Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ವಿಮೋಚನಕಾಂಡ 27 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯಜ್ಞವೇದಿ
ವಿಮೋ 38:1-7

1 ಯಜ್ಞವೇದಿಯನ್ನು ಜಾಲೀಮರದಿಂದ ಐದು ಮೊಳ ಉದ್ದವಾಗಿಯೂ, ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿ ಮಾಡಿಸಬೇಕು. ಅದರ ಎತ್ತರವು ಮೂರು ಮೊಳವಿರಬೇಕು.

2 ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿಸಬೇಕು. ಆ ಕೊಂಬುಗಳು ಯಜ್ಞವೇದಿಯಿಂದಲೇ ಬಂದವುಗಳಾಗಿರಬೇಕು. ಆ ಯಜ್ಞವೇದಿಗೆ ತಾಮ್ರದ ತಗಡುಗಳನ್ನು ಹೊದಿಸಬೇಕು.

3 ಅದರಲ್ಲಿರುವ ಬೂದಿಯನ್ನು ತೆಗೆಯುವುದಕ್ಕಾಗಿ ತಟ್ಟೆಗಳನ್ನೂ, ಸಲಿಕೆಗಳನ್ನೂ, ಬೋಗುಣಿಗಳನ್ನೂ, ಮುಳ್ಳುಚಮಚಗಳನ್ನೂ, ಹಾಗೂ ಅಗ್ಗಿಷ್ಟಿಕೆಗಳನ್ನೂ ಮಾಡಿಸಬೇಕು. ಆ ಉಪಕರಣಗಳೆಲ್ಲಾ ತಾಮ್ರದವುಗಳಾಗಿರಬೇಕು.

4 ಯಜ್ಞವೇದಿಗೆ ಹೆಣಿಗೆ ಕೆಲಸದಿಂದ ತಾಮ್ರದ ಜಾಲರಿಯನ್ನು ಮಾಡಿಸಬೇಕು, ಆ ಜಾಲರಿಯ ನಾಲ್ಕು ಮೂಲೆಗಳಿಗೆ ತಾಮ್ರದ ಬಳೆಗಳನ್ನು ಹಾಕಿಸಬೇಕು.

5 ಆ ಜಾಲರಿಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗಿನವರೆಗೆ ಇದ್ದು ಯಜ್ಞವೇದಿಯ ಅಡಿಯಿಂದ ನಡುವಿನ ತನಕ ಇರುವಂತೆ ಹಾಕಿಸಬೇಕು.

6 ಯಜ್ಞವೇದಿಯನ್ನು ಹೊರುವ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ, ತಾಮ್ರದ ತಗಡುಗಳನ್ನು ಹೊದಿಸಬೇಕು.

7 ಆ ಕೋಲುಗಳನ್ನು ಆ ಬಳೆಗಳಲ್ಲಿ ಸೇರಿಸಿದಾಗ ಅವು ಯಜ್ಞವೇದಿಯನ್ನು ಹೊರುವುದಕ್ಕಾಗಿ ಅದರ ಎರಡೂ ಕಡೆಗಳಲ್ಲಿ ಇರಬೇಕು.

8 ಆ ಯಜ್ಞವೇದಿಯನ್ನು ಹಲಗೆಗಳಿಂದ ಟೊಳ್ಳಾದ ಪೆಟ್ಟಿಗೆಯಂತೆ ಮಾಡಿಸಬೇಕು. ನಾನು ಬೆಟ್ಟದಲ್ಲಿ ನಿನಗೆ ತೋರಿಸಿದಂತೆ ಅದನ್ನು ಮಾಡಿಸಬೇಕು.


ಗುಡಾರದ ಅಂಗಳ
ವಿಮೋ 38:9-20

9 ಪರಿಶುದ್ಧ ಗುಡಾರಕ್ಕೆ ಅಂಗಳವನ್ನು ಮಾಡಿಸಬೇಕು. ಆ ದಕ್ಷಿಣ ಭಾಗದ ಅಂಗಳಕ್ಕೆ ಪರದೆಗಳು ಇರಬೇಕು. ಆ ಪರದೆಗಳನ್ನು ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಬಟ್ಟೆಯಿಂದ ಮಾಡಿಸಬೇಕು. ಅವು ನೂರು ಮೊಳ ಉದ್ದವಾಗಿರಬೇಕು.

10 ಆ ಕಡೆಯಲ್ಲಿ ಇಪ್ಪತ್ತು ಕಂಬಗಳು. ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳೂ ಪಟ್ಟಿಗಳೂ ಇರಬೇಕು.

11 ಅದೇ ರೀತಿಯಲ್ಲಿ ಉತ್ತರ ಕಡೆಯಲ್ಲಿಯೂ ನೂರು ಮೊಳ ಉದ್ದವಾದ ಪರದೆಗಳೂ, ಇಪ್ಪತ್ತು ಕಂಬಗಳು, ಇಪ್ಪತ್ತು ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು ಕಂಬಗಳ ಕೊಂಡಿಗಳೂ, ಪಟ್ಟಿಗಳೂ ಬೆಳ್ಳಿಯವಾಗಿರಬೇಕು.

12 ಪಶ್ಚಿಮ ಕಡೆಯಲ್ಲಿ ಅಂಗಳದ ಅಗಲಕ್ಕೆ ಐವತ್ತು ಮೊಳ ಉದ್ದವಾದ ಪರದೆಗಳೂ ಹತ್ತು ಕಂಬಗಳೂ, ಹತ್ತು ಗದ್ದಿಗೆ ಕಲ್ಲುಗಳೂ ಇರಬೇಕು.

13 ಪೂರ್ವದ ದಿಕ್ಕಿನಲ್ಲಿಯೂ ಅಂಗಳದ ಅಗಲವು ಐವತ್ತು ಮೊಳವಿರಬೇಕು.

14 ಒಂದು ಕಡೆಯಲ್ಲಿ ಹದಿನೈದು ಮೊಳ ಉದ್ದವಾದ ಪರದೆಗಳಿದ್ದು ಅವುಗಳಿಗೆ ಮೂರು ಸ್ತಂಭಗಳೂ, ಮೂರು ಗದ್ದಿಗೆ ಕಲ್ಲುಗಳು ಇರಬೇಕು.

15 ಮತ್ತೊಂದು ಕಡೆಯಲ್ಲಿ ಹದಿನೈದು ಮೊಳ ಉದ್ದವಾದ ಪರದೆಗಳಿದ್ದು ಅವುಗಳಿಗೆ ಮೂರು ಸ್ತಂಭಗಳೂ, ಮೂರು ಗದ್ದಿಗೆ ಕಲ್ಲುಗಳು ಇರಬೇಕು

16 ಅಂಗಳದ ಬಾಗಿಲಲ್ಲೇ ಇಪ್ಪತ್ತು ಮೊಳದ ಪರದೆಯೂ ಇರಬೇಕು. ಅದನ್ನು ನಯವಾಗಿ ಹೊಸೆದ ನಾರಿನ ನೂಲು, ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದ ಕಸೂತಿ ಕೆಲಸದವರ ಕೈಯಿಂದ ಮಾಡಿಸಬೇಕು. ಬಾಗಿಲಿಗೆ ನಾಲ್ಕು ಕಂಬಗಳೂ ನಾಲ್ಕು ಗದ್ದಿಗೆ ಕಲ್ಲುಗಳು ಇರಬೇಕು.

17 ಅಂಗಳದ ಸುತ್ತಲಿರುವ ಎಲ್ಲಾ ಕಂಬಗಳಿಗೂ, ಬೆಳ್ಳಿಯ ಪಟ್ಟಿಗಳೂ, ಬೆಳ್ಳಿಯ ಕೊಂಡಿಗಳೂ, ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು.

18 ಅಂಗಳವು ನೂರು ಮೊಳ ಉದ್ದವಾಗಿಯೂ ಸುತ್ತಲೂ ಐವತ್ತು ಮೊಳ ಅಗಲವಾಗಿಯೂ ಇರಬೇಕು. ಅದರ ಸುತ್ತಲಿರುವ ಪರದೆಯು ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಬಟ್ಟೆಯಿಂದ ಮಾಡಿದ್ದು ಅದಕ್ಕೆ ಐದು ಮೊಳ ಎತ್ತರವಿರಬೇಕು. ಅದಕ್ಕೆ ತಾಮ್ರದ ಗದ್ದಿಗೆ ಕಲ್ಲುಗಳಿರಬೇಕು.

19 ಗುಡಾರದ ಸಕಲವಿಧವಾದ ಕೆಲಸಕ್ಕೆ ಬೇಕಾದ ಉಪಕರಣಗಳೂ, ಗುಡಾರದ ಗೂಟಗಳೂ, ಅಂಗಳದ ಗೂಟಗಳೂ ತಾಮ್ರದವುಗಳಾಗಿರಬೇಕು.


ದೀಪಸ್ತಂಭದ ಎಣ್ಣೆ
ಯಾಜ 24:1-4

20 ದೀಪವು ಯಾವಾಗಲೂ ಉರಿಯುವಂತೆ ಇಸ್ರಾಯೇಲ್ಯರು ಒಲಿವ್ ಮರದ ಕಾಯಿಗಳನ್ನು ಕುಟ್ಟಿ ನಿರ್ಮಲವಾದ ಒಲಿವ್ ಎಣ್ಣೆಯನ್ನು ತೆಗೆದುಕೊಂಡು ಬರುವಂತೆ ಅವರಿಗೆ ಅಪ್ಪಣೆಕೊಡಬೇಕು.

21 ದೇವದರ್ಶನ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಮುಂದಿರುವ ಪರದೆಯ ಹೊರಗೆ ಆರೋನನೂ, ಅವನ ಮಕ್ಕಳೂ ಅದನ್ನು ಸಾಯಂಕಾಲದಿಂದ ಉದಯದವರೆಗೆ ಯೆಹೋವನ ಸನ್ನಿಧಿಯಲ್ಲಿ ಆ ದೀಪವು ಉರಿಯುತ್ತಿರುವಂತೆ ಸರಿಪಡಿಸುತ್ತಿರಬೇಕು. ಇಸ್ರಾಯೇಲ್ಯರು ಅವರ ಸಂತತಿಯವರು ಈ ನಿಯಮವನ್ನು ತಲತಲಾಂತರದವರೆಗೆ ಶಾಶ್ವತವಾಗಿ ಅನುಸರಿಸಬೇಕು. ಅದು ಅವರಿಗೆ ನಿತ್ಯ ನಿಯಮವಾಗಿರಬೇಕು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು