ಯೋಬ 36 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಎಲೀಹುವಿನ ಅಂತಿಮ ಸಂಭಾಷಣೆ 1 ಆಮೇಲೆ ಎಲೀಹು ಮತ್ತೆ ಹೀಗೆಂದನು, 2 “ಸ್ವಲ್ಪ ತಾಳು, ನಾನು ತಿಳಿಸುತ್ತೇನೆ, ದೇವರ ಪರವಾಗಿ ಹೇಳತಕ್ಕ ಮಾತುಗಳು ಇನ್ನೂ ಕೆಲವು ಉಂಟು. 3 ದೂರದಿಂದ ಸಂಪಾದಿಸಿದ ನನ್ನ ತಿಳಿವಳಿಕೆಯ ಪ್ರಕಾರ, ನನ್ನ ಸೃಷ್ಟಿಕರ್ತನನ್ನು ಧರ್ಮಸ್ವರೂಪನೆಂದು ಹೊಗಳುವೆನು. 4 ನನ್ನ ಮಾತುಗಳು ಸುಳ್ಳಲ್ಲವೆಂಬುದು ನಿಶ್ಚಯ, ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ. 5 ಇಗೋ, ದೇವರು ಮಹಾಶಕ್ತನಾಗಿದ್ದರೂ ಯಾರನ್ನೂ ತಿರಸ್ಕರಿಸುವುದಿಲ್ಲ, ಆತನ ಬುದ್ಧಿ ಸಾಮರ್ಥ್ಯವು ಅಪಾರವಾಗಿದೆ. 6 ಆತನು ದುಷ್ಟರ ಪ್ರಾಣವನ್ನು ಉಳಿಸುವುದಿಲ್ಲ, ಗತಿಹೀನರ ನ್ಯಾಯವನ್ನು ಸ್ಥಾಪಿಸುವನು. 7 ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸದೆ, ಅರಸರೊಂದಿಗೆ ಸಿಂಹಾಸನದ ಮೇಲೆ ಶಾಶ್ವತವಾಗಿ ಕುಳಿತುಕೊಳ್ಳುವ, ಉನ್ನತಪದವಿಗೆ ಅವರನ್ನು ತರುವನು. 8 ಅವರು ಒಂದು ವೇಳೆ ಬಂಧನಕ್ಕೆ ಸಿಕ್ಕಿಕೊಂಡು, ಬಾಧೆಗಳೆಂಬ ಹಗ್ಗಗಳಿಂದ ಕಟ್ಟಲ್ಪಟ್ಟಿದ್ದರೆ, 9 ಆತನು ಅವರ ದುಷ್ಕೃತ್ಯವನ್ನೂ, ಸೊಕ್ಕಿನ ದ್ರೋಹಗಳನ್ನೂ ಅವರಿಗೆ ತೋರಿಸುವನು. 10 ಇದಲ್ಲದೆ ಶಿಕ್ಷಣವನ್ನು ಕೇಳುವಂತೆ ಅವರ ಕಿವಿಗಳನ್ನು ತೆರೆದು, ಅಧರ್ಮವನ್ನು ಬಿಟ್ಟುಬಿಡಬೇಕೆಂದು ಅವರಿಗೆ ಆಜ್ಞಾಪಿಸುವನು. 11 ಅವರು ಅದನ್ನು ಕೇಳಿ ಆತನನ್ನು ಸೇವಿಸಿದರೆ, ತಮ್ಮ ದಿನಗಳನ್ನು ಸುಖದಲ್ಲಿಯೂ, ವರ್ಷಗಳನ್ನು ಸಂತೋಷದಲ್ಲಿಯೂ ಕಳೆಯುವರು. 12 ಕೇಳದಿದ್ದರೆ ದೈವಾಸ್ತ್ರದಿಂದ ಅಳಿದುಹೋಗುವರು, ಜ್ಞಾನಹೀನರಾಗಿಯೇ ಪ್ರಾಣಬಿಡುವರು. 13 ದೇವರನ್ನು ಹೃದಯದಲ್ಲಿ ನಂಬದಿರುವವರು ಸಿಟ್ಟುಗೊಂಡಿರುವರು, ಆತನು ಅವರನ್ನು ಬಂಧಿಸುವಾಗಲೂ ಆತನಿಗೆ ಮೊರೆಯಿಡುವುದಿಲ್ಲ. 14 ಯೌವನದಲ್ಲೇ ಸಾಯುವರು. ಅವರ ಜೀವವು ಪುರಷಗಾಮಿಗಳ ಜೀವದಂತೆ ಕ್ಷಯಿಸುವುದು. 15 ಬಾಧೆಪಡುವವರನ್ನು ಅವರ ಬಾಧೆಗಳ ಮೂಲಕವೇ ರಕ್ಷಿಸುವನು, ಅವರು ಅನುಭವಿಸುವ ಹಿಂಸೆಯಿಂದಲೇ ಅವರ ಕಿವಿಯನ್ನು ತೆರೆಯುವನು. 16 ಇದೇ ಮೇರೆಗೆ ನಿನ್ನನ್ನೂ ಕಷ್ಟದೊಳಗಿಂದ ತಪ್ಪಿಸಿ, ಇಕ್ಕಟ್ಟಿಲ್ಲದ ವಿಶಾಲ ಸ್ಥಳಕ್ಕೆ ಬರಮಾಡಬೇಕೆಂದೂ, ನಿನ್ನ ಮೇಜಿನ ಆಹಾರಗಳು ತುಪ್ಪದಿಂದ ತುಂಬಿರಬೇಕೆಂಬುದು ಆತನ ಉದ್ದೇಶವಾಗಿದೆ. 17 ನೀನಾದರೋ ದುಷ್ಟನಿರ್ಣಯಗಳಿಂದ ತುಂಬಿದವನಾಗಿ, ನ್ಯಾಯವಿಚಾರಣೆಗೂ, ನ್ಯಾಯತೀರ್ಪಿಗೂ ಒಳಗಾಗಿದ್ದಿ. 18 ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕದಂತೆ ನೋಡಿಕೋ! ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ! 19 ಕಷ್ಟಾನುಭವವಿಲ್ಲದೆ ನಿನ್ನ ಐಶ್ವರ್ಯವೂ, ಧನಸಾಮರ್ಥ್ಯವೂ ನಿನಗೆ ಈಡಾಗುವುದೇ? 20 ಜನಾಂಗಗಳು ತಟ್ಟನೆ ನಿರ್ಮೂಲವಾಗುವಾಗ ಅವರ ವಿರುದ್ಧ ಪಾಪಮಾಡದಂತೆ, ರಾತ್ರಿಯನ್ನು ಬಯಸಬೇಡ. 21 ಎಚ್ಚರಿಕೆಯಾಗಿರು, ಅಧರ್ಮದ ಕಡೆಗೆ ಕಾಲಿಡಬೇಡ. ಕಷ್ಟವನ್ನು ಅನುಭವಿಸಲೊಲ್ಲದೆ ಅಧರ್ಮವನ್ನೇ ಆರಿಸಿಕೊಂಡಿದ್ದಿ. 22 ಇಗೋ, ದೇವರು ತನ್ನ ಶಕ್ತಿಯಿಂದ ಉನ್ನತ ಕಾರ್ಯಗಳನ್ನು ನಡೆಸುವನು, ಆತನಂತಹ ಉಪದೇಶಕನು ಯಾರು? 23 ಆತನ ಮಾರ್ಗವನ್ನು ಆತನಿಗೆ ಯಾರು ನೇಮಿಸಿದರು? ‘ನೀನು ಅನ್ಯಾಯವನ್ನು ನಡೆಸಿದಿ’ ಎಂದು ಯಾರು ಹೇಳಬಲ್ಲರು? 24 ಮನುಷ್ಯರು ಕೀರ್ತಿಸುವ, ಆತನ ಕೆಲಸವನ್ನು ಹೊಗಳಲು ಮರೆಯಬೇಡ. 25 ಎಲ್ಲಾ ಮನುಷ್ಯರೂ ಅದನ್ನು ಕಂಡಿದ್ದಾರೆ; ಆದರೆ ನರನು ದೂರದಿಂದ ನೋಡುತ್ತಾನಷ್ಟೆ. 26 ಆಹಾ, ದೇವರು ಮಹೋನ್ನತನಾಗಿದ್ದಾನೆ, ನಾವು ಆತನನ್ನು ಅರಿಯಲಾರೆವು; ಆತನ ವರ್ಷಗಳು ಅಸಂಖ್ಯಾತವಾಗಿವೆ. 27 ನೀರಿನ ಹನಿಗಳನ್ನು ಎಳೆದುಕೊಳ್ಳುವನು, ಅವು ತಿಳಿಮಳೆಯಾಗಿ ಆತನ ಮಂಜಿನಿಂದ ಉದುರುವವು. 28 ಮೋಡಗಳು ಅದನ್ನು ಸುರಿಸಿ ಸಮೃದ್ಧಿಯಾಗಿ ಜನರ ಮೇಲೆ ಚಿಮುಕಿಸುವುದು. 29 ಆಹಾ, ಮೇಘಗಳ ಹರಡುವಿಕೆಯನ್ನೂ, ಆತನ ಗುಡಾರದಲ್ಲಿನ ಗರ್ಜನೆಗಳನ್ನೂ ಯಾರು ಗ್ರಹಿಸಬಲ್ಲರು? 30 ಇಗೋ, ತನ್ನ ಪ್ರಕಾಶವನ್ನು ಸುತ್ತಲು ಹರಡಿಕೊಂಡು, ಅದನ್ನು ಜಲಸಮೂಹಗಳಿಂದ ಮುಚ್ಚಿಕೊಳ್ಳುವನು. 31 ಮೋಡಗಳ ಮುಖಾಂತರವಾಗಿಯೇ ಜನಾಂಗಗಳಿಗೆ ನ್ಯಾಯವನ್ನು ವಿಧಿಸಿ, ಆಹಾರವನ್ನು ಧಾರಾಳವಾಗಿ ದಯಪಾಲಿಸುವನಷ್ಟೆ. 32 ಕೈತುಂಬಾ ಸಿಡಿಲನ್ನು ಹಿಡಿದು ನೀನು ವೈರಿಯನ್ನು ಹೊಡೆದು ಗುರಿಮುಟ್ಟುಲು ಬಿಡುವನು. 33 ಅದರ ಆರ್ಭಟವು ಆತನ ವಿಷಯವಾಗಿ ಪ್ರಕಟಿಸುವುದು, ದನಕರುಗಳೂ ಸಹ ಆತನ ಆಗಮನವನ್ನು ತಿಳಿಯುವವು.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.