Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಹಗ್ಗಾಯ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಆರನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೂ, ಯೆಹೋಚಾದಾಕನಿಗೆ ಜನಿಸಿದ ಮಹಾಯಾಜಕನಾದ ಯೆಹೋಶುವನಿಗೂ ಪ್ರವಾದಿಯಾದ ಹಗ್ಗಾಯನ ಮೂಲಕ ಹೇಳಿಕಳುಹಿಸಿದನು.


ದೇವಾಲಯವನ್ನು ಪುನಃ ಕಟ್ಟಲು ಎಚ್ಚರಿಕೆ

2 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಸಮಯವು ಇನ್ನು ಬಂದಿಲ್ಲ” ಎಂದು ಜನರು ಅಂದುಕೊಳ್ಳುತ್ತಾರಲ್ಲಾ.

3 ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ಹೇಳಿದನು,

4 “ಈ ನನ್ನ ಆಲಯವು ಹಾಳು ಬಿದ್ದಿರುವಾಗ, ನೀವು ನಿಮ್ಮ ಒಳಗೋಡೆಗೆಲ್ಲಾ ಸುಂದರ ಹಲಿಗೆ ಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವುದಕ್ಕೆ ಈ ಸಮುಯವು ತಕ್ಕದ್ದೋ?”

5 ಈ ಸಮಯದಲ್ಲಿ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.

6 ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ಅದನ್ನು ಸೇವಿಸುವಿರಿ ತೃಪ್ತಿಯಾಗದು, ಕುಡಿಯುತ್ತೀರಿ ಆನಂದವಾಗದು; ಹೊದ್ದುಕೊಳ್ಳುವಿರಿ ಬೆಚ್ಚಗಾಗದು; ಸಂಬಳಗಾರನು ಸಂಬಳಹಾಕುವ ಚೀಲವು ತೂತಾಗಿದೆ.”

7 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ; “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.

8 ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ; ನಾನು ಅದಕ್ಕೆ ಮೆಚ್ಚಿ ನನ್ನ ಪ್ರಭಾವವನ್ನು ಅಲ್ಲಿ ಪ್ರಕಾಶಗೊಳಿಸುವೆನು” ಇದು ಯೆಹೋವನ ನುಡಿ.

9 ನೀವು ಬಹು ಬೆಳೆಯನ್ನು ನಿರೀಕ್ಷಿಸಿದಿರಿ, ಆದರೆ, ಸ್ವಲ್ಪ ಮಾತ್ರ ಮನೆಗೆ ಸಾಗಿಸಲು ಸಾಧ್ಯವಾಯಿತು; ಯಾಕೆಂದರೆ ನಾನು ಅದನ್ನು ಫಲಿಸಲು ಬಿಡಲಿಲ್ಲ. ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇದಕ್ಕೆಲ್ಲಾ ಕಾರಣವೇನು? ನನ್ನ ಆಲಯವು ಪಾಳು ಬಿದ್ದಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಮನೆಯ ಕೆಲಸಕ್ಕೆ ತವಕಪಡುತ್ತಿದ್ದಾನೆ, ಇದೇ ಕಾರಣ.”

10 ನಿಮ್ಮ ನಿಮಿತ್ತವೇ ಆಕಾಶವು ಇಬ್ಬನಿಯನ್ನು ತಡೆದುಬಿಟ್ಟಿದೆ, ಭೂಮಿಯು ತನ್ನ ಫಲವನ್ನು ನಿಲ್ಲಿಸಿಬಿಟ್ಟಿದೆ;

11 ಇದಲ್ಲದೆ ನಾನು ದೇಶ, ಬೆಟ್ಟ, ಧಾನ್ಯ, ದ್ರಾಕ್ಷಾರಸ, ಎಣ್ಣೆ, ಭೂಮಿಯ ಉತ್ಪತ್ತಿ, ಮನುಷ್ಯ, ಪಶು, ನಾನಾ ಕೈದುಡಿತ ಇವುಗಳಿಗೆಲ್ಲಾ ಕ್ಷಾಮವನ್ನು ತಂದಿದ್ದೇನೆ.


ದೈವಾಜ್ಞೆಯ ಪಾಲನೆ

12 ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಸಮಸ್ತ ಇಸ್ರಾಯೇಲ್ ಜನಶೇಷ, ಇವರೆಲ್ಲಾ ಯೆಹೋವನೆಂಬ ತಮ್ಮ ದೇವರ ನುಡಿಗೂ, ಯೆಹೋವನೆಂಬ ತಮ್ಮ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಯಾದ ಹಗ್ಗಾಯನು ಹೇಳಿದ ಮಾತುಗಳಿಗೂ ಕಿವಿಗೊಟ್ಟು ಯೆಹೋವನಲ್ಲಿ ಭಯಭಕ್ತಿಯುಳ್ಳವರಾದರು.

13 ಯೆಹೋವನ ದೂತನಾದ ಹಗ್ಗಾಯನು ಯೆಹೋವನ ಸಂದೇಶವನ್ನು ಜನರಿಗೆ ಈ ರೀತಿಯಾಗಿ ನುಡಿದನು, “ನಿಮ್ಮೊಂದಿಗೆ ಇದ್ದೇನೆ ಎಂದು ಯೆಹೋವನು ನುಡಿಯುತ್ತಿದ್ದಾನೆ.”

14 ಕೂಡಲೇ ಶೆಯಲ್ತೀಯೇಲನು ಮಗನೂ, ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಮತ್ತು ಸಮಸ್ತ ಜನರೆಲ್ಲರ ಮನಸ್ಸುಗಳನ್ನು ಸೇನಾಧೀಶ್ವರನಾದ ಯೆಹೋವನು ಪ್ರೇರೇಪಿಸಲು,

15 ಅವರು ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಆರನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಬಂದು ತಮ್ಮ ದೇವರಾದ ಯೆಹೋವನ ಆಲಯದ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು