ಹೋಶೇಯ 7 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಇಸ್ರಾಯೇಲರು ದುಷ್ಟತನವನ್ನು ಪ್ರೀತಿಸಿದ್ದು 1 ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲನ್ನು ಸ್ವಸ್ಥ ಮಾಡಬೇಕೆಂದಿರುವಾಗ ಎಫ್ರಾಯೀಮಿನ ಅಧರ್ಮವೂ, ಸಮಾರ್ಯದ ದುಷ್ಟತನವೂ ವ್ಯಕ್ತವಾಗುತ್ತವೆ. ಎಲ್ಲರೂ ಮೋಸಮಾಡುತ್ತಾರೆ, ಒಳಗೆ ಕಳ್ಳರು ನುಗ್ಗುತ್ತಾರೆ, ಹೊರಗೆ ಡಕಾಯಿತಿಯವರು ಸುಲಿಯುತ್ತಾರೆ. 2 ತಮ್ಮ ದುರ್ಮಾರ್ಗವೆಲ್ಲಾ ಯೆಹೋವನ ಜ್ಞಾಪಕದಲ್ಲಿರುತ್ತದೆ ಎಂದು ಅವರು ಮನದಟ್ಟು ಮಾಡಿಕೊಳ್ಳುವುದಿಲ್ಲ; ಅವರ ದುಷ್ಕೃತ್ಯಗಳು ಈಗ ಅವರನ್ನು ಮುತ್ತಿಕೊಂಡಿವೆ, ನನ್ನ ಕಣ್ಣೆದುರಿಗಿವೆ. 3 ತಮ್ಮ ಕೆಟ್ಟತನದಿಂದ ರಾಜನನ್ನು ಆನಂದಗೊಳಿಸುತ್ತಾರೆ, ಸುಳ್ಳುಗಳಿಂದ ಮುಖಂಡರನ್ನು ಸಂತೋಷಪಡಿಸುತ್ತಾರೆ. 4 ಅವರೆಲ್ಲರೂ ವ್ಯಭಿಚಾರಿಗಳು; ರೊಟ್ಟಿಸುಡುವವನು ಬೆಂಕಿಹೊತ್ತಿಸಿ, ಉರಿಸಿ, ಕಣಕವನ್ನು ನಾದಿದಾಗಿನಿಂದ ಹುಳಿಬರುವ ತನಕ ಮತ್ತಷ್ಟು ಉರಿಸದೆ ಹಾಗೆಯೇ ಬಿಟ್ಟಿರುವ ಒಲೆಗೆ ಸಮಾನರಾಗಿದ್ದಾರೆ. 5 ನಮ್ಮ ರಾಜನ ದಿನದಲ್ಲಿ ದ್ರಾಕ್ಷಾರಸದ ಉಷ್ಣವು ದೇಶಾಧಿಪತಿಗಳ ತಲೆಗೇರಲು ಆರಂಭವಾಯಿತು; ರಾಜನು ಆ ತುಂಟರ ಕೈಯ ಮೇಲೆ ಕೈ ಹಾಕಿದನು. 6 ಅವರು ಹೊಂಚಿಕೊಂಡಿರುವಾಗ ಆಹಾ, ತಮ್ಮ ಹೃದಯವನ್ನು ಒಲೆಯಂತೆ ಸಿದ್ಧಮಾಡಿ ಉರಿಯುತ್ತಿದ್ದಾರೆ; ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ; ಬೆಳಿಗ್ಗೆ ಧಗಧಗನೆ ಉರಿಯುತ್ತದೆ. 7 ಎಲ್ಲರೂ ಒಲೆಯಂತೆ ಝಳವೇರಿ ತಮ್ಮ ನ್ಯಾಯಾಧೀಶ್ವರರನ್ನು ನುಂಗಿಬಿಡುತ್ತಾರೆ; ಅವರ ಸಕಲ ರಾಜರು ಬಿದ್ದಿರುತ್ತಾರೆ, ಅವರೊಳಗೆ ನನ್ನನ್ನು ಪ್ರಾರ್ಥಿಸುವವರೇ ಇಲ್ಲ. ಇಸ್ರಾಯೇಲಿನ ಅವಿವೇಕದ ರಾಜ್ಯತಂತ್ರಗಳು 8 ಎಫ್ರಾಯೀಮು ಜನಾಂಗಗಳಲ್ಲಿ ಸೇರಿಕೊಳ್ಳುತ್ತದೆ; ಎಫ್ರಾಯೀಮು ತಿರುವಿಹಾಕದ ರೊಟ್ಟಿಯಂತಿದೆ. 9 ಅನ್ಯರು ಅದರ ಶಕ್ತಿಯನ್ನು ಹೀರಿಬಿಟ್ಟಿದ್ದರೂ ಅದಕ್ಕೆ ತಿಳಿಯದು; ಅದರ ತಲೆಯ ಮೇಲೆ ಅಲ್ಲಲ್ಲಿ ನೆರೆಯು ಕಾಣಿಸಿದರೂ ಅದಕ್ಕೆ ಗೊತ್ತಿಲ್ಲ. 10 ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇದೆಲ್ಲಾ ಸಂಭವಿಸಿದರೂ ಅದು ತನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಲಿಲ್ಲ; ಆತನನ್ನು ಆಶ್ರಯಿಸಲಿಲ್ಲ. 11 ಎಫ್ರಾಯೀಮು ಬುದ್ಧಿ ವಿವೇಕಗಳಿಲ್ಲದ ಪಾರಿವಾಳದಂತಿದೆ; ಅದರ ಜನರು ಐಗುಪ್ತವನ್ನು ಕೂಗುತ್ತಾರೆ, ಅಶ್ಶೂರಕ್ಕೆ ಹೊರಡುತ್ತಾರೆ. 12 ಹೊರಟ ಕೂಡಲೆ ಅವರ ಮೇಲೆ ನನ್ನ ಬಲೆಯನ್ನು ಬೀಸಿ, ಆಕಾಶದ ಪಕ್ಷಿಗಳ ಹಾಗೆ ಅವರನ್ನು ಕೆಳಕ್ಕೆ ಎಳೆಯುವೆನು. ಅವರೆಲ್ಲರ ಕಿವಿಗೆ ಬಿದ್ದ ಮಾತಿಗನುಸಾರವಾಗಿ ಅವರನ್ನು ಶಿಕ್ಷಿಸುವೆನು. 13 ಅವರು ನನ್ನಿಂದ ಅಗಲಿ ಹೋಗಿದ್ದಾರೆ, ಹಾಳಾಗಲಿ! ನನಗೆ ದ್ರೋಹಮಾಡಿದ್ದಾರೆ, ನಾಶವಾಗಲಿ! ನಾನು ಅವರನ್ನು ಉದ್ಧರಿಸಬೇಕೆಂದು ಇರುವಾಗಲೂ ನನ್ನ ವಿಷಯವಾಗಿ ಸುಳ್ಳಾಡಿದ್ದಾರೆ, ಅವರನ್ನು ಹೇಗೆ ಉದ್ಧರಿಸಲಿ! 14 ಅವರು ಹಾಸಿಗೆಯ ಮೇಲೆ ಬಿದ್ದುಕೊಂಡು ಧಾನ್ಯ ದ್ರಾಕ್ಷಾರಸಗಳಿಗೆ ಅರಚಿಕೊಳ್ಳುತ್ತಾರೆಯೇ ಹೊರತು, ನನ್ನನ್ನು ಮನಃಪೂರ್ವಕವಾಗಿ ಎಂದೂ ಪ್ರಾರ್ಥಿಸಲಿಲ್ಲ; ನನ್ನನ್ನು ತೊರೆದುಬಿಟ್ಟು ತಮ್ಮ ದೇಹಗಳನ್ನು ಗಾಯಮಾಡಿಕೊಳ್ಳುತ್ತಾರೆ. 15 ಅವರಿಗೆ ಯುದ್ಧವನ್ನು ಕಲಿಸಿ, ತೋಳುಗಳನ್ನು ಬಲಪಡಿಸಿದ ನನಗೂ ವಿರುದ್ಧವಾಗಿ ಕೇಡನ್ನು ಕಲ್ಪಿಸುತ್ತಾರೆ. 16 ಅತ್ತಿತ್ತ ತಿರುಗಿಕೊಳ್ಳುತ್ತಾರೆ, ದೇವರ ಕಡೆಗೆ ತಿರುಗಿಕೊಳ್ಳುವುದಿಲ್ಲ; ಮೋಸದ ಬಿಲ್ಲಿಗೆ ಸಮಾನರಾಗಿದ್ದಾರೆ. ಅವರ ಮುಖಂಡರು ತಮ್ಮ ನಾಲಿಗೆಯ ಸೊಕ್ಕಿನ ನಿಮಿತ್ತ ಖಡ್ಗದಿಂದ ಹತರಾಗಿ ಬೀಳುವರು; ಅವರ ಸೋಲು ಐಗುಪ್ತದೇಶದ ಹಾಸ್ಯಕ್ಕೆ ಆಸ್ಪದವಾಗುವುದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.