Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 1 - ಕನ್ನಡ ಸತ್ಯವೇದವು C.L. Bible (BSI)


ಪೀಠಿಕೆ

1 ಕ್ರಿಸ್ತಯೇಸುವಿನಲ್ಲಿ ಪುನೀತರಾಗಿ ದೇವಜನರಾಗಲು ಕರೆಹೊಂದಿರುವ ಕೊರಿಂಥದ ಶ್ರೀಸಭೆಯವರಿಗೂ ಹಾಗೂ ಪ್ರಭು ಯೇಸುಕ್ರಿಸ್ತರನ್ನು ಎಲ್ಲೆಡೆಯೂ ನಾಮಸ್ಮರಣೆ ಮಾಡುವ ಸರ್ವಜನರಿಗೂ - ದೇವರ‍ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾಗಲು ಕರೆಹೊಂದಿದ ಪೌಲನಾದ ನಾನು ಸಹೋದರ ಸೊಸ್ಥೆನನೊಂದಿಗೆ ಸೇರಿ ಬರೆಯುವ ಪತ್ರ.

2 ಯೇಸುಕ್ರಿಸ್ತರು ನಮಗೂ ಸಮಸ್ತ ದೇವಜನರಿಗೂ ಪ್ರಭುವಾಗಿದ್ದಾರೆ.

3 ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ!


ಕ್ರಿಸ್ತರಲ್ಲಿ ಕೃಪಾಶೀರ್ವಾದ

4 ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

5 ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್‍ಚತುರರು ಆಗಿದ್ದೀರಿ.

6 ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ.

7 ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರುನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ.

8 ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು.

9 ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸಪಾತ್ರರು.


ಧರ್ಮಸಭೆಯಲ್ಲಿ ಭಿನ್ನಭೇದ

10 ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: ವಾದವಿವಾದವಿಲ್ಲದೆ, ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕಮತ್ಯದಿಂದ ಬಾಳಿರಿ.

11 ಸಹೋದರರೇ, ನೀವು ಜಗಳವಾಡುತ್ತಿದ್ದೀರಿ ಎಂಬುದು ಖ್ಲೊಯೇಯನ ಮನೆಯವರಿಂದ ತಿಳಿದುಬಂದಿದೆ.

12 ನಿಮ್ಮ ಪೈಕಿ, ತಾನು ಪೌಲನ ಕಡೆಯವನು ಎಂದು ಒಬ್ಬ, ತಾನು ಅಪೊಲೋಸನ ಕಡೆಯವನು ಎಂದು ಇನ್ನೊಬ್ಬ, ತಾನು ಕೇಫನ ಕಡೆಯವನು ಎಂದು ಮತ್ತೊಬ್ಬ, ತಾನು ಕ್ರಿಸ್ತನ ಕಡೆಯವನು ಎಂದು ಮಗದೊಬ್ಬ. ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಹೇಳಿಕೊಳ್ಳುತ್ತಾರಂತೆ.

13 ಕ್ರಿಸ್ತಯೇಸು ಭಾಗಭಾಗವಾಗಿ ವಿಂಗಡಿಸಿ ಹೋಗಿದ್ದಾರೆಯೇ? ನಿಮಗೋಸ್ಕರ ಶಿಲುಬೆಯ ಮೇಲೆ ಮಡಿದವನು ಪೌಲನೇ? ನೀವು ದೀಕ್ಷಾಸ್ನಾನ ಪಡೆದದ್ದು ಪೌಲನ ಹೆಸರಿನಲ್ಲೇ?

14 ಸದ್ಯ! ಕ್ರಿಸ್ಪನು ಮತ್ತು ಗಾಯನು ಇವರಿಬ್ಬರನ್ನು ಬಿಟ್ಟರೆ ನಿಮ್ಮ ಪೈಕಿ ಯಾರಿಗೂ ನಾನು ದೀಕ್ಷಾಸ್ನಾನವನ್ನು ಕೊಟ್ಟಿಲ್ಲ.

15 ಆದ್ದರಿಂದ ನಿಮ್ಮಲ್ಲಿ ಯಾರೂ ದೀಕ್ಷಾಸ್ನಾನವನ್ನು ನನ್ನ ಹೆಸರಿನಲ್ಲಿ ಪಡೆದಿರಿ ಎಂದು ಹೇಳಿಕೊಳ್ಳುವಂತಿಲ್ಲ.

16 ಹೌದು, ಸ್ತೇಫನನ ಮನೆಯವರಿಗೂ ದೀಕ್ಷಾಸ್ನಾನವನ್ನು ಕೊಟ್ಟಿದ್ದೇನೆ. ಇವರಲ್ಲದೆ ಇನ್ನಾರಿಗೂ ದೀಕ್ಷಾಸ್ನಾನವನ್ನು ಕೊಟ್ಟ ನೆನಪು ನನಗಿಲ್ಲ.

17 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ್‍ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು.


ಶಿಲುಬೆಯ ಶಕ್ತಿ

18 ವಿನಾಶಮಾರ್ಗದಲ್ಲಿರುವವರಿಗೆ ಶಿಲುಬೆಯ ಸಂದೇಶ ಹುಚ್ಚು ಸಂಗತಿಯಾಗಿದೆ. ಮುಕ್ತಿಮಾರ್ಗದಲ್ಲಿರುವ ನಮಗಾದರೋ ಅದು ದೈವಶಕ್ತಿಯಾಗಿದೆ.

19 “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು ಜಾಣರ ಜಾಣತನಕ್ಕೆ ಭಂಗತರುವೆನು” ಎಂದು ಪವಿತ್ರಗ್ರಂಥದಲ್ಲಿ ಇದೆಯಲ್ಲವೇ?

20 ಹೀಗಿರುವಾಗ ಜ್ಞಾನಿಯೆಲ್ಲಿ? ಶಾಸ್ತ್ರಜ್ಞನೆಲ್ಲಿ? ಜಗತ್ತಿನ ತರ್ಕನಿಪುಣನೆಲ್ಲಿ? ಪ್ರಪಂಚದ ಜ್ಞಾನವನ್ನು ದೇವರು ಹುಚ್ಚುತನವಾಗಿಸಿಲ್ಲವೇ?

21 ಲೋಕವು ತನ್ನ ಸ್ವಂತ ಜ್ಞಾನದಿಂದ ದೇವರನ್ನು ಅರಿಯಲಾರದೆ ಹೋಯಿತು. ಇದು ದೈವಸಂಕಲ್ಪವೇ ಸರಿ. ಆದ್ದರಿಂದಲೇ ನಾವು ಸಾರುವ ‘ಹುಚ್ಚುತನ’ವೆಂಬ ಸಂದೇಶದ ಮೂಲಕ ವಿಶ್ವಾಸವುಳ್ಳವರನ್ನು ಉದ್ಧರಿಸುವುದು ದೇವರಿಗೆ ಉಚಿತವೆನಿಸಿತು

22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರು ಜ್ಞಾನವನ್ನು ಅರಸುತ್ತಾರೆ.

23 ನಾವಾದರೋ ಶಿಲುಬೆಗೇರಿಸಲಾದ ಕ್ರಿಸ್ತಯೇಸುವನ್ನು ಪ್ರಚುರಪಡಿಸುತ್ತೇವೆ. ಯೆಹೂದ್ಯರಿಗೆ ಇದು ಅಸಹ್ಯವಾಗಿದೆ; ಅನ್ಯಜನರಿಗೆ ಹಾಸ್ಯಾಸ್ಪದವಾಗಿದೆ.

24 ಆದರೆ ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ದೇವರಿಂದ ಕರೆಹೊಂದಿದ್ದರೆ ಅಂಥವರಿಗೆ ಯೇಸುಕ್ರಿಸ್ತರು ದೇವರ ಶಕ್ತಿಯಾಗಿದ್ದಾರೆ ಹಾಗೂ ದೇವರ ಜ್ಞಾನವಾಗಿದ್ದಾರೆ.

25 ‘ದೇವರ ಹುಚ್ಚುತನ’ ಎಂಬುದು ಮಾನವ ಜ್ಞಾನಕ್ಕಿಂತಲೂ ಶ್ರೇಷ್ಠವಾದುದು. ‘ದೇವರ ದೌರ್ಬಲ್ಯ’ ಎಂಬುದು ಮಾನವ ಶಕ್ತಿಗಿಂತಲೂ ಪ್ರಬಲವಾದುದು.

26 ಸಹೋದರರೇ, ನಿಮ್ಮನ್ನು ದೇವರು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿ. ಲೋಕದ ಎಣಿಕೆಯಲ್ಲಿ ನಿಮ್ಮೊಳಗೆ ಜ್ಞಾನಿಗಳು ಅನೇಕರಿಲ್ಲ. ಪರಾಕ್ರಮಿಗಳು ಅನೇಕರಿಲ್ಲ, ಕುಲೀನರು ಅನೇಕರಿಲ್ಲ.

27 ಜ್ಞಾನಿಗಳನ್ನು ನಾಚಿಕೆಗೀಡುಮಾಡಲು ದೇವರು ಲೋಕದ ದೃಷ್ಟಿಯಲ್ಲಿ ಮೂರ್ಖರನ್ನು ಆರಿಸಿಕೊಂಡರು; ಅಂತೆಯೇ ಬಲಿಷ್ಠರನ್ನು ಲಜ್ಜೆಗೀಡುಮಾಡಲು ಲೋಕದ ದೃಷ್ಟಿಯಲ್ಲಿ ಬಲಹೀನರನ್ನು ಆರಿಸಿಕೊಂಡರು.

28 ಲೋಕದ ದೃಷ್ಟಿಯಲ್ಲಿ ಗಣ್ಯವಾದುದನ್ನು ನಿರ್ನಾಮಗೊಳಿಸಲು ಗಣನೆಗೆ ಬಾರದುದನ್ನು, ಕೀಳಾದುದನ್ನು, ಬೀಳಾದುದನ್ನು ಆರಿಸಿಕೊಂಡರು.

29 ಯಾವ ಮಾನವನೂ ತಮ್ಮ ಸಮ್ಮುಖದಲ್ಲಿ ಅಹಂಕಾರಪಡದಂತೆ ದೇವರು ಹೀಗೆ ಮಾಡಿದರು.

30 ಅವರ ಕೃಪೆಯಿಂದಲೇ ನೀವು ಕ್ರಿಸ್ತಯೇಸುವಿನಲ್ಲಿ ಬಾಳುತ್ತಾ ಇದ್ದೀರಿ; ಅವರ ಕೃಪೆಯಿಂದಲೇ ಕ್ರಿಸ್ತಯೇಸು ನಮಗೆ ಜ್ಞಾನ ಮೂಲವಾಗಿದ್ದಾರೆ. ದೇವರಿಂದ ನಮಗೆ ದೊರಕುವ ಸತ್ಸಂಬಂಧ, ಪಾವನತೆ ಹಾಗೂ ವಿಮೋಚನೆ ಆ ಕ್ರಿಸ್ತಯೇಸುವಿನಿಂದಲೇ.

31 ಆದ್ದರಿಂದ ಪವಿತ್ರಗ್ರಂಥದಲ್ಲಿ ಹೇಳಿರುವಂತೆ: ‘ಹೆಚ್ಚಳಪಡುವವನು ಪ್ರಭುವಿನಲ್ಲಿ ಹೆಚ್ಚಳಪಡಲಿ.’

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು