Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 30 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಐಗುಪ್ತಕ್ಕಾಗುವ ದಂಡನೆ

1 ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,

2 “ನರಪುತ್ರನೇ, ನೀನು ಈ ಪ್ರವಾದನೆಯನ್ನು ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಅರಚಿಕೊಳ್ಳಿರಿ! ಅಯ್ಯೋ ದುರ್ದಿನವೇ!

3 ದಿನವು ಹತ್ತಿರವಾಯಿತು! ಹೌದು, ಯೆಹೋವನ ದಿನವು, ಕಾರ್ಮುಗಿಲಿನ ದಿನವು ಸಮೀಪಿಸಿತು; ಅದು ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವುದು.

4 ಖಡ್ಗವು ಐಗುಪ್ತದ ಮೇಲೆ ಬೀಳುವುದು; ಅಲ್ಲಿನ ಪ್ರಜೆಗಳು ಹತರಾಗಲು ಕೂಷಿನಲ್ಲಿಯೂ ಸಂಕಟವಾಗುವುದು; ಐಗುಪ್ತದ ಜನಸಮೂಹವು ಒಯ್ಯಲ್ಪಡುವುದು, ಅದರ ಅಸ್ತಿವಾರವು ಮುರಿದು ಹಾಳಾಗುವುದು.

5 “‘ಕೂಷ್ಯರು, ಪೂಟ್ಯರು, ಲೂದ್ಯರು, ಬಗೆಬಗೆಯ ಸಕಲ ವಿದೇಶೀಯರು, ಕೂಬ್ಯರು, ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಐಗುಪ್ತ್ಯರೊಂದಿಗೆ ಖಡ್ಗದಿಂದ ಹತರಾಗುವರು.’”

6 ಯೆಹೋವನು ಇಂತೆನ್ನುತ್ತಾನೆ, “ಐಗುಪ್ತಕ್ಕೆ ಆಧಾರವಾದವರು ಬೀಳುವರು, ಅದರ ಶಕ್ತಿಯ ಅಹಂಕಾರವು ಇಳಿದು ಹೋಗುವುದು; ಅಲ್ಲಿನ ಜನರು ಮಿಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು” ಇದು ಕರ್ತನಾದ ಯೆಹೋವನ ನುಡಿ.

7 ಹಾಳಾಗಿರುವ ದೇಶಗಳೊಳಗೆ ಆ ದೇಶವೂ ಹಾಳಾಗಿರುವುದು, ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳೂ ಪಾಳು ಬಿದ್ದಿರುವವು.

8 “‘ನಾನು ಐಗುಪ್ತಕ್ಕೆ ಬೆಂಕಿ ಹಚ್ಚಿ ಅದರ ಸಹಾಯಕರನ್ನೆಲ್ಲಾ ನಾಶಮಾಡಿದ ಮೇಲೆ ನಾನೇ ಯೆಹೋವನು’ ಎಂದು ಅವರಿಗೆ ಗೊತ್ತಾಗುವುದು.

9 ‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ, ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು; ಐಗುಪ್ತದ ನಾಶದ ದಿನದಲ್ಲಿ ಆದ ಹಾಗೆ ಕೂಷ್ಯರಿಗೂ ಸಂಕಟವು ಉಂಟಾಗುವುದು; ಇಗೋ, ಆ ದಿನ ಬಂತು!’”

10 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಐಗುಪ್ತದ ಅಸಂಖ್ಯಾತ ಪ್ರಜೆಯನ್ನು ಕೊನೆಗಾಣಿಸುವೆನು.

11 ಆ ದೇಶವನ್ನು ನಾಶಪಡಿಸಲಿಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು; ಅವರು ಐಗುಪ್ತದ ಮೇಲೆ ಕತ್ತಿ ಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.

12 ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು. ಹೌದು, ದೇಶವನ್ನೂ, ಅದರಲ್ಲಿನ ಸಮಸ್ತವನ್ನೂ ಅನ್ಯರ ಕೈಯಿಂದ ಹಾಳುಮಾಡಿಸುವೆನು. ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”

13 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನೋಫಿನ ವಿಗ್ರಹಗಳನ್ನೆಲ್ಲ ಒಡೆದು ಕೊನೆಗಾಣಿಸುವೆನು; ಐಗುಪ್ತ ದೇಶದಲ್ಲಿ ಇನ್ನು ಯಾವ ಅರಸನೂ ಇರಲಾರನು; ನಾನು ಆ ದೇಶಕ್ಕೆ ಭಯವನ್ನು ಉಂಟುಮಾಡುವೆನು.

14 ನಾನು ಪತ್ರೋಸನ್ನು ಹಾಳುಮಾಡಿ, ಚೋವನಿಗೆ ಬೆಂಕಿಯಿಡುವೆನು. ನೋಪುರವನ್ನು ದಂಡಿಸಿ,

15 “ಐಗುಪ್ತಕ್ಕೆ ರಕ್ಷಣೆಯ ಕೋಟೆಯಾದ ಸೀನಿನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನೋಪುರದ ನಿವಾಸಿಗಳನ್ನೆಲ್ಲಾ ಕತ್ತರಿಸಿ ಬಿಡುವೆನು.

16 ನಾನು ಐಗುಪ್ತಕ್ಕೆ ಕಿಚ್ಚನ್ನು ಹತ್ತಿಸಲು ಸೀನು ಪ್ರಾಣ ಸಂಕಟಪಡುವುದು; ನೋಪುರವು ಭಂಗಕ್ಕೆ ಈಡಾಗುವುದು; ನೋಫಿನ ಮೇಲೆ ವೈರಿಗಳು ಮಧ್ಯಾಹ್ನದಲ್ಲೇ ಬೀಳುವರು.

17 “ಓನಿನ ಮತ್ತು ಪೀಬೆಸೆತಿನ ಯುವಕರು ಖಡ್ಗದಿಂದ ಹತರಾಗುವರು; ಅಲ್ಲಿನ ನಿವಾಸಿಗಳು ಸೆರೆಯಾಗಿ ಹೋಗುವರು.

18 ಐಗುಪ್ತವು ಹೊರಿಸಿದ ನೊಗಗಳನ್ನು ನಾನು ತಹಪನೇಸಿನಲ್ಲಿ ಮುರಿಯುವಾಗ, ಅಲ್ಲಿ ಹೊತ್ತು ಮೂಡದು. ಅದರ ಶಕ್ತಿಯ ಅಹಂಕಾರವು ಅಡಗಿ ಹೋಗುವುದು, ಕಾರ್ಮುಗಿಲು ಅದನ್ನು ಆವರಿಸುವುದು, ಅದರ ಯುವತಿಯರು ಸೆರೆಗೆ ಒಯ್ಯಲ್ಪಡುವರು.

19 ಹೀಗೆ ನಾನು ಐಗುಪ್ತ್ಯರಿಗೆ ದಂಡನೆಗಳನ್ನು ವಿಧಿಸಿ ತೀರಿಸುವಾಗ ನಾನೇ ಯೆಹೋವನು” ಎಂದು ಅವರಿಗೆ ಗೊತ್ತಾಗುವುದು.


ಐಗುಪ್ತದ ಅರಸನು ಸೋಲಿಸಲ್ಪಡುವನು

20 ಹನ್ನೊಂದನೆಯ ವರ್ಷದ, ಮೊದಲನೆಯ ತಿಂಗಳಿನ ಏಳನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

21 “ನರಪುತ್ರನೇ, ನಾನು ಐಗುಪ್ತದ ಅರಸನಾದ ಫರೋಹನ ಕೈಯನ್ನು ಮುರಿದುಬಿಟ್ಟಿದ್ದೇನೆ; ಇಗೋ, ಅದನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ, ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ, ಅದನ್ನು ಬಿಗಿಸಲಿಲ್ಲ.”

22 ಆದುದರಿಂದ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಐಗುಪ್ತದ ಅರಸನಾದ ಫರೋಹನಿಗೆ ವಿರುದ್ಧವಾಗಿ ಅವನ ಕೈಗಳನ್ನು, ಅಂದರೆ ಸರಿಯಾಗಿರುವುದನ್ನೂ, ಮುರಿದದ್ದನ್ನೂ ತೀರಾ ಮುರಿದು ಬಿಟ್ಟು, ಖಡ್ಗವು ಅವನ ಕೈಯೊಳಗಿಂದ ಬೀಳುವಂತೆ ಮಾಡುವೆನು.

23 “ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ ದೇಶದೇಶಗಳಿಗೆ ಚದುರಿಸಿ ಬಿಡುವೆನು.

24 ನಾನು ಬಾಬೆಲಿನ ಅರಸನ ಕೈಗಳನ್ನು ಬಲಪಡಿಸಿ ನನ್ನ ಖಡ್ಗವನ್ನು ಅವನ ಕೈಗೆ ಕೊಟ್ಟು ಫರೋಹನ ಕೈಗಳನ್ನು ಮುರಿಸಲು, ಗಾಯದಿಂದ ಪ್ರಾಣ ಸಂಕಟಪಡುವವನಂತೆ ಫರೋಹನು ಆ ಅರಸನ ಮುಂದೆ ನರಳಾಡುವನು.

25 ನಾನು ಬಾಬೆಲಿನ ಅರಸನ ಕೈಗಳನ್ನು ಬಲಪಡಿಸುವೆನು; ಫರೋಹನ ಕೈಗಳಾದರೋ ಜೋಲುಬೀಳುವವು; ನಾನು ನನ್ನ ಖಡ್ಗವನ್ನು ಬಾಬೆಲಿನ ಅರಸನಿಗೆ ಕೊಡಲು ಅವನು ಅದನ್ನು ಐಗುಪ್ತ ದೇಶದ ಮೇಲೆ ಎತ್ತುವನು. ಆಗ ನಾನೇ ಯೆಹೋವನು” ಎಂದು ಎಲ್ಲರಿಗೂ ಗೊತ್ತಾಗುವುದು.

26 “ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ ದೇಶದೇಶಗಳಿಗೆ ಚದುರಿಸಿ ಬಿಡುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿದು ಬರುವುದು.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು