Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 34 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಎಲೀಹುವಿನ ಎರಡನೆಯ ಸಂಭಾಷಣೆ

1 ಆಗ ಎಲೀಹು ಮತ್ತೆ ಇಂತೆಂದನು,

2 “ವಿವೇಕಿಗಳೇ, ನನ್ನ ಮಾತುಗಳನ್ನು ಕೇಳಿರಿ, ಜ್ಞಾನಿಗಳೇ, ನನಗೆ ಕಿವಿಗೊಡಿರಿ!

3 ನಾಲಿಗೆಯು ಆಹಾರವನ್ನು ರುಚಿನೋಡುವಂತೆ, ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.

4 ನ್ಯಾಯವನ್ನೇ ಆರಿಸಿಕೊಳ್ಳೋಣ, ಒಳ್ಳೆಯದು ಇಂಥದೆಂದು ನಮ್ಮನಮ್ಮೊಳಗೆ ನಿಶ್ಚಯಿಸಿಕೊಳ್ಳೋಣ.

5 ಯೋಬನು, ‘ನಾನು ನೀತಿವಂತನು, ದೇವರು ನನ್ನ ನ್ಯಾಯವನ್ನು ತಪ್ಪಿಸಿದ್ದಾನೆ.

6 ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರ ಎಂದು ಎನ್ನಿಸಿಕೊಂಡಿದ್ದೇನೆ. ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ’ ಎಂದು ಹೇಳಿಕೊಂಡಿದ್ದಾನೆ.

7 ಯೋಬನಿಗೆ ಸಮಾನನು ಯಾರು? ದೇವದೂಷಣೆಯನ್ನು ನೀರಿನಂತೆ ಕುಡಿಯುತ್ತಾನಲ್ಲಾ.

8 ಅವನು ಅಧರ್ಮಿಗಳ ಜೊತೆಯಲ್ಲಿ ಸಂಚರಿಸುತ್ತಾನೆ, ಕೆಟ್ಟವರ ಸಂಗಡ ನಡೆದಾಡುತ್ತಾನೆ.

9 ‘ಒಬ್ಬನು ದೇವರ ಅನ್ಯೋನ್ಯತೆಯಲ್ಲಿ ಸಂತೋಷಪಟ್ಟರೂ, ಅವನಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳಿದ್ದಾನಷ್ಟೆ.

10 ಹೀಗಿರಲು, ಬುದ್ಧಿವಂತರೇ, ನನ್ನ ಮಾತುಗಳನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾನೆಂಬ ಯೋಚನೆಯೂ, ಸರ್ವಶಕ್ತನಾದ ದೇವರು ಅನ್ಯಾಯವನ್ನು ನಡೆಸುತ್ತಾನೆಂಬ ಭಾವನೆಯೂ ದೂರವಾಗಿರಲಿ!

11 ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು, ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸುವಂತೆ ಮಾಡುವನು.

12 ಹೌದು, ದೇವರು ಕೆಟ್ಟದ್ದನ್ನು ನಡೆಸುವುದೇ ಇಲ್ಲ, ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವುದೇ ಇಲ್ಲ.

13 ಭೂಲೋಕವನ್ನು ಆತನ ವಶಕ್ಕೆ ಕೊಟ್ಟವನು ಯಾರು? ಯಾರು ಭೂಮಂಡಲವನ್ನೆಲ್ಲಾ ಕ್ರಮಪಡಿಸಿದನು?

14 ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು ತನ್ನ ಆತ್ಮವನ್ನೂ, ಶ್ವಾಸವನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಾದರೆ,

15 ಸಮಸ್ತ ಜನರು ಒಟ್ಟಾಗಿ ಅಳಿದುಹೋಗುವರು, ಪುನಃ ಮನುಷ್ಯರು ಧೂಳೇ ಆಗುವರು.

16 ನಿನಗೆ ವಿವೇಕವಿದ್ದರೆ ಇದನ್ನು ಕೇಳು, ನನ್ನ ಮಾತುಗಳ ಧ್ವನಿಗೆ ಕಿವಿಗೊಡು!

17 ನ್ಯಾಯವನ್ನು ದ್ವೇಷಿಸುವವನು ಆಳ್ವಿಕೆ ಮಾಡಾನೇ? ಧರ್ಮಸ್ವರೂಪನೂ, ಮಹಾಶಕ್ತನೂ ಆಗಿರುವಾತನನ್ನು ಕೆಟ್ಟವನೆಂದು ನಿರ್ಣಯಿಸುವೆಯಾ?

18 ಆತನು ರಾಜನಿಗೆ, ‘ನೀನು ಮೂರ್ಖ’ ಪ್ರಭುಗಳಿಗೆ, ‘ನೀವು ಕೆಟ್ಟವರು’ ಎಂದು ಹೇಳಬಲ್ಲನೇ?

19 ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ, ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ.

20 ಕ್ಷಣ ಮಾತ್ರದೊಳಗೆ ಸಾಯುವರು; ಮಧ್ಯರಾತ್ರಿಯಲ್ಲೇ ಪ್ರಜೆಗಳು ಕದಲಿ ಇಲ್ಲವಾಗುವರು, ಮನುಷ್ಯನ ಕೈ ಸೋಕದೆ ಬಲಿಷ್ಠರೂ ಅಪಹರಿಸಲ್ಪಡುವರು.

21 ಆತನು ಮನುಷ್ಯನ ಮಾರ್ಗಗಳ ಮೇಲೆ ಕಣ್ಣಿಟ್ಟು, ಅವನ ಹೆಜ್ಜೆಗಳನ್ನೆಲ್ಲಾ ನೋಡುವನು.

22 ಅಧರ್ಮಿಗಳು ಅಡಗಿಕೊಳ್ಳುವುದಕ್ಕೆ, ಅನುಕೂಲವಾದ ಯಾವ ಕತ್ತಲೂ, ಯಾವ ಗಾಢಾಂಧಕಾರವೂ ಇರುವುದಿಲ್ಲ.

23 ದೇವರು ಮನುಷ್ಯನ ಮೇಲೆ ಹೆಚ್ಚು ಗಮನವಿಡುವುದೂ, ಮನುಷ್ಯನೂ ಆತನ ನ್ಯಾಯವಿಚಾರಣೆಗೆ ಬರುವುದೂ, ಅವಶ್ಯವಿಲ್ಲ.

24 ಯಾವ ವಿಮರ್ಶಕರೂ ಇಲ್ಲದೆ ತೀರ್ಮಾನಿಸಿ ಬಲಿಷ್ಠರನ್ನು ಮುರಿದು, ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸುವನು.

25 ಈ ಪ್ರಕಾರ ಆತನು ಅವರ ಕಾರ್ಯಗಳನ್ನು ಲಕ್ಷಿಸಿ, ರಾತ್ರಿಯಲ್ಲಿ ಅವರನ್ನು ಕೆಡವಿ ನಾಶಕ್ಕೆ ಗುರಿಮಾಡುವನು.

26 ಅಪರಾಧಿಗಳಿಗೋ ಎಂಬಂತೆ ಬಹಿರಂಗವಾಗಿ ಅವರಿಗೆ ಪೆಟ್ಟುಹಾಕುವನು.

27 ಅವರು ಆತನನ್ನು ಹಿಂಬಾಲಿಸದೆ, ತಿರುಗಿಕೊಂಡು ಆತನ ಮಾರ್ಗಗಳನ್ನೆಲ್ಲಾ ಅಲಕ್ಷ್ಯಮಾಡಿದ್ದರಷ್ಟೆ.

28 ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು, ಆತನು ದಿಕ್ಕಿಲ್ಲದವರ ಮೊರೆಯನ್ನು ಆಲಿಸಿದನು.

29 ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪುಹೊರಿಸುವವರು ಯಾರು? ವಿಮುಖನಾದರೆ ಆತನ ದರ್ಶನ ಮಾಡುವವರಾರು? ಆತನು ಜನಾಂಗಕ್ಕಾಗಲಿ, ಮನುಷ್ಯನಿಗಾಗಲಿ ಮಾಡುವುದೆಲ್ಲಾ ಹೀಗೆಯೇ.

30 ಭ್ರಷ್ಟನು ಆಳಬಾರದು, ಯಾರೂ ಜನರಿಗೆ ಉರುಲಾಗಕೂಡದು ಎಂಬುದೇ ಆತನ ಉದ್ದೇಶ.

31 ಮನುಷ್ಯನು ದೇವರನ್ನು ಕುರಿತು, ‘ನಾನು ಕೆಟ್ಟದ್ದನ್ನು ಮಾಡದಿದ್ದರೂ ದಂಡನೆಯನ್ನು ಸಹಿಸಿಕೊಂಡಿದ್ದೇನೆ,

32 ನಾನು ಕಾಣದಿರುವುದನ್ನು ನೀನೇ ಸೂಚಿಸು; ನಾನು ಒಂದು ವೇಳೆ ಅನ್ಯಾಯವನ್ನು ಮಾಡಿದ್ದರೂ ಇನ್ನು ಮೇಲೆ ಮಾಡುವುದಿಲ್ಲ’ ಎಂದು ಹೇಳುವುದಕ್ಕಾದೀತೇ?

33 ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು.

34 ಬುದ್ಧಿವಂತರೂ, ನನ್ನ ಕಡೆಗೆ ಕಿವಿಗೊಡುವ ಪ್ರತಿಯೊಬ್ಬ ಜ್ಞಾನಿಯೂ ನಿನ್ನ ವಿಷಯವಾಗಿ,

35 ‘ಯೋಬನು ತಿಳಿವಳಿಕೆಯಿಲ್ಲದೆ ನುಡಿಯುತ್ತಾನೆ, ಅವನ ಮಾತುಗಳಲ್ಲಿ ಬುದ್ಧಿಯಿಲ್ಲ.’

36 ಯೋಬನ ಪರಿಶೋಧನೆಯು ನಿರಂತರವಾಗಿದ್ದರೆ ಸಂತೋಷ! ದುಷ್ಟರ ಹಾಗೆ ಉತ್ತರಕೊಡುತ್ತಾನಲ್ಲವೆ.

37 ಅವನು ಅಪರಾಧವನ್ನಲ್ಲದೆ ದೈವದ್ರೋಹವನ್ನೂ ಮಾಡಿದ್ದಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆಹೊಡೆದು, ದೇವರಿಗೆ ವಿರುದ್ಧವಾಗಿ ಅಧಿಕ ಮಾತುಗಳನ್ನು ಆಡುತ್ತಾನೆ” ಎಂದು ನನಗೆ ಹೇಳುವರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು