ಯೋಬ 8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಬಿಲ್ದದನ ಮೊದಲನೆಯ ಪ್ರತ್ಯುತ್ತರ 1 “ಆಗ ಶೂಹ್ಯನಾದ ಬಿಲ್ದದನು ಹೀಗೆಂದನು, 2 “ಬಿರುಗಾಳಿಯಂತಿರುವ ಮಾತುಗಳನ್ನಾಡಿ ಇನ್ನೆಷ್ಟರವರೆಗೆ ಹೀಗೆ ನುಡಿಯುತ್ತಿರುವಿ? 3 ದೇವರು ಅನ್ಯಾಯವಾದ ತೀರ್ಪನ್ನು ಕೊಡುವನೋ? ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವನೋ? 4 ಒಂದು ವೇಳೆ ನಿನ್ನ ಮಕ್ಕಳು ಆತನಿಗೆ ವಿರುದ್ಧವಾಗಿ ಪಾಪ ಮಾಡಿದ್ದರಿಂದ, ಆತನು ಅವರನ್ನು ಅವರ ದುಷ್ಕೃತ್ಯದ ಕೈಗೆ ಒಪ್ಪಿಸಿದನೋ ಏನೋ? 5 ನೀನು ಶುದ್ಧನೂ, ಯಥಾರ್ಥನೂ ಆಗಿ ಕುತೂಹಲದಿಂದ ಆತನ ಪ್ರಸನ್ನತೆಯನ್ನು ಬಯಸಿ, ಸರ್ವಶಕ್ತನಾದ ದೇವರಿಗೆ ನಿನ್ನ ವಿಜ್ಞಾಪನೆಯನ್ನು ಮಾಡಿಕೊಂಡರೆ, 6 ಆತನು ನಿಶ್ಚಯವಾಗಿ ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವನು. 7 ನಿನ್ನ ಮೊದಲನೆಯ ಸ್ಥಿತಿಯು ಅಲ್ಪವಾಗಿದ್ದರೂ, ನಿನ್ನ ಕಡೆಯ ಸ್ಥಿತಿಯು ಬಹಳ ವೃದ್ಧಿಹೊಂದುವುದು. 8 ದಯಮಾಡಿ, ಪೂರ್ವಿಕರನ್ನು ವಿಚಾರಿಸಿ, ಅವರ ಪೂರ್ವಿಕರು ಕಂಡುಕೊಂಡದ್ದಕ್ಕೂ ಮನಸ್ಸಿಡು. 9 ನಾವಾದರೋ ನಿನ್ನೆ ಹುಟ್ಟಿದವರು, ನಮಗೆ ಏನೂ ತಿಳಿಯದು. ಭೂಲೋಕದಲ್ಲಿನ ನಮ್ಮ ದಿನಗಳು ನೆರಳಿನಂತಿವೆಯಷ್ಟೆ. 10 ಅವರು ನಿನಗೆ ಬೋಧಿಸಿ ಬುದ್ಧಿಹೇಳಿ, ಮನಃಪೂರ್ವಕವಾಗಿ ಮಾತನಾಡುವುದಿಲ್ಲವೋ? 11 ಜವುಗು ಇಲ್ಲದೆ ಜಂಬುಹುಲ್ಲು ಬೆಳೆಯುವುದೇ? ನೀರಿಲ್ಲದೆ ಆಪುಹುಲ್ಲು ಮೊಳೆಯುವುದೇ? 12 ಇನ್ನೂ ಎಳೆಯದಾಗಿರುವಾಗಲೇ ಮಿಕ್ಕ ಎಲ್ಲಾ ಸಸಿಗಳಿಗಿಂತಲೂ ಮುಂಚಿತವಾಗಿ, ಯಾರೂ ಕೊಯ್ಯದೆ ಇದು ಒಣಗಿ ಹೋಗುವುದು. 13 ದೇವರನ್ನು ಮರೆತು ಬಿಟ್ಟವರೆಲ್ಲರ ಗತಿಯು ಹೀಗೆಯೇ ಇರುವುದು; ಭ್ರಷ್ಟನ ನಿರೀಕ್ಷೆಯು ನಿರರ್ಥಕವಾಗುವುದು. 14 ಅವನ ಭರವಸವು ಭಂಗವಾಗುವುದು, ಅವನ ಆಶ್ರಯವು ಜೇಡದ ಮನೆಯಂತಿರುವುದು. 15 ಅವನು ಆ ಮನೆಯನ್ನು ಆತುಕೊಂಡರೆ ಅದು ನಿಲ್ಲುವುದಿಲ್ಲ; ಅದನ್ನು ಹಿಡುಕೊಂಡರೆ ಅದು ಸ್ಥಿರವಾಗಿರದು. 16 ಅವನು ಬಳ್ಳಿಯಂತೆ ಬಿಸಿಲಿನಲ್ಲಿಯೂ ಹಸಿಯಾಗಿದ್ದು, ತೋಟದಲ್ಲೆಲ್ಲಾ ಕವಲೊಡೆದು ಹರಡಿ 17 (ಕಲ್ಲು) ಕುಪ್ಪೆಯ ಮೇಲೆ ತನ್ನ ಬೇರುಗಳನ್ನು ಹೆಣೆದುಕೊಂಡು, ಕಲ್ಲುಬಿರುಕಿನಲ್ಲಿಯೂ ನುಗ್ಗಬಲ್ಲನು. 18 ಅವನನ್ನು ಅಲ್ಲಿಂದ ಕಿತ್ತು ಹಾಕಿದರೆ ಆ ಸ್ಥಳವು, ‘ನಿನ್ನನ್ನು ಕಾಣೆ’ ಎಂದು ಕೂಗುವುದು. 19 ಆ ಮಣ್ಣಿನಿಂದ ಬೇರೆ ಸಸಿಗಳು ಮೊಳೆಯುವವು. ಆಹಾ, ಇದೇ ಅವನ ಗತಿಯ ಸುಖ! 20 ಇಗೋ ದೇವರು ನಿರ್ದೋಷಿಯನ್ನು ತಳ್ಳಿಬಿಡುವುದಿಲ್ಲ, ಕೆಡುಕರನ್ನು ಕೈಹಿಡಿಯುವುದಿಲ್ಲ. 21 ಆತನು ಇನ್ನು ಮೇಲೆ ನಿನ್ನ ಬಾಯನ್ನು ನಗುವಿನಿಂದಲೂ, ತುಟಿಗಳನ್ನು ಉತ್ಸಾಹ ಧ್ವನಿಯಿಂದಲೂ ತುಂಬಿಸುವನು. 22 ನಿನ್ನ ಶತ್ರುಗಳನ್ನು ಅವಮಾನವು ಮುಸುಕುವುದು; ದುಷ್ಟರ ನಿವಾಸವು ನಿರ್ಮೂಲವಾಗುವುದು.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.