Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 37 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಎಲೀಹುವಿನ ಅಂತಿಮ ಸಂಭಾಷಣೆಯ ಮುಂದುವರಿಕೆ

1 “ಇದಲ್ಲದೆ ನನ್ನ ಎದೆಯು ಅದಕ್ಕೆ ತತ್ತರಗೊಂಡು, ಮಿಡಿಯುತ್ತ ತನ್ನ ಸ್ಥಳದಿಂದ ಕದಲುವುದು.

2 ಗುಡುಗುಟ್ಟುವ ದೇವರ ಧ್ವನಿಗೆ ಕಿವಿಗೊಡಿರಿ, ಆತನ ಬಾಯಿಂದ ಹೊರಡುವ ಧ್ವನಿಯನ್ನು ಕೇಳಿರಿ!

3 ಆತನು ಅದನ್ನು ಆಕಾಶಮಂಡಲದಲ್ಲೆಲ್ಲಾ ಹಬ್ಬಿಸಿ, ತನ್ನ ಸಿಡಿಲನ್ನು ಭೂಮಿಯ ಅಂಚುಗಳವರೆಗೂ ಬಿಡುವನು.

4 ಸಿಡಿಲಿನ ತರುವಾಯ ಗರ್ಜನೆಯುಂಟಾಗುವುದು, ಆತನು ತನ್ನ ಮಹಿಮೆಯ ಶಬ್ದದಿಂದ ಗುಡುಗುವನು. ಆ ಶಬ್ದವು ಕೇಳಿಸಿದ ಮೇಲೆಯೂ ಆತನು ಸಿಡಿಲುಗಳನ್ನು ತಡೆಯುವುದಿಲ್ಲ.

5 ದೇವರು ತನ್ನ ಧ್ವನಿಯಿಂದ ಅದ್ಭುತವಾಗಿ ಗುಡುಗುವನು; ನಾವು ಗ್ರಹಿಸಲಾಗದ ಮಹಾಕಾರ್ಯಗಳನ್ನು ನಡೆಸುವನು.

6 ಆತನು ಹಿಮಕ್ಕೆ, ‘ಭೂಮಿಯ ಮೇಲೆ ಬೀಳು’ ಎಂದು, ತನ್ನ ಶಕ್ತಿಯ ದೊಡ್ಡ ಮಳೆಗೆ, ‘ರಭಸದಿಂದ ಸುರಿ’ ಎಂದು ಅಪ್ಪಣೆಮಾಡುವನು.

7 ಆತನು ತನ್ನ ಕೆಲಸವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು, ಪ್ರತಿಯೊಬ್ಬನ ಕೈಗಳನ್ನು ಬಲಪಡಿಸುತ್ತಾನೆ.

8 ಆಗ ಮೃಗಗಳು ಗುಹೆಗಳನ್ನು ಸೇರಿ, ತಮ್ಮ ಗುಹೆಗಳಲ್ಲಿ ವಾಸಿಸುವವು.

9 ಆತನ ಭಂಡಾರದ ದಕ್ಷಿಣದಿಕ್ಕಿನಿಂದ ಬಿರುಗಾಳಿಯೂ, ಉತ್ತರದಿಕ್ಕಿನಿಂದ ಚಳಿಗಾಳಿಯೂ ಬರುವವು.

10 ದೇವರ ಶ್ವಾಸದಿಂದ ನೀರು ಮಂಜುಗಡ್ಡೆಯಾಗುವುದು, ವಿಶಾಲವಾದ ನೀರು ಗಟ್ಟಿಯಾಗುವುದು.

11 ಇದಲ್ಲದೆ ಮೋಡಗಳ ಮೇಲೆ ಮಂಜಿನ ಭಾರವನ್ನು ಹೇರಿ, ತನ್ನ ಮಿಂಚಿನ ಮೇಘಮಂಡಲವನ್ನು ಹರಡುವನು.

12 ಸಿಡಿಲುಗಳು ಭೂಮಂಡಲದಲ್ಲೆಲ್ಲಾ ತಾನು ವಿಧಿಸುವುದನ್ನೇ ಮಾಡಲಿ ಎಂದು, ಅವುಗಳನ್ನು ನಡಿಸಿ ಸುತ್ತಮುತ್ತಲು ತಿರುಗಿಸುವನು.

13 ಆತನು ದಂಡನೆಗಾಗಲಿ, ತನ್ನ ಭೂಮಿಯ ಹಿತಕ್ಕಾಗಲಿ, ಕೃಪೆತೋರುವುದಕ್ಕಾಗಲಿ ಹಾಗೂ ಒಡಂಬಡಿಕೆಯ ನಂಬಿಗಸ್ತಿಕೆಯಿಂದ ಆ ಮೇಘಗಳನ್ನು ಬರಮಾಡುವನು.

14 ಯೋಬನೇ, ಇದನ್ನು ಕೇಳು! ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿಸು.

15 ದೇವರು ಇವುಗಳನ್ನು ನಿಯಂತ್ರಿಸಿ, ತನ್ನ ಮೇಘದ ಸಿಡಿಲು ಹೊಳೆಯ ಮಾಡುವ ರೀತಿ ನಿನಗೆ ಗೊತ್ತಿದೆಯೋ?

16 ಮೋಡಗಳ ತೂಗಾಟವನ್ನೂ, ಜ್ಞಾನಪೂರ್ಣನ ಅದ್ಭುತಕಾರ್ಯಗಳನ್ನೂ ತಿಳಿದುಕೊಂಡಿದ್ದಿಯಾ?

17 ಭೂಮಿಯು ದಕ್ಷಿಣ ಗಾಳಿಯ ದೆಸೆಯಿಂದ ಸ್ತಬ್ಧವಾಗಿರುವ ಸಮಯದಲ್ಲಿ, ಉಡುಪಿನ ಬಿಸಿಯನ್ನು ಅನುಭವಿಸುವ ಅರಿವು ನಿನಗಿರುತ್ತದೆಯೇ?

18 ತಗಡು ಬಡಿದ ಎರಕದ ದರ್ಪಣದಷ್ಟು ಗಟ್ಟಿಯಾಗಿರುವ ಆಕಾಶಮಂಡಲವನ್ನು ಆತನ ಹಾಗೆ ನಿರ್ಮಿಸಬಹುದೇ?

19 ಆತನಿಗೆ ಹೇಳತಕ್ಕದ್ದನ್ನು ನಮಗೆ ನೀನೇ ತಿಳಿಸು, ಅಂಧಕಾರವು ನಮ್ಮನ್ನು ಕವಿದಿರುವುದರಿಂದ ಏನೂ ಮಾತನಾಡಲು ಸಾಧ್ಯವಿಲ್ಲ.

20 ನಾನು ಮಾತನಾಡಬೇಕೆಂದು ಆತನಿಗೆ ಹೇಳಿ ಕಳುಹಿಸಲು ಸಾಧ್ಯವೇ? ಹಾಗೆ ಮಾಡುವವನು ತನ್ನನ್ನೇ ನಿರ್ಮೂಲ ಮಾಡಿಕೊಂಡಂತೆ.

21 ಇಗೋ, ಗಾಳಿಯು ಬೀಸಿ ಗಗನವನ್ನು ಶುಭ್ರಪಡಿಸಲು, ಅಲ್ಲಿ ಪ್ರಜ್ವಲಿಸುವ ಪ್ರಕಾಶವನ್ನು ಯಾರೂ ದಿಟ್ಟಿಸಿ ನೋಡಲಾರರು.

22 ಉತ್ತರದಿಕ್ಕಿನಿಂದ ಹೊನ್ನಿನ ಹೊಳಪು ಹೊರಡುವುದು, ದೇವರು ಭಯಂಕರ ತೇಜಸ್ಸನ್ನು ಧರಿಸಿಕೊಂಡಿದ್ದಾನೆ.

23 ಇಂಥ ಸರ್ವಶಕ್ತನಾದ ದೇವರನ್ನು ನಾವು ಕಂಡುಹಿಡಿಯಲಾರೆವು; ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ, ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವುದಿಲ್ಲ.

24 ಆದಕಾರಣ ಮನುಷ್ಯರು ಆತನಿಗೆ ಭಯಪಡುವರು, ಜ್ಞಾನಿಗಳೆಂದು ಎಣಿಸಿಕೊಳ್ಳುವವರನ್ನು ಆತನು ಲಕ್ಷಿಸುವುದೇ ಇಲ್ಲ.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು