1 ಕೊರಿಂಥದವರಿಗೆ 10 - ಕನ್ನಡ ಸತ್ಯವೇದವು C.L. Bible (BSI)ವಿಗ್ರಹಾರಾಧನೆಯ ವಿರುದ್ಧ ಎಚ್ಚರಿಕೆ 1 ಪ್ರಿಯ ಸಹೋದರರೇ, ನಮ್ಮ ಪೂರ್ವಜರಿಗೆ ಸಂಭವಿಸಿದವುಗಳತ್ತ ನಿಮ್ಮ ಗಮನವನ್ನು ಸೆಳೆಯಬೇಕೆಂದಿದ್ದೇನೆ. ಅವರೆಲ್ಲರೂ ಮೋಡದ ನೆರಳಿನಲ್ಲಿಯೇ ನಡೆದರು. ಎಲ್ಲರೂ ಸಮುದ್ರವನ್ನು ಸುರಕ್ಷಿತವಾಗಿ ದಾಟಿದರು. 2 ಹೀಗೆ ಅವರು ಮೋಡದಲ್ಲಿಯೂ ಸಮುದ್ರದಲ್ಲಿಯೂ ಸ್ನಾನದೀಕ್ಷೆಯನ್ನು ಪಡೆದು ಮೋಶೆಗೆ ಶಿಷ್ಯರಾದರು. 3 ಎಲ್ಲರೂ ಒಂದೇ ದೈವಿಕ ಪಾನೀಯವನ್ನು ಕುಡಿದರು; 4 ಅದೂ ತಮ್ಮೊಡನೆ ಬರುತ್ತಿದ್ದ ದೈವಿಕ ಬಂಡೆಯಿಂದ ಕುಡಿದರು. ಕ್ರಿಸ್ತಯೇಸುವೇ ಆ ಬಂಡೆ. 5 ಆದರೂ ಅವರಲ್ಲಿ ಬಹುಮಂದಿ ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಆದ್ದರಿಂದಲೇ ಮರುಭೂಮಿಯಲ್ಲೆ ಮಡಿದು ಮಣ್ಣುಪಾಲಾದರು. 6 ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಂತೆ ನಾವು ಕೆಟ್ಟದಾದವುಗಳನ್ನು ಆಶಿಸಬಾರದು. 7 ಅವರಲ್ಲಿ ಕೆಲವರು ವಿಗ್ರಹಾರಾಧಕರಾದಂತೆ ನಾವು ಆಗಬಾರದು. ಇವರನ್ನು ಕುರಿತೇ : “ತಿನ್ನಲೆಂದು ಕುಡಿಯಲೆಂದು ಕುಳಿತರು ಕುಣಿಯಲೆಂದು ಕಾಮವೆದ್ದು ನಿಂತರು ಈ ಜನರು” - ಎಂದು ಬರೆದಿದೆ. 8 ಅವರಲ್ಲಿ ಕೆಲವರು ಹಾದರಮಾಡಿದ್ದರಿಂದ ಒಂದೇ ದಿನದಲ್ಲಿ ಇಪ್ಪತ್ತಮೂರು ಸಾವಿರಮಂದಿ ಸತ್ತರು. ನಾವು ಹಾದರದಿಂದ ದೂರವಿರಬೇಕು. 9 ಅವರ ಪೈಕಿ ಕೆಲವರು ಪ್ರಭುವನ್ನು ಶೋಧಿಸಿದರು. ಪರಿಣಾಮವಾಗಿ ಸರ್ಪಗಳಿಂದ ನಾಶವಾದರು. ಅವರಂತೆ ಪ್ರಭುವನ್ನು ಶೋಧನೆಮಾಡುವುದು ನಮಗೆ ಬೇಡ. 10 ಮತ್ತೆ ಕೆಲವರು ಗೊಣಗುಟ್ಟಿದರು; ಸಂಹಾರಕ ದೂತನಿಂದ ಸಂಹರಿಸಲ್ಪಟ್ಟರು. ನೀವೂ ಅವರಂತೆ ಗೊಣಗುಟ್ಟುವವರಾಗಬೇಡಿ. 11 ಇದೆಲ್ಲ ಅವರಿಗೆ ಸಂಭವಿಸಿದುದು ಇತರರಿಗೆ ನಿದರ್ಶನವಾಗಿರಲೆಂದು. ಇವುಗಳನ್ನು ಬರೆದಿಟ್ಟಿರುವುದು, ಯುಗಾಂತ್ಯಕ್ಕೆ ಬಂದಿರುವ ನಮಗೆ ಮುನ್ನೆಚ್ಚರಿಕೆಯಾಗಿರಲೆಂದು. 12 ಆದಕಾರಣ ಸ್ಥಿರವಾಗಿ ನಿಂತಿರುವೆನೆಂದು ಕೊಚ್ಚಿಕೊಳ್ಳುವವನೇ, ಕುಸಿದುಬೀಳದಂತೆ ಎಚ್ಚರಿಕೆಯಿಂದಿರು. 13 ಮಾನವರಿಂದ ಜಯಿಸಲಾಗದ ಶೋಧನೆಗಳೇನೂ ನಿಮಗೆ ಬಂದಿಲ್ಲ. ದೇವರು ಕೊಟ್ಟಮಾತಿಗೆ ತಪ್ಪಲಾರರು. ಗೆಲ್ಲಲಾಗದ ಶೋಧನೆಗಳಿಗೆ ನಿಮ್ಮನ್ನೆಂದೂ ಗುರಿಪಡಿಸಲಾರರು. ಶೋಧನೆಗಳು ಬಂದಾಗ ಅವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನೂ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಅವರೇ ಒದಗಿಸುತ್ತಾರೆ. 14 ಆದ್ದರಿಂದ ಪ್ರಿಯರೇ, ವಿಗ್ರಹಾರಾಧನೆಯನ್ನು ತೊರೆದುಬಿಡಿ. 15 ನೀವು ಅರಿತವರೆಂದು ತಿಳಿದೇ ಇದನ್ನು ಹೇಳುತ್ತಿದ್ಧೇನೆ. ನನ್ನ ಮಾತುಗಳನ್ನು ನೀವೇ ಪರಿಶೀಲಿಸಿನೋಡಿ. 16 ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ? 17 ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ. 18 ಇಸ್ರಯೇಲರ ಪದ್ಧತಿಯನ್ನು ಗಮನಿಸಿರಿ: ಬಲಿಯಾಗಿ ಅರ್ಪಿತವಾದುದನ್ನು ಭುಜಿಸುವವರು ಬಲಿಪೀಠದ ಸೇವೆಯಲ್ಲಿ ಭಾಗಿಯಾಗುತ್ತಾರಷ್ಟೆ. 19 ಹೀಗೆ ನಾನು ಹೇಳುವಾಗ ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥವು ವಾಸ್ತವವಾದುದು ಅಥವಾ ವಿಗ್ರಹವೇ ವಾಸ್ತವವಾದುದು ಎಂದು ಅರ್ಥವೇ? 20 ಯಾವುದೂ ಅಲ್ಲ. ನಾನು ಹೇಳುವುದೇನೆಂದರೆ : ಅನ್ಯಜನರು ಬಲಿಯನ್ನು ದೆವ್ವಗಳಿಗೆ ಅರ್ಪಿಸುತ್ತಾರೆ ಹೊರತು ದೇವರಿಗಲ್ಲ. ಹೀಗೆ ನೀವು ದೆವ್ವಗಳೊಂದಿಗೆ ಭಾಗಿಯಾಗುವುದನ್ನು ನಾನೆಂದಿಗೂ ಇಷ್ಟಪಡುವುದಿಲ್ಲ. 21 ನೀವು ಪ್ರಭುವಿನ ಪಾತ್ರೆಯಿಂದ ಹಾಗೂ ದೆವ್ವಗಳ ಪಾತ್ರೆಯಿಂದ ಕುಡಿಯಲಾಗದು. ಪ್ರಭುವಿನ ಪಂಕ್ತಿಯಲ್ಲೂ ಅಂತೆಯೇ ದೆವ್ವಗಳ ಪಂಕ್ತಿಯಲ್ಲೂ ಊಟಮಾಡಲಾಗದು. 22 ನಾವು ಪ್ರಭುವನ್ನು ಅಸೂಯೆಗೆಬ್ಬಿಸಬಹುದೇ? ಅವರಿಗಿಂತ ನಾವು ಬಲಾಢ್ಯರೇ? 23 “ಏನನ್ನು ಮಾಡಲೂ ಸ್ವಾತಂತ್ರ್ಯವಿದೆ,” ಎಂದು ಹೇಳುವುದುಂಟು. ಆದರೆ ಎಲ್ಲವೂ ಪ್ರಯೋಜನಕರವಲ್ಲ. ಏನನ್ನು ಮಾಡಲೂ ಸ್ವಾತಂತ್ರ್ಯವಿದೆ. ಆದರೆ ಎಲ್ಲವೂ ಅಭಿವೃದ್ಧಿಕರವಲ್ಲ. 24 ಪ್ರತಿಯೊಬ್ಬನೂ ತನ್ನ ಹಿತವನ್ನು ಮಾತ್ರ ಬಯಸದೆ ಪರರ ಹಿತವನ್ನೂ ಬಯಸಬೇಕು. 25 ಮನಸ್ಸಾಕ್ಷಿಯನ್ನು ಕೆದಕುವ ಪ್ರಶ್ನೆಗಳಿಗೆ ಎಡೆಕೊಡದೆ ಮಾಂಸದ ಮಾರುಕಟ್ಟೆಯಲ್ಲಿ ಮಾರುವುದೆಲ್ಲವನ್ನೂ ನೀವು ತಂದು ತಿನ್ನಬಹುದು. 26 ಏಕೆಂದರೆ, “ಭೂಮಂಡಲವೂ ಅದರಲ್ಲಿರುವುದೆಲ್ಲವೂ ಪ್ರಭುವಿನದೆ.” 27 ಕ್ರೈಸ್ತವಿಶ್ವಾಸಿ ಅಲ್ಲದವನು, ನಿಮ್ಮನ್ನು ಊಟಕ್ಕೆ ಕರೆದಾಗ, ನಿಮಗಿಷ್ಟವಿದ್ದರೆ ಹೋಗಿರಿ; ಮನಸ್ಸಾಕ್ಷಿಯನ್ನು ಕೆದಕುವ ಪ್ರಶ್ನೆಗಳಿಗೆ ಎಡೆಕೊಡದೆ ಅವನು ಬಡಿಸಿದ್ದನ್ನು ಊಟಮಾಡಿರಿ. 28 ಆಗ ಯಾರಾದರೂ, “ಇದು ವಿಗ್ರಹಗಳಿಗೆ ಬಲಿಕೊಟ್ಟದ್ದು,” ಎಂದು ಹೇಳಿದರೆ, ಹಾಗೆ ತಿಳಿಸಿದವನ ಸಲುವಾಗಿ ಹಾಗೂ ಮನಸ್ಸಾಕ್ಷಿಯ ಸಲುವಾಗಿ ಅದನ್ನು ಊಟಮಾಡಬೇಡಿ. 29 ಅಂದರೆ, ನಿನ್ನ ಸ್ವಂತ ಮನಸ್ಸಾಕ್ಷಿಯ ಸಲುವಾಗಿ ಅಲ್ಲ, ನಿನಗೆ ತಿಳಿಸಿದವನ ಮನಸ್ಸಾಕ್ಷಿಯ ಸಲುವಾಗಿ ಊಟಮಾಡಬೇಡ. ನಿಮ್ಮಲ್ಲಿ ಒಬ್ಬನು, “ನನ್ನ ಸ್ಯಾತಂತ್ರ್ಯಕ್ಕೆ ಇನ್ನೊಬ್ಬನ ಮನಸ್ಸಾಕ್ಷಿ ಏಕೆ ಅಡ್ಡಿಯಾಗಬೇಕು?” ಎಂದು ಕೇಳಬಹುದು. 30 ಹಾಗೂ “ನಾನು ದೇವರಿಗೆ ಕೃತಜ್ಞತಾಸ್ತೋತ್ರ ಮಾಡಿ ಊಟಮಾಡಿದೆನಾದರೆ ಹಗೆ ಸ್ತೋತ್ರಸಲ್ಲಿಕೆಯೊಂದಿಗೆ ಮಾಡಿದ ಊಟಕ್ಕಾಗಿ ನನ್ನ ಮೇಲೆ ದೂಷಣೆ ಏಕೆ?” ಎಂದು ಕೇಳಬಹುದು. 31 ಅದಕ್ಕೆ ನನ್ನ ಉತ್ತರ ಇದು: ನೀವು ಉಂಡರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿ. 32 ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಧರ್ಮಸಭೆಗಾಗಲಿ ಬಾಧಕರಾಗಿರಬೇಡಿ. 33 ನಾನಂತೂ ನನ್ನ ಸ್ವಂತ ಹಿತವನ್ನು ಲೆಕ್ಕಿಸದೆ ಸರ್ವರ ಉದ್ಧಾರಕ್ಕಾಗಿ ಅವರ ಹಿತವನ್ನು ಅಪೇಕ್ಷಿಸಿ, ಎಲ್ಲರನ್ನೂ ಎಲ್ಲದರಲ್ಲೂ ಮೆಚ್ಚಿಸಲು ಪ್ರಯತ್ನಿಸುತ್ತೇನೆ. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India