ಯೋಬ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೋಬನ ಮೊದಲನೆಯ ಸಂಭಾಷಣೆ 1 ಆ ಮೇಲೆ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ, 2 ಯೋಬನು ಇಂತೆಂದನು, 3 “ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ, ‘ಗರ್ಭದಲ್ಲಿ ಪುರುಷಾಂಕುರವಾಯಿತು’ ಎಂದು ನುಡಿದ ರಾತ್ರಿಯು ನಾಶವಾಗಲಿ 4 ಆ ದಿನವು ಕತ್ತಲೆಯಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ. 5 ಕತ್ತಲೆಯೂ, ಘೋರಾಂಧಕಾರವೂ ಅದನ್ನು ವಶಮಾಡಿಕೊಳ್ಳಲಿ. ಮೋಡವು ಅದನ್ನು ಕವಿಯಲಿ, ಹಗಲನ್ನು ಮುಚ್ಚಿಕೊಳ್ಳುವ ಮೊಬ್ಬು ಅದನ್ನು ಹೆದರಿಸಲಿ. 6 ಕಾರ್ಗತ್ತಲು ಆ ರಾತ್ರಿಯನ್ನು ಹಿಡಿದುಕೊಳ್ಳಲಿ, ಅದು ಮಾಸಗಳ ಲೆಕ್ಕದಲ್ಲಿ ಸೇರದೆ ಸಂವತ್ಸರದ ದಿನಗಳಲ್ಲಿ ಹರ್ಷಿಸದೆ ಇರಲಿ. 7 ಆಹಾ, ರಾತ್ರಿಯು ಬಂಜೆಯಾಗಿ ಅದರಲ್ಲಿ ಉತ್ಸಾಹಧ್ವನಿಯು ಉಂಟಾಗದಿರಲಿ. 8 ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ, ದಿನಗಳನ್ನು ಶಪಿಸುವುದರಲ್ಲಿಯೂ ಜಾಣರಾದ (ಮಾಂತ್ರಿಕರು) ಅದಕ್ಕೆ ಶಾಪಕೊಡಲಿ. 9 ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ಮಿಣುಕದೆ ಹೋಗಲಿ. ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ. ಅರುಣೋದಯವೆಂಬ ರೆಪ್ಪೆ ತೆರೆಯುವುದನ್ನು ಅದು ಕಾಣದಿರಲಿ. 10 ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ, ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲವಲ್ಲಾ. 11 ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ. ಗರ್ಭದಿಂದ ಬಂದಾಗಲೇ ಏಕೆ ಪ್ರಾಣಬಿಡಲಿಲ್ಲ? 12 ತಾಯಿಯ ಮಡಿಲು ನನ್ನನ್ನು ಹೊತ್ತದ್ದೇಕೆ? ತಾಯಿಯ ಮೊಲೆಗಳು ನನಗೆ ಕುಡಿಯ ಕೊಟ್ಟದ್ದೇಕೆ? 13 ಆಗಲೇ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ, ಕಣ್ಣು ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆನು. 14 ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮ್ಮ ಸಮಾಧಿಗಾಗಿ ಕಟ್ಟಿಸಿಕೊಂಡ ಅರಸರೊಂದಿಗೂ, ಮಂತ್ರಿಗಳೊಡನೆಯೂ ನಾನಿರುತ್ತಿದ್ದೆ. 15 ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡಲೂ ವಿಶ್ರಮಿಸಿಕೊಳ್ಳುತ್ತಿದ್ದೆನು. 16 ಒಂದು ವೇಳೆ ನಾನು ಗರ್ಭಸ್ರಾವವಾಗಿ ಬಿದ್ದು, ಹೂಳಿಟ್ಟ ಪಿಂಡದಂತೆ, ಬೆಳಕನ್ನೇ ಕಾಣದೆ ಸತ್ತುಹೋದ ಕೂಸುಗಳಂತೆ ಜನ್ಮವಿಲ್ಲದವನಾಗಿ ಇರುತ್ತಿದ್ದೆನು. 17 ಅಲ್ಲಿ ದುಷ್ಟರ ಆಗ್ರಹವು ಅಣಗಿ ಹೋಗುವುದು, ದಣಿದವರು ದಣಿವಾರಿಸಿಕೊಳ್ಳುವರು. 18 ಸೆರೆಯಾದವರು ಬಾಧಿಸುವ ಅಧಿಕಾರಿಯ ಧ್ವನಿಯನ್ನೇ ಕೇಳದೆ, ಗುಂಪುಗುಂಪಾಗಿ ವಿಶ್ರಮಿಸಿಕೊಳ್ಳುವರು. 19 ಅಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲಾ. ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ. 20 ಕಷ್ಟದಲ್ಲಿರುವವನಿಗೆ ಬೆಳಕನ್ನು, ಮನನೊಂದವರಿಗೆ ಜೀವವನ್ನು ಕೊಡುವುದೇಕೆ? 21 ಅವರು ನಿಕ್ಷೇಪಕ್ಕಾಗಿ ಅಗೆಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು. 22 ಸಮಾಧಿಗೆ ಸೇರುವಾಗ ಬಹಳವಾಗಿ ಹರ್ಷಿಸಿ ಉಲ್ಲಾಸಪಡುತ್ತಾರೆ. 23 ದೇವರು ನನ್ನ ಸುತ್ತಲೂ ಬೇಲಿ ಹಾಕಿ, ದಾರಿಕಟ್ಟಿದ ಮೇಲೆ ಅವನಿಗೆ ಏಕೆ ಬೆಳಕನ್ನು ಕೊಡುತ್ತಾನೆ? 24 ನಿಟ್ಟುಸಿರೇ ನನ್ನೆದುರಿಗೆ ಬರುವ ಆಹಾರವಾಗಿದೆ. ನನ್ನ ನರಳಾಟವು ಜಲಧಾರೆಯಂತಿದೆ. 25 ನನಗೆ ಭಯವು ಹುಟ್ಟಿದೊಡನೆಯೇ ಆಪತ್ತು ಸಂಭವಿಸುವುದು. ನಾನು ಯಾವುದಕ್ಕೆ ಹೆದರುತ್ತೇನೋ ಅದು ತಪ್ಪದೆ ಬರುವುದು. 26 ನನಗೆ ಯಾವ ಶಾಂತಿಯೂ, ವಿಶ್ರಾಂತಿಯೂ, ಉಪಶಮನವೂ ಇರುವುದಿಲ್ಲ, ಯಾವಾಗಲೂ ಕಳವಳವೇ.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.