Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೋಬನ ಎರಡನೆಯ ಸಂಭಾಷಣೆ: ಎಲೀಫಜನಿಗೆ ಪ್ರತ್ಯುತ್ತರ

1 ಆ ಮೇಲೆ ಯೋಬನು ಮತ್ತೆ ಇಂತೆಂದನು,

2 “ಆಹಾ, ತ್ರಾಸಿನಲ್ಲಿ ನನ್ನ ವಿಪತ್ತನ್ನು ಇಟ್ಟು; ಅದರಿಂದ ನನ್ನ ಕರಕರೆಯ ಭಾರವನ್ನು ತೂಕ ಮಾಡುವುದಾದರೆ ಎಷ್ಟೋ ಒಳ್ಳೆಯದು.

3 ಆಗ ನನ್ನ ವಿಪತ್ತು ಸಮುದ್ರದ ಮರಳಿಗಿಂತಲೂ ಹೆಚ್ಚು ಭಾರವುಳ್ಳದ್ದೆಂದು ಗೊತ್ತಾಗುವುದು ಎಂದು ದುಡುಕಿನಿಂದ ಮಾತನಾಡಿದ್ದೇನೆ.

4 ಸರ್ವಶಕ್ತನಾದ ದೇವರ ಬಾಣಗಳು ನನ್ನಲ್ಲಿ ನಾಟಿರುತ್ತವೆ, ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ; ದೇವರು ಕಳುಹಿಸಿದ ಅಪಾಯಗಳು ನನಗೆ ವಿರುದ್ಧವಾಗಿ ವ್ಯೂಹಕಟ್ಟಿವೆ.

5 ಕಾಡುಕತ್ತೆಗೆ ಹುಲ್ಲಿರಲು ಅರಚೀತೇ? ಎತ್ತಿಗೆ ಮೇವಿರಲು ಕೂಗೀತೇ?

6 ಸಪ್ಪೆಯನ್ನು ಉಪ್ಪಿಲ್ಲದೆ ತಿನ್ನಬಹುದೇ? ಮೊಟ್ಟೆಯಲ್ಲಿರುವ ಲೋಳೆಯು ರುಚಿಯೇ?

7 ಇಂಥಾ ಆಹಾರವು ನನಗೆ ಅಸಹ್ಯವಾಗಿದೆ; ಮುಟ್ಟಲಾರೆನು.

8 ಅಯ್ಯೋ, ನನ್ನ ವಿಜ್ಞಾಪನೆಯು ನೆರವೇರುವುದಿಲ್ಲವೇ, ನಾನು ಬಯಸುವುದನ್ನು ದೇವರು ಕೊಡುವುದಿಲ್ಲವೇ?

9 ನಾನು ನಾಶವಾಗುವುದು ದೇವರಿಗೆ ಮೆಚ್ಚಿಕೆಯಾಗುವುದಾದರೆ, ತನ್ನ ಕೈ ಚಾಚಿ ನನ್ನನ್ನು ಸಂಹರಿಸಿದರೆ ಒಳ್ಳೆಯದು.

10 ಆಗ ನಾನು ಆದರಣೆ ಹೊಂದಿ ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು. ಪರಿಶುದ್ಧ ದೇವರ ಆಜ್ಞೆಗಳನ್ನು ನಾನು ತೊರೆದುಬಿಟ್ಟವನಲ್ಲ.

11 ನನ್ನ ಬಲವು ಎಷ್ಟರದು, ನಾನು ಹೇಗೆ ಕಾದುಕೊಳ್ಳಲಿ? ನನ್ನ ಅಂತ್ಯಸ್ಥಿತಿಯೇನು, ನಾನು ತಾಳ್ಮೆಯಿಂದಿರುವುದೇಕೆ?

12 ನನ್ನ ಬಲವು ಕಲ್ಲಿನ ಬಲವೋ? ಅಥವಾ ನನ್ನ ಶರೀರವು ತಾಮ್ರದ್ದೋ?

13 ನನ್ನಲ್ಲಿ ಏನೂ ಸಹಾಯವಿಲ್ಲವಲ್ಲಾ, ನನ್ನ ಸಾಮರ್ಥ್ಯವು ತೊಲಗಿಹೋಗಿದೆ.

14 ಒಬ್ಬನು ಮನಗುಂದಿ ಸರ್ವಶಕ್ತನಾದ ದೇವರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ; ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.

15 ನನ್ನ ಸಹೋದರರಾದರೋ ತೊರೆಯ ಹಾಗೂ, ಪ್ರವಾಹವು ಹಾದುಹೋಗಿ ಬತ್ತಿದ ಹಳ್ಳದ ಹಾಗೂ ದ್ರೋಹಿಗಳಾಗಿದ್ದಾರೆ.

16 ಹಿಮವು ಅಡಗಿರುವ ಪ್ರವಾಹಗಳು, ಮಂಜುಗಡ್ಡೆಯಿಂದ ಕೂಡಿ ಕಪ್ಪಾಗಿರುವವು.

17 ಬೇಸಿಗೆ ಬರುತ್ತಲೇ ಮಾಯವಾಗುವವು, ಸೆಕೆಯುಂಟಾದಾಗ ಅವು ಬತ್ತಿ ಕಾಣಿಸದೆ ಹೋಗುವವು.

18 ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣಮಾಡುವ ವರ್ತಕರ ಗುಂಪುಗಳು ಓರೆಯಾಗಿ, ಮರುಭೂಮಿಗೆ ತಿರುಗಿ ನಾಶವಾಗುತ್ತವೆ.

19 ತೇಮದ ಗುಂಪಿನವರು ಕಣ್ಣೆತ್ತಿ ನೋಡಿದರು, ಶೆಬದ ಸಮೂಹದವರು ಆ ತೊರೆಗಳನ್ನು ಹಾರೈಸಿದರು.

20 ಅಲ್ಲಿಗೆ ಸೇರಿ ಆಶಾಭಂಗಪಟ್ಟರು, ನಂಬಿದಷ್ಟೂ ನಿರೀಕ್ಷೆಗೆಟ್ಟರು.

21 ಈಗ ನೀವು ಹಾಗೆಯೇ ಇದ್ದೀರಿ. (ನನ್ನ) ವಿಪತ್ತನ್ನು ಕಂಡ ಕೂಡಲೆ ಹೆದರಿದಿರಿ.

22 ನನ್ನ ಬಿನ್ನಹವೇನು? ‘ನನಗೆ ದಾನಮಾಡಿರಿ’ ಎಂದು ಬಿನ್ನವಿಸಿದೆನೋ? ನಿಮ್ಮ ಆಸ್ತಿಯಿಂದ, ‘ನನಗಾಗಿ ಲಂಚಕೊಡಿರಿ’ ಎಂದೆನೋ?

23 ವಿರೋಧಿಯ ಕೈಯಿಂದ, ‘ನನ್ನನ್ನು ರಕ್ಷಿಸಿರಿ’ ಎಂದು ಕೇಳಿಕೊಂಡೆನೋ? ಬಲಾತ್ಕರಿಸುವವರಿಂದ, ‘ನನ್ನನ್ನು ವಿಮೋಚಿಸಿರಿ’ ಎಂದು ಬೇಡಿಕೊಂಡೆನೋ?

24 ನನಗೆ ಉಪದೇಶಮಾಡಿ ನನ್ನ ತಪ್ಪನ್ನು ನನಗೆ ತಿಳಿಯಪಡಿಸಿರಿ, ನಾನು ಮೌನದಿಂದಿರುವೆನು.

25 ನೀತಿಯ ನುಡಿಗಳು ಎಷ್ಟೋ ಖಂಡಿತವಾಗಿವೆ, ಆದರೆ ನಿಮ್ಮ ಖಂಡನೆಯು ನಿರಾರ್ಥಕ?

26 ಬರೀ ಮಾತುಗಳಿಂದ ಖಂಡಿಸಬೇಕೆನ್ನುವಿರೋ? ದೆಸೆಗೆಟ್ಟವನ ಮಾತುಗಳು ಗಾಳಿಗೆ ಹೋಗತಕ್ಕವುಗಳಲ್ಲವೇ?

27 ನೀವು ಚೀಟಿಹಾಕಿ ಅನಾಥನನ್ನು ಕೊಂಡುಕೊಳ್ಳುವವರು; ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.

28 ಆದುದರಿಂದ ಈಗ ದಯಮಾಡಿ ನನ್ನನ್ನು ನೋಡಿರಿ, ನಿಮ್ಮ ಮುಖದೆದುರಿಗೆ ನಾನು ಸುಳ್ಳಾಡುವೆನೋ?

29 ದಯವಿಟ್ಟು ನನ್ನ ವಿಚಾರಣೆಗೆ ಅನ್ಯಾಯವಾಗದಿರಲಿ; ಮತ್ತೆ ವಿಮರ್ಶೆ ಮಾಡಿರಿ. ನನ್ನ ವ್ಯಾಜ್ಯವು ನ್ಯಾಯವಾದದ್ದು.

30 ರುಚಿಗೆ ನನ್ನ ನಾಲಿಗೆಯು ತಪ್ಪುಮಾಡುತ್ತದೋ? ಸತ್ಯಾಸತ್ಯಗಳ, ನ್ಯಾಯಾನ್ಯಾಯಗಳನ್ನು ವಿವೇಚಿಸುವ ಸಾಮರ್ಥ್ಯ ನನಗಿಲ್ಲವೇ?

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು