೆ. 28 ಪ್ರತಿಯೊಬ್ಬನೂ ಮೊಟ್ಟಮೊದಲು ತನ್ನನ್ನು ಪರಿಶೋಧಿಸಿಕೊಂಡು ಅನಂತರ ಆ ರೊಟ್ಟಿಯನ್ನು ಭುಜಿಸಲಿ; ಮತ್ತು ಆ ಪಾತ್ರೆಯಿಂದ ಪಾನಮಾಡಲಿ. 29 ಏಕೆಂದರೆ, ಅದು ಪ್ರಭುವಿನ ಶರೀರವೆಂದು ಪರಿಗ್ರಹಿಸದೆ, ಭುಜಿಸಿ ಪಾನಮಾಡುವಾತನು ನ್ಯಾಯತೀರ್ಪನ್ನು ತನ್ನ ಮೇಲೆ ಬರಮಾಡಿಕೊಳ್ಳುವುದಕ್ಕಾಗಿಯೇ ತಿನ್ನುತ್ತಾನೆ, ಕುಡಿಯುತ್ತಾನೆ. 30 ನಿಮ್ಮಲ್ಲಿ ಅನೇಕರು ಈ ಕಾರಣದಿಂದಲೇ ದುರ್ಬಲರು, ಅಸ್ವಸ್ಥರು ಆಗಿದ್ದೀರಿ; ಮತ್ತು ಎಷ್ಟೋಮಂದಿ ಸತ್ತಿದ್ದಾರೆ. 31 ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನಾವು ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ. 32 ಹಾಗೇನಾದರೂ ಪ್ರಭುವಿನ ವಿಚಾರಣೆಗೆ ನಾವು ಒಳಪಟ್ಟರೆ ಅವರು ನಮ್ಮನ್ನು ದಂಡಿಸಿ ತಿದ್ದುತ್ತಾರೆ. ಪ್ರಪಂಚದೊಂದಿಗೆ ನಾವು ತಪ್ಪಿತಸ್ಥರಾಗದಂತೆ ಮಾಡುತ್ತಾರೆ. 33 ಆದ್ದರಿಂದ ಪ್ರಿಯ ಸಹೋದರರೇ, ಪ್ರಭುವಿನ ಭೋಜನಕ್ಕಾಗಿ ನೀವು ಒಂದಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ. 34 ನೀವು ಹಸಿವು ನೀಗಿಸಿಕೊಳ್ಳುವುದಕ್ಕಾಗಿ ಸಭೆಗೆ ಬರುವುದಾದರೆ ಮನೆಯಲ್ಲೇ ಊಟಮಾಡಿ. ಆಗ ಸಭೆಸೇರಿ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ. ಇನ್ನುಳಿದ ವಿಷಯಗಳನ್ನು ನಾನು ಬಂದು ಇತ್ಯರ್ಥ ಮಾಡುತ್ತೇನೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India