Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 42 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೋಬನು ಯೆಹೋವನಿಗೆ ನೀಡಿದ ಪ್ರತ್ಯುತ್ತರ

1 ಆಗ ಯೋಬನು ಯೆಹೋವನಿಗೆ ಪ್ರತ್ಯುತ್ತರವಾಗಿ ಹೀಗೆಂದನು,

2 “ನೀನು ಸಕಲ ಕಾರ್ಯಗಳನ್ನು ನಡೆಸಬಲ್ಲೆಯೆಂತಲೂ, ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ.

3 ‘ಜ್ಞಾನವಿಲ್ಲದೆ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು?’ ಎಂಬ ನಿನ್ನ ಮಾತಿನಂತೆ ನಾನು ತಿಳಿಯದ ಸಂಗತಿಗಳನ್ನೂ, ನನಗೆ ಗೊತ್ತಿಲ್ಲದೆ ಬುದ್ಧಿಗೆ ಮೀರಿರುವ ಅದ್ಭುತಗಳನ್ನೂ ಕುರಿತು ಮಾತನಾಡಿದ್ದೇನೆ.

4 ದಯಮಾಡಿ ಕೇಳು, ನಾನೇ ಮಾತನಾಡುವೆನು; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು ಎಂದು ಅಪ್ಪಣೆಕೊಟ್ಟೆ.

5 ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.

6 ಆದಕಾರಣ ನಾನು ಆಡಿದ್ದನ್ನು ತಿರಸ್ಕರಿಸಿ ಧೂಳಿನಲ್ಲಿಯೂ, ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ” ಎಂದನು.


ಸಮಾಪ್ತಿ

7 ಯೆಹೋವನು ಈ ಮಾತುಗಳನ್ನು ಯೋಬನಿಗೆ ಹೇಳಿದ ಮೇಲೆ ತೇಮಾನ್ಯನಾದ ಎಲೀಫಜನನ್ನು ಕುರಿತು, “ನಿನ್ನ ಮೇಲೆಯೂ, ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀನು ಆಡಲಿಲ್ಲ.

8 ಈಗ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಹೋಗಿ ನಿಮ್ಮ ದೋಷಪರಿಹಾರಕ್ಕಾಗಿ ಹೋಮಮಾಡಿರಿ. ನನ್ನ ದಾಸನಾದ ಯೋಬನು ನಿಮ್ಮ ಪರವಾಗಿ ಪ್ರಾರ್ಥನೆ ಮಾಡುವನು. ನಾನು ಅವನ ವಿಜ್ಞಾಪನೆಯನ್ನು ಲಾಲಿಸಿ ನಿಮ್ಮ ಮೂರ್ಖತನಕ್ಕೆ ತಕ್ಕ ದಂಡನೆಯನ್ನು ನಿಮಗೆ ವಿಧಿಸುವುದಿಲ್ಲ. ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಸತ್ಯವನ್ನು ನುಡಿದಂತೆ ನೀವು ನುಡಿಯಲಿಲ್ಲ” ಎಂದು ಹೇಳಿದನು.

9 ಆಗ ತೇಮಾನ್ಯನಾದ ಎಲೀಫಜನೂ, ಶೂಹ್ಯನಾದ ಬಿಲ್ದದನೂ, ನಾಮಾಥ್ಯನಾದ ಚೋಫರನೂ ಹೋಗಿ ಯೆಹೋವನು ತಮಗೆ ಆಜ್ಞಾಪಿಸಿದ ಪ್ರಕಾರ ಮಾಡಲು ಯೆಹೋವನು ಯೋಬನ ವಿಜ್ಞಾಪನೆಯನ್ನು ಲಾಲಿಸಿದನು.


ಯೆಹೋವನು ಯೋಬನನ್ನು ಪುನಃ ಆಶೀರ್ವದಿಸಿದ್ದು

10 ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಬಳಿಕ ಯೆಹೋವನು ಅವನ ದುಸ್ಥಿತಿಯನ್ನು ಹೋಗಲಾಡಿಸಿ, ಅವನ ಸೊತ್ತನ್ನು ಮೊದಲಿಗಿಂತ ಎರಡರಷ್ಟಾಗಿ ಹೆಚ್ಚಿಸಿದನು.

11 ಆಗ ಅವನ ಎಲ್ಲಾ ಅಣ್ಣತಮ್ಮಂದಿರೂ, ಎಲ್ಲಾ ಅಕ್ಕತಂಗಿಯರೂ, ಮೊದಲು ಅವನ ಮನೆಯಲ್ಲಿ ಅವನೊಂದಿಗೆ ಭೋಜನಮಾಡುತ್ತಿದ್ದ ಎಲ್ಲಾ ಪರಿಚಿತರೂ ಅವನ ಬಳಿಗೆ ಬಂದು ಯೆಹೋವನು ಅವನ ಮೇಲೆ ಬರಮಾಡಿದ್ದ ಆಪತ್ತಿನ ವಿಷಯವಾಗಿ ತಮ್ಮ ತಮ್ಮ ಅನುತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸಿದರು. ಇದಲ್ಲದೆ ಪ್ರತಿಯೊಬ್ಬರೂ ಒಂದೊಂದು ವರಹವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಅವನಿಗೆ ಕೊಟ್ಟರು.

12 ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು. ಅವನಿಗೆ ಹದಿನಾಲ್ಕು ಸಾವಿರ ಕುರಿಗಳೂ, ಆರು ಸಾವಿರ ಒಂಟೆಗಳೂ, ಒಂದು ಸಾವಿರ ಜೋಡಿ ಎತ್ತುಗಳೂ, ಒಂದು ಸಾವಿರ ಹೆಣ್ಣುಕತ್ತೆಗಳೂ ಉಂಟಾದವು.

13 ಇಷ್ಟು ಮಾತ್ರವಲ್ಲದೆ ಏಳು ಮಂದಿ ಗಂಡುಮಕ್ಕಳೂ, ಮೂರು ಮಂದಿ ಹೆಣ್ಣುಮಕ್ಕಳನ್ನೂ ಪಡೆದನು.

14 ಮೊದಲನೆಯವಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್ಹಪ್ಪೂಕ್ ಎಂದು ಹೆಸರಿಟ್ಟನು.

15 ಯೋಬನ ಮಕ್ಕಳಷ್ಟು ಸುಂದರಸ್ತ್ರೀಯರು ಆ ದೇಶದಲ್ಲಿ ಎಲ್ಲಿಯೂ ಸಿಕ್ಕುತ್ತಿರಲಿಲ್ಲ. ತಂದೆಯು ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸ್ವತ್ತನ್ನು ಹಂಚಿದನು.

16 ಆ ಮೇಲೆ ಯೋಬನು ನೂರನಲ್ವತ್ತು ವರ್ಷ ಬಾಳಿ ತನ್ನ ಮಕ್ಕಳನ್ನು, ಮೊಮ್ಮಕ್ಕಳನ್ನು ಅಂತು ತನ್ನ ಸಂತಾನದ ನಾಲ್ಕು ತಲೆಗಳನ್ನು ಕಂಡನು.

17 ತರುವಾಯ ಯೋಬನು ಮುಪ್ಪಿನ ಮುದುಕನಾಗಿ ಮರಣ ಹೊಂದಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು