Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 30 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೋಬನು ತನ್ನ ಸಂಕಟದ ಬಗ್ಗೆ ಮಾತನಾಡಿದ್ದು

1 ಈಗಲಾದರೋ ನನಗಿಂತ ಚಿಕ್ಕವಯಸ್ಸಿನವರು ನನ್ನನ್ನು ಪರಿಹಾಸ್ಯಮಾಡುತ್ತಾರೆ; ಇವರ ಹೆತ್ತವರನ್ನು ನನ್ನ ಕುರಿ ಮಂದೆಯ ನಾಯಿಗಳ ಸಂಗಡ ಸೇರಿಸುವುದಕ್ಕೂ ಉದಾಸಿನ ಮಾಡಿದೆನು.

2 ಅವರ ಕೈ ಬಲದಿಂದ ನನಗೆ ಏನಾದೀತು? ಅವರ ಪುಷ್ಟಿಯು ಕುಗ್ಗಿಹೋಗಿದೆಯಷ್ಟೆ.

3 ಅವರು ಕೊರತೆಯಿಂದಲೂ, ಹಸಿವಿನಿಂದಲೂ ಸೊರಗಿ, ನಿನ್ನೆಯವರೆಗೂ ಹಾಳುಬೀಳಾದ ಒಣ ನೆಲವನ್ನು ನೆಕ್ಕುವರು.

4 ಪೊದೆಗಳಲ್ಲಿ ಉಪ್ಪಿನ ಸೊಪ್ಪನ್ನು ಕಿತ್ತು, ತಿಂದು ಜಾಲಿಯ ಬೇರುಗಳನ್ನೂ ಆಹಾರಮಾಡಿಕೊಳ್ಳುವರು.

5 ಜನರು ಅವರನ್ನು ತಮ್ಮ ಮಧ್ಯದಿಂದ ತಳ್ಳಿಬಿಟ್ಟು, ಕಳ್ಳನನ್ನು ಓಡಿಸುವ ಹಾಗೆ ಕೂಗಾಡಿ ಓಡಿಸುವರು.

6 ಅವರು ಭಯಂಕರವಾದ ತಗ್ಗುಗಳ ಸಂದುಗಳಲ್ಲಿ ವಾಸಿಸತಕ್ಕವರು, ಭೂಮಿಯಲ್ಲಿಯೂ, ಬಂಡೆಗಳಲ್ಲಿಯೂ ಇರುವ ಗುಹೆಗಳೇ ಅವರ ಮನೆಗಳು.

7 ಪೊದೆಗಳ ಮಧ್ಯದಲ್ಲಿ ಅರಚುವರು ಕತ್ತೆಗಳಂತೆ, ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುವರು.

8 ಮೂರ್ಖರ ಮಕ್ಕಳಾದ ಈ ನೀಚ ಜಾತಿಯವರು ದೇಶಭ್ರಷ್ಟರು. ಅವರು ಕೊರಡೆಗಳ ಪೆಟ್ಟಿನಿಂದ ದೇಶದಿಂದ ಹೊರಹಾಕಲ್ಪಟ್ಟಿದ್ದರೆ.

9 ಈಗಲಾದರೋ ನನ್ನ ಮೇಲೆ ಗೇಲಿಮಾಡುವ ಹಾಡುಗಳನ್ನು ಕಟ್ಟುವರು. ಮತ್ತು ಅವರ ಕಟ್ಟುಕಥೆಗಳಿಗೆ ಆಸ್ಪದವಾಗಿದ್ದೇನೆ.

10 ನನಗೆ ಅಸಹ್ಯಪಟ್ಟು ದೂರ ನಿಂತು, ನನ್ನ ಮೇಲೆ ಉಗುಳುವುದಕ್ಕೂ ಹಿಂದೆಗೆಯರು.

11 ದೇವರು ತಾನು ಹಾಕಿದ್ದ ಕಟ್ಟನ್ನು ಸಡಲಿಸಿ ನನ್ನನ್ನು ಬಾಧಿಸುವುದಕ್ಕೆ ಅವರನ್ನು ಬಿಟ್ಟಿದ್ದಾನೆ. ಅವರು ನನ್ನ ಎದುರಿನಲ್ಲಿಯೇ ಕಡಿವಾಣವನ್ನು ಕಿತ್ತು ಹಾಕಿದ್ದಾರೆ.

12 ಆ ಕಲಹಗಾರರು ನನ್ನ ಬಲಗಡೆ ಎದ್ದು, ನನ್ನ ಕಾಲುಗಳನ್ನು ಹಿಂದಕ್ಕೆ ತಳ್ಳುತ್ತಾ ನನ್ನ ನಾಶಕ್ಕಾಗಿ ಹೊಂಚು ಹಾಕಿದ್ದಾರೆ.

13 ಅವರು ನನ್ನ ದಾರಿಯನ್ನು ಕಡಿದು, ನನ್ನ ಉಪದ್ರವವನ್ನು ಹೆಚ್ಚಿಸುತ್ತಾರೆ; ಅವರನ್ನು ಎದುರಿಸತಕ್ಕ ಸಹಾಯಕನು ಯಾರೂ ಇಲ್ಲ.

14 ಕೋಟೆ ಬಿರುಕುಗಳಲ್ಲಿ ನುಗ್ಗಿ, ಹಾಳುಬೀಳಿನಲ್ಲಿ ನಿಂತಿರುವ ನನ್ನ ಮೇಲೆ ಹೊರಳುತ್ತಾರೆ.

15 ಅಪಾಯಗಳು ನನ್ನ ಮೇಲೆ ತಿರುಗಿಬಿದ್ದು; ನನ್ನ ಮಾನವನ್ನು ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿವೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಯಿತು.

16 ಈಗ ನನ್ನ ಆತ್ಮವು ಕರಗಿಹೋಗಿದೆ, ಬಾಧೆಯ ದಿನಗಳು ನನ್ನನ್ನು ಹಿಡಿದುಕೊಂಡಿವೆ.

17 ರಾತ್ರಿಯು ನನ್ನ ಎಲುಬುಗಳನ್ನು ಕೊರೆದು ಕೀಳುತ್ತದೆ, ನನ್ನನ್ನು ಕಚ್ಚುತ್ತಿರುವ ಸಂಕಟಗಳು ಸುಮ್ಮನಿರುವುದಿಲ್ಲ.

18 ನನ್ನ ಬಟ್ಟೆಯು ರೋಗದ ಅಧಿಕ ಬಲದಿಂದ ಕೆಟ್ಟುಹೋಗಿ; ಅಂಗಿಯ ಕೊರಳ ಪಟ್ಟಿಯ ಹಾಗೆ ನನ್ನನ್ನು ಸುತ್ತಿಕೊಂಡಿದೆ.

19 ಆತನು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾನೆ, ಧೂಳುಬೂದಿಗಳಿಗೆ ಸಮಾನನಾಗಿದ್ದೇನೆ.

20 ಓ ದೇವರೇ ನಾನು ನಿನಗೆ ಮೊರೆಯಿಟ್ಟರೂ ನೀನು ಉತ್ತರಕೊಡುವುದಿಲ್ಲ, ಎದ್ದು ನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿ.

21 ನೀನು ನನಗೆ ಕ್ರೂರನಾಗಿ ಮಾರ್ಪಟ್ಟಿದ್ದಿ, ನಿನ್ನ ಕೈಬಲದಿಂದ ನನ್ನನ್ನು ಹಿಂಸಿಸುತ್ತಿ.

22 ನನ್ನನ್ನು ಬಿರುಗಾಳಿಗೆ ಎತ್ತಿ ತೂರಿಬಿಟ್ಟು, ಅದರ ಆರ್ಭಟದಲ್ಲಿ ಮಾಯಮಾಡುತ್ತಿ.

23 ನೀನು ನನ್ನನ್ನು ಮರಣಕ್ಕೆ ಗುರಿಮಾಡಿ, ಸಮಸ್ತ ಜೀವಿಗಳು ಹೋಗಬೇಕಾದ ಮನೆಗೆ ಸೇರಿಸುವಿಯೆಂದು ನನಗೆ ಗೊತ್ತೇ ಇದೆ.

24 ಆದರೂ ನಾಶಕ್ಕೆ ಒಳಗಾದವನು ಕೈಚಾಚುವುದಿಲ್ಲವೋ? ಆಪತ್ತಿಗೆ ಒಳಪಟ್ಟವನು ಕೂಗಿಕೊಳ್ಳುವುದಿಲ್ಲವೋ?

25 ಕಷ್ಟಾನುಭವಿಯನ್ನು ಕಂಡು ನಾನು ಕಣ್ಣೀರಿಡಲಿಲ್ಲವೇ? ದಿಕ್ಕಿಲ್ಲದವನಿಗೆ ದುಃಖಿಸುವವನೂ ಆಗಿದ್ದೇನಷ್ಟೆ.

26 ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರುವಲ್ಲಿ ಕೇಡು ಬಂತು, ಬೆಳಕನ್ನು ಎದುರು ನೋಡುತ್ತಿರುವಾಗ ಕತ್ತಲಾಯಿತು.

27 ನನ್ನ ಹೃದಯವು ಕುದಿಯುತ್ತಿದೆ, ಅದಕ್ಕೆ ಶಾಂತಿಯಿಲ್ಲ; ಬಾಧೆಯ ದಿನಗಳು ನನಗೆ ಒದಗಿವೆ.

28 ಸಂತೈಸುವ ಸೂರ್ಯನಿಲ್ಲದೆ; ಮಂಕುಬಡಿದಂತೆ ಅಲೆಯುತ್ತಾ ಸಭೆಯ ಮಧ್ಯನಿಂತು ಅಂಗಲಾಡುತ್ತಿದ್ದೇನೆ. ಸಂಘದಲ್ಲಿ ನಿಂತು ಅಂಗಲಾಚಿಕೊಳ್ಳುತ್ತೇನೆ.

29 ನಾನು ನರಿಗಳ ತಮ್ಮನೂ, ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ.

30 ನನ್ನ ಚರ್ಮವು ಕರಿದಾಗಿ ಉದುರುತ್ತದೆ, ನನ್ನ ಎಲುಬುಗಳು ತಾಪದಿಂದ ಬೆಂದಿದೆ.

31 ಇದರಿಂದ ನನ್ನ ಕಿನ್ನರಿಯಲ್ಲಿ ಗೋಳಾಟವೂ, ನನ್ನ ಕೊಳಲಿನಲ್ಲಿ ಅಳುವ ಧ್ವನಿಯೂ ಕೇಳಿಸುತ್ತವೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು