ಯೋಬ 28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೋಬನು ಜ್ಞಾನ ಮತ್ತು ತಿಳಿವಳಿಕೆ ಕುರಿತು ಮಾತನಾಡಿದ್ದು 1 “ಬೆಳ್ಳಿ ಸಿಕ್ಕುವ ಗಣಿಯೂ, ಚಿನ್ನದ ಅದುರು ದೊರಕುವ ಸ್ಥಳವೂ ಉಂಟಷ್ಟೆ. 2 ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು, ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು. 3 ಮನುಷ್ಯರು ಕತ್ತಲನ್ನು ನಿವಾರಿಸಿ ಕಾರ್ಗತ್ತಲಲ್ಲಿಯೂ, ಘೋರಾಂಧಕಾರದಲ್ಲಿಯೂ ಮರೆಯಾಗಿರುವ ಕಲ್ಲುಗಳನ್ನು ಕಟ್ಟಕಡೆಯ ವರೆಗೆ ಹುಡುಕುವರು. 4 ಗಣಿಯನ್ನು ತೋಡಿ ತೋಡಿ ಭೂಮಿಯೊಳಗೆ ಬಹುದೂರ ಜನರು ವಾಸಸ್ಥಳಗಳಿಂದ ದೂರವಾಗುವರು, ಭೂಮಿಯ ಮೇಲೆ ನಡೆದಾಡುವವರಿಗೆ ಕಾಣದೆ, ನರಲೋಕಕ್ಕೆ ಅನ್ಯರಾಗಿ ಅತ್ತಿತ್ತ ಅಲೆದಾಡುವರು. 5 ಭೂಮಿಯು ಅನ್ನವನ್ನು ಕೊಡುವುದು, ಅದರ ಕೆಳಭಾಗವು ಬೆಂಕಿ ಬಿದ್ದಂತೆ ಹಾಳಾಗಿರುವುದು. 6 ಅದರ ಕಲ್ಲುಗಳಲ್ಲಿ ಇಂದ್ರನೀಲ ಮಣಿಗಳು ಸಿಕ್ಕುವವು, ಅದರಲ್ಲಿ ಚಿನ್ನದ ಪುಡಿಯೂ ಇರುವುದು. 7 ಆ ದಾರಿಯು ಯಾವ ಹದ್ದಿಗೂ ತಿಳಿಯದು, ಗಿಡಗದ ಕಣ್ಣಿಗೂ ಬಿದ್ದಿಲ್ಲ. 8 ಸೊಕ್ಕಿದ ಮೃಗಗಳು ಅದನ್ನು ತುಳಿದಿಲ್ಲ, ಸಿಂಹವು ಆ ಮಾರ್ಗವನ್ನು ತುಳಿದಿಲ್ಲ. 9 ಮನುಷ್ಯನು ಕಗ್ಗಲ್ಲಿನ ಮೇಲೆ ಕೈಮಾಡಿ ಬೆಟ್ಟಗಳನ್ನು ಬುಡದ ತನಕ ಕೆಡವಿಬಿಡುವನು. 10 ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುವನು; ಅವನ ಕಣ್ಣು ಅಮೂಲ್ಯ ಪದಾರ್ಥಗಳನ್ನೆಲ್ಲಾ ಕಾಣುವುದು. 11 ನೀರಿನ ಒರತೆಗಳನ್ನು ಹುಡುಕಿ ಹೊರತರುತ್ತಾನೆ, ಮರೆಯಾಗಿದ್ದ ವಸ್ತುವನ್ನು ಬೆಳಕಿಗೆ ತರುವನು. 12 ಜ್ಞಾನವಾದರೋ ಎಲ್ಲಿ ಸಿಕ್ಕೀತು? ವಿವೇಕವು ದೊರೆಯುವ ಸ್ಥಳವೆಲ್ಲಿ? 13 ಅದರ ಕ್ರಯವು ಯಾರಿಗೂ ಗೊತ್ತಿಲ್ಲ, ಭೂಲೋಕದಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು. 14 ಭೂಮಿಯ ಕೆಳಗಣ ಸಾಗರವು ನನ್ನಲ್ಲಿ ಇಲ್ಲ ಎನ್ನುವುದು, ಸಮುದ್ರವು, ತನ್ನ ಹತ್ತಿರ ಇಲ್ಲ ಎಂದು ಹೇಳುವುದು. 15 ಚೊಕ್ಕ ಬಂಗಾರವನ್ನು ಕೊಟ್ಟು ಅದನ್ನು ಕೊಂಡುಕೊಳ್ಳುವುದು ಅಸಾಧ್ಯ, ಅದರ ಬೆಲೆಗೆ ಬೆಳ್ಳಿಯನ್ನು ತೂಗುವುದು ಅಶಕ್ಯ. 16 ಓಫೀರ್ ದೇಶದ ಅಪರಂಜಿ, ಅಮೂಲ್ಯ ಗೋಮೇಧಿಕ, ಇಂದ್ರನೀಲ, ಇವುಗಳಿಂದ ಜ್ಞಾನದ ಬೆಲೆ ಇಷ್ಟೆಂದು ಗೊತ್ತು ಮಾಡುವುದಕ್ಕೆ ಆಗದು. 17 ಬಂಗಾರವಾಗಲಿ, ಸ್ಫಟಿಕವಾಗಲಿ ಅದಕ್ಕೆ ಸಮವಾದೀತೇ? ಚಿನ್ನದ ಆಭರಣಗಳನ್ನು ಅದಕ್ಕೆ ಬದಲಾಗಿಕೊಡುವುದು ಸಾಧ್ಯವೋ? 18 ಜ್ಞಾನವಿರುವಲ್ಲಿ ಹವಳವೂ, ಸ್ಫಟಿಕವೂ ನೆನಪಿಗೆ ಬರುವುದಿಲ್ಲ. ಮುತ್ತುಗಳನ್ನು ಸಂಪಾದಿಸುವುದಕ್ಕಿಂತಲೂ ಜ್ಞಾನವನ್ನು ಸಂಪಾದಿಸುವುದು ಕಷ್ಟ! 19 ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಿಲ್ಲ, ಶುದ್ಧ ಕನಕದೊಡನೆ ಅದನ್ನು ತೂಗಲಾಗದು. 20 ಹೀಗಿರಲು ಜ್ಞಾನವು ಎಲ್ಲಿಂದ ಬರುವುದು? ವಿವೇಕವು ಯಾವ ಸ್ಥಳದಲ್ಲಿ ದೊರಕೀತು? 21 ಅದು ಎಲ್ಲಾ ಜೀವಿಗಳ ದೃಷ್ಟಿಗೆ ಅಗೋಚರವಾಗಿದೆ, ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ. 22 ನಾಶನವೂ, ಮೃತ್ಯುವೂ, ‘ಅದರ ಸುದ್ದಿ ಮಾತ್ರ ನಮ್ಮ ಕಿವಿಗೆ ಬಿದ್ದಿದೆ’ ಎಂದು ಹೇಳುವವು. 23 ಅದರ ಮಾರ್ಗವನ್ನು ಬಲ್ಲವನು ದೇವರೇ; ಅದರ ಸ್ಥಳವು ಆತನೊಬ್ಬನಿಗೇ ಗೊತ್ತು. 24 ಆತನೊಬ್ಬನೇ ಭೂಮಿಯ ಕಟ್ಟಕಡೆಯ ತನಕ ದೃಷ್ಟಿಸಿ ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವನಾಗಿದ್ದಾನೆ. 25 ಆತನು ಗಾಳಿಗೆ ತಕ್ಕಷ್ಟು ತೂಕವನ್ನು ನೇಮಿಸಿ ನೀರುಗಳನ್ನು ತಕ್ಕ ಪರಿಮಾಣಗಳಿಂದ ಅಳತೆಮಾಡಿದನು. 26 ಮಳೆಗೆ ಕಟ್ಟಳೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ, 27 ಜ್ಞಾನವನ್ನು ಕಂಡು ಲಕ್ಷಿಸಿದನು, ಅದನ್ನು ಸ್ಥಾಪಿಸಿದ್ದಲ್ಲದೆ ವಿಮರ್ಶೆಮಾಡಿದನು. 28 ಆಮೇಲೆ ಮನುಷ್ಯರಿಗೆ, ‘ಇಗೋ, ಕರ್ತನ ಭಯವೇ ಜ್ಞಾನ; ದುಷ್ಟತನವನ್ನು ತ್ಯಜಿಸುವುದೇ ವಿವೇಕ’” ಎಂದು ಹೇಳಿದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.