Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ರೋಮಾಪುರದವರಿಗೆ 12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದೇವಜನರು ನಡೆದುಕೊಳ್ಳಬೇಕಾದ ರೀತಿ

1 ಆದ್ದರಿಂದ ಸಹೋದರರೇ, ದೇವರ ಕನಿಕರವನ್ನು ನೆನಪಿಸುತ್ತಾ, ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ, ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಸಮರ್ಪಿಸಿರೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ಇದೇ ವಿವೇಕ ಪೂರ್ವಕವಾದ ಆರಾಧನೆಯು.

2 ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತವನ್ನು ತಿಳಿದವರಾಗಿ ಉತ್ತಮವಾದದ್ದೂ, ಮೆಚ್ಚಿಕೆಯಾದದ್ದೂ, ದೋಷವಿಲ್ಲದ್ದೂ ಯಾವ ಯಾವುದೆಂದು ವಿವೇಚಿಸುವಿರಿ.

3 ದೇವರು ನನಗೆ ಕೃಪೆಮಾಡಿದ ಸೇವೆಯನ್ನು ಮಾಡುತ್ತಾ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವುದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ನಂಬಿಕೆಯ ಬಲವನ್ನು ಕೊಟ್ಟಿರುವನೋ, ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ತಾನು ಭಾವಿಸಿಕೊಳ್ಳಬೇಕು.

4 ಯಾಕೆಂದರೆ ನಮಗೆ ಒಂದೇ ದೇಹದಲ್ಲಿ ಬಹಳ ಅಂಗಗಳಿರಲಾಗಿ ಆ ಎಲ್ಲಾ ಅಂಗಗಳಿಗೆ ಹೇಗೆ ಒಂದೇ ಕೆಲಸ ಇರುವುದಿಲ್ಲವೋ

5 ಹಾಗೆಯೇ ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದು ಒಬ್ಬೊಬ್ಬರಾಗಿ ವಿವಿಧ ಅಂಗಗಳಾಗಿದ್ದೇವೆ.

6 ದೇವರು ನಮಗೆ ಕೃಪೆಮಾಡಿದ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ಹೊಂದಿದ ವರವು ಪ್ರವಾದನೆ ರೂಪವಾಗಿದ್ದರೆ, ನಮ್ಮ ನಂಬಿಕೆಗೆ ತಕ್ಕ ಹಾಗೆ ಪ್ರವಾದನೆ ಹೇಳೋಣ.

7 ಅದು ಸಭಾಸೇವೆಯ ರೂಪವಾಗಿದ್ದರೆ ಪ್ರಾಮಾಣಿಕವಾಗಿ ಸಭಾಸೇವೆಯನ್ನು ಮಾಡುತ್ತಾ ಇರೋಣ.

8 ಬೋಧಿಸುವವನು ಬೋಧಿಸುವುದರಲ್ಲಿಯೂ, ಬುದ್ಧಿಹೇಳುವವನು ಬುದ್ಧಿ ಹೇಳುವುದರಲ್ಲಿಯೂ ನಿರತನಾಗಿರಲಿ. ದಾನಕೊಡುವವನು ಯಥಾರ್ಥಮನಸ್ಸಿನಿಂದ ಕೊಡಲಿ. ದಾರಿ ತೋರಿಸುವವನು ಆಸಕ್ತಿಯಿಂದ ಅದನ್ನು ಮಾಡಲಿ. ಕಷ್ಟದಲ್ಲಿರುವವರಿಗೆ ಉಪಕಾರಮಾಡುವವನು ಸಂತೋಷವಾಗಿ ಮಾಡಲಿ.

9 ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟತನವನ್ನು ತಿರಸ್ಕರಿಸಿರಿ, ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.

10 ಕ್ರೈಸ್ತ ಸಹೋದರರು ಅಣ್ಣ ತಮ್ಮಂದಿರೆಂದು ತಿಳಿದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವಮರ್ಯಾದೆಗಳನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.

11 ಜಾಗ್ರತೆ ಬೇಕಾದಲ್ಲಿ ಆಲಸ್ಯವಾಗಿರದೆ ಆಸಕ್ತಚಿತ್ತರಾಗಿದ್ದು ಕರ್ತನ ಸೇವೆ ಮಾಡುವವರಾಗಿರಿ.

12 ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರಿ, ಕಷ್ಟಗಳಲ್ಲಿ ಸೈರಣೆಯುಳ್ಳವರಾಗಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ.

13 ದೇವಜನರಿಗೆ ಕೊರತೆ ಬಂದಾಗ ಸಹಾಯ ಮಾಡಿರಿ. ಅತಿಥಿಸತ್ಕಾರವನ್ನು ಆಚರಿಸಿರಿ.

14 ನಿಮ್ಮನ್ನು ಹಿಂಸಿಸುವವರಿಗೆ ಆಶೀರ್ವಾದ ಮಾಡಿರಿ; ಶಪಿಸದೆ ಆಶೀರ್ವದಿಸಿರಿ.

15 ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.

16 ನಿಮ್ಮ ನಿಮ್ಮೊಳಗೆ ಏಕಮನಸ್ಸುಳ್ಳವರಾಗಿರಿ ದೊಡ್ಡಸ್ತಿಕೆಯ ಮೇಲೆ ಮನಸ್ಸಿಡದೆ ದೀನರನ್ನು ಸ್ವೀಕರಿಸಿರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.

17 ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಗೌರವವಾದದ್ದೋ ಯುಕ್ತವಾದದ್ದೋ ಅದನ್ನೇ ಯೋಚಿಸಿ ಒಳ್ಳೆಯದನ್ನು ಮಾಡಿರಿ.

18 ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.

19 ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ. ಯಾಕೆಂದರೆ “‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು’ ಎಂದು ಕರ್ತನು ಹೇಳುತ್ತಾನೆಂಬುದಾಗಿ” ಬರೆದಿದೆ.

20 ಹಾಗಾದರೆ “ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವುದಕ್ಕೆ ಕೊಡು. ಹೀಗೆ ಮಾಡುವುದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವುದು”.

21 ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೆತನದಿಂದ ಕೆಟ್ಟತನವನ್ನು ಸೋಲಿಸಿರಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು