Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಶಿಫಾರಸೂ, ವಂದನೆಗಳೂ, ಎಚ್ಚರಿಕೆಯೂ

1 ನಾನು ನಿಮ್ಮ ಬಳಿಗೆ ಕಳುಹಿಸುವ ನಮ್ಮ ಸಹೋದರಿಯಾದ ಪೊಯಿಬೆಯನ್ನು ಪ್ರೀತಿಯಿಂದ ಅಂಗೀಕರಿಸಿರಿ. ಆಕೆಯು ಕೆಂಖ್ರೆಯ ಪಟ್ಟಣದಲ್ಲಿರುವ ಸಭೆಯ ಸೇವಕಿಯಾಗಿದ್ದಾಳೆ;

2 ನೀವು ಆಕೆಯನ್ನು ದೇವಜನರಿಗೆ ತಕ್ಕ ಹಾಗೆ ಕರ್ತನ ಶಿಷ್ಯಳೆಂದು ಸೇರಿಸಿಕೊಂಡು, ಆಕೆಗೆ ಯಾವ ವಿಷಯದಲ್ಲಿ ಅಗತ್ಯವಿದೆಯೋ ಅದರಲ್ಲಿ ಸಹಾಯವನ್ನು ಮಾಡಿರಿ. ಆಕೆಯು ನನಗೂ ಮತ್ತು ಅನೇಕರಿಗೂ ಸಹಾಯಮಾಡಿದವಳು.

3 ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಿಲ್ಲಳಿಗೂ ಮತ್ತು ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.

4 ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿಕೊಂಡಿದ್ದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ.

5 ಅವರ ಮನೆಯಲ್ಲಿ ಸೇರಿಬರುವ ಸಭೆಗೆ ಸಹ ನನ್ನ ವಂದನೆಯನ್ನು ತಿಳಿಸಿರಿ. ಆಸ್ಯ ಸೀಮೆಯಲ್ಲಿ ಕ್ರಿಸ್ತನಿಗೆ ಪ್ರಥಮಫಲವಾಗಿರುವ ನನ್ನ ಪ್ರಿಯನಾದ ಎಫೈನೆತನಿಗೆ ವಂದನೆ.

6 ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ.

7 ನನ್ನ ಸ್ವಜನರೂ ಹಾಗೂ ಜೊತೆ ಸೆರೆಯವರೂ ಆಗಿರುವ ಅಂದ್ರೋನಿಕನಿಗೂ, ಯೂನ್ಯನಿಗೂ ವಂದನೆ; ಅವರು ಅಪೊಸ್ತಲರಲ್ಲಿ ಪ್ರಸಿದ್ಧರಾಗಿದ್ದಾರಲ್ಲದೆ, ನನಗಿಂತ ಮೊದಲೇ ಕ್ರಿಸ್ತನನ್ನು ನಂಬಿದವರೂ ಆಗಿದ್ದರು.

8 ಕರ್ತನಲ್ಲಿ ನನ್ನ ಪ್ರಿಯನಾದ ಅಂಪ್ಲಿಯಾತನಿಗೆ ವಂದನೆ.

9 ಕ್ರಿಸ್ತನ ಸೇವೆಯಲ್ಲಿ ನಮ್ಮ ಜೊತೆ ಕೆಲಸದವನಾದ ಉರ್ಬಾನನಿಗೂ, ನನ್ನ ಪ್ರಿಯನಾದ ಸ್ತಾಖುನಿಗೂ ವಂದನೆಗಳು.

10 ಕ್ರಿಸ್ತನ ಸೇವೆಯಲ್ಲಿ ಮೆಚ್ಚಿಕೆಗೆಪಾತ್ರನಾದ ಅಪೆಲ್ಲನಿಗೆ ವಂದನೆ. ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು.

11 ನನ್ನ ಸಂಬಂಧಿಕನಾದ ಹೆರೂಡಿಯೋನನಿಗೆ ವಂದನೆ. ನಾರ್ಕಿಸ್ಸನ ಮನೆಯವರೊಳಗೆ ಕ್ರಿಸ್ತನನ್ನು ನಂಬಿದವರಿಗೆ ವಂದನೆಗಳು.

12 ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟವರಾದ ತ್ರುಫೈನಳಿಗೂ, ತ್ರುಫೋಸಳಗೂ ವಂದನೆಗಳು. ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀಸಳಿಗೆ ವಂದನೆ.

13 ಕರ್ತನಲ್ಲಿ ಆರಿಸಿಕೊಳ್ಳಲ್ಪಟ್ಟವನಾದ ರೂಫನಿಗೂ, ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆಗಳು.

14 ಅಸುಂಕ್ರಿತನಿಗೂ, ಪ್ಲೆಗೋನನಿಗೂ, ಹೆರ್ಮೇಯನಿಗೂ, ಪತ್ರೋಬನಿಗೂ, ಹೆರ್ಮಾನನಿಗೂ, ಅವರೊಂದಿಗಿರುವ ಸಹೋದರರಿಗೂ ವಂದನೆಗಳು.

15 ಫಿಲೊಲೊಗನಿಗೂ, ಯೂಲ್ಯಳಿಗೂ, ನೇರ್ಯನಿಗೂ, ಅವನ ತಂಗಿಗೂ, ಒಲುಂಪನಿಗೂ, ಇವರೊಂದಿಗಿರುವ ದೇವಜನರೆಲ್ಲರಿಗೂ ವಂದನೆಗಳು.

16 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳಲ್ಲಿರುವವರೆಲ್ಲರೂ ನಿಮ್ಮನ್ನು ವಂದಿಸುತ್ತಿದ್ದಾರೆ.


ಕೊನೆಯ ಮಾತುಗಳು

17 ಪ್ರಿಯರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ, ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಸಿ ಅವರನ್ನು ಬಿಟ್ಟು ದೂರ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

18 ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಮತ್ತು ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.

19 ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾದದ್ದರಿಂದ ನಿಮ್ಮ ವಿಷಯದಲ್ಲಿ ಆನಂದಪಡುತ್ತೇನೆ. ನೀವು ಒಳ್ಳೆಯದನ್ನು ಮಾಡುವುದರಲ್ಲಿ ಜಾಣರೂ ಮತ್ತು ಕೆಟ್ಟತನದ ವಿಷಯದಲ್ಲಿ ಮೂರ್ಖರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ.

20 ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿದು ಜಜ್ಜಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

21 ನನ್ನ ಜೊತೆಕೆಲಸದವನಾದ ತಿಮೊಥೆಯನೂ, ನನ್ನ ಸಂಬಂಧಿಕರಾದ ಲೂಕ್ಯನೂ, ಯಾಸೋನನೂ ಮತ್ತು ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ

22 ಈ ಪತ್ರಿಕೆಯನ್ನು ಬರೆದ ತೆರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ.

23 ನನಗೂ ಮತ್ತು ಸಮಸ್ತ ಸಭೆಗೂ ಅತಿಥಿಸತ್ಕಾರವನ್ನು ಮಾಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾನೆಯ ಮೇಲ್ವಿಚಾರಕನಾಗಿರುವ ಎರಸ್ತನೂ, ಸಹೋದರನಾದ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ.

24 ನಮ್ಮ ಕರ್ತನಾದ ಯೇಸುಕ್ರಿಸ್ತನ ಕೃಪೆಯ ನಿಮ್ಮೊಂದಿಗಿರಲಿ. ಆಮೆನ್.


ದೇವಸ್ತೋತ್ರವಚನವು

25-26 ಅನಾದಿಯಿಂದ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಶಾಸ್ತ್ರಗಳ ಮೂಲಕ ಅನ್ಯಜನರೆಲ್ಲರಿಗೂ ನಂಬಿಕೆಯೆಂಬ ವಿಧೇಯತ್ವವನ್ನು ಉಂಟುಮಾಡುವುದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪೂರ್ವಕಾಲಗಳಲ್ಲಿ ಮರೆಯಾಗಿದ್ದು ಈಗ ಬೆಳಕಿಗೆ ಬಂದಿರುವಂತಹದ್ದೂ, ಈ ಮರ್ಮಕ್ಕೆ ಅನುಸಾರ ಎಂದರೆ ಯೇಸು ಕ್ರಿಸ್ತನ ವಿಷಯವಾದಂಥ ಹಾಗೂ ನಾನು ಸಾರುವಂಥ ಸುವಾರ್ತೆಗನುಸಾರವಾಗಿ ನಿಮ್ಮನ್ನು ಸ್ಥಿರಪಡಿಸುವುದಕ್ಕೆ ಶಕ್ತನಾಗಿರುವ,

27 ಜ್ಞಾನನಿಧಿಯಾದ ಒಬ್ಬನೇ ದೇವರಿಗೆ ಯೇಸು ಕ್ರಿಸ್ತನ ಮೂಲಕ ಯುಗಯುಗಾಂತರಗಳಲ್ಲಿಯೂ ಸ್ತೋತ್ರವಾಗಲಿ. ಆಮೆನ್.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು