Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 48 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಮೊಂಡರಾದ ಇಸ್ರಾಯೇಲರು

1 ಇಸ್ರಾಯೇಲೆಂಬ ಹೆಸರಿನವರೂ, ಯೆಹೂದ ವಂಶೋತ್ಪನ್ನರೂ ಆದ ಯಾಕೋಬನ ಮನೆತನದವರೇ, ನೀವು ಯೆಹೋವನ ನಾಮದ ಮೇಲೆ ಆಣೆಯಿಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ, ನಿಜ. ಆದರೆ ಈ ನಿಮ್ಮ ಕಾರ್ಯಗಳು ಸತ್ಯಕ್ಕೂ, ಧರ್ಮಕ್ಕೂ ಅನುಸಾರವಾಗಿಲ್ಲ.

2 ಇವರು ತಮ್ಮನ್ನು ಪರಿಶುದ್ಧ ಪಟ್ಟಣದವರು ಎಂದುಕೊಂಡು, ದೇವರು ಇಸ್ರಾಯೇಲಿನವನೇ ಎಂದು ಆತನ ಮೇಲೆ ಭರವಸವಿಟ್ಟುಕೊಂಡಿರುತ್ತಾರೆ. ಆತನ ಹೆಸರೋ ಸಕಲ ಸೈನ್ಯಗಳ ಸರ್ವಶಕ್ತನಾದ ಯೆಹೋವನು ಎಂಬುದು.

3 ಯಾಕೋಬನ ಮನೆತನವೇ, ಕೇಳು, ಈವರೆಗೂ ನಡೆದ ಸಂಗತಿಗಳನ್ನು ಪುರಾತನಕಾಲದಲ್ಲಿಯೇ ತಿಳಿಸಿದೆನು. ಹೌದು, ನನ್ನ ಬಾಯಿಂದ ಹೊರಟವು, ನಾನು ಅವುಗಳನ್ನು ಪ್ರಕಟಿಸಿದೆನು. ನಾನು ತಟ್ಟನೆ ನಡೆಸಲು ಅವು ನೆರವೇರಿದವು.

4 ಏಕೆಂದರೆ ನೀನು ಹಟವಾದಿ ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ತಾಮ್ರ ಎಂದು ನಾನು ತಿಳಿದುಕೊಂಡೆನು.

5 ಆದುದರಿಂದಲೇ, “ಈ ಕಾರ್ಯಗಳನ್ನು ನನ್ನ ವಿಗ್ರಹವು ನಡೆಸಿದೆ, ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ” ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನಕಾಲದಲ್ಲಿಯೇ ತಿಳಿಸಿದೆನು. ನಡೆಯುವುದಕ್ಕೆ ಮೊದಲೇ ಪ್ರಕಟಿಸಿದೆನು.

6 ನಡೆದ ಸಂಗತಿಗಳನ್ನು ನೀನು ಕೇಳಿದಿಯಲ್ಲಾ, ನಡೆದದ್ದನ್ನೆಲ್ಲಾ ನೋಡು, ನಿನ್ನವರೇ ಪ್ರಸಿದ್ಧಿಪಡಿಸಲಿ. ಇಂದಿನಿಂದ ಹೊಸ ಸಂಗತಿಗಳನ್ನು, ನೀನು ತಿಳಿಯದಿದ್ದ ಗುಪ್ತವಿಷಯಗಳನ್ನು ನಿನಗೆ ತಿಳಿಸುತ್ತೇನೆ.

7 ಈಗಲೇ ಉಂಟಾಗುತ್ತಿವೆ, ಪುರಾತನಕಾಲದಲ್ಲಿ ಆಗಿಲ್ಲ, “ಮೊದಲೇ ನಾನು ತಿಳಿದುಕೊಂಡಿದ್ದೆನು” ಎಂದು, ನೀನು ಅಂದುಕೊಳ್ಳದ ಹಾಗೆ ಈ ದಿನಕ್ಕೆ ಮೊದಲು ನಾನು ನಿನಗೆ ಕೇಳಗೊಡಿಸಲಿಲ್ಲ.

8 ನೀನು ಕೇಳಿಲ್ಲ, ತಿಳಿದೂ ಇಲ್ಲ, ಪುರಾತನಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ನೀನು ದೊಡ್ಡ ವಂಚಕನೆಂದೂ, ಗರ್ಭದಿಂದಲೇ ದ್ರೋಹಿಯೆಂದು ನಾನು ತಿಳಿದುಕೊಂಡಿದ್ದೇನೆ.

9 ನನ್ನ ಹೆಸರು ಕೆಡದಂತೆ ನಿನ್ನ ಮೇಲಣ ಕೋಪವನ್ನು ತಡೆದು, ನನ್ನ ಕೀರ್ತಿಗೆ ಕಳಂಕ ಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ಸಹಿಸಿಕೊಳ್ಳುವೆನು.

10 ನೋಡು, ನಿನ್ನನ್ನು ಶೋಧಿಸಿದ್ದೇನೆ, ಆದರೆ ಬೆಳ್ಳಿಯಷ್ಟು ಶೋಧಿಸಲಿಲ್ಲ, ಸಂಕಟವೆಂಬ ಪುಟಕ್ಕೆ ಹಾಕಿ ನಿನ್ನನ್ನು ಪರೀಕ್ಷಿಸಿದ್ದೇನೆ.

11 ನನಗಾಗಿ, ನನಗೋಸ್ಕರವೇ, ಇದನ್ನು ಮಾಡುವೆನು. ಏಕೆಂದರೆ ನನ್ನ ಹೆಸರು ಹೇಗೆ ಅಪವಿತ್ರವಾಗುವುದು? ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.


ಬಾಬೆಲಿನಿಂದ ಬಿಡುಗಡೆ

12 ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು. ನಾನೇ ಪರಮಾತ್ಮನು, ನಾನೇ ಆದಿಯೂ, ನಾನೇ ಅಂತ್ಯ

13 ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು, ನನ್ನ ಬಲಗೈ ಆಕಾಶವನ್ನು ಹರಡಿತು, ನಾನು ಕರೆದ ಕೂಡಲೆ ಅವೆರಡೂ ಒಟ್ಟಾಗಿ ನಿಲ್ಲುವವು.

14 ನೀವೆಲ್ಲರು ಕೂಡಿಕೊಂಡು ಕೇಳಿರಿ! ಅವುಗಳ ಮಧ್ಯದಲ್ಲಿ ಈ ಸಂಗತಿಗಳನ್ನು ಪ್ರಕಟಿಸಿದವನು ಯಾರು? ಯೆಹೋವನ ಪ್ರೀತಿಪಾತ್ರನು, ಬಾಬೆಲಿನಲ್ಲಿ ಆತನ ಇಷ್ಟವನ್ನು ನೆರವೇರಿಸುವನು. ಕಸ್ದೀಯರ ಮೇಲೆ ಕೈಮಾಡುವನು.

15 ನಾನೇ, ನಾನೇ ಬಾಯಿಬಿಟ್ಟು ಅವನನ್ನು ಕರೆದು ಬರಮಾಡಿದ್ದೇನೆ. ಅವನ ಮಾರ್ಗವು ಸಾರ್ಥಕವಾಗುವುದು.

16 ನನ್ನ ಬಳಿಗೆ ಬಂದು ಇದನ್ನು ಕೇಳಿರಿ, ಆದಿಯಿಂದಲೂ ನಾನು ಗುಟ್ಟಾಗಿ ಮಾತನಾಡಲಿಲ್ಲ, ಭೂಮಿಯು ಉಂಟಾದಂದಿನಿಂದ ನಾನು ಅಲ್ಲಿ ಇದ್ದೇನೆ. ಈಗ ಯೆಹೋವನೆಂಬ ದೇವರು ತನ್ನ ಆತ್ಮದೊಡನೆ ನನ್ನನ್ನು ಕಳುಹಿಸಿದ್ದಾನೆ.

17 ನಿನ್ನ ವಿಮೋಚಕನೂ, ಇಸ್ರಾಯೇಲರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ, “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ, ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವೆನು.

18 ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ, ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.

19 ನಿನ್ನ ಸಂತತಿಯವರು ಮರಳಿನೋಪಾದಿಯಲ್ಲಿಯೂ, ನಿನ್ನ ಹೊಟ್ಟೆಯಲ್ಲಿ ಹುಟ್ಟಿದವರು ಉಸುಬಿನ ಅಣುರೇಣುಗಳಂತೆ ಅಸಂಖ್ಯಾತರಾಗುತ್ತಿದ್ದರು. ಅವರ ಹೆಸರು ನನ್ನ ಮುಂದೆ ನಿರ್ಮೂಲವಾಗಿ ಹಾಳಾಗುತ್ತಿರಲಿಲ್ಲ.

20 ಬಾಬೆಲಿನಿಂದ ಹೊರಡಿರಿ! ಕಸ್ದೀಯರ ಕಡೆಯಿಂದ ಹಾರಿಹೋಗಿರಿ! ಹರ್ಷಧ್ವನಿಯಿಂದ ಇದನ್ನು ತಿಳಿಸಿರಿ, ಪ್ರಕಟಿಸಿರಿ. ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ. ‘ಯೆಹೋವನು ತನ್ನ ಸೇವಕನಾದ ಯಾಕೋಬನ್ನು ವಿಮೋಚಿಸಿದ್ದಾನೆ’” ಎಂದು ಹೇಳಿರಿ.

21 ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಕಲ್ಲಿನೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ಜಲಪಾತವಾಯಿತು.

22 “ದುಷ್ಟರಿಗೆ ಸಮಾಧಾನವೇ ಇಲ್ಲ” ಎಂದು ಯೆಹೋವನು ನುಡಿಯುತ್ತಾನೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು