ಯೆಹೋಶುವ 11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಕಾನಾನ್ ದೇಶದ ಉತ್ತರ ಭಾಗವು ಇಸ್ರಾಯೇಲರ ವಶವಾದದ್ದು 1 ಹಾಚೋರಿನ ಅರಸನಾದ ಯಾಬೀನನು ಇದನ್ನೆಲ್ಲಾ ಕೇಳಿ ಯೋಬಾಬನೆಂಬ ಮಾದೋನಿನ ಅರಸನು ಶಿಮ್ರೋನಿನ ಅರಸನನ್ನು ಅಕ್ಷಾಫಿನ ಅರಸನನ್ನು, ಉತ್ತರ ದಿಕ್ಕಿನ ಪರ್ವತ ಪ್ರದೇಶ, 2 ಕಿನ್ನೆರೋತ್ ಸಮುದ್ರದ ದಕ್ಷಿಣದಲ್ಲಿನ ತಗ್ಗಾದ ಪ್ರದೇಶ, ಇಳುಕಲ್ಲಿನ ಪ್ರದೇಶ, ದೋರ್ ಊರಿನ ಪಶ್ಚಿಮದಲ್ಲಿದ್ದ ಬೆಟ್ಟದ ಮೇಲಿನ ಪ್ರದೇಶ, ಇವುಗಳ ಅರಸರನ್ನೂ ಪೂರ್ವಪಶ್ಚಿಮಗಳಲ್ಲಿರುವ 3 ಕಾನಾನ್ಯರು, ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಬೆಟ್ಟದ ಮೇಲಿನ ಪ್ರದೇಶದಲ್ಲಿದ್ದ ಯೆಬೂಸಿಯರು, ಹೆರ್ಮೋನಿನ ತಗ್ಗಿನಲ್ಲಿದ್ದ ಮಿಚ್ಪಾ ದೇಶದಲ್ಲಿದ್ದ ಹಿವ್ವಿಯರು ಇವರನ್ನೂ ಕರೆಕಳುಹಿಸಿದನು. 4 ಅವರು ಒಡನೆ ಬಹು ರಥಾಶ್ವಗಳಿಂದ ಕೂಡಿರುವ ತಮ್ಮ ಸರ್ವಸೈನ್ಯಗಳನ್ನು ತೆಗೆದುಕೊಂಡು ಹೊರಟರು. ಆ ಸೈನಿಕರು ಸಮುದ್ರ ತೀರದ ಮರಳಿನಂತೆ ಅಸಂಖ್ಯರಾಗಿದ್ದರು. 5 ಈ ಎಲ್ಲಾ ಅರಸರು ಒಟ್ಟಾಗಿ ಸೇರಿ ಮೇರೋಮ್ ಜಲಾಶಯದ ಬಳಿಯಲ್ಲಿ ಇಸ್ರಾಯೇಲ್ಯರೊಡನೆ ಯುದ್ಧಮಾಡುವುದಕ್ಕಾಗಿ ಇಳಿದುಕೊಂಡರು. 6 ಆಗ ಯೆಹೋವನು “ಯೆಹೋಶುವನಿಗೆ ನೀನು ಅವರಿಗೆ ಹೆದರಬೇಡ. ನಾಳೆ ಇದೇ ವೇಳೆಗೆ ಅವರನ್ನು ಇಸ್ರಾಯೇಲ್ಯರಿಗೆ ಒಪ್ಪಿಸುವೆನು, ಇಸ್ರಾಯೇಲರು ಅವರನ್ನು ಸಂಹರಿಸಿ ಬಿಡುವರು. ನೀನು ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ರಥಗಳನ್ನು ಸುಟ್ಟುಬಿಡಬೇಕು” ಅಂದನು. 7 ಯೆಹೋಶುವನು ಮಿಚ್ಪೆಯ ತನ್ನ ಎಲ್ಲಾ ಭಟರೊಡನೆ ಹೊರಟು ಹೋಗಿ, ಮೇರೋಮ್ ಜಲಾಶಯದ ಬಳಿಯಲ್ಲಿದ್ದ ಶತ್ರುಗಳ ಮೇಲೆ ಪಕ್ಕನೆ ಬಿದ್ದನು. 8 ಯೆಹೋವನು ಅವರನ್ನು ಇಸ್ರಾಯೇಲರ ಕೈಗೆ ಒಪ್ಪಿಸಿದನು. ಇವರು ಅವರನ್ನು ದೊಡ್ಡ ಚೀದೋನ್ ಹಾಗೂ ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಬೈಲಿನವರೆಗೂ ಅವರನ್ನು ಹಿಂದಟ್ಟಿ ಹೊಡೆದರು. ಒಬ್ಬನಾದರೂ ಉಳಿಯದಂತೆ ಎಲ್ಲರನ್ನೂ ಸಂಹರಿಸಿದರು. 9 ಯೆಹೋಶುವನು ಯೆಹೋವನ ಅಪ್ಪಣೆಗನುಸಾರವಾಗಿ ಅವರ ಕುದುರೆಗಳ ಹಿಂಗಾಲಿನ ನರಗಳನ್ನು ರಥಗಳನ್ನು ಸುಟ್ಟುಬಿಟ್ಟನು. 10 ಕೂಡಲೇ ಯೆಹೋಶುವನು ಹಿಂದಿರುಗಿ ಹಾಚೋರನನ್ನೂ ಅವರ ಅರಸನನ್ನೂ ಕತ್ತಿಯಿಂದ ಸಂಹರಿಸಿದನು. ಹಾಚೋರೆಂಬುವುದು ಪೂರ್ವಕಾಲದಲ್ಲಿ ಆ ಎಲ್ಲಾ ರಾಜ್ಯಗಳಿಗಿಂತಲು ಶ್ರೇಷ್ಠವಾಗಿತ್ತು. 11 ಇಸ್ರಾಯೇಲ್ಯರು ಅದರಲ್ಲಿದ್ದ ಎಲ್ಲರನ್ನು ಕತ್ತಿಯಿಂದ ಸಂಹರಿಸಿ ಹಾಚೋರ್ ಪಟ್ಟಣವನ್ನು ಸುಟ್ಟುಬಿಟ್ಟರು. ಒಂದು ಜೀವಿಯಾದರೂ ಉಳಿಯಲಿಲ್ಲ. 12 ನಂತರ ಯೆಹೋಶುವನು ಉಳಿದ ಅರಸರನ್ನೂ ಅವರ ಎಲ್ಲಾ ಪಟ್ಟಣಗಳನ್ನು ಹಿಡಿದು ಯೆಹೋವನ ಸೇವಕನಾದ ಮೋಶೆಯ ಆಜ್ಞೆಯಂತೆ ಅವರನ್ನು ಕತ್ತಿಯಿಂದ ಸಂಹರಿಸಿದನು. 13 ಯೆಹೋಶುವನು ಸುಟ್ಟ ಹಾಚೋರ್ ಒಂದನ್ನು ಬಿಟ್ಟರೆ ಇಸ್ರಾಯೇಲರು ದಿನ್ನೆಯ ಮೇಲಿನ ಬೇರೆ ಯಾವ ಪಟ್ಟಣವನ್ನೂ ಸುಟ್ಟುಹಾಕಲಿಲ್ಲ. 14 ಇಸ್ರಾಯೇಲರು ಅವುಗಳಲ್ಲಿದ್ದ ಪಶುಪ್ರಾಣಿಗಳನ್ನೂ ವಸ್ತುಗಳನ್ನೂ ಕೊಳ್ಳೆ ಹೊಡೆದರು. ಆದರೆ ಜನರೆಲ್ಲರನ್ನೂ ಕತ್ತಿಯಿಂದ ಹೊಡೆದು ನಿರ್ಮೂಲ ಮಾಡಿದರು. ಉಸಿರಿರುವ ಒಂದನ್ನೂ ಅವರು ಉಳಿಸಲಿಲ್ಲ. 15 ಯೆಹೋವನ ಸೇವಕನಾದ ಮೋಶೆಯು ದೇವರು ತನಗೆ ಹೇಳಿದ್ದನ್ನೆಲ್ಲಾ ಯೆಹೋಶುವನಿಗೆ ಹೇಳಿದ್ದನು. ಯೆಹೋಶುವನು ಅದರಂತೆಯೇ ಮಾಡಿದನು, ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಮೀರಲಿಲ್ಲ. ಯುದ್ಧ ಫಲವು 16 ಈ ಪ್ರಕಾರ ಬೆಟ್ಟದ ಮೇಲಿನ ಪ್ರದೇಶ, ದಕ್ಷಿಣ ಪ್ರಾಂತ್ಯ ಗೋಷೆನ್ ಸೀಮೆ, ಇಳಿಜಾರಿನ ಪ್ರದೇಶ, ತಗ್ಗಾದ ಪ್ರದೇಶ, ಇಸ್ರಾಯೇಲ್ ಸೀಮೆಯ ಪರ್ವತ ಪ್ರಾಂತ್ಯ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವುಗಳೆಲ್ಲವೂ ಯೆಹೋಶುವನಿಗೆ ಸ್ವಾಧೀನವಾದವು. 17 ಅವನು ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಬೆಟ್ಟದಿಂದ ಹೆರ್ಮೋನಿನ ಬುಡದಲ್ಲಿ ಲೆಬನೋನಿನ ಕಣಿವೆಯಲ್ಲಿರುವ ಬಾಲ್ಗಾದ್ ಪಟ್ಟಣದವರೆಗೂ ಇರುವ ದೇಶವನ್ನೆಲ್ಲಾ ಸೆರೆಹಿಡಿದು ಅದರ ಎಲ್ಲಾ ಅರಸರನ್ನು ಹಿಡಿದು ಸಂಹರಿಸಿಬಿಟ್ಟನು. 18 ಯೆಹೋಶುವನು ಈ ಎಲ್ಲಾ ಅರಸರೊಡನೆ ಬಹು ದಿನಗಳವರೆಗೂ ಯುದ್ಧ ಮಾಡಿದನು. 19 ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರು ಹೊರತು ಯಾವ ಪಟ್ಟಣದವರೂ ಇಸ್ರಾಯೇಲರೊಡನೆ ಒಪ್ಪಂದಮಾಡಿಕೊಳ್ಳಲಿಲ್ಲ ಎಲ್ಲರನ್ನೂ ಯುದ್ಧದಿಂದಲೇ ವಶಮಾಡಿಕೊಳ್ಳಬೇಕಾಯಿತು. 20 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಇಸ್ರಾಯೇಲರು ಅವರೆಲ್ಲರನ್ನು ಕರುಣೆಯಿಲ್ಲದೆ ಸಂಹರಿಸಿ ಬಿಡುವ ಹಾಗೆ ಯೆಹೋವನು ತಾನೇ ಆ ಜನರ ಹೃದಯಗಳನ್ನು ಕಠಿಣಪಡಿಸಿ ಯುದ್ಧಕ್ಕೆ ಬರುವಂತೆ ಮಾಡಿದನು. 21 ಅದೇ ಕಾಲದಲ್ಲಿ ಯೆಹೋಶುವನು ಮಲೆನಾಡುಗಳಾದ ಹೆಬ್ರೋನ್, ದೆಬೀರ್, ಅನಾಬ್ ಎಂಬ ಊರುಗಳಲ್ಲಿಯೂ ಯೆಹೂದ ಹಾಗೂ ಇಸ್ರಾಯೇಲ್ ಪ್ರಾಂತ್ಯದ ಬೆಟ್ಟಗಳಲ್ಲಿಯೂ ವಾಸವಾಗಿದ್ದ ಅನಾಕ್ಯರನ್ನು (ಉನ್ನತ ಪುರುಷರು) ನಾಶಮಾಡಿ ಅವರ ಪಟ್ಟಣಗಳನ್ನು ಹಾಳುಮಾಡಿದನು. 22 ಇಸ್ರಾಯೇಲರ ಪ್ರಾಂತ್ಯಗಳಲ್ಲಿ ಯಾರೊಬ್ಬರೂ ಉಳಿಯಲಿಲ್ಲ. ಆದರೆ ಗಾಜಾ, ಗತೂರು, ಅಷ್ಡೋದ್, ಎಂಬ ಊರುಗಳಲ್ಲಿ ಮಾತ್ರ ಕೆಲವರು ಉಳಿದಿದ್ದರು. 23 ಯೆಹೋವನು ಮೋಶೆಯ ಮುಖಾಂತರ ವಾಗ್ದಾನ ಮಾಡಿದ ಪ್ರದೇಶಗಳನ್ನೆಲ್ಲಾ ಯೆಹೋಶುವನು ಸೆರೆ ಹಿಡಿದುಕೊಂಡು ಇಸ್ರಾಯೇಲ್ ಕುಲಭಾಗಗಳಿಗನುಗುಣವಾಗಿ ಅವುಗಳನ್ನು ವಿಭಾಗಿಸಿ ಹಂಚಿಕೊಟ್ಟನು. ಯುದ್ಧವು ನಿಂತು ದೇಶದಲ್ಲೆಲ್ಲಾ ಸಮಾಧಾನವುಂಟಾಯಿತು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.