ಯೋಬ 39 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೋವನ ಸವಾಲಿನ ಮುಂದುವರಿಕೆ 1 ಬೆಟ್ಟದ ಮೇಕೆಗಳು ಈಯುವ ಸಮಯವನ್ನು ತಿಳಿದುಕೊಂಡಿದ್ದೀಯೋ? ಹರಿಣಗಳ ಹೆರಿಗೆಯನ್ನು ನೋಡಿಕೊಳ್ಳುವೆಯಾ? 2 ಅವು ಗರ್ಭವನ್ನು ಹೊರುವ ತಿಂಗಳುಗಳನ್ನು ಎಣಿಸುತ್ತೀಯೋ? ಅವು ಈಯುವ ಕಾಲವನ್ನು ಗೊತ್ತುಮಾಡುವೆಯೋ? 3 ಅವು ಮರಿಗಳನ್ನು ಹಾಕಿದೊಡನೆಯೇ ತಮ್ಮ ವೇದನೆಯನ್ನೂ ತೊರೆದುಬಿಡುವವು. 4 ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ ಬೆಳೆದು ಅಗಲಿದ ಮೇಲೆ ತಾಯಿಯ ಬಳಿಗೆ ಪುನಃ ಸೇರುವುದೇ ಇಲ್ಲ. 5 ಕಾಡುಕತ್ತೆಯನ್ನು ಸ್ವತಂತ್ರವಾಗಿರುವಂತೆ ಯಾರು ಕಳುಹಿಸಿಬಿಟ್ಟರು? ಅದರ ಕಟ್ಟನ್ನು ಬಿಚ್ಚಿದವರು ಯಾರು? 6 ನಾನು ಅಡವಿಯನ್ನು ಅದಕ್ಕೆ ಮನೆಯನ್ನಾಗಿಯೂ, ಮರುಭೂಮಿಯನ್ನು ಅದರ ನಿವಾಸವನ್ನಾಗಿಯೂ ಮಾಡಿದ್ದೇನಷ್ಟೆ. 7 ಅದು ಊರುಗದ್ದಲವನ್ನು ಧಿಕ್ಕರಿಸಿ, ಹೊಡೆಯುವವನ ಕೂಗಾಟವನ್ನು ಕೇಳಿದ್ದೇ ಇಲ್ಲ. 8 ಅದರ ಕಾವಲು ವಿಶಾಲವಾದ ಬೆಟ್ಟಗಳೇ. ಹಸಿರು ಎಲ್ಲಿದ್ದರೂ ಅದನ್ನು ಹುಡುಕುತ್ತಲೇ ಇರುವುದು. 9 ಕಾಡುಕೋಣವು ನಿನ್ನನ್ನು ಸೇವಿಸಲು ಒಪ್ಪಿ, ನಿನ್ನ ಗೋದಲಿಯ ಹತ್ತಿರ ತಂಗುವುದೋ? 10 ನೇಗಿಲ ಸಾಲಿಗೆ ಕಾಡುಕೋಣವನ್ನು ಹಗ್ಗದಿಂದ ಕಟ್ಟುವೆಯಾ? ಅದು ತಗ್ಗಿನ ಭೂಮಿಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೋ? 11 ಬಲ ಹೆಚ್ಚಾಗಿರುವುದರಿಂದ ಅದರಲ್ಲಿ ನಂಬಿಕೆಯಿಟ್ಟು, ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವೆಯೋ? 12 ಅದು ನಿನ್ನ ಕಣದಲ್ಲಿ ಕಾಳನ್ನು ಕೂಡಿಸಿ, ನಿನ್ನ ಬೆಳೆಯನ್ನು ಹೊತ್ತುಕೊಂಡು ಬರುವುದೆಂದು ಭರವಸವಿಡುವೆಯಾ? 13 ಉಷ್ಟ್ರಪಕ್ಷಿಯ ಪಕ್ಷವು ಸಂತೋಷದಿಂದ ಬಡಿದಾಡುವುದು, ಆದರೆ ಅದರ ರೆಕ್ಕೆಗರಿಗಳಿಗೆ ಪ್ರೀತಿಭಾವವುಂಟೋ? 14 ಅದು ತನ್ನ ಮೊಟ್ಟೆಗಳನ್ನು ಭೂಮಿಯಲ್ಲಿಟ್ಟು, ಧೂಳಿನಿಂದಲೇ ಅವುಗಳಿಗೆ ಕಾವು ಕೊಡಿಸುವುದಲ್ಲವೇ. 15 ಯಾರಾದರು ಕಾಲಿನಿಂದ ತುಳಿದಾರು, ಕಾಡುಮೃಗ ತುಳಿದೀತು ಎಂದು ಯೋಚಿಸುವುದೇ ಇಲ್ಲ. 16 ತನ್ನ ಮರಿಗಳನ್ನು ತನ್ನವುಗಳೆಂದೆಣಿಸದೆ ಬಾಧೆಗೊಳಪಡಿಸುವುದು, ತನ್ನ ಹೆರಿಗೆ ನಿಷ್ಫಲವಾದರೂ ಅದಕ್ಕೆ ಏನೂ ಚಿಂತೆ ಇಲ್ಲ. 17 ದೇವರು ಅದಕ್ಕೆ ಜ್ಞಾನವನ್ನು ಮರೆಮಾಡಿ, ವಿವೇಕವನ್ನು ದಯಪಾಲಿಸದೆ ಇದ್ದಾನಷ್ಟೆ! 18 ಅದು ರೆಕ್ಕೆಬಡಿಯುತ್ತಾ ನೀಳವಾಗಿ ಓಡುವ ಸಮಯದಲ್ಲಾದರೋ, ಕುದುರೆಯನ್ನೂ, ಸವಾರನನ್ನೂ ಹೀಯಾಳಿಸುವುದು. 19 ನೀನು ಕುದುರೆಗೆ ಶಕ್ತಿಯನ್ನು ಕೊಟ್ಟು, ಅದರ ಕೊರಳಿಗೆ ಗುಡುಗನ್ನು ಕಟ್ಟಿದವನು ನಿನಲ್ಲವೇ? 20 ಅದು ಮಿಡತೆಯ ಹಾಗೆ ಕುಪ್ಪಳಿಸಿ ಹಾರುವಂತೆ ಮಾಡಿದೆಯಾ? ಅದರ ಕೆನೆತನದ ಪ್ರತಾಪವು ಭಯಂಕರವಾಗಿದೆ. 21 ಅದು ತಗ್ಗಿನ ನೆಲವನ್ನು ಕೆರೆದು ತನ್ನ ಬಲಕ್ಕೆ ಹಿಗ್ಗಿ, ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೋಗುವುದು. 22 ಅದು ಕಳವಳಗೊಳ್ಳದೆ ಖಡ್ಗಕ್ಕೆ ಹಿಂದೆಗೆಯದೆ ಭಯವನ್ನು ತಾತ್ಸಾರ ಮಾಡುವುದು. 23 ಬತ್ತಳಿಕೆಯೂ, ಥಳಥಳಿಸುವ ಭರ್ಜಿಯೂ, ಈಟಿಯೂ ಅದರ ಮೇಲೆ ಜಣಜಣಿಸುವವು. 24 ಅದು ತುತ್ತೂರಿಯ ಶಬ್ದವನ್ನು ಕೇಳಿದರೂ, ನಿಲ್ಲದೆ ಉಗ್ರತೆಯಿಂದ ಕಂಪಿಸುತ್ತಾ ನೆಲವನ್ನು ನುಂಗಿಬಿಡುವುದೋ ಎಂಬಂತೆ ಓಡುವುದು. 25 ತುತ್ತೂರಿ ಊದಿದಾಗೆಲ್ಲಾ ಆಹಾ! ಎಂದುಕೊಂಡು ಕಾಳಗ, ಆರ್ಭಟ, ಸೇನಾಪತಿಗಳ ಗರ್ಜನೆ, ಇವುಗಳನ್ನು ದೂರದಲ್ಲಿದ್ದರೂ ಮೂಸಿನೋಡಿ ತಿಳಿಯುವುದು. 26 ಗಿಡಗವು ತನ್ನ ರೆಕ್ಕೆಗಳನ್ನು ಹರಡಿ, ದಕ್ಷಿಣದಿಕ್ಕಿಗೆ ಹಾರುವುದು ನಿನ್ನ ವಿವೇಕದಿಂದಲೋ? 27 ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ ಗೂಡುಮಾಡುವುದು ನಿನ್ನ ಅಪ್ಪಣೆಯಿಂದಲೋ? 28 ಅದಕ್ಕೆ ಬಂಡೆಯೇ ನಿವಾಸವು; ಅದು ಶಿಲಾಶಿಖರದಲ್ಲಿಯೂ, ದುರ್ಗದಲ್ಲಿಯೂ ತಂಗುವುದು. 29 ಅಲ್ಲಿಂದಲೇ ಬೇಟೆಯನ್ನು ನೋಡುತ್ತಾ; ದೂರದಲ್ಲಿದ್ದರೂ ಅದನ್ನು ಕಂಡುಹಿಡಿಯುವುದು. 30 ಹೆಣಬಿದ್ದಲ್ಲಿ ರಣಹದ್ದೂ ಅದರ ಮರಿಗಳೂ ಹೀರುತ್ತವೆ ರಕ್ತವನ್ನು; |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.