ಯೋಬ 26 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೋಬನ ಒಂಭತ್ತನೆಯ ಸಂಭಾಷಣೆ: ಬಿಲ್ದನಿಗೆ ನೀಡಿದ ಪ್ರತ್ಯುತ್ತರ 1 ಆಗ ಯೋಬನು ಹೀಗೆ ಉತ್ತರಕೊಟ್ಟನು, 2 “ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು! ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು. 3 ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ! ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ! 4 ಯಾರಿಗೆ ಮಾತುಗಳನ್ನು ಕಲಿಸಿದ್ದಿ? ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?” ಬಿಲ್ದದನ ಪ್ರತ್ಯುತ್ತರ 5 ಅದಕ್ಕೆ ಬಿಲ್ದದನು, “ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ, ಪ್ರೇತಗಳು ಆತನ ಭಯದಿಂದ ಯಾತನೆಪಡುವವು. 6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ, ನಾಶಲೋಕವು ಮರೆಯಾಗಿಲ್ಲ. 7 ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ, ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ. 8 ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು, ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು. 9 ತನ್ನ ಸಿಂಹಾಸನಕ್ಕೆ ಮರೆಯಾಗಿ, ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು. 10 ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ, ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ. 11 ಆಕಾಶಮಂಡಲದ ಸ್ತಂಭಗಳು, ಆತನ ಗದರಿಕೆಯಿಂದ ಬೆರಗಾಗಿ ಕದಲುವವು. 12 ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು; ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು. 13 ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು, ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು. 14 ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.