Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 56 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಸಕಲ ಜನಾಂಗಗಳಿಗೂ ದೇವರ ಆಶೀರ್ವಾದ

1 ಯೆಹೋವನು ಹೀಗೆನ್ನುತ್ತಾನೆ, “ನ್ಯಾಯವನ್ನು ಅನುಸರಿಸಿ, ಧರ್ಮವನ್ನು ಆಚರಿಸಿರಿ; ಏಕೆಂದರೆ ನನ್ನ ವಿಮೋಚನಕ್ರಿಯೆಯು ಬೇಗನೆ ಬರುವುದು, ನನ್ನ ರಕ್ಷಣಾಧರ್ಮದ ಕಾರ್ಯವು ಶೀಘ್ರವಾಗಿ ವ್ಯಕ್ತವಾಗುವುದು.

2 ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು; ಇದನ್ನೇ ಭದ್ರವಾಗಿ ಹಿಡಿದು, ಸಬ್ಬತ್ ದಿನವನ್ನು ಹೊಲೆಮಾಡದೆ ದೇವರ ದಿನವೆಂದು ಆಚರಿಸುತ್ತಾ ಯಾವ ಕೇಡಿಗೂ ಕೈಹಾಕದ ಮಾನವನು ಭಾಗ್ಯವಂತನು.

3 ಯೆಹೋವನನ್ನು ಅವಲಂಬಿಸಿದ ವಿದೇಶೀಯನು, ‘ಯೆಹೋವನು ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಅಗಲಿಸುವನು’ ಎಂದು ಮಾತನಾಡದಿರಲಿ; ಮತ್ತು ನಪುಂಸಕನು, ‘ಅಯ್ಯೋ, ನಾನು ಗೊಡ್ಡುಮರ’” ಎಂದು ಅಂದುಕೊಳ್ಳದಿರಲಿ.

4 ಯೆಹೋವನು ಹೀಗೆನ್ನುತ್ತಾನೆ, “ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿ ನನಗೆ ಮೆಚ್ಚಿಕೆಯಾದುದನ್ನು ಕೈಕೊಂಡು ನನ್ನ ಒಡಂಬಡಿಕೆಯನ್ನು ಭದ್ರವಾಗಿ

5 ಹಿಡಿದುಕೊಂಡಿರುವ ಮಂಗಳಮುಖಿಯರಿಗೆ ನನ್ನ ಪ್ರಾಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು ಹೆಣ್ಣುಗಂಡು ಮಕ್ಕಳಿಗಿಂತ ಮೇಲಾದ ಹೆಸರನ್ನು ದಯಪಾಲಿಸುವೆನು; ಹೌದು, ಎಂದಿಗೂ ಅಳಿಯದ ಶಾಶ್ವತನಾಮವನ್ನು ಅನುಗ್ರಹಿಸುವೆನು.

6 ಅನ್ಯದೇಶೀಯರಲ್ಲಿ ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ ನನ್ನ ನಾಮವನ್ನು ಪ್ರೀತಿಸಿ ನನಗೆ ದಾಸರಾಗಿ ಸಬ್ಬತ್ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ

7 ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು; ನನ್ನ ಯಜ್ಞವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ, ಯಜ್ಞಗಳೂ ನನಗೆ ಮೆಚ್ಚಿಗೆಯಾಗುವವು; ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.

8 ಇಸ್ರಾಯೇಲಿನ ದೇಶಭ್ರಷ್ಟರನ್ನು ಕೂಡಿಸಿಕೊಳ್ಳುವ ಕರ್ತನಾದ ಯೆಹೋವನ ನುಡಿಯೇನೆಂದರೆ, ‘ನಾನು ಕೂಡಿಸಿದ ಇಸ್ರಾಯೇಲರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು’” ಎಂಬುದೇ.


ಅಧಿಪತಿಗಳ ಅತ್ಯಾಶೆ, ಜನರ ದೇವದ್ರೋಹ, ಇವುಗಳ ಖಂಡನೆ

9 ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಜಂತುಗಳೇ, ನುಂಗಿಬಿಡುವುದಕ್ಕೆ ಬನ್ನಿರಿ!

10 ಇವರ ಕಾವಲುಗಾರರು ಕುರುಡರು, ಇವರಲ್ಲಿ ಯಾರಿಗೂ ತಿಳಿವಳಿಕೆಯಿಲ್ಲ; ಇವರೆಲ್ಲರೂ ಬೊಗಳಲಾರದ ಮೂಕ ನಾಯಿಗಳು, ನಿದ್ರೆಯನ್ನಾಶಿಸಿ ಮಲಗಿಕೊಂಡು ಕನವರಿಸುವ ನಾಯಿಗಳು.

11 ಇವು ಹೊಟ್ಟೆಬಾಕ ನಾಯಿಗಳು, ಇವುಗಳಿಗೆ ಎಂದಿಗೂ ಸಾಕು ಎನಿಸದು. ಇಂಥವರು ಕುರಿಗಳನ್ನು ಕಾಯತಕ್ಕವರೋ! ಬುದ್ಧಿಹೀನರಾಗಿದ್ದಾರೆ, ಇವರಲ್ಲಿ ಯಾರೂ ತಪ್ಪದೆ ಪ್ರತಿಯೊಬ್ಬನೂ ಕೊಳ್ಳೆಹೊಡೆಯಬೇಕೆಂದು ತನ್ನ ತನ್ನ ಮಾರ್ಗಕ್ಕೆ ತಿರುಗಿಕೊಂಡಿದ್ದಾನೆ.

12 “ಬನ್ನಿರಿ, ನಾನು ದ್ರಾಕ್ಷಾರಸವನ್ನು ತರಿಸುವೆನು, ಬೇಕಾದಷ್ಟು ಮದ್ಯವನ್ನು ಕುಡಿಯುವ; ನಾಳೆಯೂ ಈ ದಿನದಂತೆ ಕೇವಲ ಅತ್ಯಂತ ವಿಶೇಷ ದಿನವಾಗಿರುವುದು” ಎಂದು ಹರಟೆ ಕೊಚ್ಚಿಕೊಳ್ಳುವರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು