ಯೆಶಾಯ 62 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆರೂಸಲೇಮಿಗಾಗಿ ಯೆಶಾಯನ ಪ್ರಾರ್ಥನೆ 1 ಚೀಯೋನಿನ ಧರ್ಮವು ಪ್ರಕಾಶಗೊಳ್ಳುವ ತನಕ, ಯೆರೂಸಲೇಮಿನ ರಕ್ಷಣೆಯು ದೀವಿಟಿಗೆಯಂತೆ ಪ್ರಜ್ವಲಿಸುವವರೆಗೆ, ನಾನು ಮೌನವಾಗಿರದೆ ಚೀಯೋನಿನ ಹಿತವನ್ನು ಲಕ್ಷಿಸುತ್ತಿರುವೆನು; ಮೌನವಾಗಿರದೆ ಯೆರೂಸಲೇಮಿನ ಕ್ಷೇಮವನ್ನು ಚಿಂತಿಸುತ್ತಿರುವೆನು. 2 ಜನಾಂಗಗಳು ನಿನ್ನ ಧರ್ಮವನ್ನು, ಸಕಲ ರಾಜರು ನಿನ್ನ ವೈಭವವನ್ನು ನೋಡುವರು; ಯೆಹೋವನ ಬಾಯಿ ನೇಮಿಸಿದ ಹೊಸ ಹೆಸರು ನಿನಗೆ ದೊರೆಯುವುದು. 3 ನೀನು ಯೆಹೋವನ ಕೈಯಲ್ಲಿ ಸುಂದರವಾದ ಕಿರೀಟವಾಗಿಯೂ, ನಿನ್ನ ದೇವರ ಹಸ್ತದಲ್ಲಿ ರಾಜಶಿರೋಭೂಷಣವಾಗಿಯೂ ಇರುವಿ. 4 ನೀನು ಇನ್ನು ಮೇಲೆ “ತ್ಯಜಿಸಲ್ಪಟ್ಟವಳು” ಎನಿಸಿಕೊಳ್ಳುವುದಿಲ್ಲ, ನಿನ್ನ ಸೀಮೆಗೆ “ನಿರ್ಜನ ಪ್ರದೇಶ” ಎಂಬ ಹೆಸರು ಇನ್ನು ಇರದು; ನೀನು “ನನ್ನ ಉಲ್ಲಾಸಿನಿ” ಎನಿಸಿಕೊಳ್ಳುವಿ, ನಿನ್ನ ಸೀಮೆಗೆ “ವಿವಾಹಿತೆ” ಎಂಬ ಹೆಸರಾಗುವುದು; ಏಕೆಂದರೆ ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ, ನಿನ್ನ ಸೀಮೆಗೆ ವಿವಾಹವಾಗುವುದು. 5 ಯುವಕನು ಯುವತಿಯನ್ನು ವರಿಸುವಂತೆ, ನಿನ್ನ ಮಕ್ಕಳು ನಿನ್ನನ್ನು ವರಿಸುವರು; ವರನು ವಧುವಿನಲ್ಲಿ ಆನಂದಿಸುವ ಹಾಗೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು. 6 ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲೂ, ಇರುಳೂ ಮೌನವಾಗಿರರು. ಯೆಹೋವನನ್ನು ಸ್ಮರಿಸುವವರೇ, 7 ಆತನು ಯೆರೂಸಲೇಮನ್ನು ಭದ್ರಪಡಿಸಿ, ಲೋಕಪ್ರಸಿದ್ಧಿಗೆ ತರುವ ತನಕ ನಿಮಗೂ ವಿರಾಮ ಇಲ್ಲದಿರಲಿ, ಅತನಿಗೂ ವಿರಾಮ ಇಲ್ಲದಿರಲಿ. 8 ಯೆಹೋವನು ತನ್ನ ಬಲಗೈಯ ಮೇಲೆಯೂ, ತನ್ನ ಭುಜಬಲದ ಮೇಲೆಯೂ ಆಣೆಯಿಟ್ಟು, “ನಿನ್ನ ದವಸವನ್ನು ನಿನ್ನ ಶತ್ರುಗಳ ಆಹಾರಕ್ಕೆ ಇನ್ನು ಕೊಡುವುದೇ ಇಲ್ಲ. ನೀನು ಶ್ರಮಿಸಿ ಪಡೆದು ದ್ರಾಕ್ಷಾರಸವನ್ನು ಅನ್ಯರು ಕುಡಿಯುವುದೇ ಇಲ್ಲ; 9 ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆಹಾಕಿದವರೇ ಅದನ್ನು ಊಟಮಾಡಿ ಯೆಹೋವನನ್ನು ಸ್ತುತಿಸುವರು. ನಿನ್ನ ದ್ರಾಕ್ಷಿಯನ್ನು ಕಿತ್ತು ತಂದವರೇ ಅದರ ರಸವನ್ನು ನನ್ನ ಪವಿತ್ರಾಲಯದ ಪ್ರಾಕಾರಗಳಲ್ಲಿ ಕುಡಿಯುವರು” ಎಂದು ಹೇಳಿದ್ದಾನೆ. 10 ಊರ ಬಾಗಿಲುಗಳಲ್ಲಿ ಹಾದು ಬನ್ನಿರಿ, ಹಾದು ಬನ್ನಿರಿ, ಜನರಿಗೆ ದಾರಿಯನ್ನು ಸರಿಮಾಡಿರಿ, ರಾಜಮಾರ್ಗವನ್ನು ಎತ್ತರಿಸಿರಿ, ಸರಿಪಡಿಸಿರಿ. ಕಲ್ಲುಗಳನ್ನು ತೆಗೆದುಹಾಕಿರಿ, ಜನಾಂಗಗಳಲ್ಲಿ ಧ್ವಜವನ್ನೆತ್ತಿರಿ! 11 “ಇಗೋ, ನಿನ್ನ ರಕ್ಷಣೆಯು ಸಮೀಪವಾಯಿತು, ಯೆಹೋವನು ದಯಪಾಲಿಸುವ ಬಹುಮಾನವು ಆತನ ಮುಂದಿದೆ ಎಂದು ಚೀಯೋನೆಂಬಾಕೆಗೆ ಹೇಳಿರಿ” ಎಂಬುದಾಗಿ ಯೆಹೋವನು ಭೂಮಿಯ ಕಟ್ಟಕಡೆಯವರೆಗೂ ಅಪ್ಪಣೆಮಾಡಿದ್ದಾನೆ. 12 ನಿನ್ನ ಜನರು, “ಪರಿಶುದ್ಧಜನರು, ಯೆಹೋವನು ವಿಮೋಚಿಸಿದವರು” ಎಂದು ಅನ್ನಿಸಿಕೊಳ್ಳುವರು, ನಿನಗೋ, “ಪತಿಯು ವರಿಸಿ, ತ್ಯಜಿಸದ ಪಟ್ಟಣ” ಎಂದು ಹೆಸರು ಬರುವುದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.