Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 45 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆಹೋವನು ಕೋರೆಷನನ್ನು ಕರೆದ ಉದ್ದೇಶ

1 ಯೆಹೋವನು ಯಾರ ಕೈಹಿಡಿದು, ಯಾರ ಎದುರಿಗೆ ಜನಾಂಗಗಳನ್ನು ತುಳಿದು, ರಾಜರ ನಡುಕಟ್ಟನ್ನು ಬಿಚ್ಚಿ, ಯಾರ ಮುಂದೆ ಹೆಬ್ಬಾಗಿಲುಗಳನ್ನು ತೆರೆದು, ಮುಚ್ಚಲ್ಲಿಲ್ಲವೋ, ತಾನು ಅಭಿಷೇಕಿಸಿದ ಆ ಕೋರೆಷನಿಗೆ ಹೀಗೆನ್ನುತ್ತಾನೆ,

2 “ನಾನು ನಿನ್ನ ಮುಂದೆ ಹೋಗಿ, ದಿಣ್ಣೆಗಳನ್ನು ಸಮಮಾಡುವೆನು. ತಾಮ್ರದ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು.

3 ನಿನ್ನ ಹೆಸರು ಹಿಡಿದು ಕರೆಯುವ ಯೆಹೋವನು ನಾನೇ. ಇಸ್ರಾಯೇಲರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಯನ್ನೂ, ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು.

4 ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದುಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಬಿರುದನ್ನು ದಯಪಾಲಿಸಿದ್ದೇನೆ.

5 ನಾನೇ ಯೆಹೋವನು, ಇನ್ನು ಯಾರೂ ಇಲ್ಲ, ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು.

6 ಪೂರ್ವದಿಂದ ಪಶ್ಚಿಮದ ತನಕ ಇರುವವರೆಲ್ಲರೂ ಇದನ್ನು ನೋಡಿ, ನನ್ನ ಹೊರತು ಯಾರೂ ಇಲ್ಲ, ನಾನೇ ಯೆಹೋವನು.

7 ನಾನು ಬೆಳಕನ್ನು, ಕತ್ತಲನ್ನು ನಿರ್ಮಿಸಿದವನು, ಮೇಲನ್ನೂ, ಕೇಡನ್ನೂ ಬರಮಾಡುವವನು, ಈ ಸಮಸ್ತ ಕಾರ್ಯಗಳನ್ನು ನಡೆಸುವ ಯೆಹೋವನು ನಾನೇ ಎಂದು ತಿಳಿದುಕೊಳ್ಳುವರು.

8 ಆಕಾಶಮಂಡಲವೇ, ಮೇಲಿನಿಂದ ಧರ್ಮರಸವನ್ನು ಮಳೆಯಂತೆ ಸುರಿಸು. ಭೂಮಿಯು ಒಡೆದು ರಕ್ಷಣೆಯನ್ನು ಮೊಳೆಯಿಸಿ, ಅದರೊಡನೆ ನೀತಿಫಲವನ್ನು ಬೆಳೆಯಿಸಲಿ. ಯೆಹೋವನೆಂಬ ನಾನೇ ಇದಕ್ಕೆಲ್ಲಾ ಕರ್ತನು.


ದೇವರ ಮೇಲೆ ಗುಣುಗುಟ್ಟುವವರನ್ನು ಖಂಡಿಸುವುದು

9 ಅಯ್ಯೋ, ತನ್ನನ್ನು ರೂಪಿಸಿದಾತನ ಸಂಗಡ ವ್ಯಾಜ್ಯವಾಡುವವನ ಗತಿ ಏನು! ಮಣ್ಣಿನ ಮಡಿಕೆಗಳಲ್ಲಿ ಅವನೂ ಒಂದು ಮಡಿಕೆಯಲ್ಲವೆ! ಮಣ್ಣು ಕುಂಬಾರನಿಗೆ, ‘ನೀನು ಏನು ಮಾಡುತ್ತೀ?’ ಎಂದು ಕೇಳುವುದುಂಟೇ? ಅಥವಾ ನಿನ್ನ ಕಾರ್ಯವು, ‘ಅವನಿಗೆ ಕೈಯಿಲ್ಲ’ ಅಂದೀತೇ?

10 ‘ನೀನು ಹುಟ್ಟಿಸುವುದೇನು’ ಎಂದು ತಂದೆಯನ್ನು ಕೇಳುವವನ ಪಾಡು ಪಾಡೇ! ‘ನೀನು ಹೆರುವುದೇನು’ ಎಂದು ಸ್ತ್ರೀಯನ್ನು ಕೇಳುವವನ ಗತಿ ಗತಿಯೇ!

11 ಆದರೂ ಇಸ್ರಾಯೇಲರ ಸದಮಲಸ್ವಾಮಿಯೂ, ಸೃಷ್ಟಿಕರ್ತನೂ ಆದ ಯೆಹೋವನ ಮಾತನ್ನು ಕೇಳಿರಿ, ‘ಭವಿಷ್ಯತ್ತಿನ ವಿಷಯವಾಗಿ ನನ್ನನ್ನು ವಿಚಾರಿಸಿರಿ. ನಾನೇ ನಿರ್ಮಿಸಿದ ನನ್ನ ಮಕ್ಕಳ ವಿಷಯದಲ್ಲಿ ನನಗೆ ಏನನ್ನು ವಿಧಿಸಿದರೂ ವಿಧಿಸಿರಿ.

12 ಭೂಲೋಕವನ್ನು ಉಂಟುಮಾಡಿ ಅದರಲ್ಲಿನ ಮನುಷ್ಯರನ್ನು ಸೃಷ್ಟಿಸಿದವನು ನಾನೇ. ನನ್ನ ಕೈಗಳೇ ಆಕಾಶಮಂಡಲವನ್ನು ಹರಡಿದವು, ನಕ್ಷತ್ರಸೈನ್ಯಕ್ಕೆ ಅಪ್ಪಣೆಕೊಟ್ಟವನೂ ನಾನೇ.

13 ನಾನು ಕೋರೆಷನನ್ನು ಧರ್ಮೋದ್ದೇಶದಿಂದ ಉನ್ನತಿಗೆ ತಂದು ನೇಮಿಸಿದ್ದೇನೆ. ಅವನ ಮಾರ್ಗಗಳನ್ನೆಲ್ಲಾ ಸರಾಗಮಾಡುವೆನು. ಅವನು ನನ್ನ ಪಟ್ಟಣವನ್ನು ತಿರುಗಿ ಕಟ್ಟಿ ಕ್ರಯವನ್ನಾಗಲೀ, ಬಹುಮಾನವನ್ನಾಗಲೀ ಕೇಳಿಕೊಳ್ಳದೆ ಸೆರೆಯಾದ ನನ್ನ ಜನರನ್ನು ಬಿಡುಗಡೆ ಮಾಡುವೆನು’” ಎಂದು ಸೇನಾಧೀಶ್ವರನಾದ ಯೆಹೋವನು ಹೇಳುತ್ತಾನೆ.


ಆಫ್ರಿಕ ಖಂಡದ ಕೆಲವು ಜನಾಂಗಗಳು ಇಸ್ರಾಯೇಲಿಗೆ ಅಧೀನವಾಗುವುದು

14 ಯೆಹೋವನ ಈ ಮಾತನ್ನು ಕೇಳಿರಿ, “ಐಗುಪ್ತದ ಆದಾಯವೂ, ಕೂಷಿನ ವ್ಯಾಪಾರವೂ, ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು. ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ಹೀಗೆ ಅರಿಕೆಮಾಡುವರು, ‘ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ. ಇನ್ನು ಯಾವ ದೇವರೂ ಇಲ್ಲವೇ ಇಲ್ಲ.’”

15 ಇಸ್ರಾಯೇಲರ ದೇವರೇ, ರಕ್ಷಕನೇ, ನಿಶ್ಚಯವಾಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ.

16 ವಿಗ್ರಹಗಳನ್ನು ಕೆತ್ತುವವರೆಲ್ಲರೂ ನಾಚಿಕೆಗೀಡಾಗಿ ಮಾನಭಂಗಪಡುವರು. ಹೌದು, ಒಟ್ಟಿಗೆ ಅವಮಾನದಲ್ಲಿ ಮುಳುಗುವರು.

17 ಇಸ್ರಾಯೇಲಿಗೂ ಯೆಹೋವನಿಂದ ಶಾಶ್ವತ ರಕ್ಷಣೆ ದೊರೆಯುವುದು. ಯುಗಯುಗಾಂತರಕ್ಕೂ ನೀವು ನಾಚಿಕೆಗೀಡಾಗುವುದಿಲ್ಲ, ಮಾನಭಂಗಪಡುವುದಿಲ್ಲ.


ಯೆಹೋವನು ದಿಗಂತಗಳವರನ್ನು ತನ್ನ ಕಡೆಗೆ ಕರೆಯುವುದು

18 ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ, ಆತನೇ ದೇವರು. ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು. ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗೆನ್ನುತ್ತಾನೆ, “ನಾನೇ ಯೆಹೋವನು, ಇನ್ನು ಯಾರೂ ಇಲ್ಲ.

19 ನಾನು ರಹಸ್ಯದಲ್ಲಿ ನುಡಿದವನಲ್ಲ, ಅಧೋಲೋಕದೊಳಗಿಂದ ಮಾತನಾಡಿದವನಲ್ಲ. ಶೂನ್ಯವನ್ನೋ ಎಂಬಂತೆ, ‘ನನ್ನನ್ನು ಹುಡುಕಿರಿ’ ಎಂದು ಯಾಕೋಬ ವಂಶದವರಿಗೆ ನಾನು ಅಪ್ಪಣೆಕೊಡಲಿಲ್ಲ. ಯೆಹೋವನೆಂಬ ನಾನು ಸತ್ಯಾನುಸಾರ ನುಡಿಯುವವನು, ಸರಿಯಾದ ಮಾತುಗಳನ್ನೇ ಆಡುತ್ತೇನೆ.

20 ತಪ್ಪಿಸಿಕೊಂಡ ಅನ್ಯಜನರೇ, ಕೂಡಿಬನ್ನಿರಿ, ಒಟ್ಟಿಗೆ ಸಮೀಪಿಸಿರಿ! ತಮ್ಮ ಮರದ ವಿಗ್ರಹಗಳನ್ನು ಹೊತ್ತುಕೊಂಡು ರಕ್ಷಿಸಲಾರದ ಆ ದೇವರಿಗೆ ಬಿನ್ನವಿಸುವವರು ಏನೂ ತಿಳಿಯದವರಾಗಿದ್ದಾರೆ.

21 ಹೇಳಿರಿ, ನಿಮ್ಮ ನ್ಯಾಯಗಳನ್ನು ಮುಂದಕ್ಕೆ ತನ್ನಿರಿ, ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಆಲೋಚಿಸಿಕೊಳ್ಳಲಿ. ಪೂರ್ವದಿಂದಲೂ ಈ ಸಂಗತಿಯನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮೊದಲೇ ಯಾರು ತಿಳಿಸಿದರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ಸತ್ಯಸ್ವರೂಪನೂ, ರಕ್ಷಕನಾದ ದೇವರು ಇಲ್ಲವೇ ಇಲ್ಲ.

22 ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ. ಏಕೆಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.

23 ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ಸತ್ಯದ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು. ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು.

24 ಯೆಹೋವನಲ್ಲಿ ಮಾತ್ರ ರಕ್ಷಣೆಯೂ, ಶಕ್ತಿಯೂ ಉಂಟು. ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಪಟ್ಟು ಆತನನ್ನು ಆಶ್ರಯಿಸುವರು.

25 ಇಸ್ರಾಯೇಲಿನ ಸಮಸ್ತ ಸಂತತಿಯವರೂ ಯೆಹೋವನ ಮೂಲಕ ಸತ್ಯವಂತರಾಗಿ ಆತನಲ್ಲಿ ಆನಂದಿಸುವರು” ಎಂದು ನನ್ನ ವಿಷಯವಾಗಿ ಜನರು ಅಂದುಕೊಳ್ಳುತ್ತಾರೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು