Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಗಿಲ್ಗಾಲಿನಲ್ಲಿ ಇಸ್ರಾಯೇಲ್ಯರಿಗೆ ಮಾಡಲಾದ ಸುನ್ನತಿ ಸಂಸ್ಕಾರ ಹಾಗೂ ಪಸ್ಕಹಬ್ಬ ಆಚರಿಸಿದ್ದು

1 ಯೊರ್ದನಿನ ಪಶ್ಚಿಮದಲ್ಲಿದ್ದ ಅಮೋರಿಯರ ಎಲ್ಲಾ ಅರಸರು ಮತ್ತು ಸಮುದ್ರದ ಬಳಿಯಲ್ಲಿದ್ದ ಎಲ್ಲಾ ಕಾನಾನ್ಯರ ರಾಜರು, ಯೆಹೋವನು ಇಸ್ರಾಯೇಲ್ಯರ ಮುಂದೆ ಯೊರ್ದನಿನ ಹೊಳೆಯನ್ನು ಬತ್ತಿಸಿ, ಅವರನ್ನು ದಾಟಿಸಿದನೆಂಬ ವಾರ್ತೆ ಕೇಳಲು ಅವರ ಎದೆಯೊಡೆದು ಹೋಯಿತು. ಇಸ್ರಾಯೇಲ್ಯರ ನಿಮಿತ್ತವಾಗಿ ಅವರು ಬಲಗುಂದಿ ಹೋದರು.

2 ಆ ಸಮಯದಲ್ಲಿ ಯೆಹೋವನು ಯೆಹೋಶುವನಿಗೆ “ನೀನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಪುನಃ ಇಸ್ರಾಯೇಲ್ಯರಿಗೆ ಸುನ್ನತಿ ಮಾಡು” ಎಂದು ಹೇಳಲು

3 ಯೆಹೋಶುವನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಸುನ್ನತಿ ಗುಡ್ಡದಲ್ಲಿ ಇಸ್ರಾಯೇಲ್ಯರಿಗೆ ಸುನ್ನತಿ ಮಾಡಿದನು.

4 ಯೆಹೋಶುವನು ಸುನ್ನತಿ ಮಾಡಿದ್ದಕ್ಕೆ ಕಾರಣವೇನಂದರೆ ಐಗುಪ್ತದಿಂದ ಹೊರಟು ಬಂದ ಗಂಡಸರಲ್ಲಿ ಯುದ್ಧವೀರರೆಲ್ಲರು ಆ ದೇಶವನ್ನು ಬಿಟ್ಟು ಬಂದ ನಂತರ ಅರಣ್ಯದಲ್ಲಿ ಸತ್ತು ಹೋದರು.

5 ಅಲ್ಲಿಂದ ಬಂದಿದ್ದ ಗಂಡಸರಿಗೆಲ್ಲಾ ಸುನ್ನತಿಯಾಗಿತ್ತು. ಐಗುಪ್ತವನ್ನು ಬಿಟ್ಟ ನಂತರ ಅರಣ್ಯ ಪ್ರಯಾಣದಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಸುನ್ನತಿಯಾಗಿರಲಿಲ್ಲ.

6 ಐಗುಪ್ತದಿಂದ ಬಂದ ಇಸ್ರಾಯೇಲ್ಯರು ಯೆಹೋವನ ಮಾತನ್ನು ಕೇಳದೆ ಹೋಗಿದ್ದರಿಂದ ಅವರು ತಮ್ಮ ಭಟರೆಲ್ಲರು ಸಂಹಾರವಾಗುವ ತನಕ ನಲವತ್ತು ವರ್ಷ ಅರಣ್ಯದಲ್ಲೇ ಅಲೆಯುತ್ತಿರಬೇಕಾಯಿತು. ಯೆಹೋವನು ತಾನು ಆ ಜನರ ಪೂರ್ವಿಕರಿಗೆ ವಾಗ್ದಾನ ಮಾಡಿದ್ದ ಹಾಲೂ ಜೇನೂ ಹರಿಯುವ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಆಣೆಯಿಟ್ಟನು.

7 ಆದುದರಿಂದ ಅವರ ಪೂರ್ವಿಕರಿಗೆ ಪ್ರತಿಯಾಗಿ ಹುಟ್ಟಿದ ಗಂಡು ಮಕ್ಕಳಿಗೆ ಯೆಹೋಶುವನು ಸುನ್ನತಿ ಮಾಡಿದನು. ದಾರಿಯಲ್ಲಿ ಯಾರೂ ಅವರಿಗೆ ಸುನ್ನತಿಮಾಡಿರಲಿಲ್ಲ. ಆದುದರಿಂದ ಅವರು ಸುನ್ನತಿಯಿಲ್ಲದವರಾಗಿದ್ದರು.

8 ಸುನ್ನತಿಯಾದ ಮೇಲೆ ಆ ಜನರು ವಾಸಿಯಾಗುವ ತನಕ ತಮ್ಮ ತಮ್ಮ ಪಾಳೆಯಗಳಲ್ಲಿಯೇ ಇದ್ದರು.

9 ಯೆಹೋವನು ಯೆಹೋಶುವನಿಗೆ, “ನಾನು ಐಗುಪ್ತ್ಯರ ನಿಂದೆಯನ್ನು ಈ ಹೊತ್ತು ನಿಮ್ಮಿಂದ ನಿವಾರಿಸಿ ಬಿಟ್ಟಿದ್ದೇನೆ” ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿರುತ್ತದೆ.

10 ಇಸ್ರಾಯೇಲ್ಯರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಯೆರಿಕೋವಿನ ಬೈಲಿನಲ್ಲಿ ಪಸ್ಕಹಬ್ಬವನ್ನು ಆಚರಿಸಿದರು.

11 ಮರುದಿನದಿಂದ ಆ ದೇಶದ ಧಾನ್ಯವನ್ನು ಊಟಕ್ಕೆ ಉಪಯೋಗಿಸಲು ತೊಡಗಿದರು. ಹೇಗೆಂದರೆ ಅದೇ ಪಸ್ಕಹಬ್ಬದ ದಿನದಲ್ಲಿ ಅವರು ಹುಳಿಯಿಲ್ಲದ ರೊಟ್ಟಿಗಳನ್ನೂ, ಸುಟ್ಟ ತೆನೆಗಳನ್ನೂ ತಿಂದರು.

12 ಆ ದೇಶದ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ತಿರುಗಿ ಸಿಕ್ಕಲೇ ಇಲ್ಲ. ಇಸ್ರಾಯೇಲ್ಯರು ಆ ವರ್ಷವೆಲ್ಲ ಕಾನಾನ್ ದೇಶದ ಉತ್ಪನ್ನವನ್ನೇ ಅನುಭವಿಸಿದರು.


ಯೆಹೋವನ ಸೇನಾಧಿಪತಿ ಯೆಹೋಶುವನಿಗೆ ಪ್ರತ್ಯಕ್ಷವಾದದ್ದು

13 ಯೆಹೋಶುವನು ಯೆರಿಕೋವಿನ ಹತ್ತಿರದಲ್ಲಿ ಇದ್ದಾಗ ಒಮ್ಮೆ ತನ್ನ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ತನ್ನೆದುರಿನಲ್ಲಿ ನಿಂತಿರುವುದನ್ನು ಕಂಡನು. ಯೆಹೋಶುವನು ಅವನ ಸಮೀಪಕ್ಕೆ ಹೋಗಿ “ನೀನು ನಮ್ಮವನೋ ಅಥವಾ ಶತ್ರು ಪಕ್ಷದವನೋ?” ಎಂದು ಕೇಳಲು

14 ಆ ಮನುಷ್ಯನು “ನಾನು ಅಂಥವನಲ್ಲ; ಯೆಹೋವನ ಸೇನಾಧಿಪತಿ; ಈಗಲೇ ಬಂದಿದ್ದೇನೆ” ಎಂದು ಉತ್ತರಿಸಿದನು. ಆಗ ಯೆಹೋಶುವನು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ “ಒಡೆಯಾ, ನಿಮ್ಮ ದಾಸನಾದ ನನಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ?” ಅನ್ನಲು

15 ಯೆಹೋವನ ಸೇನಾಧಿಪತಿಯು “ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು” ಎಂದು ಹೇಳಿದನು. ಯೆಹೋಶುವನು ಹಾಗೆಯೇ ಮಾಡಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು