Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 41 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಪರಿಶುದ್ಧ ಸ್ಥಳ

1 ಆಮೇಲೆ ಅವನು ನನ್ನನ್ನು ದೇವಾಲಯದ ಪರಿಶುದ್ಧ ಸ್ಥಳಕ್ಕೆ ಕರೆದುಕೊಂಡು ಬಂದು, ಅದರ ದ್ವಾರಕಂಬಗಳನ್ನು ಅಳತೆ ಮಾಡಲು, ಅದರ ಎರಡು ಕಡೆಗಳು ಆರು ಮೊಳ ಅಗಲವಾಗಿತ್ತು.

2 ದ್ವಾರದ ಅಗಲವು ಹತ್ತು ಮೊಳಗಳೂ, ದ್ವಾರದ ಎರಡು ಪಕ್ಕದ ಗೋಡೆಗಳ ಅಗಲವು ಐದೈದು ಮೊಳಗಳೂ ಆಗಿದ್ದವು. ಅವನು ಪರಿಶುದ್ಧ ಸ್ಥಳವನ್ನು ಅಳತೆಮಾಡಿದಾಗ ಅದರ ಉದ್ದ ನಲ್ವತ್ತು ಮೊಳಗಳೂ, ಅಗಲ ಇಪ್ಪತ್ತು ಮೊಳಗಳೂ ಇದ್ದವು.


ಮಹಾಪರಿಶುದ್ಧ ಸ್ಥಳ

3 ಆಮೇಲೆ ಅವನು ಇನ್ನೂ ಮುಂದಕ್ಕೆ ಹೋಗಿ, ಮಹಾಪರಿಶುದ್ಧ ಸ್ಥಳದ ಕಂಬಗಳನ್ನು ಅಳತೆ ಮಾಡಲು ದ್ವಾರದ ಒಂದೊಂದು ಕಂಬದ ಅಗಲ ಎರಡೆರಡು ಮೊಳಗಳೂ, ದ್ವಾರದ ಅಗಲವು ಆರು ಮೊಳಗಳೂ, ದ್ವಾರದ ಪಕ್ಕದ ಗೋಡೆಗಳ ಅಗಲವು ಏಳು ಮೊಳವೆಂದು ಅಳೆದನು.

4 ಅದರ ಕೋಣೆಗಳ ಉದ್ದವು ಇಪ್ಪತ್ತು ಮೊಳಗಳೂ, ಅಗಲವು ಇಪ್ಪತ್ತು ಮೊಳಗಳೂ ಇದ್ದವು. ಆಗ ಅವನು ನನಗೆ, “ಇದು ಮಹಾಪರಿಶುದ್ಧ ಸ್ಥಳ” ಎಂದು ಹೇಳಿದನು.


ದೇವಸ್ಥಾನದ ಸುತ್ತಣ ಕೊಠಡಿಗಳು

5 ಆಮೇಲೆ ಅವನು ಅಳತೆ ಮಾಡಲು, ದೇವಸ್ಥಾನದ ಗೋಡೆಯ ಅಗಲ ಆರು ಮೊಳಗಳೂ, ದೇವಸ್ಥಾನದ ಸುತ್ತುಮುತ್ತಲೂ ಎಲ್ಲಾ ಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ನಾಲ್ಕು ನಾಲ್ಕು ಮೊಳಗಳೂ ಇದ್ದವು.

6 ಆ ಕೊಠಡಿಗಳು ಒಂದರ ಮೇಲೊಂದು ಮೂರು ಅಂತಸ್ತು ಆಗಿದ್ದವು; ಒಂದೊಂದು ಅಂತಸ್ತಿನಲ್ಲಿ ಮೂವತ್ತು ಕೊಠಡಿಗಳಿದ್ದವು; ದೇವಸ್ಥಾನದ ಗೋಡೆಯು ಮೆಟ್ಟಿಲುಗಳಿಂದ ಕಟ್ಟಲ್ಪಟ್ಟಿತ್ತು. ಗೋಡೆಯಲ್ಲಿ ರಂಧ್ರವಿಲ್ಲದೆ ಆ ಮೆಟ್ಟಿಲುಗಳೇ ಸುತ್ತಣ ಕೊಠಡಿಗಳ ತೊಲೆಗಳಿಗೆ ಆಧಾರವಾಗಿದ್ದವು. ಆದರೆ ಮನೆಯ ಗೋಡೆಗೆ ಯಾವ ಆಧಾರವಿರಲಿಲ್ಲ.

7 ಸುತ್ತಣ ಅಂತಸ್ತುಗಳು ಮೇಲೆ ಹೋದ ಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು. ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಯಾಗಿ ತಬ್ಬಿಕೊಂಡಂತೆ ಕಟ್ಟಲ್ಪಟ್ಟಿತ್ತು. ಹೀಗೆ ಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು. ಕೆಳಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದರು.

8 ದೇವಸ್ಥಾನದ ಸುತ್ತುಮುತ್ತಲೂ ಒಂದು ಜಗಲಿಯು ಕಾಣಿಸಿತು; ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮೊಳದ ಅಳತೆ ಕೋಲಿನಷ್ಟು ಎತ್ತರವಾಗಿತ್ತು.

9 ಕೊಠಡಿಗಳ ಹೊರ ಗೋಡೆಯ ದಪ್ಪವು ಐದು ಮೊಳವಿತ್ತು ಮತ್ತು ಉಳಿದದ್ದು, ಒಳಗಿನ ಪಕ್ಕದ ಕೊಠಡಿಗಳ ಸ್ಥಳವಾಗಿತ್ತು.

10 ದೇವಸ್ಥಾನಕ್ಕೆ ಅಂಟಿಕೊಂಡ ಆ ಕೊಠಡಿಗಳಿಗೂ, ಪ್ರತ್ಯೇಕಿಸಿದ ಸ್ಥಳದ ಕೋಣೆಗಳಿಗೂ ನಡುವೆ ದೇವಸ್ಥಾನದ ಸುತ್ತುಮುತ್ತಲೂ ಇಪ್ಪತ್ತು ಮೊಳ ಅಂತರವಿತ್ತು.

11 ಆ ಎಲ್ಲಾ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಉತ್ತರಕ್ಕೊಂದು, ದಕ್ಷಿಣಕ್ಕೊಂದು. ಅವೆರಡೂ ಜಗಲಿಯ ಕಡೆಗಿದ್ದವು. ಆ ಜಗಲಿಗಳೂ ಎಲ್ಲಾ ಸುತ್ತಲಿನ ಅಗಲವು ಐದು ಮೊಳವಾಗಿತ್ತು.


ದೇವಸ್ಥಾನದ ಹಿಂದಿನ ಶಾಲೆಯ ಅಳತೆಗಳೂ ಇತರ ಅಳತೆಗಳೂ

12 ಪಶ್ಚಿಮದಲ್ಲಿ ಪ್ರತ್ಯೇಕಿಸಿದ ಸ್ಥಳದ ಹಿಂದಿನ ಶಾಲೆಯ ಅಗಲ ಎಪ್ಪತ್ತು ಮೊಳವೂ, ಉದ್ದ ತೊಂಭತ್ತು ಮೊಳವೂ, ಅದರ ಗೋಡೆಯ ದಪ್ಪ ಐದು ಮೊಳವಾಗಿತ್ತು.

13 ಆ ಪುರುಷನು ಅಳೆಯಲು, ದೇವಸ್ಥಾನದ ಉದ್ದ ನೂರು ಮೊಳವೂ, ಪ್ರತ್ಯೇಕಿಸಿದ ಸ್ಥಳವನ್ನೂ ಮತ್ತು ಕಟ್ಟಡವನ್ನೂ ಗೋಡೆಗಳ ಸಹಿತವಾಗಿ ನೂರು ಮೊಳ ಉದ್ದವೆಂದು ಅಳೆದನು.

14 ಇದಲ್ಲದೆ ದೇವಸ್ಥಾನದ ಮುಂಭಾಗ ಮತ್ತು ಪೂರ್ವದ ಕಡೆಗೆ ಇದ್ದ ಪ್ರತ್ಯೇಕ ಸ್ಥಳ ಇವುಗಳ ಒಟ್ಟು ಅಗಲ ನೂರು ಮೊಳವಾಗಿದ್ದವು.

15 ಅವನು ಪ್ರತ್ಯೇಕಿಸಿದ ಸ್ಥಳವನ್ನೂ, ಹಿಂದಿನ ಶಾಲೆಯನ್ನು ಆ ಪ್ರಾಕಾರದ ಕಡೆಯಲ್ಲಿ ಅಳತೆ ಮಾಡಲು ಅದರ ಉದ್ದ ಎರಡು ಪಕ್ಕದ ಗೋಡೆಗಳ ಸಹಿತ ನೂರು ಮೊಳವಿತ್ತು.


ದೇವಸ್ಥಾನದ ಒಳಭಾಗದ ವರ್ಣನೆ

16 ಅವನು ಬಾಗಿಲುಗಳ ಕಂಬಗಳನ್ನೂ, ಇಕ್ಕಟ್ಟಾದ ಕಿಟಕಿಗಳನ್ನೂ ಮತ್ತು ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತಿನ ಬಾಗಿಲಿಗೆ ಎದುರಾಗಿ ಸುತ್ತಲೂ ಕಟ್ಟಲ್ಪಟ್ಟ ಗೋಡೆಗಳನ್ನೂ ಅಳೆದನು.

17 ದ್ವಾರದಿಂದ ಗರ್ಭಗೃಹದವರೆಗೂ ಮತ್ತು ಗೃಹದ ಗೋಡೆಗೆಲ್ಲಾ ಸುತ್ತುಮುತ್ತಲೂ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳಿಗಿದ್ದವು.

18 ಗೋಡೆಯ ಚೌಕಗಳಲ್ಲಿ ಕೆರೂಬಿಗಳೂ ಮತ್ತು ಖರ್ಜೂರ ಮರಗಳೂ ಚಿತ್ರಿತವಾಗಿದ್ದವು; ಎರಡೆರಡು ಕೆರೂಬಿಗಳ ನಡುವೆ ಒಂದೊಂದು ಖರ್ಜೂರ ಮರ; ಒಂದೊಂದು ಕೆರೂಬಿಗೆ ಎರಡೆರಡು ಮುಖಗಳಿತ್ತು.

19 ಖರ್ಜೂರ ಮರದ ಒಂದು ಪಕ್ಕ ಮನುಷ್ಯನ ಮುಖಕ್ಕೆ ಎದುರಾಗಿಯೂ, ಇನ್ನೊಂದು ಪಕ್ಕ ಸಿಂಹದ ಮುಖಕ್ಕೆ ಎದುರಾಗಿತ್ತು. ಹೀಗೆ ದೇವಸ್ಥಾನದ ಒಳಗಿನ ಭಾಗವೆಲ್ಲಾ ಮತ್ತು ಸುತ್ತುಮುತ್ತಲೂ ಚಿತ್ರಮಯವಾಗಿತ್ತು.

20 ನೆಲದಿಂದ ದ್ವಾರದ ಮೇಲಿನ ತನಕ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳಿದ್ದವು.

21 ಪರಿಶುದ್ಧ ಸ್ಥಳದ ಇನ್ನೊಂದು ಕಡೆಯ ಗೋಡೆಯ ಬಾಗಿಲ ಚೌಕಟ್ಟು ಚಚ್ಚೌಕವಾಗಿತ್ತು. ಮಹಾಪರಿಶುದ್ಧ ಸ್ಥಳದ ಈಚಿನ ಗೋಡೆಯ ಚೌಕಟ್ಟೂ ಹಾಗೆಯೇ ಇತ್ತು.

22 ಅಲ್ಲಿ ಮರದ ವೇದಿಕೆಯೊಂದಿತ್ತು. ಅದರ ಎತ್ತರ ಮೂರು ಮೊಳ, ಉದ್ದ ಎರಡು ಮೊಳವಾಗಿತ್ತು. ಅದರ ಮೂಲೆಗಳೂ, ಪೀಠವೂ, ಪಕ್ಕಗಳೂ ಮರದ್ದೇ ಆಗಿದ್ದವು. ಆ ಪುರುಷನು ನನಗೆ, “ಇದು ಯೆಹೋವನ ಸಮ್ಮುಖದ ಮೇಜು” ಎಂದು ಹೇಳಿದನು.

23 ಪರಿಶುದ್ಧ ಸ್ಥಳಕ್ಕೆ ಮತ್ತು ಮಹಾಪರಿಶುದ್ಧ ಸ್ಥಳಕ್ಕೆ ಎರಡೆರಡು ಬಾಗಿಲುಗಳಿದ್ದವು.

24 ಒಂದೊಂದು ಬಾಗಿಲಿಗೆ ಎರಡೆರಡು ಮಡಚುವ ಭಾಗಗಳಿದ್ದವು. ಈ ಕಡೆಯ ಬಾಗಿಲಿಗೆ ಎರಡು ಭಾಗ, ಆ ಕಡೆಯ ಬಾಗಿಲಿಗೆ ಎರಡು ಭಾಗಗಳು ಇದ್ದವು.

25 ಆ ಬಾಗಿಲುಗಳಲ್ಲಿ ಅಂದರೆ ಪರಿಶುದ್ಧ ಸ್ಥಳದ ಬಾಗಿಲುಗಳಲ್ಲಿ ಕೆರೂಬಿಗಳ ಮತ್ತು ಖರ್ಜೂರ ಮರಗಳ ಚಿತ್ರಗಳು ಗೋಡೆಗಳಲ್ಲಿ ಚಿತ್ರಿಸಲ್ಪಟ್ಟ ಹಾಗೆಯೇ ಇದ್ದವು. ದ್ವಾರಮಂಟಪದ ಹೊರಗಡೆ ಮರದ ಹಲಗೆಗಳಿದ್ದವು.

26 ದ್ವಾರಮಂಟಪದ ಪಕ್ಕದ ಗೋಡೆಗಳಲ್ಲಿ ತೆರೆಯಲಾಗದ ಕಿಟಕಿಗಳೂ ಇದ್ದವು. ಅವುಗಳ ಮೇಲೆ ಖರ್ಜೂರ ಮರಗಳು ಚಿತ್ರಿತವಾಗಿದ್ದವು ಮತ್ತು ಮೇಲೆ ತೂಗಾಡುವ ಮೇಲ್ಛಾವಣಿಗಳು ಇದ್ದವು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು