Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಅರಸುಗಳು 15 - ಕನ್ನಡ ಸತ್ಯವೇದವು C.L. Bible (BSI)


ಯೆಹೂದ್ಯರ ಅರಸ ಅಬೀಯಾಮನು
( ೨ ಪೂರ್ವ. 13:1—14:1 )

1 ನೆಬಾಟನ ಮಗ ಯಾರೊಬ್ಬಾಮನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯಾಮನು

2 ಜುದೇಯದ ಅರಸನಾಗಿ ಜೆರುಸಲೇಮಿನಲ್ಲಿ ಮೂರು ವರ್ಷ ಆಳಿದನು. ಅಬೀಷಾಲೋಮನ ಮಗಳಾದ ಮಾಕಾ ಎಂಬಾಕೆ ಅವನ ತಾಯಿ.

3 ತನ್ನ ತಂದೆ ಮಾಡಿದ ಪಾಪಕೃತ್ಯಗಳನ್ನು ಇವನೂ ಮಾಡಿದನು. ಇವನ ಪೂರ್ವಜ ದಾವೀದನು ದೇವರಾದ ಸರ್ವೇಶ್ವರನಿಗೆ ಪೂರ್ಣಮನಸ್ಸಿನಿಂದ ಸೇವೆಸಲ್ಲಿಸಿದಂತೆ ಇವನು ಸೇವೆಸಲ್ಲಿಸಲಿಲ್ಲ.

4 ಹಿತ್ತಿಯನಾದ ಊರೀಯನ ವಿಷಯವೊಂದನ್ನು ಬಿಟ್ಟರೆ, ಬೇರೆ ಯಾವ ವಿಷಯದಲ್ಲೂ ತಮ್ಮ ಆಜ್ಞೆಯನ್ನು ಮೀರದೆ, ಜೀವದಿಂದಿರುವವರೆಗೂ ತಮ್ಮ ಚಿತ್ತಕ್ಕನುಸಾರ ನಡೆದ ದಾವೀದನ ನಿಮಿತ್ತ, ಸರ್ವೇಶ್ವರಸ್ವಾಮಿ ಜೆರುಸಲೇಮಿನಲ್ಲಿನ ಇವನ ದೀಪವನ್ನು ಆರಿಸಲಿಲ್ಲ.

5 ಜೆರುಸಲೇಮನ್ನೂ ಇವನ ಸಂತಾನವನ್ನೂ ಉಳಿಸಿದರು.

6 (ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು.)

7 ಅಬೀಯಾಮನ ಉಳಿದ ಚರಿತ್ರೆ ಹಾಗು ಅವನ ಎಲ್ಲಾ ಕೃತ್ಯಗಳು ಯೆಹೂದರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ. ಇವನಿಗೂ ಯಾರೊಬ್ಬಾಮನಿಗೂ ಯುದ್ಧ ನಡೆಯುತ್ತಿತ್ತು.

8 ಅಬೀಯಾಮನು ಸತ್ತು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಆಸನು ಅರಸನಾದನು.


ಯೆಹೂದ್ಯರ ಅರಸ ಆಸನು
( ೨ ಪೂರ್ವ. 15:6—16:6 )

9 ಇಸ್ರಯೇಲರ ಅರಸ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಆಸನು ಜುದೇಯದ ಅರಸನಾದನು.

10 ಇವನು ಜೆರುಸಲೇಮಿನಲ್ಲಿ ನಾಲ್ವತ್ತೊಂದು ವರ್ಷ ಆಳಿದನು. ಅಬ್ಷಾಲೋಮನ ಮಗಳಾದ ಮಾಕಾ ಎಂಬಾಕೆ ಇವನ ತಾಯಿ.

11 ಇವನು ತನ್ನ ಪೂರ್ವಜ ದಾವೀದನಂತೆ ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು.

12 ವೇಶ್ಯೆಯರಾಗಿ ವರ್ತಿಸುತ್ತಿದ್ದ, ಹೆಂಗಸರು ಹಾಗು ಗಂಡಸರನ್ನೆಲ್ಲಾ ನಾಡಿನಿಂದ ಹೊರಡಿಸಿ ತನ್ನ ಹಿರಿಯರು ಮಾಡಿಸಿಟ್ಟಿದ್ದ ವಿಗ್ರಹಗಳನ್ನೆಲ್ಲಾ ತೆಗೆದು ಹಾಕಿದನು.

13 ಇವನ ತಾಯಿ ಮಾಕಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ ಆಸನು ಆಕೆಯನ್ನು ‘ರಾಜಮಾತೆ’ ಎಂಬ ಪದವಿಯಿಂದ ತೆಗೆದುಹಾಕಿ ಆ ಮೂರ್ತಿಯನ್ನು ಕಡಿದು ಕಿದ್ರೋನ್ ಹಳ್ಳದ ಹತ್ತಿರ ಸುಡಿಸಿದನು.

14 ಇವನು ನಾಡಿನಲ್ಲಿದ್ದ ಪೂಜಾಸ್ಥಳಗಳನ್ನು ಹಾಳುಮಾಡದಿದ್ದರೂ ತನ್ನ ಜೀವಮಾನದಲ್ಲೆಲ್ಲಾ ಯಥಾರ್ಥಮನಸ್ಸಿನಿಂದ ಸರ್ವೇಶ್ವರನಿಗೆ ಪ್ರಾಮಾಣಿಕನಾಗಿ ನಡೆದುಕೊಂಡನು.

15 ಇದಲ್ಲದೆ, ತನ್ನ ತಂದೆಯೂ ತಾನೂ ಪ್ರತಿಷ್ಠಿಸಿದ್ದ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ಸರ್ವೇಶ್ವರನ ಆಲಯದಲ್ಲಿ ತಂದಿಟ್ಟನು.

16 ಇವನಿಗೂ ಇಸ್ರಯೇಲರ ಅರಸ ಬಾಷನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು.

17 ಇಸ್ರಯೇಲರ ಅರಸ ಬಾಷನು ಯೆಹೂದ್ಯರಿಗೆ ವಿರುದ್ಧ ಯುದ್ಧಮಾಡಿ ಯಾರೂ ಯೆಹೂದ್ಯರ ಅರಸ ಆಸನ ಬಳಿಗೆ ಹೋಗಿ ಬರುವುದಕ್ಕಾಗದಂತೆ ‘ರಾಮ್’ ಎಂಬ ಕೋಟೆಯನ್ನು ಕಟ್ಟಿಸಿದನು.

18 ಆಗ ಆಸನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಉಳಿದಿದ್ದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಅದನ್ನು ದೂತರ ಮುಖಾಂತರ ದಮಸ್ಕದಲ್ಲಿದ್ದ ಸಿರಿಯಾದವರ ಅರಸನೂ ಹೆಜ್ಯೋನನ ಮೊಮ್ಮಗನೂ ಟಬ್ರಿಮ್ಮೋನನ ಮಗನೂ ಆದ ಬೆನ್ಹದದನಿಗೆ ಕೊಟ್ಟು ಕಳುಹಿಸಿದನು.

19 ಅಲ್ಲದೆ ಅವನಿಗೆ, “ನನಗೂ ನಿನಗೂ, ನನ್ನ ತಂದೆಗೂ ನಿನ್ನ ತಂದೆಗೂ ಒಂದು ಒಪ್ಪಂದವಿದೆಯಲ್ಲವೆ? ಇಗೋ, ನಿನಗೆ ಬೆಳ್ಳಿಬಂಗಾರವನ್ನು ಕಾಣಿಕೆಯಾಗಿ ಕಳುಹಿಸಿದ್ದೇನೆ. ಇಸ್ರಯೇಲರ ಅರಸ ಬಾಷನು ನನ್ನ ನಾಡಿನಿಂದ ಸೈನ್ಯವನ್ನು ಹಿಂದಕ್ಕೆ ತೆಗೆದುಕೊಂಡು ನನ್ನನ್ನು ಬಿಟ್ಟುಹೋಗುವಂತೆ, ಅವನ ಸಂಗಡ ನೀನು ಮಾಡಿಕೊಂಡಿರುವ ಒಪ್ಪಂದವನ್ನು ಮುರಿದುಬಿಡು,” ಎಂದು ಹೇಳಿಸಿದನು.

20 ಬೆನ್ಹದದನು ಅರಸ ಆಸನ ಮಾತನ್ನು ಕೇಳಿ, ತನ್ನ ಸೈನ್ಯಾಧಿಪತಿಗಳನ್ನು ಯುದ್ಧಕ್ಕಾಗಿ ಇಸ್ರಯೇಲರ ಪಟ್ಟಣಗಳಿಗೆ ಕಳುಹಿಸಿದನು. ಇವರು ಇಯ್ಯೋನ್, ದಾನ್, ಅಬೇಲ್ಬೇತ್ಮಾಕಾ, ಕಿನ್ನೆರೋತ್ ಪ್ರದೇಶ, ನಫ್ತಾಲ್ಯರ ಎಲ್ಲಾ ಪ್ರಾಂತ್ಯ ಇವುಗಳನ್ನು ಹಾಳುಮಾಡಿದರು.

21 ಬಾಷನು ಈ ಸುದ್ದಿಯನ್ನು ಕೇಳಿದಾಗ ರಾಮಕೋಟೆಯನ್ನು ಕಟ್ಟಿಸುವುದನ್ನು ಬಿಟ್ಟು ತಿರ್ಚಕ್ಕೆ ಹೋಗಿ ಅಲ್ಲೇ ವಾಸಿಸಿದನು.

22 ಅನಂತರ ಅರಸನಾದ ಆಸನು ಯೆಹೂದ್ಯರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ಕರೆಸಿ ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲು ಮರಗಳನ್ನು ಇವರ ಮುಖಾಂತರ ತೆಗೆದುಕೊಂಡು ಹೋಗಿ ಬೆನ್ಯಾಮೀನ್ಯರ ಗೆಬ, ಮಿಚ್ಪೆ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.

23 ಆಸನ ಉಳಿದ ಚರಿತ್ರೆ, ಅವನ ಪರಾಕ್ರಮಕೃತ್ಯಗಳು, ಪಟ್ಟಣಗಳನ್ನು ಕಟ್ಟಿಸಿದ ಸಂಗತಿ ಹಾಗು ಅವನ ಇತರ ಕಾರ್ಯಕಲಾಪಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. ಮುಪ್ಪಿನಲ್ಲಿ ಅವನ ಕಾಲುಗಳಿಗೆ ರೋಗ ತಗಲಿತು.

24 ಅವನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ಅವನ ಪೂರ್ವಜ ದಾವೀದನ ಪಟ್ಟಣದೊಳಗೆ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು. ಅವನಿಗೆ ಬದಲಾಗಿ ಅವನ ಮಗ ಯೆಹೋಷಾಫಾಟನು ಅರಸನಾದನು.


ಇಸ್ರಯೇಲರ ಅರಸ ನಾದಾಬನು

25 ಯೆಹೂದ್ಯರ ಅರಸ ಆಸನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯಾರೊಬ್ಬಾಮನ ಮಗ ನಾದಾಬನು ಇಸ್ರಯೇಲರ ಅರಸನಾಗಿ ಎರಡು ವರ್ಷ ಆಳಿದನು.

26 ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ತನ್ನ ತಂದೆಯ ಮಾರ್ಗದಲ್ಲಿ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.

27 ಇವನು ಇಸ್ರಯೇಲರೊಡನೆ ಫಿಲಿಷ್ಟಿಯರ ವಶದಲ್ಲಿದ್ದ ಗಿಬ್ಬೆತೋನ್ ಎಂಬ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ಇಸ್ಸಾಕಾರನ ಕುಲದವನೂ ಅಹೀಯನ ಮಗನೂ ಆದ ಬಾಷನೆಂಬವನು ಇವನಿಗೆ ವಿರುದ್ಧ ಒಳಸಂಚು ಮಾಡಿ ಇವನನ್ನು ಕೊಂದನು.

28 ಬಾಷನು ಜುದೇಯದ ಅರಸನಾದ ಆಸನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಇವನನ್ನು ಕೊಂದು ಇವನಿಗೆ ಬದಲಾಗಿ ತಾನೇ ಅರಸನಾದನು.

29 ಅರಸನಾದ ಕೂಡಲೆ, ಯಾರೊಬ್ಬಾಮನ ಮನೆಯವರಲ್ಲಿ ಒಬ್ಬನನ್ನೂ ಜೀವದಿಂದುಳಿಸದೆ ಎಲ್ಲರನ್ನೂ ಸಂಹರಿಸಿದನು. ಹೀಗೆ ಸರ್ವೇಶ್ವರ ಶಿಲೋವಿನ ಪ್ರವಾದಿ ಅಹೀಯನ ಮುಖಾಂತರ ಹೇಳಿಸಿದ ಮಾತು ನೆರವೇರಿತು.

30 ಯಾರೊಬ್ಬಾಮನು ತಾನು ಪಾಪಮಾಡಿದ್ದಲ್ಲದೆ ಇಸ್ರಯೇಲರನ್ನೂ ಪಾಪಕ್ಕೆ ಪ್ರೇರಿಸಿ ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ರೇಗಿಸಿದ್ದರಿಂದ ಹೀಗಾಯಿತು.

31 ನಾದಾಬನ ಕಾರ್ಯಕಲಾಪಗಳು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.

32 ಆಸನಿಗೂ ಇಸ್ರಯೇಲರ ಅರಸನಾದ ಬಾಷನಿಗೂ ಯಾವಾಗಲೂ ಯುದ್ಧ ನಡೆಯುತ್ತಿತ್ತು.


ಇಸ್ರಯೇಲಿನ ಅರಸ ಬಾಷನು

33 ಜುದೇಯದ ಅರಸ ಆಸನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಅಹೀಯನ ಮಗ ಬಾಷನು ಇಸ್ರಯೇಲರ ಅರಸನಾಗಿ ತಿರ್ಚದಲ್ಲಿ ಇದ್ದುಕೊಂಡು ಇಪ್ಪತ್ತನಾಲ್ಕು ವರ್ಷ ಆಳಿದನು.

34 ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರಚೋದಿಸಿದ ಯಾರೊಬ್ಬಾಮನ ಮಾರ್ಗದಲ್ಲಿ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು