ಯೋಬ 41 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೋವನ ಸವಾಲಿನ ಮುಂದುವರಿಕೆ 1 ಲಿವ್ಯಾತಾನ್ ಮೊಸಳೆಯನ್ನು ಮೀನು ಗಾಳದಿಂದ ಎಳೆಯುವಿಯೋ? ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ? 2 ಅದರ ಮೂಗಿಗೆ ಗಾಳವನ್ನು ಇಡುವೆಯೋ? ಅದರ ದವಡೆಗೆ ಮುಳ್ಳನ್ನು ಚುಚ್ಚುವಿಯೋ? 3 ಅದು ನಿನ್ನ ಬಳಿ ವಿಜ್ಞಾಪಿಸುವುದೋ? ನಿನ್ನ ಸಂಗಡ ಸವಿಮಾತನಾಡೀತೇ? 4 ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದೋ? 5 ಅದನ್ನು ಪಕ್ಷಿಯಂತೆ ಆಡಿಸುವೆಯಾ? ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವೆಯಾ? 6 ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ? ವರ್ತಕರಿಗೆ ಹಂಚಿ ಮಾರುವರೋ? 7 ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ ಅಥವಾ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲೆಯಾ? 8 ಅದರ ಮೇಲೆ ಕೈಹಾಕಿ ನೋಡು! ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ. 9 ಆಹಾ, ಅದನ್ನು ಹಿಡಿಯಬೇಕೆಂಬ ನಿರೀಕ್ಷೆಯು ವ್ಯರ್ಥ! ಹಿಡಿಯಲು ಬಂದವನು ನೋಡಿದ ಮಾತ್ರಕ್ಕೆ ಬಿದ್ದು ಹೋಗುವನು. 10 ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು? 11 ನಾನು ಸಾಲ ತೀರಿಸಬೇಕಾದರೆ ಮೊದಲು ಅದನ್ನು ನನಗೆ ಕೊಟ್ಟವರು ಯಾರು? ಆಕಾಶಮಂಡಲದ ಕೆಳಗಿರುವ ಸರ್ವಸ್ವವೂ ನನ್ನದೇ. 12 ನಾನು ಅದರ ಅಂಗಗಳನ್ನೂ ಶಕ್ತಿವಿಧಾನವನ್ನೂ ಸೊಗಸಾದ ಜೋಡಣೆಯನ್ನೂ ವರ್ಣಿಸದೆ ಸುಮ್ಮನಿರಲಾರೆನು. 13 ಅದರ ಹೊರಕವಚವನ್ನು ಯಾರು ತೆಗೆಯುವರು? ಜೋಡು ದವಡೆಗಳೊಳಗೆ ಪ್ರವೇಶಿಸುವವರು ಯಾರು? 14 ಮುಖದ ಕದಗಳನ್ನು ಯಾರು ತೆರೆದಾರು? ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ. 15 ಗುರಾಣಿಗಳ ಸಾಲುಗಳು ಅದರ ಹೆಚ್ಚಳಕ್ಕೆ ಆಸ್ಪದವಾಗಿದೆ. ಅವು ಬಿಗಿದು ಮುದ್ರಿಸಲ್ಪಟ್ಟಿವೆ. 16 ಗಾಳಿಯು ಕೂಡ ನುಗ್ಗದಂತೆ ಅವು ಒಂದಕ್ಕೊಂದು ಹೊಂದಿಕೊಂಡಿವೆ. 17 ಪರಸ್ಪರ ಅಂಟಿಕೊಂಡು ವಿಂಗಡಿಸದ ಹಾಗೆ ಹಿಡಿದುಕೊಂಡಿವೆ. 18 ಅದರ ಸೀನಿನ ತುಂತುರುಗಳು ತಳತಳಿಸುವವು, ಕಣ್ಣು ಅರುಣನೇತ್ರಕ್ಕೆ ಸಮಾನವಾಗಿದೆ. 19 ಬಾಯೊಳಗಿಂದ ಕೊಳ್ಳಿಗಳು ಹೊರಡುವವು, ಬೆಂಕಿಕಿಡಿಗಳು ಹಾರುವವು. 20 ಆಪುಹುಲ್ಲಿಗೆ ಬೆಂಕಿಯಿಟ್ಟು ಊದಿ ಕಾಯಿಸಿದ ಕೊಪ್ಪರಿಗೆಯಿಂದಲೋ ಎಂಬಂತೆ ಮೂಗಿನೊಳಗಿಂದ ಹೊಗೆ ಹಾಯುವುದು. 21 ಅದರ ಉಸಿರೇ ಇದ್ದಲನ್ನು ಹೊತ್ತಿಸುವುದು, ಜ್ವಾಲೆಯು ಬಾಯಿಂದೇಳುವುದು. 22 ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿದೆ, ಅದರ ಮುಂದೆ ಭಯವು ಕುಣಿದಾಡುವುದು. 23 ಅದರ ಮಾಂಸದ ಖಂಡಗಳು ಸಡಿಲವಿಲ್ಲದೆ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ. 24 ಅದರ ಹೃದಯವು ಬಂಡೆಯ ಹಾಗೂ ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ. 25 ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು. 26 ಒಬ್ಬನು ಕತ್ತಿಯೊಡನೆ ಮೇಲೆ ಬಿದ್ದರೂ ಅದಕ್ಕೇನೂ ಆಗಲಾರದು; ಬಾಣ ಭರ್ಜಿ ಈಟಿ ಇವುಗಳೂ ವ್ಯರ್ಥವೇ. 27 ಅದು ಕಬ್ಬಿಣವನ್ನು ಒಣಹುಲ್ಲನ್ನಾಗಿಯೂ ತಾಮ್ರವನ್ನು ಕೊಳೆತ ಮರವನ್ನಾಗಿಯೂ ಭಾವಿಸುವುದು. 28 ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಅದಕ್ಕೆ ಹೊಟ್ಟಿನಂತಿರುವವು. 29 ಅದು ದೊಣ್ಣೆಗಳನ್ನು ಹುಲ್ಲುಕಡ್ಡಿಯಾಗಿ ಎಣಿಸುವುದು; ಬಿರ್ರನೆ ಬರುವ ಈಟಿಗೆ ನಗುವುದು. 30 ಅದರ ಕೆಳಭಾಗವು ಚೂಪಾದ ಬೋಕಿಗಳಾಗಿದೆ, ಅದು ಕೆಸರಿನ ಮೇಲೆ ಹಲಗೆಯ ಹಾಗೆ ನೀಡಿಕೊಂಡಿರುವುದು. 31 ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವುದು; ಸಮುದ್ರವನ್ನು ಕಲಕಿದ ತೈಲಪಾತ್ರೆಯಂತೆ ಮಾಡುವುದು. 32 ಸಾಗರಕ್ಕೆ ನರೆ ಬಂತೋ ಎಂಬಂತೆ ತಾನು ಬಂದ ದಾರಿಯನ್ನು ಶುಭ್ರಗೊಳಿಸುವುದು. 33 ಇದಕ್ಕೆ ಸಮಾನವಾದದ್ದು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ, ಭಯವಿಲ್ಲದೆ ಇರುವುದಕ್ಕಾಗಿ ಸೃಷ್ಟಿಸಲ್ಪಟ್ಟಿದೆ. 34 ಇದು ಪ್ರತಿಯೊಂದು ದೊಡ್ಡ ಪ್ರಾಣಿಯನ್ನೂ ದಿಟ್ಟಿಸಿ ನೋಡುವುದು, ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವುದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.