Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 40 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದೇವದರ್ಶನ ಗುಡಾರದ ಪ್ರತಿಷ್ಠೆ

1 ಆಗ ಯೆಹೋವನು ಮೋಶೆಗೆ,

2 “ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ದೇವದರ್ಶನದ ಗುಡಾರವನ್ನು ತೆರೆಯಬೇಕು.

3 ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ಪರದೆಯಿಂದ ಮರೆಮಾಡಬೇಕು.

4 ಆ ಮೇಲೆ ಮೇಜನ್ನು ಒಳಗೆ ತಂದು ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು; ದೀಪಸ್ತಂಭವನ್ನು ಒಳಗೆ ತಂದು ಅದರ ಹಣತೆಗಳನ್ನು ಸರಿಯಾಗಿ ಇಡಬೇಕು.

5 ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಯನ್ನು ಇಟ್ಟು ಗುಡಾರದ ಬಾಗಿಲಿನ ಪರದೆಯನ್ನು ಕಟ್ಟಬೇಕು.

6 ದೇವದರ್ಶನ ಗುಡಾರದ ಬಾಗಿಲಿನ ಮುಂದೆ ಸರ್ವಾಂಗಹೋಮ ಯಜ್ಞವೇದಿಯನ್ನು ಇರಿಸಬೇಕು.

7 ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ದೊಡ್ಡ ತೊಟ್ಟಿಯೊಂದನ್ನು ಇಟ್ಟು ಅದರಲ್ಲಿ ನೀರನ್ನು ತುಂಬಿಸಬೇಕು.

8 ಅಂಗಳದ ಸುತ್ತಲಿನ ಆವರಣವನ್ನು ತೆರೆದು, ಅಂಗಳದ ಬಾಗಿಲಿಗೆ ಪರದೆಯನ್ನು ತೂಗಿಬಿಡಬೇಕು.

9 “ನೀನು ಅಭಿಷೇಕತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರಲ್ಲಿರುವುದೆಲ್ಲವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಅಭಿಷೇಕಿಸಿ ನನಗಾಗಿ ಪ್ರತಿಷ್ಠಿಸಬೇಕು; ಅಂದಿನಿಂದ ಅದು ಪರಿಶುದ್ಧವಾಗಿರುವುದು.

10 ಯಜ್ಞವೇದಿಯನ್ನೂ ಅದರ ಉಪಕರಣಗಳನ್ನೂ ಅಭಿಷೇಕಿಸಿ ಸರ್ವಾಂಗಹೋಮ ಯಜ್ಞವೇದಿಯನ್ನು ಪ್ರತಿಷ್ಠಿಸಬೇಕು; ಆ ಯಜ್ಞವೇದಿ ಅತ್ಯಂತ ಪರಿಶುದ್ಧವಾಗಿರಬೇಕು.

11 ನೀನು ತಾಮ್ರದ ಬೋಗುಣಿಯನ್ನೂ ಅದರ ಪೀಠವನ್ನೂ ಅಭಿಷೇಕಿಸಿ ಪ್ರತಿಷ್ಠಿಸಬೇಕು.

12 “ಅದಲ್ಲದೆ ಆರೋನನನ್ನೂ ಮತ್ತು ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿ

13 ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಪವಿತ್ರವಾದ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು.

14 ಆ ನಂತರ ನೀನು ಅವನ ಮಕ್ಕಳನ್ನು ಬರಮಾಡಿ

15 ಅವರಿಗೆ ಅಂಗಿಗಳನ್ನು ತೊಡಿಸಿ ಅವರು ನನಗೋಸ್ಕರ ಯಾಜಕರಾಗುವುದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನೂ ಅಭಿಷೇಕಿಸಬೇಕು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವುದು” ಎಂದು ಹೇಳಿದನು.

16 ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.

17 ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮದಿನದಲ್ಲಿ ಮೋಶೆ ಗುಡಾರವನ್ನು ತೆರೆದನು.

18 ಮೋಶೆಯು ಗುಡಾರವನ್ನು ತೆರೆದು ಅದಕ್ಕೆ ಮೆಟ್ಟುವಕಲ್ಲುಗಳನ್ನು ಹಾಕಿ ಚೌಕಟ್ಟುಗಳನ್ನು ನಿಲ್ಲಿಸಿ ಅಗುಳಿಗಳನ್ನು ಕೊಟ್ಟು ಕಂಬಗಳನ್ನು ನಿಲ್ಲಿಸಿದನು.

19 ಗುಡಾರದ ಮೇಲೆ ಡೇರೆಯ ಬಟ್ಟೆಯನ್ನು ಹಾಸಿ ಆ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿ ಅದನ್ನು ಮರೆಮಾಡಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಅದನ್ನೆಲ್ಲಾ ಮಾಡಿದನು.

20 ಅವನು ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಕೋಲುಗಳನ್ನು ಹಾಕಿ ಕೃಪಾಸನವನ್ನು ಇರಿಸಿದನು.

21 ಮೋಶೆಯು ಮಂಜೂಷವನ್ನು ಗುಡಾರದೊಳಕ್ಕೆ ತಂದು, ಅದರ ಮುಂದೆ ಪರದೆಯನ್ನು ಇರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು.

22 ಮೋಶೆ ದೇವದರ್ಶನದ ಗುಡಾರದೊಳಗೆ ಉತ್ತರ ಭಾಗದಲ್ಲಿ ತೆರೆಯ ಹೊರಗಡೆ ಮೇಜನ್ನು ಇರಿಸಿದನು.

23 ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆ ಮೇಜಿನ ಮೇಲೆ ರೊಟ್ಟಿಗಳನ್ನು ಕ್ರಮವಾಗಿ ಯೆಹೋವನ ಸನ್ನಿಧಿಯಲ್ಲಿ ಇರಿಸಿದನು.

24 ಅವನು ದೇವದರ್ಶನದ ಗುಡಾರದಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇರಿಸಿದನು.

25 ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆ, ಅದರ ಹಣತೆಗಳನ್ನು ಯೆಹೋವನ ಸನ್ನಿಧಿಯಲ್ಲಿ ಕ್ರಮವಾಗಿ ಇರಿಸಿದನು.

26 ಮತ್ತು ಅವನು ಚಿನ್ನದ ಧೂಪವೇದಿಯನ್ನು ದೇವದರ್ಶನದ ಗುಡಾರದಲ್ಲಿ ತೆರೆಯ ಎದುರಿಗೆ ಇರಿಸಿದನು.

27 ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಅದರ ಮೇಲೆ ಪರಿಮಳ ದ್ರವ್ಯಗಳ ಧೂಪವನ್ನು ಹಾಕಿದನು.

28 ಅವನು ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿದನು.

29 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಸರ್ವಾಂಗಹೋಮ ಯಜ್ಞವೇದಿಯನ್ನು ಇಟ್ಟು ಅದರ ಮೇಲೆ ಸರ್ವಾಂಗಹೋಮವನ್ನು ಮತ್ತು ಧಾನ್ಯಸಮರ್ಪಣೆಯನ್ನೂ ಮಾಡಿದನು.

30 ಯೆಹೋವನು ಆಜ್ಞಾಪಿಸಿದಂತೆ ಮೋಶೆ ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ನೀರಿನ ತೊಟ್ಟಿಯನ್ನು ಇರಿಸಿ ತೊಳೆದುಕೊಳ್ಳುವುದಕ್ಕಾಗಿ ಅದರಲ್ಲಿ ನೀರು ತುಂಬಿಸಿದನು.

31 ಮೋಶೆಯು, ಆರೋನನು ಮತ್ತು ಅವನ ಮಕ್ಕಳೂ ಅದರಲ್ಲಿ ಕೈಕಾಲು ತೊಳೆದುಕೊಂಡರು.

32 ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗಲೂ, ಯಜ್ಞವೇದಿಯ ಹತ್ತಿರ ಬರುವಾಗಲೂ ಯೆಹೋವನು ಆಜ್ಞಾಪಿಸಿದಂತೆ ಕೈಕಾಲುಗಳನ್ನು ತೊಳೆದುಕೊಳ್ಳುತ್ತಿದ್ದರು.

33 ಮೋಶೆಯು ಗುಡಾರಕ್ಕೂ ಯಜ್ಞವೇದಿಗೂ ಸುತ್ತಲು ಅಂಗಳದ ಆವರಣವನ್ನು ತೆರೆದು ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿದನು. ಈ ಪ್ರಕಾರ ಮೋಶೆ ಆ ಕೆಲಸವನ್ನೆಲ್ಲಾ ಮುಗಿಸಿದನು.


ಯೆಹೋವನ ತೇಜಸ್ಸು
ಅರಣ್ಯ 9:15-23

34 ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿಕೊಂಡಿತು.

35 ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಗೊಂಡಿದ್ದು ಯೆಹೋವನ ತೇಜಸ್ಸು ಪರಿಶುದ್ಧ ನಿವಾಸದ ತುಂಬಾ ಅವರಿಸಿ ಯೆಹೋವನ ಮಹಿಮೆಯು ಗುಡಾರದೊಳಗೆ ತುಂಬಿಕೊಂಡ್ದಿದರಿಂದಲೂ ಮೋಶೆಯು ಗುಡಾರದ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

36 ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಾಯೇಲರು ಮುಂದೆ ಪ್ರಯಾಣ ಮಾಡುತ್ತಿದ್ದರು.

37 ಆ ಮೇಘವು ಮೇಲಕ್ಕೆ ಹೋಗದೇ ಇದ್ದು ಅದು ಹೊರಡುವ ತನಕ ಅವರು ಪ್ರಯಾಣ ಮಾಡದೆ ಇರುತ್ತಿದ್ದರು.

38 ಇಸ್ರಾಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣುಗಳ ಮುಂದೆ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಗುಡಾರದ ಮೇಲೆಯೂ ಇರುತ್ತಿತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಇರುತ್ತಿತ್ತು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು