Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 40 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇದಲ್ಲದೆ ಯೆಹೋವನು ಯೋಬನಿಗೆ,

2 “ತರ್ಕಮಾಡುವವನು ಸರ್ವಶಕ್ತನಾದ ದೇವರ ಸಂಗಡಲೂ ವ್ಯಾಜ್ಯವಾಡುವನೋ? ದೇವರೊಂದಿಗೆ ವಿವಾದಮಾಡುವವನು ಇದಕ್ಕೆಲ್ಲಾ ಉತ್ತರಕೊಡಲಿ” ಎಂದು ಹೇಳಿದನು.


ಯೋಬನು ಯೆಹೋವನಿಗೆ ನೀಡಿದ ಪ್ರತ್ಯುತ್ತರ

3 ಆಗ ಯೋಬನು ಯೆಹೋವನಿಗೆ ಉತ್ತರವಾಗಿ,

4 “ಅಯ್ಯೋ, ನಾನು ಅಲ್ಪನೇ ಸರಿ, ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ? ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವೆನು.

5 ಒಂದು ಸಾರಿ ಮಾತನಾಡಿದ್ದೇನೆ, ಪ್ರತಿವಾದ ಮಾಡಲಾರೆನು; ಎರಡು ಸಲ ಹೌದು, ಇನ್ನೇನೂ ನುಡಿಯಲಾರೆನು” ಎಂದು ಹೇಳಿದನು.

6 ಆ ಮೇಲೆ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,

7 “ಶೂರನಂತೆ ನಡುಕಟ್ಟಿಕೋ! ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.

8 ನನ್ನ ನೀತಿಯನ್ನು ಖಂಡಿಸಿಬಿಡುವಿಯಾ? ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವೆಯೋ?

9 ನಿನ್ನ ಕೈಯೂ, ದೇವರ ಕೈಯೂ ಸಮವೋ? ದೇವರ ಧ್ವನಿಯಂತೆ ಗುಡುಗಬಲ್ಲಿಯಾ?

10 ನಿನ್ನನ್ನು ನೀನೇ ಮಹಿಮೆ ಘನತೆಗಳಿಂದ ಭೂಷಿಸಿಕೊಂಡು ಪ್ರಭಾವ ಮಹತ್ವಗಳನ್ನು ಧರಿಸಿಕೋ.

11 ತುಂಬಿ ತುಳುಕುವ ನಿನ್ನ ಕೋಪವನ್ನು ಎರಚಿ, ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಅವನನ್ನು ತಗ್ಗಿಸು.

12 ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಕುಗ್ಗಿಸಿ, ದುಷ್ಟರನ್ನು ತಟ್ಟನೆ ಕೆಡವಿಬಿಡು.

13 ಅವರನ್ನು ಒಟ್ಟಿಗೆ ಧೂಳಿನಲ್ಲಿ ಅಡಗಿಸಿ, ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು.

14 ಹೀಗಾದರೆ ನಿನ್ನ ಬಲಭುಜವು ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ನಿನ್ನನ್ನು ಹೊಗಳುವೆನು.

15 ನಿನ್ನಂತೆ ನನ್ನ ಸೃಷ್ಟಿಯಾಗಿರುವ ನೀರಾನೆಯನ್ನು ನೋಡು; ಎತ್ತಿನ ಹಾಗೆ ಹುಲ್ಲನ್ನು ಮೇಯುವುದು.

16 ಇಗೋ, ಅದರ ಬಲವು ಸೊಂಟದಲ್ಲಿಯೂ, ಅದರ ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ.

17 ತನ್ನ ಬಾಲವನ್ನು ದೇವದಾರುವಿನ ಮರದಂತೆ ಬಾಗಿಸುವುದು; ಅದರ ತೊಡೆಯ ನರಗಳು ಹೆಣೆದುಕೊಂಡಿವೆ.

18 ಅದರ ಮೂಳೆಗಳು ತಾಮ್ರದ ನಳಗಳಂತೆಯೂ, ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ ಇರುವವು.

19 ಅದು ದೇವರ ಸೃಷ್ಟಿಗಳಲ್ಲಿ ಮುಖ್ಯವಾದದ್ದು. ಅದನ್ನು ನಿರ್ಮಿಸಿದವನು ಅದಕ್ಕೆ ಕೋರೆ ಹಲ್ಲೆಂಬ ಶಸ್ತ್ರವನ್ನೂ ಒದಗಿಸಿದ್ದಾನೆ.

20 ಗುಡ್ಡಗಳು ಅದಕ್ಕೆ ಮೇವನ್ನು ಕೊಡುವವು; ಕಾಡುಮೃಗಗಳೆಲ್ಲಾ ಅಲ್ಲಿ ಆಡುತ್ತಿರುವವು;

21 ತಾವರೆಯ ಗಿಡಗಳ ಕೆಳಗೂ, ಆಪಿನ ಮರೆಯಲ್ಲಿಯೂ, ಜವುಗು ಭೂಮಿಯಲ್ಲಿಯೂ ಮಲಗಿಕೊಳ್ಳುವುದು.

22 ತಾವರೆ ಗಿಡಗಳು ತಮ್ಮ ನೆರಳನ್ನು ಅದರ ಮೇಲೆ ಹರಡುವವು, ನದಿಯ ನೀರವಂಜಿಗಳು ಅದನ್ನು ಸುತ್ತಿಕೊಂಡಿರುವವು.

23 ಓಹೋ, ಹೊಳೆಯು ಉಕ್ಕಿ ಬಂದರೂ ಅದು ಹೆದರುವುದಿಲ್ಲ. ಪ್ರವಾಹವು ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.

24 ಯಾರಾದರೂ ಕಣ್ಣೆದುರಿಗೆ ಬಂದು ಅದನ್ನು ಹಿಡಿದಾನೇ? ಗಾಳದಿಂದ ಅದರ ಮೂಗನ್ನು ಚುಚ್ಚಬಲ್ಲನೇ?” ಎಂದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು