ರೋಮಾಪುರದವರಿಗೆ 13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಅಧಿಕಾರಸ್ಥರಿಗೆ ಅಧೀನರಾಗಬೇಕೆಂದು ಬೋಧನೆ 1 ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ. ಯಾಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವು ದೊರೆತಿರುವುದಿಲ್ಲ. ಇರುವ ಅಧಿಕಾರಿಗಳಾದರೋ ದೇವರಿಂದ ನೇಮಿಸಲ್ಪಟ್ಟವರು. 2 ಆದುದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮವನ್ನು ಎದುರಿಸುತ್ತಾನೆ. ಎದುರಿಸುವವರು ಶಿಕ್ಷೆಗೊಳಗಾಗುವರು. 3 ಕೆಟ್ಟಕೆಲಸ ಮಾಡುವವನಿಗೆ ಅಧಿಪತಿಯಿಂದ ಭಯವಿರುವುದೇ ಹೊರತು ಒಳ್ಳೆಕೆಲಸ ಮಾಡುವವನಿಗೆ ಭಯವೇನೂ ಇರುವುದಿಲ್ಲ. ನೀನು ಅಧಿಕಾರಿಗೆ ಭಯಪಡದೇ ಇರಬೇಕೆಂದು ಅಪೇಕ್ಷಿಸುತ್ತೀಯೋ ಒಳ್ಳೆಯದನ್ನು ಮಾಡು. ಆಗ ಆ ಅಧಿಕಾರಿಯೇ ನಿನ್ನನ್ನು ಹೊಗಳುವನು. 4 ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು. ಅವನು ಸುಮ್ಮನೆ ಕೈಯಲ್ಲಿ ಅಧಿಕಾರದ ದಂಡವನ್ನು ಹಿಡಿದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಮಾಡುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ. 5 ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಾಕ್ಷಿಗೆ ಒಪ್ಪುವಂತೆಯು ಅವನಿಗೆ ಅಧೀನನಾಗಿರು. 6 ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕೆಂದರೆ ಕಂದಾಯ ಸಂಗ್ರಹಿಸುವವರು ದೇವರ ಸೇವಕರಾಗಿದ್ದು ಆ ಕೆಲಸದಲ್ಲಿಯೇ ನಿರತರಾಗಿರುತ್ತಾರೆ. 7 ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ. ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು ಸಲ್ಲಿಸಿರಿ. ಯಾರಿಗೆ ಭಯಪಡಬೇಕೋ ಅವರಿಗೆ ಭಯಪಡಿರಿ ಯಾರಿಗೆ ಮರ್ಯಾದೆ ತೋರಿಸಬೇಕೋ ಅವರಿಗೆ ಗೌರವವನ್ನು ಸಲ್ಲಿಸಿರಿ. ಧರ್ಮಶಾಸ್ತ್ರವೆಲ್ಲಾ ಪ್ರೀತಿಯಿಂದಲೇ ನೆರವೇರುವುದು ಎಂಬ ಬೋಧನೆ 8 ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮ್ಮ ಮೇಲೆ ಇರಬಾರದು. ತನ್ನ ನೆರೆಹೊರೆಯವರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನೆಲ್ಲಾ ನೆರವೇರಿಸಿದ್ದಾನೆ. 9 ಹೇಗೆಂದರೆ “ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಪರರ ಸೊತ್ತನ್ನು ಆಶಿಸಬಾರದು.” ಈ ಮೊದಲಾದ ಎಲ್ಲಾ ಕಟ್ಟಳೆಗಳು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ. 10 ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವುದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಶಾಸ್ತ್ರವು ನೆರವೇರುತ್ತದೆ. 11 ಈಗಿನ ಕಾಲವು ನಿದ್ದೆಯಿಂದ ಎಚ್ಚರವಾಗಿರತಕ್ಕ ಕಾಲವೆಂದು ಅರಿತು ಇದನ್ನೆಲ್ಲಾ ಮಾಡಿರಿ. ನಾವು ಕ್ರಿಸ್ತನನ್ನು ಮೊದಲು ನಂಬಿದ ಕಾಲದಲ್ಲಿ ಇದ್ದುದಕ್ಕಿಂತ ಈಗ ನಮ್ಮ ವಿಮೋಚನೆಯ ಕಾಲವು ಹತ್ತಿರವಾಗಿದೆ. 12 ಇರುಳು ಬಹಳ ಮಟ್ಟಿಗೆ ಕಳೆಯಿತು; ಹಗಲು ಸಮೀಪವಾಯಿತು. ಕತ್ತಲೆಗೆ ಅನುಗುಣವಾದ ಕೃತ್ಯಗಳನ್ನು ಬಿಟ್ಟು ಬೆಳಕಿಗೆ ಅನುಗುಣವಾದ ರಕ್ಷಣೆಯ ಆಯುಧಗಳನ್ನು ಧರಿಸಿಕೊಳ್ಳೋಣ. 13 ದುಂದೌತಣ ಕುಡಿಕತನಗಳಲ್ಲಾಗಲಿ, ಕಾಮವಿಲಾಸ, ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳ ಹೊಟ್ಟೆಕಿಚ್ಚುಗಳಲ್ಲಿಯಾಗಲಿ ಕಾಲ ಕಳೆಯದೆ ಹಗಲಿನಲ್ಲಿರ ತಕ್ಕ ಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ. 14 ದೇಹದ ಆಸೆಗಳನ್ನು ಪೂರೈಸುವುದಕ್ಕಾಗಿ ಚಿಂತಿಸದೇ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.