Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 22 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆರೂಸಲೇಮಿನ ಘೋರಪಾಪ

1 ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,

2 “ನರಪುತ್ರನೇ, ರಕ್ತಮಯವಾದ ಆ ಪಟ್ಟಣಕ್ಕೆ ನ್ಯಾಯತೀರಿಸಲು ನಿನ್ನ ಮನಸ್ಸು ಸ್ಥಿರವಾಗಿದೆಯೋ? ಅದರ ದುರಾಚಾರಗಳನ್ನೆಲ್ಲಾ ಅದಕ್ಕೆ ಹೀಗೆ ತಿಳಿಸು,

3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿನ್ನ ಮಧ್ಯದಲ್ಲಿ ರಕ್ತವನ್ನು ಸುರಿಸಿ, ದಂಡನೆಯ ಕಾಲವನ್ನು ಹತ್ತಿರಕ್ಕೆ ತಂದುಕೊಂಡ ನಗರಿಯೇ! ನಿನ್ನ ಕೇಡಿಗಾಗಿ ವಿಗ್ರಹಗಳನ್ನು ಮಾಡಿಕೊಂಡು ನಿನ್ನನ್ನು ಹೊಲೆಗೆಡಿಸಿಕೊಂಡ ನಗರಿಯೇ!

4 ನೀನು ಸುರಿಸಿದ ರಕ್ತದಿಂದ ಅಪರಾಧಿಯಾಗಿರುವೆ; ಮಾಡಿಕೊಂಡ ವಿಗ್ರಹಗಳಿಂದ ಅಶುದ್ಧವಾಗಿ, ಶಿಕ್ಷೆಯ ಸಮಯವನ್ನು ಹತ್ತಿರಕ್ಕೆ ತಂದುಕೊಂಡು ದಂಡನೆಯ ಕಾಲಕ್ಕೆ ಬಂದಿರುವೆ. ಆದಕಾರಣ ನಿನ್ನನ್ನು ಜನಾಂಗಗಳ ದೂಷಣೆಗೂ, ಸಕಲ ದೇಶಗಳ ಹಾಸ್ಯಕ್ಕೂ ಗುರಿಮಾಡಿದ್ದೇನೆ.

5 ಅಶುದ್ಧವಾದ ನಗರವೇ, ಗದ್ದಲಕ್ಕೆ ಪ್ರಸಿದ್ಧವಾದ ನಗರಿಯೇ, ಹತ್ತಿರದವರೂ, ದೂರದವರೂ ನಿನ್ನನ್ನು ಹಾಸ್ಯಮಾಡುವರು.

6 “‘ಇಗೋ, ಇಸ್ರಾಯೇಲಿನ ಪ್ರಭುಗಳು ತಮ್ಮ ತಮ್ಮ ಶಕ್ತ್ಯಾನುಸಾರ ನಿನ್ನಲ್ಲಿ ರಕ್ತ ಸುರಿಸುತ್ತಲೇ ಇದ್ದಾರೆ.

7 ನಿನ್ನವರು ತಾಯಿ ತಂದೆಗಳನ್ನು ತುಚ್ಛೀಕರಿಸಿದ್ದಾರೆ, ನಿನ್ನವರು ವಿದೇಶಿಗಳನ್ನು ಬಾಧಿಸಿದ್ದಾರೆ, ನಿನ್ನವರು ಅನಾಥರನ್ನೂ, ವಿಧವೆಯರನ್ನೂ ಹಿಂಸಿಸಿದ್ದಾರೆ.

8 ನೀನು ನನ್ನ ಪವಿತ್ರ ವಸ್ತುಗಳನ್ನು ಅಲಕ್ಷ್ಯಮಾಡಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಹೊಲೆಮಾಡಿದ್ದಿ.

9 ನಿನ್ನಲ್ಲಿ ಚಾಡಿಕೋರರು ರಕ್ತ ಹರಿಸಿದ್ದಾರೆ; ನಿನ್ನವರು ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದಿದ್ದಾರೆ; ನಿನ್ನ ಮಧ್ಯದಲ್ಲಿ ದುರಾಚಾರಗಳನ್ನು ನಡೆಸಿದ್ದಾರೆ.

10 ನಿನ್ನವರು ತಂದೆಗೆ ಮಾನಭಂಗ ಮಾಡಿದ್ದಾರೆ; ನಿನ್ನಲ್ಲಿ ಮುಟ್ಟಿನಿಂದ ಅಶುದ್ಧಳಾದವಳನ್ನು ಕೂಡಿದ್ದಾರೆ.

11 ನಿನ್ನಲ್ಲಿ ಒಬ್ಬನು ನೆರೆಯವನ ಹೆಂಡತಿಯಲ್ಲಿ ದುರಾಚಾರ ನಡಿಸಿದ್ದಾನೆ; ಇನ್ನೊಬ್ಬನು ಅತ್ಯಾಚಾರ ಮಾಡಿ ಸೊಸೆಯನ್ನು ಕೆಡಿಸಿದ್ದಾನೆ; ಮತ್ತೊಬ್ಬನು ತನ್ನ ತಂದೆಯ ಮಗಳೇ ಆದ ತಂಗಿಯ ಮಾನಭಂಗಪಡಿಸಿದ್ದಾನೆ.

12 ನಿನ್ನವರು ರಕ್ತ ಸುರಿಸುವುದಕ್ಕೆ ಲಂಚ ತೆಗೆದುಕೊಂಡಿದ್ದಾರೆ; ನಿನ್ನವರು ಸಾಲಕ್ಕೆ ಬಡ್ಡಿ ತೆಗೆದುಕೊಂಡು ಲಾಭಕ್ಕೆ ಹಣಕೊಟ್ಟು ತಮ್ಮ ನೆರೆಯವರನ್ನು ಬಾಧಿಸಿ, ದೋಚಿಕೊಂಡು ನನ್ನನ್ನು ಮರೆತೇ ಬಿಟ್ಟಿದ್ದಾರೆ ಇದು ಕರ್ತನಾದ ಯೆಹೋವನ ನುಡಿ.

13 “‘ಇಗೋ, ನೀನು ದೋಚಿಕೊಂಡ ಲಾಭವನ್ನೂ, ನಿನ್ನಲ್ಲಿ ಸುರಿದ ರಕ್ತವನ್ನೂ ನಾನು ನೋಡಿ ಕೈ ಎತ್ತಿದ್ದೇನೆ.

14 ನಾನು ನಿನ್ನನ್ನು ದಂಡಿಸುವ ಕಾಲದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಂಡಿರುವೆಯೋ? ಕೈಗಳನ್ನು ಬಲಪಡಿಸಿಕೊಂಡಿರುವೆಯೋ? ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ, ಅದರಂತೆ ನಡೆಸುತ್ತೇನೆ.

15 ನಾನು ನಿನ್ನನ್ನು ಜನಾಂಗಗಳಲ್ಲಿ ಚದುರಿಸಿ, ದೇಶ ದೇಶಗಳಿಗೆ ಹರಡಿಸಿಬಿಟ್ಟು, ನಿನ್ನ ಹೊಲಸನ್ನು ನಿನ್ನೊಳಗಿಂದ ತೆಗೆದು ನಾಶಮಾಡುವೆನು.

16 ಜನಾಂಗಗಳ ಕಣ್ಣೆದುರಿಗೆ ನಿನ್ನಷ್ಟಕ್ಕೆ ನೀನೇ ಅಪಕೀರ್ತಿಗೆ ಗುರಿಯಾಗುವಿ; ನಾನೇ ಯೆಹೋವನು ಎಂದು ನಿನಗೆ ಗೊತ್ತಾಗುವುದು.’”


ದೇವರ ಕುಲುಮೆ

17 ಆ ಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

18 “ನರಪುತ್ರನೇ, ಇಸ್ರಾಯೇಲ್ ವಂಶವೆಂಬ ಲೋಹವು ನನ್ನ ದೃಷ್ಟಿಯಲ್ಲಿ ಕಲ್ಮಷವಾಗಿದೆ; ಕುಲುಮೆಯಲ್ಲಿನ ತಾಮ್ರ, ತವರ, ಕಬ್ಬಿಣ, ಸೀಸ ಮತ್ತು ಕಂದು ಬೆಳ್ಳಿಯ ಹಾಗೆ ಇದ್ದಾರೆ.

19 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀವೆಲ್ಲರು ಕಲ್ಮಷವಾಗಿರುವುದರಿಂದ ಇಗೋ, ನಿಮ್ಮನ್ನು ಯೆರೂಸಲೇಮಿನೊಳಕ್ಕೆ ಸೇರಿಸುವೆನು.

20 ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ ಇವುಗಳನ್ನು ಕುಲುಮೆಯೊಳಗೆ ಹಾಕಿ,, ಊದಿ, ಉರಿಹತ್ತಿಸಿ, ಕರಗಿಸುವಂತೆ ನಾನು ನಿಮ್ಮನ್ನು ನನ್ನ ಉಗ್ರಕೋಪದಲ್ಲಿ ಇಟ್ಟು ಕರಗಿಸುವೆನು.

21 ಹೌದು, ನಾನು ನಿಮ್ಮನ್ನು ನನ್ನ ರೋಷಾಗ್ನಿಯಲ್ಲಿ ಹಾಕಿ, ಊದಲು ನೀವು ಅದರೊಳಗೆ ಕರಗಿ ಹೋಗುವಿರಿ.

22 ಬೆಳ್ಳಿಯು ಕುಲುಮೆಯೊಳಗೆ ಕರಗುವಂತೆ ನೀವು ನನ್ನ ರೋಷಾಗ್ನಿಯಲ್ಲಿ ಕರಗುವಿರಿ; ನಿಮ್ಮ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಯೆಹೋವನಾದ ನಾನೇ ಎಂದು ನಿಮಗೆ ಗೊತ್ತಾಗುವುದು.’”


ಯೆರೂಸಲೇಮಿನ ನಾಯಕರ ಪಾಪ

23 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

24 “ನರಪುತ್ರನೇ, ಆ ನಾಡಿಗೆ ಹೀಗೆ ಹೇಳು, ‘ದೇವರ ಕೋಪದ ಈ ದಿನದಲ್ಲಿ ನೀನು ಶುದ್ಧಿಯಾಗದ ದೇಶ, ಮಳೆಯಿಲ್ಲದ ದೇಶ.’

25 ಆ ನಾಡಿನೊಳಗೆ ಪ್ರವಾದಿಗಳು ಒಳಸಂಚು ಮಾಡಿಕೊಂಡಿದ್ದಾರೆ, ಬೇಟೆಯನ್ನು ಸೀಳುತ್ತಾ ಗರ್ಜಿಸುವ ಸಿಂಹದಂತಿದ್ದಾರೆ, ನರಪ್ರಾಣಿಗಳನ್ನು ನುಂಗಿದ್ದಾರೆ. ಆಸ್ತಿಯನ್ನೂ, ಅಮೂಲ್ಯ ವಸ್ತುಗಳನ್ನೂ ದೋಚಿಕೊಂಡಿದ್ದಾರೆ; ದೇಶದಲ್ಲಿ ಬಹಳ ಮಂದಿಯನ್ನು ವಿಧವೆಯರನ್ನಾಗಿ ಮಾಡಿದ್ದಾರೆ.

26 ಅಲ್ಲಿನ ಯಾಜಕರು ನನ್ನ ವಿಧಿಗಳನ್ನು ಭಂಗಮಾಡಿದ್ದಾರೆ, ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರ ಮಾಡಿದ್ದಾರೆ; ಮೀಸಲಾದದ್ದಕ್ಕೂ, ಮೀಸಲಿಲ್ಲದ್ದಕ್ಕೂ ಭೇದವೆಣಿಸಲಿಲ್ಲ, ಶುದ್ಧವಾದ ವಿವೇಚನೆಯನ್ನು ಬೋಧಿಸಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಕಡೆಗಣಿಸಿದ್ದಾರೆ. ಇದರಿಂದ ನಾನು ಅವರ ಮಧ್ಯದಲ್ಲಿ ಅಪಕೀರ್ತಿಗೆ ಗುರಿಯಾಗಿದ್ದೇನೆ.

27 ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ನುಂಗುವವರಾಗಿ ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.

28 ಅಲ್ಲಿನ ಸುಳ್ಳು ಪ್ರವಾದಿಗಳು ಇವರಿಗಾಗಿ ವ್ಯರ್ಥ ದರ್ಶನವನ್ನೂ, ಸುಳ್ಳು ಕಣಿಯನ್ನೂ ಕಂಡು ಯೆಹೋವನು ಅವರೊಂದಿಗೆ ಮಾತನಾಡದಿದ್ದರೂ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿಯುತ್ತಾ ಮೇಲೆ ಸುಣ್ಣ ಹಚ್ಚುತ್ತಾರೆ.

29 ಸಾಮಾನ್ಯ ಜನರನ್ನು ಹಿಂಸಿಸಿ ಸೂರೆಮಾಡಿದ್ದಾರೆ, ದೀನದರಿದ್ರರನ್ನು ಬಾಧಿಸಿ, ವಿದೇಶಿಗಳನ್ನು ಅನ್ಯಾಯಕ್ಕೆ ಒಳಪಡಿಸಿದ್ದಾರೆ.

30 “‘ನಾನು ದೇಶವನ್ನು ಹಾಳು ಮಾಡದಂತೆ ನನ್ನೆದುರಿಗೆ ದೇಶ ರಕ್ಷಣೆಗಾಗಿ ಪೌಳಿ ಗೋಡೆಯ ಬಿರುಕಿನಲ್ಲಿ ನಿಲ್ಲುವುದಕ್ಕೂ, ಗೋಡೆಯನ್ನು ಗಟ್ಟಿಮಾಡುವುದಕ್ಕೂ ತಕ್ಕವನನ್ನು ನಾನು ಹುಡುಕಲು ಯಾರೂ ಸಿಕ್ಕಲಿಲ್ಲ.

31 ಆದಕಾರಣ ನಾನು ನನ್ನ ಕೋಪವನ್ನು ಅವರ ಮೇಲೆ ಸುರಿಸಿ, ನನ್ನ ರೋಷಾಗ್ನಿಯಿಂದ ಅವರನ್ನು ಧ್ವಂಸ ಮಾಡಿ ಅವರ ದುರ್ನಡತೆಯನ್ನು ಅವರ ತಲೆಗೇ ಕಟ್ಟಿದ್ದೇನೆ.’ ಇದು ಕರ್ತನಾದ ಯೆಹೋವನ ನುಡಿ.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು