Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಶಾಯ 40 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದೇವಜನರಿಗೆ ಸಂತೈಯಿಸುವಿಕೆ

1 “ನನ್ನ ಸಂತೈಸಿರಿ, ಸಂತೈಸಿರಿ” ಎಂದು ನಿಮ್ಮ ದೇವರು ಹೇಳುತ್ತಾನೆ.

2 ಯೆರೂಸಲೇಮಿನ ಸಂಗಡ ಹೃದಯಂಗಮವಾಗಿ ಮಾತನಾಡಿರಿ; ಅದರ ಗಡು ತೀರಿತು, ವಿಧಿಸಿದ ದೋಷಫಲವೆಲ್ಲಾ ನೆರವೇರಿತು, ಅದರ ಎಲ್ಲಾ ಪಾಪಗಳಿಗೂ ಯೆಹೋವನ ಕೈಯಿಂದ ಎರಡರಷ್ಟು ಶಿಕ್ಷೆಯಾಯಿತು ಎಂದು ಆ ನಗರಿಗೆ ಕೂಗಿ ಹೇಳಿರಿ; ಇದೇ ನಿಮ್ಮ ದೇವರ ಆಜ್ಞೆ.

3 ಇಗೋ ಒಂದು ವಾಣಿ! “ಅರಣ್ಯದಲ್ಲಿ ಯೆಹೋವನ ದಾರಿಯನ್ನು ಸರಿಪಡಿಸಿರಿ, ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಿಪಡಿಸಿರಿ”

4 ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವವು, ಮಲೆನಾಡು ಬಯಲು ಸೀಮೆಯಾಗುವುದು. ಒರಟಾದ ನೆಲವು ಸಮವಾಗುವುದು.

5 ಯೆಹೋವನ ಮಹಿಮೆಯು ಗೋಚರವಾಗುವುದು. ಎಲ್ಲಾ ಮನುಷ್ಯರೂ ಒಟ್ಟಿಗೆ ಅದನ್ನು ಕಾಣುವರು, ಯೆಹೋವನ ಬಾಯೇ ಇದನ್ನು ನುಡಿದಿದೆ ಎಂದು ಒಬ್ಬನು ಕೂಗುತ್ತಾನೆ.

6 ಆಹಾ, ವಾಣಿಯು ಮತ್ತೆ ಕೇಳಿಸಿ, “ಕೂಗು ಎನ್ನುತ್ತದೆ” ಅದಕ್ಕೆ ನಾನು, “ಏನು ಕೂಗಲಿ?” ಎಂದು ಕೇಳಲು, “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಲಾವಣ್ಯವೆಲ್ಲಾ ಅಡವಿಯ ಹೂವಿನಂತಿದೆ.

7 ಯೆಹೋವನ ಶ್ವಾಸವು ಅದರ ಮೇಲೆ ಬೀಸುವುದರಿಂದ ಹುಲ್ಲು ಒಣಗಿ ಹೋಗುವುದು, ಹೂವು ಬಾಡಿ ಹೋಗುವುದು. ನಿಶ್ಚಯವಾಗಿ ಜನರು ಹುಲ್ಲೇ ಹುಲ್ಲು!

8 ಹುಲ್ಲು ಒಣಗಿ ಹೋಗುವುದು, ಹೂವು ಬಾಡಿ ಹೋಗುವುದು, ನಮ್ಮ ದೇವರ ಮಾತೋ ಸದಾಕಾಲವೂ ಇರುವುದು” ಎಂದು ಉತ್ತರವಾಯಿತು.

9 ಶುಭಸಮಾಚಾರವನ್ನು ತಿಳಿಸಬಲ್ಲ ಚೀಯೋನೇ, ನೀನು ಉನ್ನತಪರ್ವತವನ್ನು ಏರು; ಸುವರ್ತಮಾನವನ್ನು ಪ್ರಕಟಿಸಬಲ್ಲ ಯೆರೂಸಲೇಮೇ, ನಿನ್ನ ಧ್ವನಿಯನ್ನು ಗಟ್ಟಿಯಾಗಿ ಎತ್ತು, ನಿರ್ಭಯವಾಗಿ ಎತ್ತಿ, ಯೆಹೂದದ ಪಟ್ಟಣಗಳಿಗೆ, “ಇಗೋ, ನಿಮ್ಮ ದೇವರು!

10 ಇಗೋ, ಕರ್ತನಾದ ಯೆಹೋವನು ಶೂರನಾಗಿ ಬರುವನು, ತನ್ನ ಭುಜಬಲದಿಂದಲೇ ಆಳುವನು. ಇಗೋ, ಆತನ ಕ್ರಿಯಾಲಾಭವು ಆತನೊಂದಿಗಿದೆ, ಆತನ ಶ್ರಮದ ಫಲವು ಆತನ ಮುಂದೆಯೇ ಇದೆ.

11 ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗಪ್ಪಿಕೊಳ್ಳುವನು. ಹಾಲು ಕುಡಿಸುವ ಕುರಿಮರಿಗಳನ್ನು ಮೆಲ್ಲನೆ ನಡೆಸುವನು” ಎಂದು ಸಾರು.


ಯೆಹೋವನ ಅಸಮಾನವಾದ ಮಹಿಮೆ

12 ಯಾರು ಸಾಗರ ಸಮುದ್ರಗಳನ್ನು ಬರಿದಾದ ಕೈಯಿಂದ ಅಳತೆಮಾಡಿದವನು? ಯಾರು ಆಕಾಶಮಂಡಲದ ವ್ಯಾಪ್ತಿಯನ್ನು ಗೇಣಿನಿಂದ ನಿರ್ಣಯಿಸಿದವನು? ಭೂಲೋಕದ ಮಣ್ಣನ್ನೆಲ್ಲಾ ಕೊಳಗಕ್ಕೆ ತುಂಬಿದವನು ಯಾರು? ಬೆಟ್ಟಗಳನ್ನು ತ್ರಾಸಿನಿಂದಲೂ, ಗುಡ್ಡಗಳನ್ನು ತಕ್ಕಡಿಯಿಂದಲೂ ತೂಗಿದವನು ಯಾರು?

13 ಯೆಹೋವನ ಆತ್ಮಕ್ಕೆ ಯಾರು ವಿಧಿಯನ್ನು ನೇಮಿಸಿದನು? ಆಲೋಚನಾ ಕರ್ತನಾಗಿ ಆತನಿಗೆ ಉಪದೇಶಿಸಿದವರು ಯಾರು?

14 ಆತನು ಯಾರ ಆಲೋಚನೆಯನ್ನು ಕೇಳಿದನು? ಯಾರು ಆತನಿಗೆ ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು? ಯಾರು ಆತನಿಗೆ ಜ್ಞಾನವನ್ನು ಬೋಧಿಸಿ ವಿವೇಕ ಮಾರ್ಗವನ್ನು ತೋರಿಸಿದವನು?

15 ಆಹಾ, ಆತನ ಗಣನೆಯಲ್ಲಿ ಜನಾಂಗಗಳು ಕಪಿಲೆಯಿಂದ ಉದುರುವ ತುಂತುರಿನಂತೆಯೂ, ತಕ್ಕಡಿಯಲ್ಲಿನ ಧೂಳಿನ ಹಾಗೂ ಇರುತ್ತವೆ. ಇಗೋ, ದ್ವೀಪಗಳನ್ನು ಅಣುರೇಣುವಿನಂತೆ ಎತ್ತುತ್ತಾನೆ.

16 (ಆತನಿಗರ್ಪಿಸತಕ್ಕ) ಹೋಮಕ್ಕೆ ಲೆಬನೋನಿನ ಬೆಂಕಿಯು ಸಾಲದು, ಅಲ್ಲಿನ ಪ್ರಾಣಿಗಳು ಸರ್ವಾಂಗಹೋಮಗಳಿಗೆ ಸಾಲದು.

17 ಸಕಲ ಜನಾಂಗಗಳು ಆತನ ದೃಷ್ಟಿಯಲ್ಲಿ ಏನೂ ಇಲ್ಲದಂತಿವೆ, ಅವು ಆತನ ಎಣಿಕೆಯಲ್ಲಿ ಶುದ್ಧಶೂನ್ಯವೇ.

18 ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ? ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ?

19 ವಿಗ್ರಹವಾದರೋ, ಶಿಲ್ಪಿಯು ಅದನ್ನು ಎರಕಹೊಯ್ಯುವನು, ಅಕ್ಕಸಾಲಿಗನು ಅದಕ್ಕೆ ಚಿನ್ನದ ಕವಚವನ್ನು ಹೊದಿಸಿ, ಬೆಳ್ಳಿಯ ಸರಪಣಿಗಳನ್ನು ಹಾಕುವನು.

20 (ಇಂಥದನ್ನು ದೇವರಿಗೆ) ಕಾಣಿಕೆಯನ್ನಾಗಿ ಪ್ರತಿಷ್ಠಿಸಿಕೊಳ್ಳಲಾರದ ಬಡವನು, ಹುಳಿತು ಹೋಗದ ಮರವನ್ನು ಹುಡುಕಿ ಚಲಿಸದ ವಿಗ್ರಹವನ್ನು ಮಾಡಿಸಲು ಶಿಲ್ಪಿಯನ್ನು ವಿಚಾರಿಸಿಕೊಳ್ಳುವನು.

21 ನಿಮಗೆ ತಿಳಿದಿಲ್ಲವೋ? ನೀವು ಕೇಳಲಿಲ್ಲವೋ? ಆದಿಯಿಂದಲೇ ನಿಮಗೆ ಉಪದೇಶವಾಗಿ ಬಂದಿಲ್ಲವೋ? ಭೂಮಿಯು ನಿರ್ಮಾಣವಾದ ದಿನದಿಂದ ನೀವು ಗ್ರಹಿಸುತ್ತಿಲ್ಲವೋ?

22 ಭೂಮಂಡಲ ನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ ಆತನು ಆಸೀನನಾಗಿದ್ದಾನೆ; ಆಕಾಶಮಂಡಲವನ್ನು ನಾರುಬಟ್ಟೆಯಂತೆ ಹರಡಿ ನಿವಾಸದ ಗುಡಾರದಂತೆ ಎತ್ತಿ ಕಟ್ಟಿದ್ದಾನೆ.

23 ಪ್ರಭುಗಳನ್ನು ನಿರ್ನಾಮ ಮಾಡುತ್ತಾನೆ, ಭೂಪತಿಗಳನ್ನು ಶೂನ್ಯಗೊಳಿಸುತ್ತಾನೆ.

24 ಇವರು ನೆಡಲ್ಪಟ್ಟ ಕೂಡಲೆ, ಬಿತ್ತಲ್ಪಟ್ಟ ಕ್ಷಣವೇ, ಇವರ ಸಂತಾನವು ಭೂಮಿಯಲ್ಲಿ ಬೇರೂರಿದಾಗಲೇ, ಆತನ ಶ್ವಾಸದಿಂದ ಬಾಡುವರು, ಬಿರುಗಾಳಿಯು ಇವರನ್ನು ಒಣಹುಲ್ಲಿನಂತೆ ಬಡಿದುಕೊಂಡು ಹೋಗುವುದು.

25 ಹೀಗಿರಲು, “ನನ್ನನ್ನು ಯಾರಿಗೆ ಹೋಲಿಸಿ ಸರಿಸಮಾನ ಮಾಡುತ್ತೀರಿ?” ಎಂದು ಸದಮಲಸ್ವಾಮಿಯು ಕೇಳುತ್ತಾನೆ.

26 ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದುವರಿಸುತ್ತಾನೆ. ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ, ಮಹಾಶಕ್ತನೂ ಆಗಿರುವುದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.


ಯೆಹೋವನು ಬಳಲಿದವರನ್ನು ಬಲಪಡಿಸುವುದು

27 ಯಾಕೋಬೇ, ಇಸ್ರಾಯೇಲೇ, “ನನ್ನ ಮಾರ್ಗವು ಯೆಹೋವನಿಗೆ ಮರೆಯಾಗಿದೆ, ನನಗೆ ಸಿಕ್ಕಬೇಕಾದ ನ್ಯಾಯವು ನನ್ನ ದೇವರ ಲಕ್ಷ್ಯಕ್ಕೆ ಬಿದ್ದಿಲ್ಲವಲ್ಲಾ” ಎಂದು ಏಕೆ ಅಂದುಕೊಳ್ಳುತ್ತೀ?

28 ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರ ದೇವರೂ, ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ. ಆತನು ದಣಿದು ಬಳಲುವುದಿಲ್ಲ, ಆತನ ವಿವೇಕವು ಪರಿಶೋಧನೆಗೆ ಅಗಮ್ಯ.

29 ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ, ಬಲಹೀನನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ.

30 ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು.

31 ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಅವರು ಓಡಿ ದಣಿಯರು, ನಡೆದು ಬಳಲರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು