ವಿಮೋಚನಕಾಂಡ 9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದನಕರುಗಳಿಗೆ ಉಂಟಾದ ವ್ಯಾಧಿ 1 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು, ಫರೋಹನ ಬಳಿಗೆ ಹೋಗಿ ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂಬುದಾಗಿ ಹೇಳಿದ್ದಾನೆ. 2 ನೀನು ಅವರಿಗೆ ಅಪ್ಪಣೆ ಕೊಡದೆ ಇನ್ನೂ ಅವರನ್ನು ತಡೆದರೆ, 3 ಯೆಹೋವನು ಅಡವಿಯಲ್ಲಿರುವ ನಿನ್ನ ಎಲ್ಲಾ ಪಶುಗಳಿಗೂ, ಕುದುರೆ, ಕತ್ತೆ, ಒಂಟೆ, ದನ, ಕುರಿ, ಆಡು ಇವೆಲ್ಲವುಗಳಿಗೂ ವಿರೋಧವಾಗಿ ತನ್ನ ಕೈಯನ್ನು ಎತ್ತಿ ಘೋರವ್ಯಾಧಿಯನ್ನು ಉಂಟುಮಾಡುವನೆಂದು ತಿಳಿದುಕೋ. 4 ಯೆಹೋವನು ಇಸ್ರಾಯೇಲರ ಪಶುಗಳಿಗೂ, ಐಗುಪ್ತರ ಪಶುಗಳಿಗೂ ವ್ಯತ್ಯಾಸವನ್ನುಂಟು ಮಾಡುವನು. ಇಸ್ರಾಯೇಲರಿಗಿರುವ ಪಶುಗಳಲ್ಲಿ ಒಂದೂ ಸಾಯುವುದಿಲ್ಲ’ ಎಂದು ಹೇಳಬೇಕು” ಎಂದನು. 5 ಇದಲ್ಲದೆ ಯೆಹೋವನು, “ನಿರ್ದಿಷ್ಟವಾದ ಸಮಯವನ್ನು ನೇಮಿಸಿ, ನಾಳೆಯೇ ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವನು ಎಂದು ಹೇಳು” ಎಂದನು. 6 ಮರುದಿನ ಯೆಹೋವನು ಆ ಕಾರ್ಯವುಂಟಾಗುವಂತೆ ಮಾಡಿದನು. ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ. 7 ಫರೋಹನು ವಿಚಾರಿಸಿದಾಗ, ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸಾಯಲಿಲ್ಲವೆಂಬುದನ್ನು ತಿಳಿದುಕೊಂಡನು. ಆದರೂ ಫರೋಹನ ಹೃದಯವು ಕಠಿಣವಾಗಿದ್ದರಿಂದ ಆ ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡಲಿಲ್ಲ. ಹುಣ್ಣುಬೊಕ್ಕೆಗಳ ಬಾಧೆ 8 ಯೆಹೋವನು ಮೋಶೆ ಮತ್ತು ಆರೋನರಿಗೆ, “ನೀವು ಒಲೆಯ ಬೂದಿಯನ್ನು ಕೈತುಂಬಾ ತೆಗೆದುಕೊಳ್ಳಿರಿ. ಮೋಶೆ ಅದನ್ನು ಫರೋಹನ ಕಣ್ಣುಗಳ ಮುಂದೆ ಆಕಾಶದ ಕಡೆಗೆ ತೂರಲಿ. 9 ಆಗ ಅದು ಐಗುಪ್ತ ದೇಶದಲ್ಲೆಲ್ಲಾ ಧೂಳಿನ ಕಣಗಳಾಗಿ ಮಾರ್ಪಟ್ಟು ಅದು ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವವು” ಎಂದು ಹೇಳಿದನು. 10 ಅದರಂತೆ ಮೋಶೆ ಮತ್ತು ಆರೋನರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಆ ಬೂದಿಯನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ ಹರಡಿ ಹುಣ್ಣುಗಳಾಗುವಂತೆ ಬೊಕ್ಕೆಗಳನ್ನೆಬ್ಬಿಸಿತು. 11 ಇದಲ್ಲದೆ ಮಂತ್ರಗಾರರು, ಹುಣ್ಣುಗಳ ದೆಸೆಯಿಂದ ಮೋಶೆಯ ಮುಂದೆ ನಿಲ್ಲಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ, ಐಗುಪ್ತ್ಯರ ಮೇಲೆಯೂ ಎದ್ದಿದ್ದವು. 12 ಆದರೂ ಯೆಹೋವನು ಮೋಶೆಗೆ ಹೇಳಿದಂತೆಯೇ ಆಯಿತು. ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಅವರ ಮಾತಿಗೆ ಕಿವಿಗೊಡದೆ ಹೋದನು. ಆನೆಕಲ್ಲಿನ ಮಳೆಯಿಂದ ಉಂಟಾದ ಬಾಧೆ 13 ತರುವಾಯ ಯೆಹೋವನು ಮೋಶೆಗೆ, “ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ಆಜ್ಞಾಪಿಸುವುದೇನೆಂದರೆ, ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆಕೊಡಬೇಕು. 14 ಈ ಸಾರಿ ನಾನು ನನ್ನ ವಶದಲ್ಲಿರುವ ಈ ಬಾಧೆಗಳನ್ನು ನಿನ್ನ ಪ್ರಜಾಪರಿವಾರದವರಿಗೆ ಉಂಟಾಗುವಂತೆಯೂ, ನಿನ್ನ ಹೃದಯಕ್ಕೂ ತಗಲುವಂತೆಯೂ ಮಾಡುವೆನು. ಆದುದರಿಂದ ಸಮಸ್ತ ಲೋಕದಲ್ಲಿ ನನಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನನ್ನ ವಿಷಯದಲ್ಲಿ ತಿಳಿದುಕೊಳ್ಳುವಿ. 15 ನಾನು ಕೈಯನ್ನೆತ್ತಿ ನಿನ್ನನ್ನೂ, ನಿನ್ನ ಪ್ರಜೆಗಳನ್ನೂ, ವ್ಯಾಧಿಯಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು. 16 ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೇ ಉಳಿಸಿರುವೆನು. 17 ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ಅವರ ಮುಂದೆ, ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯಾ? 18 ಹಾಗಾದರೆ, ನಾಳೆ ಇಷ್ಟು ಹೊತ್ತಿಗೆ ವಿಪರೀತವಾದ ಆನೆಕಲ್ಲಿನ ಮಳೆ ಬೀಳುವಂತೆ ಮಾಡುವೆನು. ಐಗುಪ್ತ ರಾಜ್ಯವು ಸ್ಥಾಪಿತವಾದ ದಿನ ಮೊದಲುಗೊಂಡು ಇಂದಿನವರೆಗೂ ಅಂಥ ಕಲ್ಲಿನ ಮಳೆ ಬಿದ್ದಿರುವುದಿಲ್ಲ. 19 ಆದಕಾರಣ ನೀನು ಆಳುಗಳನ್ನು ಕಳುಹಿಸಿ ನಿನ್ನ ಪಶುಗಳನ್ನೂ, ನಿನಗೆ ಹೊಲದಲ್ಲಿರುವುದೆಲ್ಲವನ್ನೂ ಬೇಗ ಭದ್ರಪಡಿಸು. ಮನೆಯೊಳಗೆ ಬಾರದೆ ಬಯಲಿನಲ್ಲೇ ಇರುವ ಎಲ್ಲಾ ಮನುಷ್ಯರೂ, ಪಶುಗಳೂ ಆ ಕಲ್ಲಿನ ಮಳೆಯ ಹೊಡೆತದಿಂದ ಸಾಯುವರು’” ಎಂದು ಹೇಳಿದನು. 20 ಆಗ ಫರೋಹನ ಸೇವಕರಲ್ಲಿ ಯಾರಾರು ಯೆಹೋವನ ಮಾತಿಗೆ ಹೆದರಿದರೋ ಅವರು ತಮ್ಮ ಆಳುಗಳನ್ನೂ ಪಶುಗಳನ್ನೂ ಬೇಗ ಮನೆಗೆ ಬರಮಾಡಿಕೊಂಡರು. 21 ಯಾರು ಯೆಹೋವನ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲವೋ, ಅವರು ತಮ್ಮ ಆಳುಗಳನ್ನೂ, ಪಶುಗಳನ್ನೂ ಹೊಲದಲ್ಲಿಯೇ ಬಿಟ್ಟರು. 22 ಯೆಹೋವನು ಮೋಶೆಗೆ, “ಆಕಾಶಕ್ಕೆ ನಿನ್ನ ಕೈಚಾಚು, ಆಗ ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ, ಹೊಲದಲ್ಲಿರುವ ಎಲ್ಲಾ ಪೈರುಗಳ ಮೇಲೆಯೂ ಆನೆಕಲ್ಲಿನ ಮಳೆ ಬೀಳುವುದು” ಎಂದು ಹೇಳಿದನು. 23 ಮೋಶೆಯು ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದಾಗ ಯೆಹೋವನು ಗುಡುಗನ್ನು, ಆನೆಕಲ್ಲಿನ ಮಳೆಯನ್ನು ಕಳುಹಿಸಿದನು. ಸಿಡಿಲುಗಳು ನೆಲಕ್ಕೆ ಅಪ್ಪಳಿಸಿದವು. ಯೆಹೋವನು ಐಗುಪ್ತ ದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದನು. 24 ಆನೆಕಲ್ಲಿನ ಮಳೆಯು ಬಹು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳಫಳನೆ ಹೊಳೆಯುತಿತ್ತು. ಐಗುಪ್ತ್ಯದವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ. 25 ಆ ಮಳೆಯಿಂದ ಐಗುಪ್ತ ದೇಶದ ಎಲ್ಲಾ ಕಡೆಗಳಲ್ಲಿದ್ದ ಮನುಷ್ಯರು, ಪಶುಗಳು, ಬಯಲಿನಲ್ಲಿದ್ದ ಎಲ್ಲವೂ ನಾಶವಾದವು. ಆನೆಕಲ್ಲಿನ ಮಳೆಯಿಂದ ಹೊಲಗಳಲ್ಲಿದ್ದ ಪೈರುಗಳು ಹಾಳಾದವು. ಹೊಲಗಳಲ್ಲಿದ್ದ ಮರಗಳು ಮುರಿದುಹೋದವು. 26 ಇಸ್ರಾಯೇಲರು ವಾಸವಾಗಿದ್ದ ಗೋಷೆನ್ ಸೀಮೆಯಲ್ಲಿ ಮಾತ್ರ ಆನೆಕಲ್ಲಿನ ಮಳೆ ಬೀಳಲಿಲ್ಲ. 27 ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನಾನು ಅಪರಾಧಿಯೆಂದು ಈಗ ಒಪ್ಪಿಕೊಳ್ಳುತ್ತೇನೆ. ಯೆಹೋವನು ನ್ಯಾಯವಂತನು. ನಾನೂ ನನ್ನ ಜನರೂ ದೋಷಿಗಳು. 28 ಈ ಭಯಂಕರವಾದ ಗುಡುಗು ಮತ್ತು ಆನೆಕಲ್ಲಿನ ಮಳೆಯೂ ಬಹಳ ಹೆಚ್ಚಾದವು. ಇವುಗಳನ್ನು ನಿಲ್ಲಿಸುವುದಕ್ಕೆ ಯೆಹೋವನನ್ನು ಪ್ರಾರ್ಥಿಸಿರಿ. ಈ ದೇಶವನ್ನು ಬಿಟ್ಟು ಹೊರಡುವುದಕ್ಕೆ ನಿಮಗೆ ಅಪ್ಪಣೆ ಕೊಡುತ್ತೇನೆ. ಇನ್ನು ನಿಮ್ಮನ್ನು ತಡೆಯುವುದಿಲ್ಲ” ಎಂದನು. 29 ಅದಕ್ಕೆ ಮೋಶೆ, “ನಾನು ಈ ಪಟ್ಟಣದಿಂದಾಚೆಗೆ ಹೋದ ಕೂಡಲೇ ಕೈಯೆತ್ತಿ ಯೆಹೋವನನ್ನು ಪ್ರಾರ್ಥಿಸುವೆನು. ಆಗ ಗುಡುಗು ಮತ್ತು ಆನೆಕಲ್ಲಿನ ಮಳೆಯು ನಿಂತುಹೋಗುವದು. ಇದರಿಂದ ಸಮಸ್ತ ಭೂಲೋಕವು ಯೆಹೋವನ ಅಧೀನದಲ್ಲಿದೆ ಎಂದು ನೀನು ತಿಳಿದುಕೊಳ್ಳುವಿ. 30 ಆದರೂ ನೀನಾಗಲಿ, ನಿನ್ನ ಪರಿವಾರದವರಾಗಲಿ, ದೇವರಾಗಿರುವ ಯೆಹೋವನಿಗೆ ಆಗಲೂ ಭಯಪಡುವುದಿಲ್ಲವೆಂದು ಬಲ್ಲೆನು” ಎಂದನು. 31 ಜವೆಗೋದಿ ಮತ್ತು ಅಗಸೆ ಬೆಳೆಗಳು ನಾಶವಾದವು. ಏಕೆಂದರೆ ಜವೆಗೋದಿ ತೆನೆ ಬಿಟ್ಟಿತ್ತು, ಅಗಸೆ ಮೊಗ್ಗು ಬಿಟ್ಟಿತ್ತು. 32 ಆದರೆ ಗೋದಿ ಮತ್ತು ಕಡಲೆ ಹಿಂದಿನ ಬೆಳೆಗಳಾಗಿದ್ದುದರಿಂದ ಅವುಗಳಿಗೆ ಹಾನಿಯಾಗಲಿಲ್ಲ. 33 ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದಿಂದ ಹೊರಕ್ಕೆ ಬಂದು ಕೈಯನ್ನೆತ್ತಿ ಯೆಹೋವನನ್ನು ಪ್ರಾರ್ಥಿಸಿದನು. ಗುಡುಗೂ, ಆನೆಕಲ್ಲಿನ ಮಳೆಯೂ ನಿಂತುಹೋದವು. 34 ಆದರೆ ಆನೆಕಲ್ಲು ಮಳೆ, ಗುಡುಗು ನಿಂತುಹೋದದ್ದನ್ನು ಫರೋಹನು ಕಂಡಾಗ ಅವನೂ, ಅವನ ಪರಿವಾರದವರೂ ತಮ್ಮ ಹೃದಯಗಳನ್ನು ಕಠಿಣಮಾಡಿಕೊಂಡು ಇನ್ನೂ ಪಾಪ ಮಾಡಿದರು. 35 ಯೆಹೋವನು ಮೋಶೆಯಿಂದ ಹೇಳಿಸಿದಂತೆಯೇ ಆಯಿತು. ಫರೋಹನ ಹೃದಯವು ಕಠಿಣವಾಗಿತ್ತು. ಅವನು ಇಸ್ರಾಯೇಲರನ್ನು ಹೋಗಲು ಬಿಡಲಿಲ್ಲ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.