Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 35 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಎದೋಮಿನ ಬಗ್ಗೆ ಪ್ರವಾದನೆ

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

2 “ನರಪುತ್ರನೇ, ನೀನು ಸೇಯೀರ್ ಬೆಟ್ಟದ ಸೀಮೆಯ ವಿರುದ್ಧವಾಗಿ ಅದಕ್ಕೆ ಈ ಪ್ರವಾದನೆಯನ್ನು ನುಡಿ,

3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಸೇಯೀರ್ ಬೆಟ್ಟವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ; ನಾನು ನಿನ್ನ ಸೀಮೆಯ ಮೇಲೆ ಕೈಯೆತ್ತಿ ಅದನ್ನು ಹಾಳು ಮಾಡುವೆನು.

4 ನಾನು ನಿನ್ನ ಪಟ್ಟಣಗಳನ್ನು ನಾಶಪಡಿಸಲು ನೀನು ಹಾಳಾಗುವಿ; ಆಗ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿ.

5 “‘ನೀನು ಇಸ್ರಾಯೇಲರ ಮೇಲೆ ದೀರ್ಘ ದ್ವೇಷವಿಟ್ಟು, ಅವರ ಅಪರಾಧದ ಕಡೆಯ ಕಾಲದಲ್ಲಿ ಆಪತ್ತು ಸಂಭವಿಸಿದಾಗ, ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದೆ.

6 ಆದುದರಿಂದ ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು, ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟುವುದು; ನೀನು ರಕ್ತ ಸುರಿಸುವುದಕ್ಕೆ ಹೇಸದೆ ಹೋದಕಾರಣ ರಕ್ತಪ್ರವಾಹವೇ ನಿನ್ನ ಬೆನ್ನಹತ್ತುವುದು’” ಇದು ಕರ್ತನಾದ ಯೆಹೋವನ ನುಡಿ.

7 “ಸೇಯೀರ್ ಬೆಟ್ಟವೇ, ನಾನು ನಿನ್ನ ಸೀಮೆಯನ್ನು ಹಾಳುಮಾಡಿ, ಅದರೊಳಗೆ ಹೋಗುವವರನ್ನೂ, ಬರುವವರನ್ನೂ ಕಡಿದುಹಾಕುವೆನು.

8 ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿಸುವೆನು; ಖಡ್ಗದಿಂದ ಹತರಾದವರು ನಿನ್ನ ಗುಡ್ಡಗಳಲ್ಲಿ, ಕಣಿವೆಗಳಲ್ಲಿ, ಹಳ್ಳಗಳಲ್ಲಿ ಬಿದ್ದುಹೋಗುವರು.

9 ನಾನು ನಿನ್ನನ್ನು ನಿತ್ಯನಾಶನಕ್ಕೆ ಗುರಿಮಾಡುವೆನು; ನಿನ್ನ ಪಟ್ಟಣಗಳು ನಿರ್ಜನವಾಗುವವು; ಆಗ ನಾನೇ ಯೆಹೋವನು ಎಂದು ನೀನು ತಿಳಿದುಕೊಳ್ಳುವೆ.”

10 ನೀನು, “ಈ ಎರಡು ಜನಾಂಗಗಳೂ ಈ ಎರಡು ದೇಶಗಳೂ ನನ್ನ ವಶವಾಗುವವು” ಎಂದೂ ಹೇಳಿದ್ದರಿಂದ, ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ ಎಂದು ಅಂದುಕೊಂಡು, ಅಲ್ಲಿ ನನ್ನ ಸಾನ್ನಿಧ್ಯವನ್ನು ಅಲಕ್ಷ್ಯಮಾಡಿದ್ದರಿಂದ,

11 “ನನ್ನ ಜೀವದಾಣೆ, ನೀನು ನನ್ನ ಜನರನ್ನು ದ್ವೇಷಿಸಿ, ಅವರ ಮೇಲಿಟ್ಟ ಕೋಪಕ್ಕೂ, ಹೊಟ್ಟೆಕಿಚ್ಚಿಗೂ ನಾನು ನಿನ್ನ ವಿರುದ್ಧವಾಗಿ ನ್ಯಾಯ ತೀರಿಸಿದ ಮೇಲೆ, ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.

12 ಆಗ ನಾನೇ ಯೆಹೋವನು ಎಂದು ನೀನು ತಿಳಿದುಕೊಳ್ಳುವೆ. ನೀನು ಇಸ್ರಾಯೇಲಿನ ಪರ್ವತಗಳನ್ನು ನೋಡಿ, ಆಹಾ, ಹಾಳಾದವು! ನಮಗೆ ತುತ್ತಾಗಿವೆ ಎಂದು ಮಾಡಿದ ದೂಷಣೆಗಳು ಯೆಹೋವನಾದ ನನ್ನ ಕಿವಿಗೆ ಬಿದ್ದಿವೆ ಎಂಬುದು ನಿನಗೆ ಗೊತ್ತಾಗುವುದು.

13 ನಿನ್ನವರು ಬಾಯಿ ತೆರೆದು, ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ.”

14 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ಹಾಳುಮಾಡಿ, ಲೋಕವನ್ನೆಲ್ಲಾ ಸಂತೋಷಪಡಿಸುವೆನು.

15 ಇಸ್ರಾಯೇಲರ ಸ್ವತ್ತಿನ ನಾಶಕ್ಕೆ ನೀನು ಹೇಗೆ ಸಂತೋಷಪಟ್ಟೆಯೋ ಹಾಗೆಯೇ, ನಿನ್ನ ನಾಶಕ್ಕೆ ಲೋಕವೆಲ್ಲಾ ಸಂತೋಷಪಡುವಂತೆ ಮಾಡುವೆನು; ಸೇಯೀರ್ ಬೆಟ್ಟವೇ, ನೀನು ಹಾಳಾಗುವಿ; ಹೌದು, ಎದೋಮ್ ಸೀಮೆಯೆಲ್ಲಾ ಸಂಪೂರ್ಣವಾಗಿ ಹಾಳಾಗುವುದು, ಆಗ ನಾನೇ ಯೆಹೋವನು ಎಂದು ನಿಮಗೆ ತಿಳಿಯುವುದು.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು