ಯೆಹೋಶುವ 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಗೂಢಚಾರರು ಮತ್ತು ರಾಹಾಬಳು 1 ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಗುಪ್ತವಾಗಿ ಯೆರಿಕೋ ಪಟ್ಟಣವನ್ನೂ ನೋಡುವುದಕ್ಕೋಸ್ಕರ ಶಿಟ್ಟೀಮಿನಿಂದ ಕಳುಹಿಸಿದನು. ಅವರಿಗೆ “ನೀವು ಹೊರಟು ಹೋಗಿ ಕಾನಾನ್ ದೇಶದ ಯೆರಿಕೋ ಪಟ್ಟಣವನ್ನು ನೋಡಿರಿ” ಎಂದನು. ಆಗ ಅವರು ಹೊರಟು ಹೋಗಿ ರಾಹಾಬಳೆಂಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು. 2 ಜನರು ಯೆರಿಕೋವಿನ ಅರಸನಿಗೆ “ಇಗೋ, ಈ ರಾತ್ರಿ ಇಸ್ರಾಯೇಲ್ಯರ ಕಡೆಯವರು ನಮ್ಮ ದೇಶವನ್ನು ಸಂಚರಿಸಿ ಹೊಂಚುಹಾಕುವುದಕ್ಕೆ ಬಂದಿದ್ದಾರೆ” ಎಂದು ತಿಳಿಸಿದರು. 3 ಆಗ ಯೆರಿಕೋವಿನ ಅರಸನು ರಾಹಾಬಳಿಗೆ “ನಿನ್ನ ಮನೆಯಲ್ಲಿ ಇಳಿದುಕೊಂಡಿರುವ ಆ ಮನುಷ್ಯರನ್ನು ತಂದೊಪ್ಪಿಸು; ಅವರು ದೇಶವನ್ನೆಲ್ಲಾ ಸಂಚರಿಸಿ ನೋಡಿ ಹೊಂಚುಹಾಕುವುದಕ್ಕೆ ಬಂದವರು” ಎಂದು ಹೇಳಿ ಕಳುಹಿಸಿದನು. 4 ಆದರೆ ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು ಕೇಳಲು ಬಂದವರಿಗೆ, “ಆ ಮನುಷ್ಯರು ನನ್ನ ಬಳಿಗೆ ಬಂದದ್ದು ನಿಜ; ಅವರು ಎಲ್ಲಿಯವರೆಂಬುದು ನನಗೆ ತಿಳಿಯಲಿಲ್ಲ. 5 ಊರಬಾಗಿಲನ್ನು ಮುಚ್ಚುವ ಹೊತ್ತಿನಲ್ಲಿ ಕತ್ತಲಲ್ಲೇ ಹೊರಟುಹೋದರು. ಎಲ್ಲಿಗೆ ಹೋದರೆಂಬುದು ಗೊತ್ತಿಲ್ಲ. ಬೇಗನೆ ಅವರನ್ನು ಬೆನ್ನಟ್ಟಿರಿ; ನಿಮಗೆ ಸಿಕ್ಕಾರು” ಎಂದು ಹೇಳಿದಳು. 6 ಆದರೆ ಅವಳು ಆ ಮನುಷ್ಯರನ್ನು ಮಾಳಿಗೆಯ ಮೇಲೆ ಹತ್ತಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನ ಹೊರೆಗಳ ಮಧ್ಯದಲ್ಲಿ ಬಚ್ಚಿಟ್ಟಿದ್ದಳು. 7 ಅರಸನ ಆಳುಗಳು ಯೊರ್ದನಿನ ದಾರಿ ಹಿಡಿದು ಹೋಗಿ ಹೊಳೆದಾಟುವ ಸ್ಥಳದವರೆಗೂ ಹುಡುಕಿದರು. ಅವರನ್ನು ಹಿಂದಟ್ಟುವವರು ಹೋದ ಕೂಡಲೇ ಹೆಬ್ಬಾಗಿಲನ್ನು ಮುಚ್ಚಿದರು. 8 ಆ ಗೂಢಚಾರರು ಮಲಗಿಕೊಳ್ಳುವ ಮೊದಲೇ ಆಕೆಯು ಮಾಳಿಗೆ ಹತ್ತಿ ಅವರ ಬಳಿಗೆ ಬಂದು ಹೇಳಿದ್ದೇನೆಂದರೆ 9 “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆಂದು ನಾನು ಬಲ್ಲೆನು. ನಿಮ್ಮ ವಿಷಯದಲ್ಲಿ ನಮಗೆ ಮಹಾಭಯವುಂಟಾಗಿದೆ; ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟುಹೋಗಿದ್ದಾರೆ. 10 ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟಿದ್ದನ್ನೂ, ನೀವು ಯೊರ್ದನಿನ ಆಚೆಯಲ್ಲಿರುವ ಸೀಹೋನ್ ಮತ್ತು ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನಾಶಮಾಡಿದ್ದನ್ನೂ ಕೇಳಿ 11 ನಮ್ಮ ಎದೆ ಒಡೆದು ಹೋಯಿತು; ನಿಮ್ಮನ್ನು ಎದುರಿಸುವ ಧೈರ್ಯವು ಯಾರಿಗೂ ಇಲ್ಲ. ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು. 12 ಆದುದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತನ್ನು ಕೊಡಬೇಕು. ನಾನು ನಿಮಗೆ ದಯೆತೋರಿಸಿದಂತೆ ನೀವೂ ಸಹ ನನ್ನ ತಂದೆಯ ಮನೆಯವರಿಗೆ ದಯೆತೋರಿಸಬೇಕೆಂದು ಯೆಹೋವನ ಮೇಲೆ ವಾಗ್ದಾನ ನೀಡಬೇಕು. 13 ನನ್ನ ತಂದೆ ತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗಿರುವುದೆಲ್ಲವನ್ನು ನಾಶಮಾಡದೆ ಉಳಿಸುವುದಾಗಿ ಯೆಹೋವನ ಹೆಸರಿನಲ್ಲಿ ವಾಗ್ದಾನ ಮಾಡಬೇಕು ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎಂದಳು. 14 ಆಗ ಆ ಗೂಢಚಾರರು “ನೀವು ನಮ್ಮ ವಿಷಯವನ್ನು ಬಹಿರಂಗ ಮಾಡದಿದ್ದರೆ ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿರುತ್ತೇವೆ; ಯೆಹೋವನು ಈ ದೇಶವನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ಕೊಟ್ಟ ಮಾತಿನಂತೆ ನಿನ್ನಲ್ಲಿ ದಯೆಯಿಂದಲೂ ನಂಬಿಗಸ್ತಿಕೆಯಿಂದಲೂ ನಡೆದುಕೊಳ್ಳುವೆವು” ಅಂದರು. 15 ಅವಳ ಮನೆಯು ಊರಗೋಡೆಯ ಮೇಲಿದ್ದುದರಿಂದ ಅವರನ್ನು ಹಗ್ಗದ ಮೂಲಕ ಕಿಟಿಕಿಯಿಂದ ಕೆಳಕ್ಕೆ ಇಳಿಸಿ ಅವರಿಗೆ 16 “ನಿಮ್ಮನ್ನು ಹಿಂದಟ್ಟುವವರಿಗೆ ನೀವು ಸಿಕ್ಕದಂತೆ ಆ ಬೆಟ್ಟಕ್ಕೆ ಓಡಿ ಹೋಗಿ ಅಲ್ಲಿ ಮೂರು ದಿನ ಅಡಗಿಕೊಂಡಿದ್ದು, ತರುವಾಯ ಅವರು ಹಿಂದಿರುಗಿದ ಮೇಲೆ ನಿಮ್ಮ ದಾರಿ ಹಿಡಿದು ಹೋಗಿರಿ” ಎಂದಳು. 17 ಆಗ ಅವರಲ್ಲಿ ಒಬ್ಬನು ಆಕೆಗೆ “ನಾವು ಹೇಳುವ ಮಾತಿನಂತೆ ನೀನು ನಡೆಯದಿದ್ದರೆ, ನೀನು ನಮ್ಮಿಂದ ಮಾಡಿಸಿದ ವಾಗ್ದಾನಕ್ಕೆ ನಾವು ಹೊಣೆಗಾರರಲ್ಲ; 18 ನಾವು ಈ ದೇಶದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಇಳಿಸಿದ ಕಿಟಿಕಿಗೆ ಈ ಕೆಂಪು ದಾರವನ್ನು ಕಟ್ಟಬೇಕು ಮತ್ತು ನಿನ್ನ ತಂದೆತಾಯಿಗಳನ್ನೂ ಅಣ್ಣತಮ್ಮಂದಿರನ್ನೂ ಎಲ್ಲಾ ಬಂಧುಬಳಗದವರನ್ನೂ ನಿನ್ನ ಮನೆಯಲ್ಲಿ ಸೇರಿಸಿಕೊಂಡಿರಬೇಕು. 19 ಅವರಲ್ಲಿ ಯಾರಾದರೂ ಮನೆಬಿಟ್ಟು ಬೀದಿಗೆ ಬಂದರೆ ಅವರ ಮರಣಕ್ಕೆ ಅವರೇ ಕಾರಣರು; ಅದಕ್ಕೆ ನಾವು ಹೊಣೆಗಾರರಲ್ಲ. ಆದರೆ ನಿನ್ನೊಡನೆ ಮನೆಯಲ್ಲಿದ್ದವರ ಮೇಲೆ ಯಾರಾದರೂ ಕೈ ಮಾಡಿದ್ದಾದರೆ ಆ ರಕ್ತಾಪರಾಧವು ನಮ್ಮ ತಲೆಯ ಮೇಲೆ ಇರುವುದು. 20 ಇದಲ್ಲದೆ ನೀನು ನಮ್ಮ ವಿಷಯವನ್ನು ಬಹಿರಂಗಪಡಿಸಿದರೆ ನಮ್ಮಿಂದ ಮಾಡಿಸಿದ ವಾಗ್ದಾನಕ್ಕೆ ನಾವು ಹೊಣೆಗಾರರಲ್ಲ” ಎಂದು ಹೇಳಿದರು. 21 ಅದಕ್ಕೆ ಅವಳು “ನಿಮ್ಮ ಮಾತಿನಂತೆಯೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿದಳು; ಅವರು ಹೊರಟು ಹೋದ ಮೇಲೆ ಆ ಕೆಂಪು ದಾರವನ್ನು ಕಿಟಿಕಿಗೆ ಕಟ್ಟಿದಳು. 22 ಗೂಢಚಾರರು ಹೊರಟು ಹೋಗಿ ಆ ಬೆಟ್ಟವನ್ನು ಸೇರಿ ಬೆನ್ನಟ್ಟುವವರು ಹಿಂದಿರುಗುವ ತನಕ ಮೂರು ದಿನಗಳ ಕಾಲ ಅಲ್ಲೇ ತಂಗಿದ್ದರು. ಬೆನ್ನಟ್ಟುವವರು ಅವರನ್ನು ದಾರಿಯುದ್ದಕ್ಕೂ ಹುಡುಕಿ ಕಾಣದೆ ಹಿಂದಿರುಗಿದರು. 23 ಆಗ ಅವರಿಬ್ಬರೂ ಬೆಟ್ಟದಿಂದಿಳಿದು, ಹೊಳೆದಾಟಿ, ನೂನನ ಮಗನಾದ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದರು. 24 ಇದಲ್ಲದೆ ಅವರು “ಯೆಹೋಶುವನಿಗೆ ನಿಶ್ಚಯವಾಗಿ ಯೆಹೋವನು ಆ ದೇಶವನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ; ಅದರ ನಿವಾಸಿಗಳೆಲ್ಲಾ ನಮ್ಮ ನಿಮಿತ್ತ ನಡುಗುತ್ತಾ ಕಂಗೆಟ್ಟು ಹೋಗಿದ್ದಾರೆ” ಎಂದು ತಿಳಿಸಿದರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.