ಯೆಹೋಶುವ 9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಗಿಬ್ಯೋನ್ಯರು ಯುಕ್ತಿಯಿಂದ ಉಳಿದದ್ದೂ, ಇಸ್ರಾಯೇಲರಿಗೆ ದಾಸರಾದದ್ದೂ 1 ಯೊರ್ದನ್ ನದಿಯ ಆಚೆಗಿರುವ ಬೆಟ್ಟದ ಮೇಲಿನ ಪ್ರದೇಶ, ಕಣಿವೆ ಪ್ರದೇಶ, ಲೆಬನೋನಿನ ಎದುರಿಗಿರುವ ಮಹಾಸಾಗರದ ತೀರಪ್ರದೇಶ ಇವುಗಳಲ್ಲಿ ವಾಸವಾಗಿದ್ದ ಅಮೋರಿಯ, ಹಿತ್ತಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ರಾಜರು ನಡೆದ ಸಂಗತಿಯನ್ನು ಕೇಳಿದರು ಹಾಗೂ 2 ಒಂದೇ ಮನಸ್ಸಿನಿಂದ ಯೆಹೋಶುವನಿಗೂ ಇಸ್ರಾಯೇಲ್ಯರಿಗೂ ವಿರೋಧವಾಗಿ ಯುದ್ಧಮಾಡುವುದಕ್ಕೆ ಕೂಡಿಕೊಂಡರು. 3 ಯೆರಿಕೋವಿನವರನ್ನೂ ಮತ್ತು ಆಯಿ ಎಂಬ ಊರಿನವರನ್ನೂ ಯೆಹೋಶುವನು ಸಂಹರಿಸಿದ ಸುದ್ದಿಯು ಗಿಬ್ಯೋನಿನ ನಿವಾಸಿಗಳಿಗೆ ಮುಟ್ಟಿತು 4 ಅವರು ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ ಅವರು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿ ತಟ್ಟುಗಳನ್ನು ಹಾಕಿ, ಅವುಗಳ ಮೇಲೆ ತೇಪೆ ಹಾಕಿದ ದ್ರಾಕ್ಷಾರಸದ ಹಳೆಯ ಬುದ್ದಲಿಗಳನ್ನು ಹೇರಿದರು, 5 ಹರಿದುಹೋಗಿದ್ದ ಹಳೆಯ ಕೆರಗಳನ್ನು ಮೆಟ್ಟಿಕೊಂಡರು. ಹಳೆಯ ಬಟ್ಟೆಗಳನ್ನು ಹಾಕಿಕೊಂಡರು. ಒಣರೊಟ್ಟಿ ಚೂರುಗಳನ್ನು ಬುತ್ತಿಯಾಗಿ ಕಟ್ಟಿಕೊಂಡರು. 6 ತಾವು ರಾಯಭಾರಿಗಳೆಂದು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಬಂದರು. ಅವನಿಗೂ ಇಸ್ರಾಯೇಲ್ಯರಿಗೂ “ನಾವು ದೂರದೇಶದಿಂದ ಬಂದವರು. ನೀವು ನಮ್ಮ ಸಂಗಡ ಒಂದು ಒಪ್ಪಂದ ಮಾಡಿಕೊಳ್ಳಬೇಕು” ಎಂದು ಕೇಳಿ ಕೊಂಡರು. 7 ಆಗ ಇಸ್ರಾಯೇಲ್ಯರು ಹಿವ್ವಿಯರಾದ ಅವರಿಗೆ “ಬಹುಶಃ ನೀವು ನಮ್ಮ ದೇಶದ ನಿವಾಸಿಗಳೇ ಆಗಿರಬಹುದು. ಹೀಗಿರುವುದರಿಂದ ನಾವು ನಿಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳುವುದು ಹೇಗೆ?” ಎಂದು ಉತ್ತರಕೊಟ್ಟರು. 8 ಅವರು ಯೆಹೋಶುವನಿಗೆ “ನಾವು ನಿಮ್ಮ ದಾಸರು” ಎಂದರು. ಯೆಹೋಶುವನು ಅವರನ್ನು “ನೀವು ಯಾರು? ಎಲ್ಲಿಯವರು?” ಎಂದು ವಿಚಾರಿಸಿದನು. 9 ಅವರು “ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮ ಮಹತ್ತನ್ನು ಕೇಳಿ ಬಹುದೂರ ದೇಶದಿಂದ ಬಂದಿದ್ದೇವೆ. ನಮ್ಮ ಹಿರಿಯರೂ ದೇಶನಿವಾಸಿಗಳೂ ಯೆಹೋವನು ಐಗುಪ್ತದಲ್ಲಿ ನಡಿಸಿದ ಮಹತ್ಕಾರ್ಯಗಳ ಸುದ್ದಿಯನ್ನು ಕೇಳಿದ್ದಾರೆ. 10 ಹೆಷ್ಬೋನಿನ ಅರಸನಾದ ಸೀಹೋನ್, ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಎಂಬ ಈ ಇಬ್ಬರು ಅಮೋರಿಯರ ಅರಸರಿಗೆ ಯೆಹೋವನು ಮಾಡಿದ್ದೆಲ್ಲವನ್ನೂ ಕೇಳಿದ್ದಾರೆ. 11 ‘ನೀವು ಪ್ರಯಾಣಕ್ಕೋಸ್ಕರ ಬುತ್ತೀ ಕಟ್ಟಿಕೊಂಡು ಹೋಗಿ ಇಸ್ರಾಯೇಲ್ಯರನ್ನು ಎದುರುಗೊಂಡು “ನಾವು ನಿಮ್ಮ ಸೇವಕರು”, ನೀವು ನಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳಬೇಕು ಎಂಬುದಾಗಿ ಅವರನ್ನು ಬೇಡಿಕೊಳ್ಳಿರಿ ಎಂದು ಹೇಳಿ ನಮ್ಮನ್ನು ಕಳುಹಿಸಿದರು. 12 ನಾವು ನಿಮ್ಮನ್ನು ಎದುರುಗೊಳ್ಳುವುದಕ್ಕಾಗಿ ಮನೆಬಿಟ್ಟು ಹೊರಟಾಗ ಪ್ರಯಾಣಕ್ಕೋಸ್ಕರ ತೆಗೆದುಕೊಂಡ ಈ ರೊಟ್ಟಿ ಬಿಸಿಯಾಗಿತ್ತು. ಈಗ ಒಣಗಿ ಚೂರುಚೂರಾಗಿದೆ ನೋಡಿರಿ. 13 ನಾವು ದ್ರಾಕ್ಷಾರಸ ತುಂಬಿಸಿಕೊಂಡಿದ್ದ ಈ ಬುದ್ದಲಿಗಳು ಹೊಸದಾಗಿದ್ದವು; ಈಗ ಹರಿದುಹೋಗಿವೆ. ನಮ್ಮ ಬಟ್ಟೆಬರೆಗಳು ಹಾಗೂ ಕೆರಗಳು ದೀರ್ಘಪ್ರಯಾಣದಿಂದ ಸವೆದುಹೋಗಿವೆ’” ಎಂದು ವಿವರಿಸಿದರು. 14 ಆಗ ಇಸ್ರಾಯೇಲ್ಯರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಯೆಹೋವನನ್ನು ವಿಚಾರಿಸಲಿಲ್ಲ. 15 ಯೆಹೋಶುವನು ಅವರೊಡನೆ “ನಿಮ್ಮ ಜೀವವನ್ನು ಕಾಪಾಡುತ್ತೇವೆ” ಎಂದು ಶಾಂತಿ ಸಂಧಾನ ಮಾಡಿಕೊಂಡನು. ಸಭೆಯ ನಾಯಕರೂ ಹಾಗೆಯೇ ಪ್ರಮಾಣ ಮಾಡಿದರು. ಜನರ ಪ್ರಧಾನರೂ ಪ್ರಮಾಣಮಾಡಿದರು. 16 ಈ ಒಪ್ಪಂದವಾದ ಮೂರು ದಿನಗಳ ಮೇಲೆ ಅವರು ತಮ್ಮ ನೆರೆಯವರೆಂದು ತಮ್ಮ ಮಧ್ಯದಲ್ಲಿಯೇ ವಾಸಿಸುವವರೆಂದು ಇಸ್ರಾಯೇಲ್ಯರಿಗೆ ಗೊತ್ತಾಯಿತು. 17 ಹೇಗೆಂದರೆ ಇಸ್ರಾಯೇಲ್ಯರು ಮೂರನೆಯ ದಿನದಲ್ಲಿ ಹೊರಟು ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳನ್ನು ಸೇರಿದರು. ಆಗ ಆ ಊರುಗಳು ಆ ಜನರದ್ದೇ ಎಂದು ಗೊತ್ತಾಯಿತು. 18 ಸಭೆಯ ನಾಯಕರು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಆ ಜನರಿಗೆ ಪ್ರಮಾಣಮಾಡಿದ್ದರಿಂದ ಇಸ್ರಾಯೇಲ್ಯರು ಅವರನ್ನು ಕೊಲ್ಲಲಿಲ್ಲ. ಆದರೆ ಸಭಿಕರೆಲ್ಲರು ತಮ್ಮ ನಾಯಕರಿಗೆ ವಿರೋಧವಾಗಿ ಗೊಣಗಾಡಿದರು. 19 ಆಗ ನಾಯಕರೆಲ್ಲರು ಸಭೆಯ ಎಲ್ಲಾ ಸದಸ್ಯರಿಗೆ “ನಾವು ಇಸ್ರಾಯೇಲರ ದೇವರಾದ ಯೆಹೋವನ ಹೆಸರಿನಲ್ಲಿ ಅವರಿಗೆ ಪ್ರಮಾಣ ಮಾಡಿದ್ದರಿಂದ ಅವರನ್ನು ಮುಟ್ಟಲಾಗದು. 20 ನಾವು ಇಟ್ಟ ಆಣೆಯ ನಿಮಿತ್ತ ದೇವರ ಕೋಪವು ನಮ್ಮ ಮೇಲೆ ಬಾರದಂತೆ ಅವರನ್ನು ಜೀವದಿಂದುಳಿಸಬೇಕು. ನಾವು ಹೀಗೆ ಮಾಡೋಣ, ಅವರನ್ನು ಜೀವದಿಂದ ಉಳಿಸಿ ಬಿಟ್ಟುಬಿಡೋಣ 21 ಅವರು ಸಮೂಹಕ್ಕೆಲ್ಲಾ ಕಟ್ಟಿಗೆ ಸೀಳುವವರೂ ನೀರು ಹೊರುವವರೂ ಆಗಿರಲಿ” ಎಂದು ಹೇಳಿದರು. ನಾಯಕರ ಮಾತಿನಂತೆಯೇ ಆಯಿತು. 22 ಯೆಹೋಶುವನು ಗಿಬ್ಯೋನ್ಯರನ್ನು ಕರೆಸಿ ಅವರಿಗೆ “ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ ಬಹು ದೂರದವರೆಂದು ಹೇಳಿ ನಮ್ಮನ್ನು ವಂಚಿಸಿದ್ದೇಕೆ? 23 ಇದರಿಂದ ನೀವು ಶಾಪಗ್ರಸ್ತರು! ನೀವು ಯಾವಾಗಲೂ ದಾಸರಾಗಿದ್ದು ನನ್ನ ದೇವರ ಮಂದಿರಕ್ಕೆ ಕಟ್ಟಿಗೆ ಹೊಡೆಯುವವರೂ ನೀರುತರುವವರೂ ಆಗಿರಬೇಕು” ಎಂದನು. 24 ಅವರು ಯೆಹೋಶುವನಿಗೆ “ನಿನ್ನ ದೇವರಾದ ಯೆಹೋವನು ತನ್ನ ಸೇವಕನಾದ ಮೋಶೆಗೆ ‘ನಾನು ನಿಮಗೆ ಈ ದೇಶವನ್ನೆಲ್ಲಾ ಕೊಡುವಾಗ ನೀವು ಇದರ ಎಲ್ಲಾ ನಿವಾಸಿಗಳನ್ನು ಸಂಹರಿಸಿ ಬಿಡಬೇಕೆಂದು’ ಆಜ್ಞಾಪಿಸಿದ್ದನ್ನು ಕೇಳಿ ನಮ್ಮ ಪ್ರಾಣ ತೆಗೆಯುವಿರೆಂದು ಹೆದರಿ ಹೀಗೆ ಮಾಡಿದೆವು. 25 ಇಗೋ, ಈಗ ನಾವು ನಿನ್ನ ಕೈಯಲ್ಲಿದ್ದೇವೆ; ನಿನಗೆ ಯಾವುದು ಒಳ್ಳೆಯದು, ನ್ಯಾಯವಾದುದ್ದು ಎಂದು ತೋರುತ್ತದೋ ಅದರಂತೆ ನಮಗೆ ಮಾಡು” ಎಂದು ಉತ್ತರಕೊಟ್ಟರು. 26 ಯೆಹೋಶುವನು ತಾನು ಮೊದಲು ಹೇಳಿದಂತೆಯೇ ಮಾಡಿದನು. ಅವನು ಅವರನ್ನು ಇಸ್ರಾಯೇಲ್ಯರ ಕೈಯಿಂದ ಹತರಾಗದಂತೆ ತಪ್ಪಿಸಿದನು. 27 ಇಸ್ರಾಯೇಲ್ಯರಿಗಾಗಿ ಯೆಹೋವನು ಆರಿಸಿಕೊಂಡ ಸ್ಥಳದಲ್ಲಿ ಕಟ್ಟಲಾಗುವ ಆತನ ಯಜ್ಞವೇದಿಗೂ ಕಟ್ಟಿಗೆ ಕಡಿಯುವವರನ್ನಾಗಿ ಹಾಗೂ ನೀರು ಹೊರುವವರನ್ನಾಗಿ ಅವರನ್ನು ನೇಮಿಸಿದನು. ಅವರು ಇಂದಿನವರೆಗೂ ಅದೇ ಕೆಲಸವನ್ನು ಮಾಡಿಕೊಂಡು ಇಸ್ರಾಯೇಲ್ಯರೊಂದಿಗಿದ್ದಾರೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.