Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 31 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಗುಡಾರದ ನಿರ್ಮಾಣಕ್ಕೆ ಕೆಲಸಗಾರರ ಆಯ್ಕೆ
ವಿಮೋ 35:30-36:1

1 ಯೆಹೋವನು ಮೋಶೆಗೆ ಹೀಗೆಂದನು,

2 “ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯನ ಮಗನೂ ಆಗಿರುವ ಬೆಚಲೇಲನೆಂಬುವನನ್ನು ಹೆಸರು ಹಿಡಿದು ಕರೆದಿದ್ದೇನೆ.

3 ಕಲಾತ್ಮಕವಾದ ವಿನ್ಯಾಸಗಳನ್ನು ಮಾಡುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,

4 ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸಗಳನ್ನು ಮಾಡುವುದಕ್ಕೂ,

5 ಅವನಿಗೆ ದೇವರಾತ್ಮವನ್ನು ದಯಪಾಲಿಸಿ, ಅದಕ್ಕೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪ ಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ.

6 ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲೀಯಾಬನನ್ನೂ ನೇಮಿಸಿದ್ದೇನೆ. ಅದಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನೂ ಮಾಡುವುದಕ್ಕೆ ಜ್ಞಾನಿಗಳಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನುಂಟುಮಾಡಿದ್ದೇನೆ.

7 ದೇವದರ್ಶನದ ಗುಡಾರ, ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷ ಅದರ ಮೇಲಿರುವ ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು,

8 ಮೇಜು ಅದರ ಉಪಕರಣಗಳು, ಚೊಕ್ಕ ಬಂಗಾರದ ದೀಪಸ್ತಂಭ ಅದರ ಉಪಕರಣಗಳು,

9 ಧೂಪವೇದಿ, ಯಜ್ಞವೇದಿ ಅದರ ಉಪಕರಣಗಳು, ನೀರಿನ ತೊಟ್ಟಿ ಅದರ ಪೀಠ,

10 ಅಲಂಕಾರವಾದ ದೀಕ್ಷಾವಸ್ತ್ರಗಳು ಅಂದರೆ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು,

11 ಅಭಿಷೇಕತೈಲ ಮತ್ತು ಪವಿತ್ರಸ್ಥಾನದ ಸೇವೆಗೆ ಬೇಕಾದ ಪರಿಮಳಧೂಪ ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು.”


ಸಬ್ಬತ್ ದಿನದ ನಿಯಮ

12 ಯೆಹೋವನು ಮತ್ತೆ ಮೋಶೆಗೆ ಹೀಗೆಂದನು,

13 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ: ನಾನು ನೇಮಿಸಿದ ಪವಿತ್ರ ಸಬ್ಬತ್ ದಿನಗಳನ್ನು ನೀವು ತಪ್ಪದೇ ಆಚರಿಸಬೇಕು. ನಿಮ್ಮನ್ನು ಶುದ್ಧಿಪಡಿಸುವ ಯೆಹೋವನು ನಾನೇ ಎಂದು ನೀವು ತಿಳಿದುಕೊಳ್ಳುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರ ಮಧ್ಯ ಇರುವ ಗುರುತು.

14 ಆದಕಾರಣ ನೀವು ಸಬ್ಬತ್ ದಿನವನ್ನು ಪರಿಶುದ್ಧವಾದ ದಿನವೆಂದು ಎಣಿಸಿ ಆಚರಿಸಬೇಕು. ಅದನ್ನು ಅಶುದ್ಧಪಡಿಸುವ ಪ್ರತಿಯೊಬ್ಬನಿಗೆ ಮರಣಶಿಕ್ಷೆಯಾಗಬೇಕು. ಆ ದಿನದಲ್ಲಿ ಯಾವನಾದರೂ ಕೆಲಸವನ್ನು ಮಾಡಿದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.

15 ಆರು ದಿನಗಳು ಕೆಲಸ ಮಾಡಬೇಕು. ಏಳನೆಯ ದಿನ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿದೆ. ಅದು ಯೆಹೋವನಿಗೆ ಪರಿಶುದ್ಧವಾದ ದಿನ. ಇಂಥ ಸಬ್ಬತ್ ದಿನದಲ್ಲಿ ಕೆಲಸವೇನಾದರೂ ಮಾಡುವವನಿಗೆ ಮರಣಶಿಕ್ಷೆಯಾಗಬೇಕು.

16 ಆದುದರಿಂದ ಇಸ್ರಾಯೇಲರು ಸಬ್ಬತ್ ದಿನವನ್ನು ಆಚರಿಸಬೇಕು. ಈ ಆಚರಣೆಯು ಅವರಿಗೂ, ಅವರ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ.

17 ಇದು ನನಗೂ ಇಸ್ರಾಯೇಲರಿಗೂ ನಡುವೆಯಿರುವ ಸದಾಕಾಲದ ಗುರುತು. ಏಕೆಂದರೆ ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನು ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸವನ್ನು ಮಾಡದೇ ವಿಶ್ರಮಿಸಿಕೊಂಡನಲ್ಲವೇ?”

18 ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಸಂಗಡ ಮಾತನಾಡುವುದನ್ನು ಮುಗಿಸಿದ ಮೇಲೆ ಅವನಿಗೆ ಆ ಎರಡು ಆಜ್ಞಾಶಾಸನಗಳನ್ನು ಕೊಟ್ಟನು. ಅವು ದೇವರ ಕೈಯಿಂದ ಬರೆಯಲ್ಪಟ್ಟ ಶಿಲಾಶಾಸನಗಳಾಗಿವೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು