ಯೋಬ 10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೋಬನ ಮತ್ತೆ ದೇವರಿಗಿಟ್ಟ ಮೊರೆ 1 ನನ್ನ ಜೀವವೇ ನನಗೆ ಬೇಸರವಾಗಿದೆ. ಎದೆಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು. 2 ನಾನು ದೇವರ ಮುಂದೆ, “ನನ್ನನ್ನು ಅಪರಾಧಿಯೆಂದು ನಿರ್ಣಯಿಸಬೇಡ, ನನ್ನೊಡನೆ ಏಕೆ ವ್ಯಾಜ್ಯವಾಡುತ್ತೀ ತಿಳಿಸು ಎನ್ನುವೆನು. 3 ನೀನು ದುಷ್ಟರ ಆಲೋಚನೆಗೆ ಪ್ರಸನ್ನನಾಗಿ ನಿನ್ನ ಕೈಕಷ್ಟದಿಂದ ಸೃಷ್ಟಿಸಿದ್ದನ್ನು ತಿರಸ್ಕರಿಸಿ, ಬಾಧಿಸುವುದು ನಿನಗೆ ಸಂತೋಷವೋ? 4 ನೀನು ಮಾಂಸದ ಕಣ್ಣುಳ್ಳವನೋ? ಮನುಷ್ಯರು ನೋಡುವಂತೆ ನೋಡುತ್ತೀಯಾ? 5 ನಿನ್ನ ದಿನಗಳು ಮನುಷ್ಯನ ದಿನಗಳಷ್ಟು ಅಲ್ಪವಾಗಿವೆಯೋ? ನಿನ್ನ ಸಂವತ್ಸರಗಳೂ ಮಾನವನ ದಿನಗಳಷ್ಟೇನೇ, 6 ನೀನು ಇಷ್ಟು ಅವಸರದಿಂದ ನನ್ನ ದೋಷವನ್ನು ಹುಡುಕಿ, ನನ್ನ ಪಾಪವನ್ನು ವಿಚಾರಿಸುವುದೇಕೆ? 7 ನಾನು ಅಪರಾಧಿಯಲ್ಲವೆಂದು ನಿನಗೆ ತಿಳಿಯಿತಲ್ಲಾ; ನಿನ್ನ ಕೈಯೊಳಗಿಂದ ಬಿಡಿಸತಕ್ಕವರು ಯಾರೂ ಇಲ್ಲವೋ? 8 ನೀನು ನನ್ನನ್ನು ನಿರ್ಮಿಸಿ ರೂಪಿಸಿದ್ದರೂ, ಈಗ ಮನಸ್ಸನ್ನು ಬೇರೆ ಮಾಡಿಕೊಂಡು ನನ್ನನ್ನು ನಾಶ ಮಾಡಿಬಿಡುವೆಯಾ? 9 ನೀನು ನನ್ನನ್ನು ಜೇಡಿಮಣ್ಣಿನಿಂದಲೇ ರೂಪಿಸಿದ್ದೀಯೆಂದು ಕೃಪೆಮಾಡಿ ನೆನಸಿಕೋ. ನನ್ನನ್ನು ತಿರುಗಿ ಮಣ್ಣಾಗುವಂತೆ ಮಾಡುವೆಯಾ? 10 ನೀನು ನನ್ನನ್ನು ಹಾಲಿನಂತೆ ಹೊಯ್ದು, ಮೊಸರಿನ ಹಾಗೆ ಹೆಪ್ಪುಗಟ್ಟಿಸಿದಿಯಲ್ಲಾ. 11 ನನ್ನನ್ನು ಎಲುಬು ನರಗಳಿಂದ ಹೆಣೆದು ಮಾಂಸಚರ್ಮಗಳಿಂದ ಹೊದಿಸಿದಿ. 12 ನೀನು ನನಗೆ ಜೀವವನ್ನು ಅನುಗ್ರಹಿಸಿ ಕೃಪೆತೋರಿಸಿದ್ದಿ; ನಿನ್ನ ಪರಾಂಬರಿಕೆ ನನ್ನ ಆತ್ಮವನ್ನು ಕಾಪಾಡಿದೆ. 13 ಆದರೂ ನಿನ್ನ ಹೃದಯದಲ್ಲಿ ಇವುಗಳನ್ನು ಮರೆಮಾಡಿಕೊಂಡಿದ್ದಿ, ಇವು ನಿನ್ನಲ್ಲಿ ಇದ್ದೇ ಇರುತ್ತವೆಂದು ನನಗೆ ಗೊತ್ತುಂಟು. 14 ಅದೇನೆಂದರೆ, ನಾನು ತಪ್ಪುಮಾಡಿದರೆ ನೀನು ಗಮನಿಸುತ್ತಿ; ನನ್ನ ದೋಷವನ್ನು ಕ್ಷಮಿಸುವುದಿಲ್ಲ. 15 ಅಯ್ಯೋ, ನಾನು ದುರ್ಮಾರ್ಗಿಯಾದರೆ ನನಗೇನು ಗತಿ! ನಾನು ಸನ್ಮಾರ್ಗಿಯಾದರೂ, ನನ್ನ ಶ್ರಮೆಗಳನ್ನು ನೋಡುತ್ತಾ ಅವಮಾನಭರಿತನಾಗಿ ತಲೆಯೆತ್ತಲಾರೆನು. 16 ತಲೆಯೆತ್ತಿದರೆ ಸಿಂಹದಂತೆ ನನ್ನನ್ನು ಬೇಟೆಯಾಡುವಿ; ನಿನ್ನ ಅದ್ಭುತ ಚಮತ್ಕಾರವನ್ನು ತಿರುಗಿ ನನ್ನಲ್ಲಿ ತೋರಿಸುವಿ. 17 ನನ್ನ ವಿರುದ್ಧವಾಗಿ ಹೊಸ ಹೊಸ ಸಾಕ್ಷಿಗಳನ್ನು ಬರಮಾಡಿ ಹೆಚ್ಚೆಚ್ಚಾಗಿ ನನ್ನ ಮೇಲೆ ಸಿಟ್ಟುಗೊಳ್ಳುವಿ. ಸೈನ್ಯವು ತರಂಗ ತರಂಗವಾಗಿ ನನ್ನ ಮೇಲೆ ಬೀಳುವುದಲ್ಲಾ. 18 ನನ್ನನ್ನು ಗರ್ಭದಿಂದ ಏಕೆ ಹೊರತೆಗೆದೆ? ಯಾರೂ ನನ್ನನ್ನು ನೋಡದಿರುವಾಗಲೇ ನಾನು ಪ್ರಾಣಬಿಡಬೇಕಾಗಿತ್ತು. 19 ಆಗ ನಾನು ಇರುತ್ತಿರಲಿಲ್ಲ; ನನ್ನನ್ನು ಗರ್ಭದಿಂದ ಸಮಾಧಿಗೆ ಹೊತ್ತುಕೊಂಡು ಹೋಗುತ್ತಿದ್ದರು. 20 ನನ್ನ ದಿನಗಳು ಅಲ್ಪವಾಗಿರುತ್ತವಲ್ಲಾ? ಬಿಡು, ನಿನ್ನ ದೃಷ್ಟಿಯನ್ನು ನನ್ನ ಕಡೆಯಿಂದ ತಿರುಗಿಸು. 21 ನಾನು ಅಂಧಕಾರದಿಂದಲೂ, ಮರಣಾಂಧಕಾರದಿಂದಲೂ ತುಂಬಿದ ದೇಶಕ್ಕೆ ಹೋಗುವುದರೊಳಗೆ ಸ್ವಲ್ಪ ಹರ್ಷಗೊಳ್ಳಲು ಅವಕಾಶವಾಗಲಿ. ಆ ದೇಶದಿಂದ ತಿರುಗಿ ಬರಲಾರೆನು. 22 ರಾತ್ರಿಗೂ, ಮರಣಾಂಧಕಾರಕ್ಕೂ ಸಮಾನವಾದ, ಕಗ್ಗತ್ತಲು ಅದನ್ನು ಆವರಿಸಿದೆ, ಅಲ್ಲಿ ಏನೂ ಕ್ರಮವಿಲ್ಲ, ಅದರ ಬೆಳಕು ರಾತ್ರಿಯ ಬೆಳಕಿನಂತೆ.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.