Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೋಬನ ಏಳನೆಯ ಸಂಭಾಷಣೆ: ಚೋಫರನಿಗೆ ನೀಡಿದ ಪ್ರತ್ಯುತ್ತರ

1 ಆಗ ಯೋಬನು ಇಂತೆಂದನು,

2 “ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ. ನಿಮ್ಮಿಂದ ನನಗಾಗಬೇಕಾದ ಆದರಣೆಯು ಇಷ್ಟೇ.

3 ತಾಳ್ಮೆಯಿಂದಿರಿ, ನಾನೂ ಮಾತನಾಡುವೆನು, ಆಮೇಲೆ ಹಾಸ್ಯಮಾಡಿದರೂ ಮಾಡಿರಿ.

4 ನಾನೇನು ಮನುಷ್ಯನ ವಿಷಯದಲ್ಲಿ ಗುಣುಗುಟ್ಟುತ್ತಿರುವೆನೆ? ನಾನೇಕೆ ಬೇಸರಗೊಳ್ಳಬಾರದು?

5 ನನ್ನ ಕಡೆಗೆ ಗಮನಿಸಿ, ನಿಮ್ಮ ಬಾಯಿಯ ಮೇಲೆ ಕೈಯಿಟ್ಟು ಬೆರಗಾಗಿ,

6 ಈ ವಿಷಯವನ್ನು ನೆನಪಿಗೆ ತಂದುಕೊಂಡ ಹಾಗೆಲ್ಲಾ, ನಡುಕವು ನನ್ನ ಮಾಂಸವನ್ನು ಹಿಡಿಯುತ್ತದೆ.

7 ದುಷ್ಟರು ಬಾಳಿ ವೃದ್ಧರಾಗುವುದಕ್ಕೂ, ಬಲಿಷ್ಠರಾಗಿ ಪ್ರಬಲಿಸುವುದಕ್ಕೂ ಕಾರಣವೇನು?

8 ಅವರ ಸಂತಾನದವರು ಅವರೊಂದಿಗಿರುತ್ತಾ ಅವರ ಮುಂದೆಯೇ ಸುಸ್ಥಿರವಾಗಿರುವರು, ಅವರ ಮಕ್ಕಳು ಅವರ ಕಣ್ಣೆದುರಿನಲ್ಲಿ ಅಚಲವಾಗಿ ನಿಲ್ಲುವರು.

9 ಅವರ ಮನೆಗಳು ಸುರಕ್ಷಿತವಾಗಿ ನಿರ್ಭಯದಿಂದ ಇರುವವು; ದೇವರ ದಂಡವು ಅವರ ಮೇಲೆ ಬೀಳದು.

10 ಅವರ ಗೂಳಿಯು ಬೇಸರಗೊಳ್ಳದೆ ಸಂತತಿಯನ್ನು ಹುಟ್ಟಿಸುತ್ತದೆ; ಅವರ ಹಸುವು ಕಂದುಹಾಕದೆ ಈಯುವುದು.

11 ತಮ್ಮ ಮಕ್ಕಳನ್ನು ಮಂದೆಮಂದೆಯಾಗಿ ನಡೆಸುವರು, ಅವರ ಮಕ್ಕಳು ಕುಣಿದಾಡುವರು.

12 ಅವರು ದಮ್ಮಡಿ ಕಿನ್ನರಿಗಳೊಡನೆ ಸ್ವರವೆತ್ತಿ, ಕೊಳಲಿನ ಧ್ವನಿಗೆ ಉಲ್ಲಾಸಪಡುವರು.

13 ಹೀಗೆ ತಮ್ಮ ದಿನಗಳನ್ನು ಸುಖವಾಗಿ ಕಳೆದು, ಸಮಾಧಾನದಿಂದ ಸಮಾಧಿಗೆ ಸೇರುವರು.

14 ಆದರೆ ಇವರೇ ದೇವರನ್ನು ಕುರಿತು, ‘ನಮ್ಮಿಂದ ತೊಲಗಿ ಹೋಗು, ನಿನ್ನ ಮಾರ್ಗಗಳ ತಿಳಿವಳಿಕೆಯೇ ನಮಗೆ ಬೇಡ ಎಂದೂ

15 ಆ ಸರ್ವಶಕ್ತನಾದ ದೇವರು ಎಷ್ಟರವನು, ಆತನನ್ನು ನಾವು ಏಕೆ ಸೇವಿಸಬೇಕು? ಆತನಿಗೆ ವಿಜ್ಞಾಪನೆ ಮಾಡುವುದರಿಂದ ಪ್ರಯೋಜನವೇನು?’ ಎಂದೂ ಹೇಳುತ್ತಿದ್ದರು.

16 ಆಹಾ, ಅವರ ಸುಖವು ಅವರ ಕೈಯಲ್ಲಿ ನೆಲಸಿರುವುದಿಲ್ಲ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!

17 ದುಷ್ಟರ ದೀಪವು ಆರಿಹೋದದ್ದು ಎಷ್ಟು ಸಾರಿ? ಎಷ್ಟು ಸಾರಿ ಉಪದ್ರವವು ಅವರಿಗೆ ಸಂಭವಿಸಿದೆ? ದೇವರು ಕೋಪಗೊಂಡು ಅವರ ಪಾಲಿಗೆ ಸಂಕಟಗಳನ್ನು ಕೊಟ್ಟದ್ದು ಎಷ್ಟು ಸಾರಿ?

18 ಅವರು ಗಾಳಿಗೆ ಸಿಕ್ಕಿಬಿದ್ದ ಹುಲ್ಲಿನಂತೆ ಆದದ್ದು ಎಷ್ಟು ಸಾರಿ? ಎಷ್ಟು ಸಾರಿ ಬಿರುಗಾಳಿಯು ಕೊಚ್ಚಿಕೊಂಡು ಹೋಗುವ ಹೊಟ್ಟಿನಂತಿದ್ದರು?

19 ‘ದೇವರು ದುಷ್ಟನ ಪಾಪ ಫಲವನ್ನು ಅವನ ಮಕ್ಕಳಿಗಾಗಿ ಇಟ್ಟಿದ್ದಾನೆ’ ಎನ್ನುತ್ತೀರೋ, ಆ ಫಲವನ್ನು ಅನುಭವಿಸುವ ಹಾಗೆ ದೇವರು ಅವನಿಗೆ ಕೊಟ್ಟುಬಿಡಲಿ.

20 ಅವನು ತನ್ನ ನಾಶವನ್ನು ಕಣ್ಣಾರೆ ಕಾಣಲಿ, ಸರ್ವಶಕ್ತನಾದ ದೇವರ ರೌದ್ರರಸವನ್ನು ಪಾನಮಾಡಲಿ.

21 ಅವನಿಗೆ ನೇಮಕವಾದ ದಿನಗಳು ಮುಗಿದುಹೋದ ಮೇಲೆ ತನ್ನನ್ನು ಹಿಂಬಾಲಿಸುವ ಸಂತತಿಯವರ ಚಿಂತೆ ಏನು?

22 ಮೇಲಣ ಲೋಕದವರಿಗೂ, ನ್ಯಾಯತೀರಿಸುವ ದೇವರಿಗೂ ಜ್ಞಾನಬೋಧನೆಯನ್ನು ಮಾಡಬಹುದೇ?

23 ಒಬ್ಬನು ಸಮೃದ್ಧನಾಗಿ, ತುಂಬಾ ಸುಖದಿಂದಲೂ, ನೆಮ್ಮದಿಯಿಂದಲೂ ಇರುವಾಗ ಸಾಯುವನು.

24 ಅವನ ತೊಟ್ಟಿಗಳಲ್ಲಿ ಹಾಲು ತುಂಬಿರುವುದು, ಅವನ ಎಲಬುಗಳು ಮಜ್ಜೆಯಿಂದ ಸಾರವಾಗಿರುವುದು.

25 ಮತ್ತೊಬ್ಬನು ಸ್ವಲ್ಪವೂ ಸುಖಾನುಭವವಿಲ್ಲದೆ, ಮನೋವ್ಯಥೆಪಡುತ್ತಾ ಸಾಯುವನು.

26 ಇಬ್ಬರೂ ಧೂಳಿನಲ್ಲಿ ಮಲಗುವರು, ಹುಳುಗಳು ಅವರನ್ನು ಮುತ್ತಿಕೊಳ್ಳುವವು.

27 ಆಹಾ, ನಿಮ್ಮ ಯೋಚನೆಗಳನ್ನು ಬಲ್ಲೆ, ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ತಿಳಿದುಕೊಂಡಿದ್ದೇನೆ.

28 ‘ಪ್ರಧಾನನ ಮನೆ ಏನಾಯಿತು? ದುಷ್ಟರು ವಾಸಿಸಿದ ಗುಡಾರವೆಲ್ಲಿ?’ ಎನ್ನುತ್ತೀರಷ್ಟೆ.

29 ನೀವು ಮಾರ್ಗಸ್ಥರನ್ನು ವಿಚಾರಿಸಲಿಲ್ಲವೋ? ಅವರು ಕೊಟ್ಟ ದೃಷ್ಟಾಂತಗಳಿಂದ,

30 ಆಪತ್ತಿನ ದಿನದಲ್ಲಿ ದುಷ್ಟನು ಉಳಿದು, ಕೋಪವು ತುಂಬಿ ತುಳುಕುವ ದಿನದಲ್ಲಿ ತಪ್ಪಿಸಲ್ಪಡುವನು ಎಂಬುದು ನಿಮಗೆ ಗೊತ್ತಾಗಲಿಲ್ಲವೋ?

31 ನೀನು ದುರ್ಮಾರ್ಗಿ ಎಂದು ಅವನಿಗೆ ಮುಖಾಮುಖಿಯಾಗಿ ಯಾರು ತಾನೇ ಹೇಳುವರು? ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸುವವರು ಯಾರು?

32 ಅವನನ್ನು ಮೆರವಣಿಗೆಯಿಂದ ಸಮಾಧಿಗೆ ತೆಗೆದುಕೊಂಡು ಹೋಗುವರು; ಅವನ ಗೋರಿಗೆ ಕಾವಲಿಡುವರು.

33 ಆ ಕಣಿವೆಯ ಪ್ರದೇಶದ ಹೆಂಟೆಗಳು ಅವನಿಗೆ ಒಪ್ಪಿತವಾಗಿರುವವು. ಅವನಿಗಿಂತ ಹಿಂದೆ ಲೆಕ್ಕವಿಲ್ಲದಷ್ಟು ಜನರು ಹೀಗೆಯೇ ಇದ್ದರು, ಇನ್ನು ಮುಂದೆ ಸಮಸ್ತರೂ ಹೀಗೆಯೇ ಅವನನ್ನು ಹಿಂಬಾಲಿಸುವರು.

34 ನೀವು ನನಗೆ ಮಾಡುವ ಆದರಣೆಯು ಎಷ್ಟು ವ್ಯರ್ಥವಾಗಿದೆ! ನಿಮ್ಮ ಉತ್ತರಗಳಲ್ಲಿ ಉಳಿದಿರುವುದು ಮಿತ್ರ ದ್ರೋಹವೇ.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು