ಯೆಹೆಜ್ಕೇಲನು 43 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದೇವಾಲಯದಲ್ಲಿ ಯೆಹೋವನ ಪುನರಾಗಮನ 1 ಆಮೇಲೆ ಆತನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿಗೆ ಕರೆದುಕೊಂಡು ಹೋದನು. 2 ಇಗೋ! ಇಸ್ರಾಯೇಲಿನ ದೇವರ ಮಹಿಮೆಯು ಪೂರ್ವದಿಕ್ಕಿನ ಮಾರ್ಗವಾಗಿ ಬಂದಿತ್ತು ಮತ್ತು ಆತನ ಧ್ವನಿಯು ಜಲಪ್ರವಾಹದ ಘೋಷದಂತಿತ್ತು; ಆತನ ಮಹಿಮೆಯಿಂದ ಭೂಮಿಯು ಪ್ರಕಾಶಿಸುತ್ತಿತ್ತು. 3 ನಾನು ಕಂಡು ದರ್ಶನವೂ, ಆತನು ಪಟ್ಟಣವನ್ನು ಹಾಳುಮಾಡಲು ಬಂದಾಗ ನೋಡಿದ ದರ್ಶನದ ಹಾಗೂ, ಕೆಬಾರ್ ನದಿಯ ಹತ್ತಿರ ನನಗಾದ ದರ್ಶನದ ಹಾಗೂ ಇತ್ತು. ಆಗ ನಾನು ಬೋರಲು ಬಿದ್ದೆನು. 4 ಆಗ ಯೆಹೋವನ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿನ ಮಾರ್ಗವಾಗಿ ಆಲಯವನ್ನು ಪ್ರವೇಶಿಸಿತು. 5 ದೇವರಾತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆದು ತಂದಿತು. ಆಗ ಯೆಹೋವನ ಮಹಿಮೆಯು ಆಲಯವನ್ನು ತುಂಬಿಕೊಂಡಿತು. 6 ಆಗ ಆಲಯದೊಳಗಿಂದ ನನ್ನ ಸಂಗಡ ಮಾತನಾಡುವವನ ಶಬ್ದವನ್ನು ಕೇಳಿದೆನು. ಆ ಪುರುಷನು ನನ್ನ ಪಕ್ಕದಲ್ಲಿ ನಿಂತಿದ್ದನು. 7 ಮಾತನಾಡುವಾತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಇದು ನನ್ನ ಸಿಂಹಾಸನ, ನನ್ನ ಪಾದ ಪೀಠ, ಇಲ್ಲಿ ನಾನು ಇಸ್ರಾಯೇಲರ ಮಧ್ಯದಲ್ಲಿ ಸದಾ ವಾಸಿಸುವೆನು. ಇಸ್ರಾಯೇಲ್ ವಂಶದವರಾಗಲಿ, ಅವರ ಅರಸರಾಗಲಿ ತಮ್ಮ ದೇವದ್ರೋಹದಿಂದಲೂ, ಗತಿಸಿದ ಅರಸರ ಶವಗಳಿಂದಲೂ ನನ್ನ ಪರಿಶುದ್ಧ ನಾಮವನ್ನು ಅಪವಿತ್ರ ಮಾಡುವುದಿಲ್ಲ. 8 ನನ್ನ ಹೊಸ್ತಿಲುಗಳ ಪಕ್ಕದಲ್ಲಿ ತಮ್ಮ ಹೊಸ್ತಿಲುಗಳನ್ನು ಹಾಕಿಕೊಂಡು ನನ್ನ ಮನೆಗೂ, ತಮ್ಮ ಮನೆಗೂ ಒಂದೇ ಗೋಡೆಯಾಗುವಂತೆ ಮಾಡಿಕೊಳ್ಳುವುದರಿಂದ ಇನ್ನು ಮೇಲೆ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡುವುದಿಲ್ಲ. ತಾವು ನಡೆಸಿದ ದುರಾಚಾರಗಳಿಂದ ನನ್ನ ಪವಿತ್ರ ನಾಮವನ್ನು ಅಪವಿತ್ರ ಮಾಡಿದರು. ಆದಕಾರಣ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು. 9 ಈಗಲಾದರೂ ತಮ್ಮ ದೇವದ್ರೋಹವನ್ನು ಮತ್ತು ಅರಸರ ಶವಗಳನ್ನು ನನ್ನಿಂದ ದೂರ ಮಾಡಲಿ. ಆಗ ನಾನು ಅದರ ಮಧ್ಯದಲ್ಲಿ ಸದಾ ವಾಸಿಸುವೆನು.” ಪ್ರವಾದಿಗೆ ಕೊಟ್ಟ ಆಜ್ಞೆ 10 “ನರಪುತ್ರನೇ, ಇಸ್ರಾಯೇಲ್ ವಂಶದವರು ತಮ್ಮ ಅಪರಾಧಗಳ ನಿಮಿತ್ತ ನಾಚಿಕೆಪಡುವಂತೆ ಆಲಯವನ್ನು ಅವರಿಗೆ ತೋರಿಸು ಮತ್ತು ಅವರು ಅದನ್ನು ಅಳತೆ ಮಾಡಲಿ. 11 ತಾವು ನಡೆಸಿದ ದುಷ್ಕೃತ್ಯಗಳಿಗೆಲ್ಲಾ ನಾಚಿಕೆಪಟ್ಟರೆ, ನೀನು ಆಲಯದ ರೂಪವನ್ನೂ, ವ್ಯವಸ್ಥೆಯನ್ನೂ ಅದರ ಆಗಮನ ಮತ್ತು ನಿರ್ಗಮನಗಳನ್ನೂ ಮತ್ತು ಅದರ ಎಲ್ಲಾ ಕಟ್ಟಳೆಗಳನ್ನೂ, ಸಕಲ ರಚನಾವಿಧಾನಗಳನ್ನೂ, ಸಮಸ್ತ ವಿಧಿಗಳನ್ನೂ, ಸರ್ವ ನಿರ್ಮಾಣ ರೀತಿಗಳನ್ನೂ ಅವರಿಗೆ ತಿಳಿಸು. ಅವರು ಅದರ ಪೂರ್ಣಕ್ರಮವನ್ನೂ, ಎಲ್ಲಾ ವಿಧಿಗಳನ್ನೂ ಅನುಸರಿಸಿ ಕೈಕೊಳ್ಳುವಂತೆ ಅವರ ಕಣ್ಣೆದುರಿಗೆ ಬರೆ. 12 “ಇದೇ ಆ ಆಲಯದ ನಿಯಮವಾಗಿದೆ. ಆ ಪರ್ವತದ ಮೇಲೆಯೂ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶವೆಲ್ಲಾ ಅತಿ ಪರಿಶುದ್ಧವಾಗಿರಬೇಕು. ಇಗೋ, ಆ ಆಲಯದ ನಿಯಮವು ಇದೇ. ಯಜ್ಞವೇದಿಯ ನಿರ್ಮಾಣಕ್ರಮ 13 “ಯಜ್ಞವೇದಿಯ ಅಳತೆಗಳು ಮೊಳದ ಪ್ರಕಾರ ಹೀಗಿರಬೇಕು. (ಉದ್ದ ಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ) ಕೆಳಭಾಗದ ಎತ್ತರ ಒಂದು ಮೊಳ, ಮೇಲಿನ ಅಂಚಿನ ಅಗಲ ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ ಸುತ್ತಣ ದಿಂಡಿನ ಅಗಲವು ಒಂದು ಗೇಣು; ಇದೇ ಯಜ್ಞವೇದಿಯ ಪೀಠ. 14 ನೆಲದ ಮೇಲೆ ಅಂದರೆ ಕೆಳಭಾಗದ ಮೇಲೆ ಕೆಳಗಿನ ಅಂತಸ್ತಿನ ಎತ್ತರ ಎರಡು ಮೊಳ, ಅದರ ಮೇಲಣ ಅಂಚಿನ ಅಗಲ ಒಂದು ಮೊಳ; ಆ ಚಿಕ್ಕ ಅಂತಸ್ತಿನ ಮೇಲೆ ದೊಡ್ಡ ಅಂತಸ್ತಿನ ಎತ್ತರ ನಾಲ್ಕು ಮೊಳ, ಮೇಲಣ ಅಂಚಿನ ಅಗಲವು ಒಂದು ಮೊಳ. 15 ಯಜ್ಞವೇದಿಯ ಅಂತಸ್ತಿನ ಎತ್ತರವು ನಾಲ್ಕು ಮೊಳ; ಆ ಯಜ್ಞವೇದಿಯ ಮೇಲ್ಗಡೆಯಲ್ಲಿ ನಾಲ್ಕು ಕೊಂಬುಗಳು ಇರಬೇಕು. 16 ಯಜ್ಞವೇದಿ ಹನ್ನೆರಡು ಮೊಳ ಉದ್ದವೂ, ಹನ್ನೆರಡು ಮೊಳ ಅಗಲವೂ ಮತ್ತು ಚಚ್ಚೌಕವಾಗಿರಬೇಕು. 17 ದೊಡ್ಡ ಅಂತಸ್ತು ಹದಿನಾಲ್ಕು ಮೊಳ ಉದ್ದವಾಗಿಯೂ, ಹದಿನಾಲ್ಕು ಮೊಳ ಅಗಲವಾಗಿಯೂ, ನಾಲ್ಕು ಕಡೆಗಳಲ್ಲಿ ಸಮವಾಗಿರಬೇಕು. ಸುತ್ತಣ ದಿಂಡಿನ ಅಗಲವು ಅರ್ಧ ಮೊಳ, ಕೆಳಭಾಗದ ಸುತ್ತಣ ಅಂಚಿನ ಅಗಲವು ಒಂದು ಮೊಳವಾಗಿಯೂ ಇರಬೇಕು. ಅದರ ಮೆಟ್ಟಲುಗಳು ಪೂರ್ವದಿಕ್ಕಿಗೆ ಅಭಿಮುಖವಾಗಿರಬೇಕು.” ಯಜ್ಞವೇದಿಯ ಪ್ರತಿಷ್ಠೆ 18 ಆಗ ಆ ಪುರುಷನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಸರ್ವಾಂಗಹೋಮಕ್ಕೂ, ರಕ್ತವೆರಚುವ ಸಂಸ್ಕಾರಕ್ಕೂ ಯಜ್ಞವೇದಿಯನ್ನು ನಿರ್ಮಿಸುವಾಗ ಈ ವಿಧಿಗಳನ್ನು ಕೈಗೊಳ್ಳಬೇಕು. 19 ಲೇವಿಯರೂ, ಚಾದೋಕನ ಸಂತಾನದವರೂ, ನನ್ನ ಸನ್ನಿಧಿಸೇವಕರೂ ಆದ ಯಾಜಕರಿಗೆ ನೀನು ಒಂದು ಹೋರಿಯನ್ನು ದೋಷ ಪರಿಹಾರಕಯಜ್ಞಕ್ಕಾಗಿ ಕೊಡು ಇದು ಕರ್ತನಾದ ಯೆಹೋವನ ನುಡಿ. 20 ಆಮೇಲೆ ಅದರ ರಕ್ತದಲ್ಲಿ ಸ್ವಲ್ಪವನ್ನು ನೀನು ತೆಗೆದುಕೊಂಡು ಯಜ್ಞವೇದಿಯ ನಾಲ್ಕು ಕೊಂಬುಗಳಿಗೂ, ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ, ಸುತ್ತಣ ದಿಂಡಿಗೂ ಹಚ್ಚಿ, ಯಜ್ಞವೇದಿಯ ದೋಷವನ್ನು ಪರಿಹರಿಸಿ ಅದನ್ನು ಶುದ್ಧಿಮಾಡು. 21 ಮತ್ತು ದೋಷ ಪರಿಹಾರಕಯಜ್ಞಕ್ಕಾಗಿ ವಧಿಸಲ್ಪಟ್ಟ ಹೋರಿಯನ್ನು ನೀನು ಒಪ್ಪಿಸಲು ನೇಮಿಸಲ್ಪಟ್ಟವನು, ಪವಿತ್ರಾಲಯದ ಹೊರಗೆ ಆಲಯಕ್ಕೆ ಸಂಬಂಧಪಟ್ಟ ಗೊತ್ತಾದ ಸ್ಥಳದಲ್ಲಿ ಅದನ್ನು ಸುಡಬೇಕು. 22 “ಎರಡನೆಯ ದಿನದಲ್ಲಿ ನೀನು ಪೂರ್ಣಾಂಗವಾದ ಹೋತವನ್ನು ದೋಷ ಪರಿಹಾರಕಯಜ್ಞಕ್ಕಾಗಿ ಅರ್ಪಿಸು. ಹೋರಿಯಿಂದ ಯಜ್ಞವೇದಿಯನ್ನು ಶುದ್ಧಿಮಾಡಿದಂತೆ ಹೋತದಿಂದಲೂ ಶುದ್ಧಿಮಾಡಬೇಕು 23 ನೀನು ಯಜ್ಞವೇದಿಯ ಶುದ್ಧೀಕರಣದ ಕಾರ್ಯವನ್ನು ಮುಗಿಸಿದ ಮೇಲೆ, ದೋಷವಿಲ್ಲದ ಪೂರ್ಣಾಂಗವಾದ ಹೋರಿಯನ್ನೂ ಹಿಂಡಿನಿಂದಲೂ ಮತ್ತು ಪೂರ್ಣಾಂಗವಾದ ಟಗರನ್ನೂ ಮಂದೆಯೊಳಗಿಂದಲೂ ತಂದು ಅರ್ಪಿಸಬೇಕು. 24 ನೀನು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು, ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ, ಯೆಹೋವನಿಗಾಗಿ ಸರ್ವಾಂಗಹೋಮವನ್ನು ಅರ್ಪಿಸಬೇಕು. 25 “ಏಳು ದಿನಗಳ ತನಕ ನೀನು ಪ್ರತಿ ದಿನವೂ ದೋಷಪರಿಹಾರ ಬಲಿಗಾಗಿ ಒಂದೊಂದು ಹೋತವನ್ನು ಸಿದ್ಧಮಾಡಬೇಕು. ಯಾಜಕರು ಸಹ ದೋಷವಿಲ್ಲದ ಪೂರ್ಣಾಂಗವಾದ ಹೋರಿಯನ್ನೂ ಹಿಂಡಿನಿಂದಲೂ ಮತ್ತು ಪೂರ್ಣಾಂಗವಾದ ಟಗರನ್ನೂ ಮಂದೆಯೊಳಗಿಂದಲೂ ಸಿದ್ಧಮಾಡಬೇಕು. 26 ಹೀಗೆ ಏಳು ದಿನ ಯಜ್ಞವೇದಿಯ ದೋಷವನ್ನು ಪರಿಹರಿಸುತ್ತಾ ಅದನ್ನು ಶುದ್ಧಿ ಮಾಡಿ ಪ್ರತಿಷ್ಠಿಸಬೇಕು. 27 ಏಳು ದಿನಗಳ ಕಾರ್ಯವನ್ನು ಮುಗಿಸಿದ ಬಳಿಕ, ಎಂಟನೆಯ ದಿನದಿಂದ ಯಾಜಕರು ಯಜ್ಞವೇದಿಯ ಮೇಲೆ ನಿಮ್ಮ ಪಕ್ಷವಾಗಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಮಾಡಬೇಕು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನು” ಇದು ಕರ್ತನಾದ ಯೆಹೋವನ ನುಡಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.