ಯೋಬ 12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೋಬನ ನಾಲ್ಕನೆಯ ಸಂಭಾಷಣೆ: ಚೋಫರನಿಗೆ ನೀಡಿದ ಪ್ರತ್ಯುತ್ತರ 1 ಆ ಮೇಲೆ ಯೋಬನು ಪ್ರತ್ಯುತ್ತರವಾಗಿ ಹೀಗೆ ಹೇಳಿದನು, 2 “ಹೌದು, ನೀವೇ ಮನುಷ್ಯರು; ಜ್ಞಾನವು ನಿಮ್ಮೊಡನೆಯೇ ಸಾಯುವುದು, ನಿಜ. 3 ನಿಮ್ಮ ಹಾಗೆ ನನಗೂ ಬುದ್ಧಿಯುಂಟು, ನಿಮಗಿಂತ ನಾನು ಕಡೆಯಲ್ಲ. ಇಂಥವು ಯಾರಿಗೆ ತಾನೇ ಗೊತ್ತಿಲ್ಲ. 4 ನಾನು ಗೆಳೆಯನ ಗೇಲಿಗೆ ಗುರಿಯಾಗಿದ್ದೇನೆ! ದೇವರನ್ನು ಪ್ರಾರ್ಥಿಸಿದೆನಲ್ಲಾ, ಆತನು ಲಾಲಿಸಿದನಲ್ಲಾ, ನೀತಿವಂತನೂ, ನಿರ್ದೋಷಿಯೂ ಆದವನು ಹಾಸ್ಯಾಸ್ಪದನಾಗಿದ್ದೇನೆ. 5 ಆಪತ್ತನ್ನು ಅನುಭವಿಸುವವರು ತಿರಸ್ಕಾರಕ್ಕೆ ಯೋಗ್ಯರೆಂಬುದು ನೆಮ್ಮದಿಯಿಂದಿರುವವನ ಯೋಚನೆ; ಜಾರಿ ಬಿದ್ದವರಿಗೆ ಅಪಮಾನವು ಕಾದಿರುತ್ತದೆ. 6 ಕಳ್ಳರ ಗುಡಾರಗಳಾದರೋ ಸಮೃದ್ಧವಾಗಿರುವವು, ಕೈಯಲ್ಲಿರುವುದನ್ನೇ ದೇವರನ್ನಾಗಿ ಮಾಡಿಕೊಂಡು, ದೇವರನ್ನು ಕೋಪಕ್ಕೆ ಗುರಿಮಾಡುವವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದಿರುವರು. 7 ಆದರೆ ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶ ಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು; 8 ಭೂಮಿಯನ್ನು ಮಾತನಾಡಿಸು, ನಿನಗೆ ಬೋಧಿಸುವುದು; ಸಮುದ್ರದ ಮೀನುಗಳು ನಿನಗೆ ಹೇಳುವವು. 9 ಈ ಎಲ್ಲವುಗಳ ಸಾಕ್ಷಿಯಿಂದ ಯೆಹೋವನ ಕೈಯೇ ಸಕಲ ಕಾರ್ಯಗಳನ್ನು ಮಾಡುತ್ತದೆ ಎಂದು ಯಾರಿಗೆ ತಾನೇ ಗೊತ್ತಾಗುವುದಿಲ್ಲ? 10 ಪ್ರತಿ ಪ್ರಾಣಿಯ ಪ್ರಾಣವು, ಸಮಸ್ತ ಮನುಷ್ಯರ ಆತ್ಮಗಳೂ ಯೆಹೋವನ ಕೈಯಲ್ಲಿರುವವು. 11 ಬಾಯಿಯು ಆಹಾರವನ್ನು ರುಚಿ ನೋಡುವ ಪ್ರಕಾರ ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ. 12 ಜ್ಞಾನವು ವೃದ್ಧರಲ್ಲೇ ಅಡಗಿದೆಯೋ? ದಿರ್ಘಾಷ್ಯರಲ್ಲಿ ವಿವೇಕವಿದೆ. 13 ಆತನಲ್ಲಿ ಜ್ಞಾನವೂ ಶಕ್ತಿಯೂ ಉಂಟು, ಆಲೋಚನೆಯೂ, ವಿವೇಕವೂ ಆತನವೇ. 14 ಇಗೋ, ಯಾರೂ ಕಟ್ಟದ ಹಾಗೆ ಕೆಡವಿಬಿಡುವನು, ಯಾರೂ ಬಿಡಿಸದಂತೆ ಸೆರೆಹಾಕುವನು. 15 ನೋಡಿರಿ, ಆತನು ನೀರುಗಳನ್ನು ತಡೆದರೆ ಅವು ಬತ್ತಿಹೋಗುತ್ತವೆ; ಆತನು ನೀರುಗಳನ್ನು ಬಿಟ್ಟರೆ, ಅವು ಭೂಮಿಯನ್ನು ಹಾಳುಮಾಡುತ್ತವೆ. 16 ಆತನಲ್ಲಿ ಬಲವೂ, ಸಾಮರ್ಥ್ಯವೂ ಉಂಟು; ತಪ್ಪಿದವನೂ, ತಪ್ಪಿಸಿದವನೂ ಆತನಿಗೆ ಅಧೀನರಾಗಿರುವರು. 17 ಮಂತ್ರಿಗಳನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು, ನ್ಯಾಯಾಧಿಪತಿಗಳನ್ನು ಹುಚ್ಚರನ್ನಾಗಿ ಮಾಡುವನು. 18 ಅರಸರು ಹಾಕಿದ ಬಂಧನವನ್ನು ಬಿಚ್ಚಿಬಿಟ್ಟು ಅವರ ಸೊಂಟಕ್ಕೆ ನಡುಕಟ್ಟನ್ನು ಬಿಗಿಯುವನು. 19 ಯಾಜಕರನ್ನು ಸುಲಿಗೆಮಾಡಿ ಸಾಗಿಸಿಕೊಂಡು ಹೋಗುವನು, ಪ್ರಧಾನರನ್ನು ದೊಬ್ಬಿಬಿಡುವನು. 20 ಆಲೋಚನಾಕರ್ತರ ವಾಕ್ಚಾತುರ್ಯವನ್ನು ಕುಗ್ಗಿಸುತ್ತಾನೆ, ಹಿರಿಯರ ವಿವೇಕವನ್ನು ತೆಗೆದುಹಾಕುವನು. 21 ಪ್ರಭುಗಳಿಗೆ ಅವಮಾನವನ್ನು ಉಂಟುಮಾಡಿ ಬಲಿಷ್ಠರ ನಡುಕಟ್ಟನ್ನು ಸಡಿಲಿಸುವನು. 22 ಅಗಾಧ ವಿಷಯಗಳನ್ನು ಕತ್ತಲೊಳಗಿಂದ ಬಯಲಿಗೆ ತಂದು ಗಾಢಾಂಧಕಾರವನ್ನು ಪ್ರಕಾಶಗೊಳಿಸುವನು. 23 ಜನಾಂಗಗಳನ್ನು ವೃದ್ಧಿಗೊಳಿಸಿ ನಾಶಪಡಿಸುವನು, ಅವುಗಳನ್ನು ವಿಸ್ತರಿಸಿ ಗಡೀಪಾರುಮಾಡುವನು. 24 ಪ್ರಜಾಪ್ರಮುಖರ ಬುದ್ಧಿಯನ್ನು ತೊಲಗಿಸಿ, ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವನು. 25 ಅವರು ಬೆಳಕಿಲ್ಲದ ಕತ್ತಲಲ್ಲಿ ತಡಕಾಡುವರು; ಅವರನ್ನು ಅಮಲೇರಿದವರಂತೆ ಓಲಾಡಿಸಿ ತಡವರಿಸುವಂತೆ ಮಾಡುವನು.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.