Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 15 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಎಲೀಫಜನು ಯೋಬನಿಗೆ ನೀಡಿದ ಎರಡನೆಯ ಪ್ರತ್ಯುತ್ತರ

1 ಆಗ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,

2 “ಜ್ಞಾನಿಯು ತನ್ನ ಹೊಟ್ಟೆಯಲ್ಲಿ ಮೂಡಣ ಗಾಳಿಯನ್ನು ತುಂಬಿಕೊಂಡು, ಶೂನ್ಯವಾದ ತಿಳಿವಳಿಕೆಯಿಂದ ಮಾತನಾಡಬಹುದೇ?

3 ಪ್ರಯೋಜನವಿಲ್ಲದ ನುಡಿಯಿಂದಲೂ, ಫಲವಿಲ್ಲದ ವಾಕ್ಯಗಳಿಂದಲೂ ತರ್ಕಿಸುವುದು ಯುಕ್ತವೋ?

4 ಇದಲ್ಲದೆ ನೀನು ದೇವರ ಭಯವನ್ನು ಹಾಳುಮಾಡುತ್ತಿರುವೆ, ನೀನು ನನ್ನನ್ನು ಪಾತಾಳಕ್ಕೆ ತಳ್ಳಿ ನನ್ನ ದೇವಭಕ್ತಿಯನ್ನು ಕ್ಷಯಗೊಳಿಸುತ್ತೀ.

5 ನಿನ್ನ ಪಾಪವೇ ನಿನಗೆ ಮಾತುಗಳನ್ನು ಕಲಿಸಿಕೊಡುತ್ತದೆ. ಕಪಟಿಗಳು ಆಡುವ ಭಾಷೆಯನ್ನು ಆರಿಸಿಕೊಂಡಿದ್ದಿ.

6 ನಿನ್ನನ್ನು ಅಪರಾಧಿಯೆಂದು ನಿರ್ಣಯಿಸುವವನು ನಾನಲ್ಲ, ನಿನ್ನ ಮಾತುಗಳು ಕೂಡ ನಿನಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತವೆ, ನಿನ್ನನ್ನು ಅಪರಾಧಿಯನ್ನಾಗಿಸುತ್ತದೆ.

7 ನೀನು ಆದಿಪುರುಷನೋ? ಬೆಟ್ಟಗಳಿಗಿಂತ ಮುಂಚೆ ಹುಟ್ಟಿದವನೋ?

8 ದೇವರ ಆಲೋಚನಾ ಸಭೆಯಲ್ಲಿದ್ದುಕೊಂಡು ಅಲ್ಲಿ ಹೇಳಿದ್ದನ್ನು ಕೇಳಿದ್ದೀಯಾ? ಜ್ಞಾನವನ್ನೆಲ್ಲಾ ನಿನ್ನ ಕಡೆಗೆ ಸೆಳೆದುಕೊಂಡಿದ್ದೀಯಾ?

9 ನಮಗೆ ತಿಳಿಯದಿರುವ ಯಾವ ವಿಷಯ ಗೊತ್ತಿದೆ? ನಮ್ಮಲ್ಲಿಲ್ಲದ ಯಾವ ಸಂಗತಿಯನ್ನು ಗ್ರಹಿಸಿದ್ದೀ?

10 ತಲೆನರೆತು ನಿನ್ನ ತಂದೆಗಿಂತ ವೃದ್ಧನಾದ ಮುದುಕನು ನಮ್ಮಲ್ಲಿದ್ದಾನೆ.

11 ದೇವರ ಆದರಣೆಗಳೂ, ನಿನಗೆ ದೊರೆತ ಶಾಂತಿಯ ಮಾತುಗಳೂ ಸಾಲುವುದಿಲ್ಲವೇ?

12 ನಿನ್ನ ಹೃದಯವು ಏಕೆ ನಿನ್ನನ್ನು ಸೆಳೆದುಕೊಂಡು ಹೋಗುವುದು? ನಿನ್ನ ಕಣ್ಣುಗಳು ಕಿಡಿಕಿಡಿಯಾಗುವುದೇಕೆ?

13 ನೀನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ವ್ಯರ್ಥವಾದ ಮಾತುಗಳನ್ನು ಸುಮ್ಮನೆ ಸುರಿಸುತ್ತೀಯಲ್ಲಾ!

14 ನರನು ಎಷ್ಟರವನು! ಅವನು ಪರಿಶುದ್ಧನಾಗಿರುವುದು ಸಾಧ್ಯವೋ? ಮಾನವನಾಗಿ ಹುಟ್ಟಿದವನು ನೀತಿವಂತನಾಗಿರಬಹುದೇ?

15 ಆಹಾ, ತನ್ನ ದೂತರಲ್ಲಿಯೂ ಆತನು ನಂಬಿಕೆಯಿಡುವುದಿಲ್ಲ, ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಾಗಿರದು.

16 ಹೀಗಿರಲು ಅಧರ್ಮವನ್ನು ನೀರಿನಂತೆ ಕುಡಿಯುತ್ತಾ ಅಸಹ್ಯನೂ, ಕೆಟ್ಟವನೂ ಆದ ನರಜನ್ಮದವನು ಮತ್ತೂ ಅಶುದ್ಧನಲ್ಲವೇ!

17 ಕೇಳು, ನಾನು ಒಂದು ಸಂಗತಿಯನ್ನು ತಿಳಿಸುವೆನು, ಕಂಡದ್ದನ್ನೇ ವಿವರಿಸುವೆನು.

18 ಅವರು ತಮ್ಮ ನಾಡಿನ ಬಾಧ್ಯತೆಯನ್ನು ಕಳೆದುಕೊಂಡವರಲ್ಲಿ ಪರದೇಶಿಯರು ಅವರ ನಾಡನ್ನು ಹಾದುಹೋಗುವಂತಿರಲಿಲ್ಲ.

19 ಇದೇ ಸಂಗತಿಯನ್ನು ತಮ್ಮ ಪೂರ್ವಿಕರಿಂದ ಕೇಳಿ, ಕಲಿತದ್ದನ್ನು ಮರೆಮಾಡದೆ ಪ್ರಕಟಿಸಿದ್ದಾರೆ.

20 ಹಿಂಸಕನಿಗೆ ಎಷ್ಟು ವರ್ಷಗಳು ನೇಮಕವಾಗಿವೆಯೋ, ಅಷ್ಟು ಕಾಲವೂ ಆ ದುಷ್ಟನು ಪೀಡಿತನಾಗಿಯೇ ಇರುವನು.

21 ಭಯ ಅಪಾಯಗಳ ಸಪ್ಪಳವು ಅವನ ಕಿವಿಯಲ್ಲೇ ಇರುವುದು, ತಾನು ಸುಖವಾಗಿರುವಾಗಲೂ ಸೂರೆಗಾರನು ತನ್ನ ಮೇಲೆ ಬೀಳುವನೆಂದು ಭಯಪಡುವನು.

22 ಕತ್ತಲೊಳಗಿಂದ ತಾನು ಹಿಂದಿರುಗುತ್ತೇನೆಂದು ಅವನು ನಂಬುವುದಿಲ್ಲ; ಅವನ ಕತ್ತಿಯು ಅವನಿಗಾಗಿ ಕಾದಿದೆ.

23 ‘ರೊಟ್ಟಿ ಎಲ್ಲಿ?’ ಎಂದು ಹುಡುಕುತ್ತಾ ಅಲೆದಾಡುವನೆಂಬುದಾಗಿ ನಿಶ್ಚಯಿಸಿಕೊಂಡು, ಆ ಕತ್ತಲಿನ ದಿನವು ತನ್ನ ಪಕ್ಕದಲ್ಲಿ ಸಿದ್ಧವಾಗಿದೆ ಎಂದು ತಿಳಿದುಕೊಂಡಿರುವನು.

24 ಸಂಕಟವೂ, ಪೇಚಾಟವೂ ಯುದ್ಧಸನ್ನದ್ಧ ರಾಜರಂತೆ ಅವನನ್ನು ಹೆದರಿಸಿ ಸೋಲಿಸುವವು.

25 ಅವನು ದೇವರಿಗೆ ವಿರುದ್ಧವಾಗಿ ಕೈಚಾಚಿ ಸರ್ವಶಕ್ತನಾದ ದೇವರ ಎದುರು ನಿಂತು ಶೂರನಂತೆ ಮೆರೆದನಲ್ಲಾ.

26 ದೊಡ್ಡ ಬಲವುಳ್ಳ ಗುರಾಣಿಯನ್ನು ಹಿಡಿದು ತಲೆ ನಿಮಿರಿಸಿ ಆತನ ಮೇಲೆ ಬೀಳಬೇಕೆಂದು ಓಡಿದನು.

27 ಅವನು ಮುಖದಲ್ಲಿ ಕೊಬ್ಬೇರಿಸಿಕೊಂಡು ಸೊಂಟದಲ್ಲಿ ಬೊಜ್ಜನ್ನು ಬೆಳೆಸಿಕೊಂಡಿದ್ದನು.

28 ಅವನು ಹಾಳು ಪಟ್ಟಣಗಳಲ್ಲಿ ಸೇರಿಕೊಂಡು, ‘ದಿಬ್ಬಗಳಾಗಿ ಹೋಗಲಿ ಯಾರೂ ವಾಸಿಸದಿರಲಿ’ ಎಂದು ಶಾಪಹೊಂದಿದ ಮನೆಗಳೊಳಗೆ ವಾಸವಾಗಿದ್ದನು.

29 ಇಂಥವನು ಐಶ್ವರ್ಯವಂತನಾಗುವುದಿಲ್ಲ, ಅವನ ಆಸ್ತಿಯು ಸ್ಥಿರವಾಗಿ ನಿಲ್ಲದು. ಅವನ ಪ್ರತಿ ಫಲವು ಭಾರದಿಂದ ಭೂಮಿಯ ಕಡೆಗೆ ಬಾಗುವುದಿಲ್ಲ.

30 ಕತ್ತಲೊಳಗಿಂದ ಅವನು ಪಾರಾಗುವುದಿಲ್ಲ, ಕಿಚ್ಚು ಅವನ ಕೊಂಬೆಗಳನ್ನು ಒಣಗಿಸುವುದು, ದೇವರ ಶ್ವಾಸದಿಂದ ಒಣಗಿ ಹೋಗುವನು.

31 ಅವನು ಭ್ರಮೆಗೊಂಡು ಶೂನ್ಯವಾದದ್ದರ ಮೇಲೆ ನಂಬಿಕೆಯಿಡದಿರಲಿ, ಇಟ್ಟರೆ ಅವನಿಗಾಗುವ ಪ್ರತಿಫಲವು ಶೂನ್ಯವೇ,

32 ಅವನ ಕಾಲವು ಕೊನೆಮುಟ್ಟುವುದಕ್ಕೆ ಮೊದಲೇ ಆ ಪ್ರತಿಫಲವು ತಲುಪಿಬಿಡುವುದು. ಅವನ ಕೊಂಬೆಯು ಹಸುರಾಗಿರುವುದಿಲ್ಲ,

33 ಮಾಗದ ಹಣ್ಣುಗಳನ್ನು ಕಳೆದುಕೊಂಡ ದ್ರಾಕ್ಷಿಯ ಬಳ್ಳಿಯಂತೆ ಇರುವನು, ಎಣ್ಣೆಯ ಮರದ ಹಾಗೆ ತನ್ನ ಹೂವುಗಳನ್ನು ಉದುರಿಸಿಬಿಡುವನು.

34 ಭ್ರಷ್ಟರ ಸಂಘವು ನಿರರ್ಥಕ, ಬೆಂಕಿಯು ಲಂಚಕೋರರ ಗುಡಾರಗಳನ್ನು ಸುಟ್ಟು ಹಾಕುವುದು.

35 ಅವರು ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುವರು, ಅವರ ಹೊಟ್ಟೆಯು ವಂಚನೆಯಿಂದ ತುಂಬಿರುವುದು.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು