ವಿಮೋಚನಕಾಂಡ 32 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಬಂಗಾರದ ಹೋರಿಕರು ಧರ್ಮೋ 9:6-29 1 ಮೋಶೆಯು ಬೆಟ್ಟದಿಂದ ಇಳಿದು ಬರುವುದರಲ್ಲಿ ತಡವಾದುದನ್ನು ಇಸ್ರಾಯೇಲರು ನೋಡಿ, ಆರೋನನ ಬಳಿಗೆ ಒಟ್ಟಾಗಿ ಸೇರಿ ಬಂದು ಆತನಿಗೆ, “ಏಳು, ನಮ್ಮನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ನಮಗೊಬ್ಬ ದೇವರನ್ನು ಮಾಡಿಕೊಡು ಏಕೆಂದರೆ ಐಗುಪ್ತದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ” ಎಂದು ಹೇಳಿದರು. 2 ಅದಕ್ಕೆ ಆರೋನನು ಅವರಿಗೆ, “ನಿಮ್ಮ ಹೆಂಡತಿಯರ ಹಾಗು ಗಂಡುಹೆಣ್ಣು ಮಕ್ಕಳ ಕಿವಿಯಲ್ಲಿ ಹಾಕಿಕೊಂಡಿರುವ ಚಿನ್ನದ ಓಲೆಗಳನ್ನು ಬಿಚ್ಚಿ ನನಗೆ ಒಪ್ಪಿಸಿರಿ” ಎಂದು ಹೇಳಿದನು. 3 ಅವರೆಲ್ಲರೂ ತಮ್ಮ ಕಿವಿಗಳಲ್ಲಿದ್ದ ಚಿನ್ನದ ಓಲೆಗಳನ್ನು ಬಿಚ್ಚಿ ಆರೋನನ ಬಳಿಗೆ ತಂದು ಕೊಟ್ಟರು. 4 ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು ಹೋರಿಕರುವಿನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯ್ಯಿಸಿದನು. ಆಗ ಅವರು “ಇಸ್ರಾಯೇಲರೇ ನೋಡಿರಿ, ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದ ದೇವರು” ಎಂದು ಹೇಳಿದರು. 5 ಆರೋನನು ಅದನ್ನು ನೋಡಿದಾಗ ಹೋರಿಕರುವಿಗೆ ಎದುರಾಗಿ ಒಂದು ಯಜ್ಞವೇದಿಯನ್ನು ಕಟ್ಟಿಸಿ, “ನಾಳೆ ಯೆಹೋವನಿಗೆ ಹಬ್ಬವಾಗಬೇಕು” ಎಂದು ಪ್ರಕಟಿಸಿದನು. 6 ಆದುದರಿಂದ ಮರುದಿನದಲ್ಲಿ ಜನರು ಬೆಳಿಗ್ಗೆ ಎದ್ದು ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. ಆನಂತರ ಜನರು ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು. ಆಮೇಲೆ ಕುಣಿದಾಡಲು ಎದ್ದರು. 7 ಹೀಗಿರಲಾಗಿ ಯೆಹೋವನು ಮೋಶೆಗೆ, “ನೀನು ಬೆಟ್ಟದಿಂದ ಇಳಿದುಹೋಗು ಐಗುಪ್ತದೇಶದಿಂದ ನೀನು ಕರೆದುಕೊಂಡು ಬಂದ ನಿನ್ನ ಜನರು ಕೆಟ್ಟುಹೋದರು. 8 ನಾನು ಅವರಿಗೆ ಅಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೇ ಬಿಟ್ಟು ಹೋಗಿ ತಮಗೆ ಎರಕ ಹೊಯ್ದ ಹೋರಿಕರುವನ್ನು ಮಾಡಿಸಿಕೊಂಡು ಅದಕ್ಕೆ ಅಡ್ಡಬಿದ್ದು ಯಜ್ಞಗಳನ್ನು ಅರ್ಪಿಸಿ, ‘ಇಸ್ರಾಯೇಲ್ಯರೇ ನೋಡಿರಿ ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದ ದೇವರು ಎಂದು ಹೇಳಿಕೊಳ್ಳುತ್ತಿದ್ದಾರೆ’” ಎಂದು ಹೇಳಿದನು. 9 ಅದಲ್ಲದೆ ಯೆಹೋವನು ಮೋಶೆಗೆ, “ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ. ಇವರು ಮೊಂಡುತನವುಳ್ಳ ಜನರಾಗಿದ್ದಾರೆ 10 ಆದಕಾರಣ ನೀನು ನನ್ನನ್ನು ತಡೆಯಬೇಡ. ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡಿಬಿಡುವೆನು. ತರುವಾಯ ನಿನ್ನಿಂದಲೇ ಒಂದು ಮಹಾ ಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು. 11 ಆಗ ಮೋಶೆ ತನ್ನ ದೇವರಾದ ಯೆಹೋವನನ್ನು ಬೇಡಿಕೊಂಡು, “ಯೆಹೋವನೇ ನೀನು ಮಹಾ ಶಕ್ತಿಯಿಂದಲೂ, ಭುಜಬಲದಿಂದಲೂ ಐಗುಪ್ತ ದೇಶದಿಂದ ಹೊರಗೆ ಕರೆತಂದ ನಿನ್ನ ಪ್ರಜೆಗಳ ಮೇಲೆ ಕೋಪದಿಂದುರಿಯುವುದೇತಕೆ? 12 ಐಗುಪ್ತ್ಯರು ನಿನ್ನ ವಿಷಯದಲ್ಲಿ, ‘ಯೆಹೋವನು ಕೇಡು ಮಾಡಬೇಕೆಂಬ ಅಭಿಪ್ರಾಯದಿಂದಲೇ ಇಸ್ರಾಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದನಲ್ಲಾ. ಅವರನ್ನು ಬೆಟ್ಟಗಳಲ್ಲಿ ಸಾಯಿಸಲಿಕ್ಕೂ ಭೂಮಿಯಿಂದ ನಿರ್ಮೂಲ ಮಾಡುವುದಕ್ಕೂ ಅವರನ್ನು ಕರೆದುಕೊಂಡು ಹೋದನೆಂದು ಹೇಳಿಕೊಳ್ಳುವುದೇತಕ್ಕೆ?’ ನೀನು ರೋಷಾಗ್ನಿಯನ್ನು ಬಿಟ್ಟು ನಿನ್ನ ಪ್ರಜೆಗಳಿಗೆ ಕೆಡುಕನ್ನು ಮಾಡದೆ ಮನಸ್ಸನ್ನು ಬದಲು ಮಾಡಿಕೋ. 13 ನಿನ್ನ ಸೇವಕರಾದ ಅಬ್ರಹಾಮ್, ಇಸಾಕ್ ಹಾಗು ಯಾಕೋಬರನ್ನು ನೆನಪಿಗೆ ತಂದುಕೋ. ನೀನು ನಿನ್ನ ಜೀವದಾಣೆ ಪ್ರಮಾಣ ಮಾಡಿ ಅವರಿಗೆ, ‘ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಈ ಪ್ರದೇಶವನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನೆಂದೂ ಇಸ್ರಾಯೇಲರು ಈ ದೇಶವನ್ನು ಶಾಶ್ವತವಾಗಿ ಸ್ವಾಧೀನ ಮಾಡಿಕೊಳ್ಳುವರೆಂದೂ ಮಾತುಕೊಡಲಿಲ್ಲವೇ’” ಅಂದನು. 14 ಆಗ ಯೆಹೋವನು ತನ್ನ ಪ್ರಜೆಗಳಿಗೆ ಮಾಡುವೆನೆಂದು ತಾನು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿಕೊಂಡನು. 15 ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಯು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದು ಬಂದನು. ಆ ಹಲಿಗೆಗಳ ಎರಡು ಪಕ್ಕಗಳಲ್ಲಿಯೂ ಅಕ್ಷರಗಳು ಬರೆದಿದ್ದವು. ಈ ಕಡೆಯೂ ಆ ಕಡೆಯೂ ಬರಹವಿತ್ತು. 16 ಆ ಶಿಲಾಶಾಸನಗಳು ದೇವರ ಕೆಲಸವೇ ಆಗಿದ್ದು, ಅವುಗಳಲ್ಲಿ ಕೆತ್ತಿದ ಅಕ್ಷರಗಳು ದೇವರೇ ಬರೆದದ್ದಾಗಿತ್ತು. 17 ಇಸ್ರಾಯೇಲರು ಉತ್ಸಾಹದಿಂದ ಕೂಗಾಡುತ್ತಾ ಇರಲಾಗಿ ಯೆಹೋಶುವನು ಆ ಶಬ್ದವನ್ನು ಕೇಳಿ, “ಪಾಳೆಯದ ಕಡೆಯಿಂದ ಯುದ್ಧಧ್ವನಿ ಕೇಳಿಸುತ್ತದೆ” ಎಂದು ಮೋಶೆಗೆ ಹೇಳಿದನು. 18 ಅದಕ್ಕವನು, “ನನಗೆ ಕೇಳಿಸುವುದು ಜಯ ಧ್ವನಿಯೂ ಅಲ್ಲ, ವಿಜಯಗೀತೆಯೂ ಅಲ್ಲ ಸೋತು ಗೋಳಾಡುವವರ ಧ್ವನಿಯೂ ಅಲ್ಲ, ಗಾನಮಾಡುವವರ ಉಲ್ಲಾಸದ ಧ್ವನಿಯೇ ಆಗಿದೆ” ಅಂದನು. 19 ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಮತ್ತು ಜನರು ಕುಣಿದಾಡುವುದನ್ನೂ ಕಂಡಾಗ ಬಹು ಕೋಪಗೊಂಡು ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ತಗ್ಗಿನಲ್ಲಿ ನೆಲಕ್ಕೆ ಹಾಕಿ ಒಡೆದುಬಿಟ್ಟನು. 20 ಜನರು ಮಾಡಿಸಿಕೊಂಡಿದ್ದ ಹೋರಿಕರುವನ್ನು ಅವನು ಬೆಂಕಿಯಿಂದ ಸುಟ್ಟು ಅರೆದು ಪುಡಿ ಪುಡಿ ಮಾಡಿ ನೀರಿನಲ್ಲಿ ಕಲಸಿ ಇಸ್ರಾಯೇಲರಿಗೆ ಆ ನೀರನ್ನು ಕುಡಿಸಿದನು. 21 ಆಗ ಮೋಶೆ ಆರೋನನನ್ನು ಕುರಿತು, “ನೀನು ಈ ಜನರಿಂದ ಮಹಾ ಅಪರಾಧವನ್ನು ಮಾಡಿಸಿದಿಯಲ್ಲಾ ಹೀಗೆ ಮಾಡಿಸುವುದಕ್ಕೆ ಇವರು ನಿನಗೇನು ಮಾಡಿದರು?” ಎಂದು ವಿಚಾರಿಸಲು, 22 ಆರೋನನು, “ಸ್ವಾಮಿಯವರು, ರೋಷಗೊಳ್ಳಬಾರದು ಈ ಜನರು ದುಷ್ಟಸ್ವಭಾದವರು, ಹಠಮಾರಿಗಳು ಎಂಬುದು ನಿನಗೆ ಗೊತ್ತಿಲ್ಲವೇ? 23 ಅವರು ನನ್ನ ಬಳಿಗೆ ಬಂದು, ‘ನಮ್ಮನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಒಬ್ಬ ದೇವರನ್ನು ಮಾಡಿಸಿಕೊಡು, ಐಗುಪ್ತ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಮೋಶೆಗೆ ಏನಾಯಿತೋ ಗೊತ್ತಿಲ್ಲ’ ಅಂದರು. 24 ಅದಕ್ಕೆ ನಾನು ‘ಯಾರಲ್ಲಿ ಚಿನ್ನದ ಒಡವೆಯಿದೆಯೋ ಅವರೆಲ್ಲರೂ ಅದನ್ನು ಬಿಚ್ಚಿ ನನಗೆ ಕೊಡಬೇಕು’ ಅಂದೆನು. ಅವರು ಹಾಗೆ ಕೊಡಲಾಗಿ ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಹೋರಿಕರುವಿನ ರೂಪವು ಉಂಟಾಯಿತು” ಅಂದನು. 25 ಮೋಶೆಯು ಜನರು ಅಂಕೆ ತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಸಡಿಲವಾಗಿ ಬಿಟ್ಟಿದ್ದರಿಂದ ಅವನ ವಿರೋಧಿಗಳು ಅಪಹಾಸ್ಯಮಾಡುವುದಕ್ಕೆ ಆಸ್ಪದವಾಯಿತು, 26 ಅವರು ಕ್ರಮವಿಲ್ಲದೆ ಸ್ವೇಚ್ಛೆಯಾಗಿ ನಡೆದುಕೊಳ್ಳುವುದನ್ನು ನೋಡಿ ಪಾಳೆಯದ ಬಾಗಿಲಲ್ಲಿ ನಿಂತುಕೊಂಡು, “ಯೆಹೋವನ ಪಕ್ಷದವರೆಲ್ಲರೂ ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರೂ ಅವನ ಬಳಿಗೆ ಸೇರಿ ಬಂದರು. 27 ಮೋಶೆ ಅವರಿಗೆ, “ಇಸ್ರಾಯೇಲರ ದೇವರಾದ ಯೆಹೋವನು ಅಪ್ಪಣೆಮಾಡುವುದೇನೆಂದರೆ, ‘ನಿಮ್ಮಲ್ಲಿ ಪ್ರತಿಯೊಬ್ಬನೂ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದ ಮಧ್ಯದಲ್ಲಿ ಒಂದು ಬಾಗಿಲಿನಿಂದ ಮತ್ತೊಂದು ಬಾಗಿಲಿನ ವರೆಗೂ ಹೋಗುತ್ತಾ ಬರುತ್ತಾ ತಮ್ಮತಮ್ಮ ಸಹೋದರ, ಗೆಳೆಯ ಮತ್ತು ನೆರೆಯವ ಎಂದು ಲಕ್ಷಿಸದೆ ಜನರನ್ನು ಸಂಹರಿಸಬೇಕು’” ಎಂದು ಹೇಳಿದನು. 28 ಲೇವಿಯ ಕುಲದವರು ಮೋಶೆಯ ಆಜ್ಞೆಯ ಪ್ರಕಾರವೇ ಮಾಡಿದರು. ಆ ದಿನದಲ್ಲಿ ಜನರೊಳಗೆ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಹತರಾದರು. 29 ಮೋಶೆಯು ಲೇವಿಯರಿಗೆ, “ಈ ಹೊತ್ತು ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಸಹೋದರರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೇ ನಿಮ್ಮನ್ನು ಯೆಹೋವನ ಸೇವೆಗೆ ಪ್ರತಿಷ್ಠಿಸಿಕೊಂಡಿದ್ದೀರಿ. ಆದುದರಿಂದ ಆತನು ಈ ದಿನ ನಿಮ್ಮನ್ನು ಆಶೀರ್ವದಿಸುವನು” ಎಂದು ಹೇಳಿದನು. ಮೋಶೆಯು ಇಸ್ರಾಯೇಲರಿಗಾಗಿ ಬೇಡಿಕೊಂಡದ್ದು 30 ಮರುದಿನದಲ್ಲಿ ಮೋಶೆಯು ಜನರಿಗೆ, “ನೀವು ಮಹಾ ಪಾಪವನ್ನು ಮಾಡಿರುವಿರಿ. ಆದರೂ ನಾನು ಬೆಟ್ಟವನ್ನು ಹತ್ತಿ ಯೆಹೋವನ ಸನ್ನಿಧಿಗೆ ಹೋಗುವೆನು. ಒಂದು ವೇಳೆ ನೀವು ಮಾಡಿದ ಪಾಪಕೃತ್ಯಕ್ಕೆ ಪ್ರಾಯಶ್ಚಿತ್ತವನ್ನು ನಾನು ಮಾಡಬಹುದೇನೋ” ಎಂದು ಹೇಳಿದನು. 31 ಆಗ ಮೋಶೆ ಯೆಹೋವನ ಬಳಿಗೆ ತಿರುಗಿ ಹೋಗಿ, “ಅಯ್ಯೋ! ಈ ಜನರು ಮಹಾ ಪಾಪವನ್ನು ಮಾಡಿದ್ದಾರೆ. ಚಿನ್ನದ ಹೋರಿಕರುವನ್ನು ಮಾಡಿ ದೇವರೆಂದುಕೊಂಡಿದ್ದಾರೆ. 32 ಆದರೂ ನೀನು ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲವಾದರೆ ನೀನು ಬರೆದಿರುವ ಜೀವಿತರ ಪುಸ್ತಕದಿಂದ ನನ್ನ ಹೆಸರನ್ನೂ ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು. 33 ಅದಕ್ಕೆ ಯೆಹೋವನು ಮೋಶೆಗೆ, “ಯಾರು ನನ್ನ ಮಾತನ್ನು ಮೀರಿ ಪಾಪಮಾಡಿದರೋ ಅವರ ಹೆಸರುಗಳನ್ನೇ ನನ್ನ ಬಳಿಯಲ್ಲಿರುವ ಪುಸ್ತಕದಿಂದ ನಾನು ಅಳಿಸಿಬಿಡುವೆನು. 34 ನೀನು ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ದೇಶಕ್ಕೆ ಈ ಜನರನ್ನು ನಡೆಸಿಕೊಂಡು ಹೋಗು. ನೋಡು, ನನ್ನ ದೂತನು ನಿನ್ನ ಮುಂದೆ ನಡೆದು ಮುನ್ನಡೆಸುವನು, ಆದರೂ ನನ್ನ ನ್ಯಾಯತೀರ್ಪಿನ ದಿನದಲ್ಲಿ ನಾನು ಅವರ ಪಾಪಕ್ಕೆ ತಕ್ಕಂತೆ ಅವರನ್ನು ದಂಡಿಸುವೆನು.” 35 ಇಸ್ರಾಯೇಲರು ಆರೋನನ ಕೈಯಿಂದ ಆ ಹೋರಿಕರುವನ್ನು ಮಾಡಿಸಿಕೊಂಡಿದ್ದರಿಂದ ಯೆಹೋವನು ಅವರನ್ನು ದಂಡಿಸಿದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.